ʼಆಸ್ತಿ ನೋಂದಣಿಗೆ 3 ಲಕ್ಷ ಲಂಚ ಕೊಟ್ಟು, ಮೂರು ತಿಂಗಳಿನಿಂದ ಅಲೆದಾಡಿದರೂ ಕೆಲಸ ಮಾತ್ರ ಆಗಿಲ್ಲʼ ಎನ್ನುವ ಬೆಂಗಳೂರಿನ ವ್ಯಕ್ತಿಯೊಬ್ಬರ ಎಕ್ಸ್ ಪೋಸ್ಟ್ ಒಂದು ನೆಟ್ಟಿಗರ ಗಮನ ಸೆಳೆಯುತ್ತಿದೆ.
ಬೆಂಗಳೂರಿನ ನೆಟ್ಟಿಗ ಮಾಧವ ಎಂಬುವರು ಎಕ್ಸ್ನಲ್ಲಿ, ʼನನ್ನ ತಂದೆ 14 ಸೆಂಟ್ಸ್ ಆಸ್ತಿ ನೋಂದಣಿಗಾಗಿ ತಹಶೀಲ್ದಾರ್‌ಗೆ 3 ಲಕ್ಷ ಮತ್ತು ಕಂಪ್ಯೂಟರ್ ಆಪರೇಟರ್ಗೆ 10 ಸಾವಿರ ರೂ. ಲಂಚ ನೀಡಿದ್ದಾರೆ. 3 ತಿಂಗಳು ಕಳೆದರೂ ಕೂಡ ನೋಂದಣಿಯಾದ ದಾಖಲೆ ಪತ್ರ ಇನ್ನೂ ನಮ್ಮ ಕೈ ಸೇರಿಲ್ಲʼ ಎಂದು ಬರೆದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭ್ರಷ್ಟಾಚಾರದಲ್ಲಿ ಕರ್ನಾಟಕವೇ ನಂಬರ್ ಒನ್ ಆಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆರ್ಥಿಕ ಸಲಹೆಗಾರರೂ ಆಗಿರುವ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಹೇಳಿಕೆ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ. ಈ ವಿಚಾರವನ್ನು ಮುಂದಿಟ್ಟುಕೊಂಡು ವಿಪಕ್ಷಗಳು ಸರ್ಕಾರದ ವಿರುದ್ಧ ಮುಗಿಬೀಳುತ್ತಿವೆ. ಇನ್ನು, ಸಾಮಾಜಿಕ ಮಾಧ್ಯಮವಾದ ಎಕ್ಸ್ನಲ್ಲಿ ನೆಟ್ಟಿಗರು ಬಸವರಾಜ ರಾಯರೆಡ್ಡಿ ಅವರ ಹೇಳಿಕೆ ಅಕ್ಷರಶಃ ಸ್ಯತ್ಯ ಎನ್ನುತ್ತಿದ್ದಾರೆ.
ಈ ಪೋಸ್ಟ್ಗೆ asdf ಎಂಬ ಹೆಸರಿನ ಖಾತೆದಾರರು, ಉತ್ತರ ಬೆಂಗಳೂರಿನಲ್ಲಿ 1500 ಚದರ ಅಡಿ ಭೂಮಿ ನೋಂದಣಿಗೆ ಸಬ್ ರಿಜಿಸ್ಟ್ರಾರ್‌ಗೆ 35000 ರೂ, ಆರ್‌ಟಿಸಿ ದಾಖಲೆಗಳಲ್ಲಿ ಹೆಸರು ಬದಲಾವಣೆ ಮಾಡಲು ತಹಶೀಲ್ದಾರ್‌ಗೆ 25000 ರೂ. ಮತ್ತು ಸರ್ವೇ ಅಧಿಕಾರಿಗಳಿಗೆ ಸರ್ವೆ ಮತ್ತು ಗಡಿ ಗುರುತಿಸಲು 8000 ರೂ. (ಅಧಿಕೃತ ಶುಲ್ಕಗಳು ಸೇರಿದಂತೆ) ನೀಡಿದ್ದೇನೆ ಎಂದು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು | ಬಿಎಂಟಿಸಿ ಬಸ್ ಡಿಕ್ಕಿ; ಇಬ್ಬರ ಸಾವು
ಬಿಜೆಪಿ ಅಧಿಕಾರದಲ್ಲಿದ್ದಾಗ ಕಮಿಷನ್ ಸರ್ಕಾರ ಎಂದು ಕಾಂಗ್ರೆಸ್ ಆರೋಪ ಮಾಡಿತ್ತು, ಇದೀಗ ಅಧಿಕಾರದಲ್ಲಿರುವ ಕಾಂಗ್ರೆಸ್‌ನ್ನು ಲೂಟಿಕೋರ ಸರ್ಕಾರ ಎಂದು ಬಿಜೆಪಿ ಜರೆಯುತ್ತಿದೆ. ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಮಾಡಬೇಕಾದ ಜನಪರ ಕೆಲಸಗಳನ್ನು ಮೂಲೆಗುಂಪು ಮಾಡಿ ಆಡಳಿತ-ವಿರೋಧ ಪರಸ್ಪರ ಕಚ್ಚಾಡುತ್ತವೆಯಷ್ಟೆ. ಜನಪ್ರತಿನಿಧಿಗಳ ಪರಸ್ಪರ ಕೆಸರೆರಚಾಟದ ಪರಿಣಾಮ ಜನತಾ ಜನಾರ್ಧನನ ಸ್ಥಿತಿ ಹೇಳತೀರದಾಗಿದೆ.