ಪಕ್ಷದ ಮುಂದಿನ ಮುಖ್ಯಸ್ಥರು 'ದೃಢತೆಯಳ್ಳ ನಾಯಕ' ಆಗಿರಬೇಕು, ಆತ 'ರಬ್ಬರ್ ಸ್ಟ್ಯಾಂಪ್' ಆಗಿರಬಾರದು ಎಂದು ದೃಢವಾಗಿ ಆರ್ಎಸ್ಎಸ್ ಹೇಳುತ್ತಿದೆ. ಇದೇ ಮೋದಿಗೆ ತೊಡಕಾಗಿ ಪರಿಣಮಿಸಿದೆ.
ಪ್ರಧಾನಿ ಮೋದಿ ಅವರು ಕಳೆದ 10 ವರ್ಷಗಳಲ್ಲಿ ತಾನೇ ಸಾರ್ವಭೌಮ ಎಂಬ ಭಾವವನ್ನು ಅಂತರಾಳದಲ್ಲಿ ಬಲವಾಗಿ ಬೇರೂರಿಸಿಕೊಂಡಿದ್ದರು. ಮೆರೆಯುತ್ತಿದ್ದರು. ಈಗ ಅವರ ಅಹಮ್ಮಿಕೆ ತಗ್ಗಿದಂತೆ ಕಾಣುತ್ತಿದೆ. ಸರ್ವಾಧಿಕಾರಿ ಧೋರಣೆಗೆ ಕಡಿವಾಣ ಬಿದ್ದ ಸುಳಿವು ಸಿಕ್ಕಿದೆ. ಅವರಿಗೆ ಮತ್ತೆ ಆರ್ಎಸ್ಎಸ್ ನೆನಪಾಗಿದೆ. 2014ರಲ್ಲಿ ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ನಾಗ್ಪುರದ ಆರ್ಎಸ್ಎಸ್ ಕಚೇರಿಯ ಮೆಟ್ಟಿಲನ್ನು ಮೋದಿ ತುಳಿದಿದ್ದಾರೆ. ಅವರ ಈ ಭೇಟಿಯು ತಮಗಾಗಿ ಬಿಜೆಪಿ ಅಧ್ಯಕ್ಷ ಎಂಬ ರಬ್ಬರ್ ಸ್ಟ್ಯಾಂಪ್ಗೆ ಆರ್ಎಸ್ಎಸ್ ಸಮ್ಮತಿ ಪಡೆಯುವುದಕ್ಕಾಗಿನ ಕಸರತ್ತು ಎಂದೂ ಬಣ್ಣಿಸಲಾಗುತ್ತಿದೆ.
ಬಿಜೆಪಿ ತನ್ನನ್ನು ತಾನು ವಿಶ್ವದ ಅತಿದೊಡ್ಡ ಪಕ್ಷವೊಂದು ಹೇಳಿಕೊಂಡಿದೆ. ದೇಶಾದ್ಯಂತ ಸುಮಾರು 10ರಿಂದ 12 ಕೋಟಿ ಸಕ್ರಿಯ ಕಾರ್ಯಕರ್ತರನ್ನು ಹೊಂದಿದ್ದೇವೆ ಎಂದು ಹೇಳುತ್ತದೆ. ಅತ್ಯಂತ ಶ್ರೀಮಂತ ಪಕ್ಷವೂ ಆಗಿದೆ. ಈ ಪಕ್ಷ 2029ರ ವೇಳೆಗೆ 50ನೇ ವಾರ್ಷಿಕೋತ್ಸವವನ್ನೂ ಆಚರಿಸಿಕೊಳ್ಳಲಿದೆ. ಆದರೂ, ತನ್ನ ರಾಷ್ಟ್ರೀಯ ಅಧ್ಯಕ್ಷರನ್ನು ನೇಮಿಸಿಕೊಳ್ಳಲು ಹೆಣಗಾಡುತ್ತಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ನೇಮಕದಲ್ಲಿ ನರೇಂದ್ರ ಮೋದಿ ಅವರು ಸವಾಲನ್ನೂ, ಹಿನ್ನಡೆಯನ್ನೂ ಅನುಭವಿಸುತ್ತಿದ್ದಾರೆ.
ಮೋದಿ ಅವರಿಗೆ ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುವ ಅಧ್ಯಕ್ಷರು ಬೇಕು. ಆದರೆ, ಆರ್ಎಸ್ಎಸ್ಗೆ ಪಕ್ಷ ಕಟ್ಟುವ, ನಿಭಾಯಿಸುವ, ಸರ್ಕಾರ, ಪಕ್ಷ ಹಾಗೂ ಆರ್ಎಸ್ಎಸ್ ನಡುವೆ ಅತ್ಯುತ್ತಮ ಕೊಂಡಿಯಾಗಿ ಕೆಲಸ ಮಾಡುವ ಆಸಾಮಿ ಬೇಕು. ಮೋದಿ-ಶಾ ಮತ್ತು ಆರ್ಎಸ್ಎಸ್ ನಡುವಿನ ತಿಕ್ಕಾಟದಲ್ಲಿ ಬಿಜೆಪಿ ಅಧ್ಯಕ್ಷರ ನೇಮಕವು ಜಟಿಲವಾಗಿದೆ. ಕುಟಿಲ ಪಥದಲ್ಲಿ ಸಾಗುತ್ತಿದೆ.
ಕಳೆದ 11 ವರ್ಷಗಳಿಂದ ನಾಗ್ಪುರದಿಂದ ದೂರ ಉಳಿದಿದ್ದ ಮೋದಿ, ‘ನಾನು ಸಮೀಕ್ಷೆ ಮಾಡಿದ ಎಲ್ಲದರಲ್ಲೂ ನಾನೇ ರಾಜ’ ಎಂದು ಬಿಂಬಿಸಿಕೊಂಡಿದ್ದರು. ಆರ್ಎಸ್ಎಸ್ ಸಲಹೆ-ಸೂಚನೆಗಳನ್ನು ಬದಿಗೊತ್ತಿ ಮೋದಿ-ಶಾ ಸರ್ವಾಧಿಕಾರಿಗಳಾಗಿ ಪಕ್ಷದ ನಡೆ-ನುಡಿಗಳನ್ನು ನಿರ್ಧರಿಸುತ್ತಿದ್ದರು. ಅದಕ್ಕೆ, ಜೆ.ಪಿ ನಡ್ಡಾ ಅವರನ್ನು ರಬ್ಬರ್ ಸ್ಟ್ಯಾಂಪ್ ಆಗಿ ಬಳಸಿಕೊಳ್ಳುತ್ತಿದ್ದರು.
ಈಗ, ಬಿಜೆಪಿ ಅಧ್ಯಕ್ಷರಾಗಿ ಜೆ.ಪಿ ನಡ್ಡಾ ಅವರ ಅಧಿಕಾರಾವಧಿ ಮುಗಿದು ಒಂದು ವರ್ಷ ಕಳೆದಿದೆ. ಆ ಸ್ಥಾನಕ್ಕೆ ನಡ್ಡಾ ರೀತಿಯವರನ್ನೇ ಪ್ರತಿಷ್ಠಾಪಿಸಲು ಮೋದಿ-ಶಾ ಹವಣಿಸುತ್ತಿದ್ದಾರೆ. ಆದರೆ, ಅದಕ್ಕೆ ಆರ್ಎಸ್ಎಸ್ ಮಣೆ ಹಾಕುತ್ತಿಲ್ಲ. ಬಿಜೆಪಿ ಪ್ರಸ್ತಾಪಿಸುವ, ಶಿಫಾರಸು ಮಾಡುವ ಹೆಸರುಗಳನ್ನು ಆರ್ಎಸ್ಎಸ್ ತಿರಸ್ಕರಿಸುತ್ತಿದೆ. ಈ ತಿರಸ್ಕಾರದ ಕಾರಣದಿಂದಾಗಿ ಬಿಜೆಪಿ ಅಧ್ಯಕ್ಷ ಹುದ್ದೆ ಖಾಲಿ ಉಳಿದಿದೆ. ಸಂಘದ ಮನವೊಲಿಸುವ ಪ್ರಯತ್ನಕ್ಕೆ ಮೋದಿ ಇಳಿದಿದ್ದಾರೆ. ಸಂಘದ ಕೇಂದ್ರ ಕಚೇರಿಯ ಮೆಟ್ಟಿಲು ಹತ್ತಿದ್ದಾರೆ.
ಈ ತಿಂಗಳೊಳಗೆ ಬಿಜೆಪಿ ಅಧ್ಯಕ್ಷರು ಆಯ್ಕೆಯಾಗಲಿದ್ದಾರೆ. ಹೆಸರು ಅಂತಿಮವಾಗಲಿದೆ ಎಂದು ಸುದ್ದಿಗಳು ಹರಿದಾಡುತ್ತಿವೆ. ಕಳೆದ ತಿಂಗಳು ಕೂಡ ಇಂತಹದ್ದೇ ಸುದ್ದಿ ಹರಿದಾಡಿತ್ತು. ಆದರೆ, ಬಿಜೆಪಿ ಅಧ್ಯಕ್ಷ ಗಾಧಿಯು ಮೋದಿ-ಶಾ ಮತ್ತು ಆರ್ಎಸ್ಎಸ್ ನಡುವೆ ಸಿಕ್ಕು ನಲುಗುತ್ತಿದೆ. ಆಯ್ಕೆಯ ಚರ್ಚೆಗಳು ನಡೆಯುತ್ತಲೇ ಇವೆ.
ಇಲ್ಲಿ ಒಂದು ವಿಷಯ ಸ್ಪಷ್ಟ: ಮೋದಿಯವರ ಅಗಾಧತೆಯ ಸವಾರ್ಧಿಕಾರಿ ವ್ಯಕ್ತಿತ್ವಕ್ಕೆ ಹೊಂದಿಕೊಳ್ಳುವವರು ಪಕ್ಷದ ಮುಖ್ಯಸ್ಥರ ಹುದ್ದೆಯನ್ನು ಅಲಂಕರಿಸಬೇಕು. ಅವರು ಮೋದಿಗೆ ಅತ್ಯಂತ ವಿಶ್ವಾಸಾರ್ಹರಾಗಿರಬೇಕು. ಮೋದಿ ಅವರ ಮಾತು ಮತ್ತು ಮಾರ್ಗದರ್ಶನಗಳನ್ನು ಕೇಳುವ/ಪಾಲಿಸುವ ವ್ಯಕ್ತಿಯಾಗಿರಬೇಕು. ಅರ್ಥಾತ್ ಸ್ಟ್ಯಾಂಪ್ ಪೇಪರ್ ಆಗಿರಬೇಕು.
ಅಂತಹ ವ್ಯಕ್ತಿ ನಡ್ಡಾ ಆಗಿದ್ದರು. 2020ರ ಜನವರಿಯಲ್ಲಿ ಅವರು ರಾಷ್ಟ್ರೀಯ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದರು. ಅಮಿತ್ ಶಾ ಅವರಿಂದ ಅಧಿಕಾರದ ಚುಕ್ಕಾಣಿ ಪಡೆದುಕೊಂಡರು. ಆದರೆ, ಅವರ ಅವಧಿ ಮುಗಿದಿದೆ. ನಡ್ಡಾ ಥರದವರನ್ನೇ ಅಧ್ಯಕ್ಷಗಾದಿಗೆ ಪ್ರತಿಷ್ಠಾಪಿಸಲು ಮೋದಿ-ಶಾ ಹವಣಿಸುತ್ತಿದ್ದಾರೆ. ಸದ್ಯಕ್ಕೆ ಅವರ ಪಟ್ಟಿಯಲ್ಲಿ ಸುನಿಲ್ ಬನ್ಸಾಲ್, ವಿನೋದ್ ತಾವ್ಡೆ, ದೇವೇಂದ್ರ ಫಡ್ನವೀಸ್, ಅನುರಾಗ್ ಠಾಕೂರ್, ಮನೋಹರ್ ಲಾಲ್ ಖಟ್ಟರ್ ಹಾಗೂ ಶಿವರಾಜ್ ಸಿಂಗ್ ಚೌಹಾಣ್ ಇದ್ದಾರೆ. ಆದರೆ, ಈ ಹೆಸರುಗಳನ್ನು ಆರ್ಎಸ್ಎಸ್ ಅನುಮೋದಿಸುತ್ತಿಲ್ಲ.
ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಅಖಿಲೇಶ್ ಯಾದವ್ ಹಾಗೂ ಕೆಲ ವಿರೋಧ ಪಕ್ಷದ ನಾಯಕರು ಬಿಜೆಪಿ ವಿರುದ್ಧ ವ್ಯಂಗ್ಯವಾಡಿದರು. ‘ವಿಶ್ವದ ಅತಿದೊಡ್ಡ ಪಕ್ಷವೆಂದು ಘೋಷಿಸಿಕೊಂಡಿದ್ದರೂ ಬಿಜೆಪಿಗೆ ತನ್ನ ಮುಖ್ಯಸ್ಥನನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಅಸಮರ್ಥವಾಗಿದೆ’ ಎಂದು ಲೇವಡಿ ಮಾಡಿದರು.
ಗಮನಾರ್ಹವೆಂದರೆ, ಬಿಜೆಪಿ ಅಧ್ಯಕ್ಷರ ನೇಮಕ ಮತ್ತು ಅದರ ಸುತ್ತಲಿನ ಚರ್ಚೆಯ ಬಗ್ಗೆ ಮುಖ್ಯವಾಹಿನಿಯ ಮಾಧ್ಯಮಗಳು ಜಾಣ ಮೌನಕ್ಕೆ ಜಾರಿವೆ. ಆ ವಿಚಾರ ಕುರಿತು ಸುದ್ದಿಗಳನ್ನು ಬಿತ್ತರಿಸುವಲ್ಲಿ ವಿಫಲವಾಗಿವೆ. ಬಿಜೆಪಿ ಅಧ್ಯಕ್ಷರ ನೇಮಕದ ಹಗ್ಗ-ಜಗ್ಗಾಟವನ್ನು ಮರೆಮಾಡಿವೆ. ಅದೇನು ಅಷ್ಟು ಮುಖ್ಯವಾದ ವಿಷಯವಲ್ಲ ಎಂಬಂತೆ ಬಿಂಬಿಸುತ್ತಿವೆ.
ಪಕ್ಷವು ಬೆಳೆಯುತ್ತಿದ್ದ ಸಮಯದಲ್ಲಿ ಎ.ಬಿ ವಾಜಪೇಯಿ ಮತ್ತು ಎಲ್.ಕೆ ಅಡ್ವಾಣಿ ಪಕ್ಷ ಸಂಘಟನೆ ಮತ್ತು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಚುಕ್ಕಾಣಿ ಹಿಡಿದಿದ್ದರು. ಆಗ ನಾನಾ ತಂತ್ರಗಳನ್ನು ಅಳವಡಿಸಿಕೊಂಡಿದ್ದರು. ಜೊತೆಗೆ ತಮ್ಮದೇ ಅಧಿಕಾರ ನಡೆಸಲೂ ಯತ್ನಿಸಿದ್ದರು. ಆದರೆ ಆ ಸಮಯದಲ್ಲಿ, ಈಗಿನ ಮೋದಿ-ಶಾಗಿಂತ ಭಿನ್ನವಾಗಿ ವಾಜಪೇಯಿ ಮತ್ತು ಅಡ್ವಾಣಿ ಹಿಂದಿನ ಜನಸಂಘದ ದಿನಗಳಿಂದಲೂ ಕಷ್ಟಪಟ್ಟು ದುಡಿಯುತ್ತಿದ್ದ, ಸಂಘಟಿಸುತ್ತಿದ್ದ ಪಕ್ಷದ ಅತ್ಯಂತ ಹಿರಿಯ ನಾಯಕರಾಗಿದ್ದರು.
