ಹಲವಾರು ಮಹಿಳಾ ಸಿಬ್ಬಂದಿಗಳ ಮೇಲೆ ಐಎಎಸ್ ಅಧಿಕಾರಿಯೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಪ್ರಕರಣ ನ್ಯಾಗಾಲ್ಯಾಂಡ್‌ನಲ್ಲಿ ಬೆಳಕಿಗೆ ಬಂದಿದೆ. ಆರೋಪಿ ಅಧಿಕಾರಿ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆಗಾಗಿ ಎಸ್‌ಐಟಿ ರಚಿಸಲಾಗಿದೆ.
ನಾಗಾಲ್ಯಾಂಡ್ ಹೂಡಿಕೆ ಮತ್ತು ಅಭಿವೃದ್ಧಿ ಪ್ರಾಧಿಕಾರದಲ್ಲಿ (ಐಡಿಎಎನ್) ಕಾರ್ಯನಿರ್ವಹಿಸುತ್ತಿರುವ ಹಲವಾರು ಮಹಿಳಾ ಉದ್ಯೋಗಿಗಳ ಮೇಲೆ ಐಎಎಸ್ ಅಧಿಕಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ, ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಐಡಿಎಎನ್‌ನ ಅಧ್ಯಕ್ಷ ಅನು ಮೇಥಾ ಅವರು ಫೆಬ್ರವರಿ 2ರಂದು ಆರೋಪಿ ಅಧಿಕಾರಿ ವಿರುದ್ಧ ಮಹಿಳಾ ಆಯೋಗಕ್ಕೆ ಮೌಖಿಕವಾಗಿ ಮಾಹಿತಿ ನೀಡಿದ್ದರು. ಬಳಿಕ, ಮಾರ್ಚ್17ರಂದು ಮಹಿಳಾ ಆಯೋಗದ ಅಧ್ಯಕ್ಷೆ ನ್ಗಿನ್ಯೆಹ್ ಕೊನ್ಯಾಕ್ ಅವರು ಪೊಲೀಸ್ ಮಹಾನಿರ್ದೇಶಕರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. ಇದೀಗ, ಎಫ್‌ಐಆರ್ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ.
ಮಹಿಳಾ ಆಯೋಗವು ತನ್ನ ದೂರಿನಲ್ಲಿ ಐಡಿಎಎನ್‌ನಲ್ಲಿ ಕೆಲಸ ಮಾಡುತ್ತಿರುವ ಸಂತ್ರಸ್ತೆಯರ ಹೇಳಿಕೆಗಳನ್ನು ಉಲ್ಲೇಖಿಸಿದ್ದಾರೆ. ವೇತನ ಹೆಚ್ಚಳ ಮತ್ತು ಇತರ ಸೌಲಭ್ಯಗಳನ್ನು ಪಡೆಯಬೇಕೆಂದರೆ ತನ್ನೊಂದಿಗೆ ದೈಹಿಕ ಸಂಬಂಧ ಬೆಳೆಸಬೇಕೆಂದು ಆರೋಪಿ ಪದೇ ಪದೇ ಒತ್ತಾಯಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಆರೋಪಿ ಐಎಎಸ್ ಅಧಿಕಾರಿ ಕೊಹಿಮಾದಲ್ಲಿ ಐಡಿಎಎನ್‌ನ ಜಂಟಿ ಕಾರ್ಯದರ್ಶಿಯಾಗಿದ್ದಾರೆ. ಅವರು ತಮ್ಮ ವಿರುದ್ಧದ ಆರೋಪವನ್ನು ನಿರಾಕರಿಸಿದ್ದಾರೆ.
ಮಹಿಳಾ ಆಯೋಗದ ದೂರಿನ ಆಧಾರದ ಮೇಲೆ ಆರೋಪಿ ಅಧಿಕಾರಿಯ ವಿರುದ್ಧ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ತನಿಖೆಗೆ ಐಪಿಎಸ್ ಅಧಿಕಾರಿ ನೇತೃತ್ವದಲ್ಲಿ ಎಸ್‌ಐಟಿ ರಚಿಸಲಾಗಿದೆ. ಆರೋಪಿ ಅಧಿಕಾರಿಯನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಈ ವರದಿ ಓದಿದ್ದೀರಾ?: ವಕ್ಫ್ ತಿದ್ದುಪಡಿ ಮಸೂದೆ 2025 | ಬೇರೆ ಧಾರ್ಮಿಕ ಸಂಸ್ಥೆಗಳು ಸ್ವಚ್ಛವಾಗಿವೆಯೇ?
ತನಿಖಾ ತಂಡದ ಪ್ರಾಥಮಿಕ ವರದಿಯು, ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 75 ಮತ್ತು 79ರ ಅಡಿಯಲ್ಲಿ ಗುರುತಿಸಬಹುದಾದ ಲೈಂಗಿಕ ಕಿರುಕುಳದ ಕೃತ್ಯಗಳನ್ನು ಆರೋಪಿ ಅಧಿಕಾರಿ ಎಸಗಿದ್ದಾರೆ ಎಂಬುದನ್ನು ವಿವರಿಸಿದೆ. ತನಿಖೆ ಮುಂದುವರೆದಿದೆ.
ಇದೇ ಆರೋಪಿ ಅಧಿಕಾರಿಯ ವಿರುದ್ಧ ಈ ಹಿಂದೆಯೂ ಇಂತಹದ್ದೇ ಹಲವಾರು ಆರೋಪಗಳು ಕೇಳಿಬಂದಿವೆ. 2021ರಲ್ಲಿ ಆರೋಪಿ ಅಧಿಕಾರಿಯು ನೋಕ್ಲಾಕ್ ಜಿಲ್ಲೆಯ ಉಪ ಆಯುಕ್ತರಾಗಿ ನಿಯೋಜನೆಯಾಗಿದ್ದರು. ಆಗ, ತಮ್ಮ ಅಧಿಕೃತ ನಿವಾಸದಲ್ಲಿ ಮನೆ ಕೆಲಸ ಮಾಡುತ್ತಿದ್ದ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿತ್ತು.
2021ರ ಡಿಸೆಂಬರ್ 2ರಂದು ಆರೋಪಿ ಅಧಿಕಾರಿಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ನ್ಯಾಯಾಲಯಗೆ ಚಾರ್ಜ್‌ಶೀಟ್ ಸಲ್ಲಿಸಲಾಗಿತ್ತು. ಆರೋಪಪಟ್ಟಿಯನ್ನು ಪರಿಶೀಲಿಸಿದ್ದ ವಿಶೇಷ ಪೋಕ್ಸೋ ನ್ಯಾಯಾಧೀಶರು ಪ್ರಕರಣದ ವಿಚಾರಣೆಯನ್ನು ಆರಂಭಿಸಿದ್ದರು. ಇಂದಿಗೂ ಆ ಪ್ರಕರಣವು ಟ್ಯೂನ್ಸಾಂಗ್ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ.