ಆಟೋ ಚಾಲಕರು ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸಬೇಕು. ಒಂದು ವೇಳೆ ಕಾನೂನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸೇಡಂ ಪಿಎಸ್ಐ ಉಪೇಂದ್ರಕುಮಾರ ಎಚ್ಚರಿಸಿದರು.
ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದ ಕ್ರೀಡಾಂಗಣ ಮುಖ್ಯ ರಸ್ತೆಯಲ್ಲಿ ಆಟೋ ಚಾಲಕರೊಂದಿಗೆ ಪಿಎಸ್ಐ ಉಪೇಂದ್ರಕುಮಾರ ಅವರು ಮಾತನಾಡಿ, ʼಪಟ್ಟಣದಲ್ಲಿ ಸಿಮೆಂಟ್ ಕಾರ್ಖಾನೆಗಳು ಇರುವುದರಿಂದ ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚಾಗುತ್ತಿದ್ದು , ಆಟೋ ಚಾಲಕರು ಸಮವಸ್ತ್ರ ಧರಿಸಿ ಕಾನೂನು ಬದ್ದವಾಗಿ ಸಂಚಾರ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಬೇಕು. ಸಂಚಾರ ನಿಯಮ ಉಲ್ಲಂಘಿಸಿದರೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದುʼ ಎಂದು ಖಡಕ್ ಎಚ್ಚರಿಕೆ ನೀಡಿದರು,
ಹೈದರಾಬಾದ್, ಬೆಂಗಳೂರು, ಬೆಳಗಾವಿ, ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ಬೇರೆ ಬೇರೆ ಪ್ರದೇಶಕ್ಕೆ ತೆರಳುವ ಪ್ರಯಾಣಿಕರು ಹೆಚ್ಚಾಗಿರುವ ಕಾರಣ ಬಸ್ ನಿಲ್ದಾಣದಲ್ಲಿ ಜನದಟ್ಟಣೆ ಹೆಚ್ಚಾಗುತ್ತಿದೆ. ಹೀಗಾಗಿ ಆಟೋ ಚಾಲಕರು ಬಸ್ ನಿಲ್ದಾಣದ ಒಳಗಡೆ ಸಂಚಾರಿಸಬಾರದು. ನಿಯಮ ಪಾಲಿಸದಿದ್ದರೆ ಪೋಲಿಸ್ ಠಾಣೆಯಲ್ಲಿ ಒಂದು ವಾರ ಆಟೋ ನಿಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದುʼ ಎಂದರು,
ಆಟೋ ಚಾಲಕರು ಮದ್ಯಪಾನ ಸೇವಿಸಿ ವಾಹನ ಚಲಾಯಿಸುವುದು ಕಂಡು ಬಂದಲ್ಲಿ ಅವರ ಮೇಲೆ ಪ್ರಕರಣ ದಾಖಲಿಸುವುದು ಮತ್ತು ಆಟೋ ಸಂಚರಿಸುವಾಗ ನಿಗದಿತ ಪ್ರಯಾಣಿಕರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಕುರಿಸಿಕೊಂಡು ಪ್ರಯಾಣಿಸಬಾರದು ಹಾಗೂ ಸರತಿ ಸಾಲಿನಲ್ಲಿ ಸಂಚಾರಿಸಬೇಕುʼ ಎಂದು ಸಲಹೆ ನೀಡಿದರು.
ʼಸಂಚಾರ ವೇಳೆ ಅನುಮಾನಸ್ಪದ ರೀತಿಯಲ್ಲಿ ವ್ಯಕ್ತಿಗಳು ಕಂಡು ಬಂದಲ್ಲಿ ಕೂಡಲೇ ಸ್ಥಳೀಯ ಪೋಲಿಸ್ ಠಾಣೆಗೆ ಹಾಗೂ 112ಗೆ ಕರೆ ಮಾಡಿ ಮಾಹಿತಿ ತಿಳಿಸಬೇಕುʼ ಎಂದರು.
ಈ ಸುದ್ದಿ ಓದಿದ್ದೀರಾ? ವಕ್ಫ್ ತಿದ್ದುಪಡಿ ಕಾಯ್ದೆ | ಮೂಗಿಗೆ ತುಪ್ಪ ಹಚ್ಚಲು ಮನೆ ಬಾಗಿಲಿಗೆ ಬರುತ್ತಿದೆ ಬಿಜೆಪಿ!
ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು, ಆಟೋ ಚಾಲಕರು ಇದ್ದರು.