ಹಾಗಾಗಿ, ವಾಜಪೇಯಿ-ಅಡ್ವಾಣಿ ಯುಗದಲ್ಲಿ, ಪಕ್ಷವು ಕೆ. ಜನ ಕೃಷ್ಣಮೂರ್ತಿ, ಕುಶಭಾವು ಠಾಕ್ರೆ, ಬಂಗಾರು ಲಕ್ಷ್ಮಣ್, ಎಂ. ವೆಂಕಯ್ಯ ನಾಯ್ಡು ಮತ್ತು ರಾಜನಾಥ್ ಸಿಂಗ್ ಅವರನ್ನು ತನ್ನ ಮುಖ್ಯಸ್ಥರನ್ನಾಗಿ ನೋಡಿತ್ತು. ಆರ್ಎಸ್ಎಸ್ ಜೊತೆ ನಿಕಟ ಸಂಪರ್ಕ ಹೊಂದಿದ್ದ ನಿತಿನ್ ಗಡ್ಕರಿ ಅವರನ್ನು ವಿಶೇಷ ಸಂದರ್ಭದಲ್ಲಿ ಪಕ್ಷದ ಮುಖ್ಯಸ್ಥರನ್ನಾಗಿ ಮಾಡಲಾಗಿತ್ತು.
ಇದನ್ನು ಓದಿದ್ದೀರಾ?: ಆನ್ಲೈನ್ ಗೇಮಿಂಗ್-ಬೆಟ್ಟಿಂಗ್ಗೆ ಕಡಿವಾಣ ಹಾಕಿ, ಕಾಯ್ದೆ ರೂಪಿಸುವ ಅಗತ್ಯವಿದೆ
ಸಂಸದೀಯ ಪ್ರಜಾಪ್ರಭುತ್ವಗಳಲ್ಲಿ ಅಲಿಖಿತ ಸಂಹಿತೆ ಒಂದಿದೆ; ಪಕ್ಷದ ಮುಖ್ಯಸ್ಥರ ಹುದ್ದೆಗೆ ಯಾರನ್ನು ನೇಮಿಸಿದರೂ ಅವರು ಸರ್ಕಾರ ಮತ್ತು ಸಂಘಟನೆಯ ಸುಗಮ ನಿರ್ವಹಣೆಗಾಗಿ ಪ್ರಧಾನಿಯ ಪ್ರಾಕ್ಸಿಯಾಗಿರಬೇಕು. ಪ್ರಧಾನಿ ಮತ್ತು ಪಕ್ಷದ ಮುಖ್ಯಸ್ಥರ ಡಬಲ್ ಎಂಜಿನ್ ಮಾತ್ರವೇ ಪಕ್ಷವನ್ನು ಯಶಸ್ಸಿನ ಹಾದಿಯಲ್ಲಿ ಎಳೆಯಲು ಸಾಧ್ಯ ಎಂಬ ವಾದವಿದೆ.
ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ, ಅವರಿಗೆ ಅಮಿತ್ ಶಾ ಸಾಥ್ ಕೊಟ್ಟಿದ್ದರು. ಅವರು 2014ರಲ್ಲಿ ಪ್ರಧಾನಿಯಾದ ಬಳಿಕ, ಅಮಿತ್ ಶಾ ಅವರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹುದ್ದೆಗೆ ಕೂರಿಸಲು ಮೋದಿ ಅವಿರತವಾಗಿ ಶ್ರಮಿಸಿದರು. ಶಾ ಅವರನ್ನು ಬಿಜೆಪಿ ಮುಖ್ಯಸ್ಥರನ್ನಾಗಿ ನೇಮಿಸುವುದು ಹಲವರಿಗೆ ಇಷ್ಟವಿರಲಿಲ್ಲ. ಮೋದಿಗೆ ಅಮಿತ್ ಶಾ ಆಪ್ತ ವ್ಯಕ್ತಿ ಮತ್ತು ಇಬ್ಬರೂ ಗುಜರಾತ್ನವರೇ ಎಂಬ ಅಂಶದ ಮೇಲೆ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಆದಾಗ್ಯೂ, ಆರ್ಎಸ್ಎಸ್ ಅನುಮತಿ ಪಡೆದು, ಶಾ ಅವರನ್ನು ಹುದ್ದೆಗೇರಿಸಲಾಯಿತು
2017ರಲ್ಲಿ, ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಆಯ್ಕೆಯ ಮೇಲೆ ಮೋದಿ-ಶಾ ನಿರ್ಣಾಯಕ ಪ್ರಭಾವ ಬೀರಲು ಯತ್ನಿಸಿದರು. ಉತ್ತರ ಪ್ರದೇಶದ ಮುಖ್ಯಮಂತ್ರಿ ಹುದ್ದೆಗೆ ತಮ್ಮ ನೆಚ್ಚಿನ ವ್ಯಕ್ತಿ ಮನೋಜ್ ಸಿನ್ಹಾ ಅವರನ್ನು ನೇಮಿಸಬೇಕೆಂದು ಮೋದಿ-ಶಾ ಕಸರತ್ತು ನಡೆಸಿದರು. ಆದರೆ, ವಿಫಲರಾದರು. ಸಂಘದ ಒತ್ತಾಯದ ಮೇರೆಗೆ ಹಲವು ಚರ್ಚೆಗಳ ನಂತರ ಯೋಗಿ ಆದಿತ್ಯನಾಥ್ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ನೇಮಿಸಲಾಯಿತು. ಈಗ, ಸಿನ್ಹಾ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಲೆಫ್ಟಿನೆಂಟ್ ಗವರ್ನರ್ ಆಗಿದ್ದಾರೆ.
ಇಂತಹ ಪ್ರಹಸನಗಳ ನಡುವೆ, ಈಗ ಬಿಜೆಪಿ ಅಧ್ಯಕ್ಷರ ನೇಮಕ ಮುಂದಿದೆ. ಕಳೆದ ತಿಂಗಳು ಆರ್ಎಸ್ಎಸ್ ಪ್ರಧಾನ ಕಚೇರಿಗೆ ಮೋದಿ ಭೇಟಿ ನೀಡಿದರೂ ಬಿಜೆಪಿ ಮತ್ತು ಸಂಘದ ನಡುವಿನ ಶೀತಲ ಸಮರ ಮುಂದುವರೆದೇ ಇದೆ. ಬಿಜೆಪಿ ಪ್ರಸ್ತಾಪಿಸುತ್ತಿರುವ ಹೆಸರುಗಳನ್ನು ಆರ್ಎಸ್ಎಸ್ ತಿರಸ್ಕರಿಸಿದೆ. ಪಕ್ಷದ ಮುಂದಿನ ಮುಖ್ಯಸ್ಥರು ‘ದೃಢತೆಯಳ್ಳ ನಾಯಕ’ ಆಗಿರಬೇಕು, ಆತ ‘ರಬ್ಬರ್ ಸ್ಟ್ಯಾಂಪ್’ ಆಗಿರಬಾರದು ಎಂದು ದೃಢವಾಗಿ ಹೇಳುತ್ತಿದೆ. ಇದೇ ಮೋದಿಗೆ ತೊಡಕಾಗಿ ಪರಿಣಮಿಸಿದೆ.