ಮೌಲ್ಯಮಾಪನದಲ್ಲಿ ಆಗುವ ವ್ಯತ್ಯಾಸವು ಮತ್ತು ವ್ಯತ್ಯಾಸದ ಕಾರಣಕ್ಕಾಗಿ ಪರೀಕ್ಷಾರ್ಥಿಗಳು ಅನುತ್ತೀರ್ಣರಾದರೆ ವಿದ್ಯಾರ್ಥಿಗಳು, ಅವರ ಕುಟುಂಬಸ್ಥರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತವೆ. ಮಾತ್ರವಲ್ಲದೆ, ಸಮಾಜ, ಕಾಲೇಜು ಹಾಗೂ ವಿಶ್ವವಿದ್ಯಾಲಯದ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತದೆ. ಪರೀಕ್ಷಾ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡುವವರಿಗೆ ಮೊದಲು ತರಬೇತಿ ನೀಡಬೇಕು ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
ರಾಜೀವ್ ಗಾಂಧಿ ಆರೋಪ ವಿಶ್ವವಿದ್ಯಾಲಯದ ಹೋಮಿಯೋಪತಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ಅಭಿಷೇಕ್ ಎಂಬವರು ಪರೀಕ್ಷೆಗಳ ಥಿಯರಿ ಪತ್ರಿಕೆಗಳಗೆ ಅನಿಯಮಿತವಾಗಿ ಅಂಕಗಳನ್ನು ನೀಡಲಾಗುತ್ತಿದೆ ಎಂದು ಆರೋಪಿ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ಅವರ ಅರ್ಜಿಯ ವಿಚಾರಣೆ ನಡೆಸಿರುವ ಹೈಕೋರ್ಟ್ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್, “ವಿದ್ಯಾರ್ಥಿಗಳು ಅನುತ್ತೀರ್ಣರಾದರೆ, ಅದು ಅವರ ಆತ್ಮವಿಶ್ವಾಸದ ಮೇಲೆ ಪರಿಣಾಮ ಬೀರಬಹುದು. ಅದಕ್ಕಾಗಿ ಸರಿಯಾದ ರೀತಿಯಲ್ಲಿ ಮೌಲ್ಯಮಾಪನ ಮಾಡಬೇಕು. ಮೌಲ್ಯಮಾಪನ ಮಾಡುವವರಿಗೆ ಅಗತ್ಯ ತರಬೇತಿ ನೀಡಬೇಕು” ಎಂದು ರಾಜೀವ್ ಗಾಂಧಿ ವಿಶ್ವವಿದ್ಯಾಲಯಕ್ಕೆ ಸೂಚನೆ ನೀಡಿದ್ದಾರೆ.
“ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಮುಂದೆ ಸಾವಿರಾರು ಪ್ರಕರಣಗಳು ಬರುತ್ತಿವೆ. ಅವುಗಳಲ್ಲಿ ಹೆಚ್ಚಿನವು ಮೌಲ್ಯಮಾಪನದಲ್ಲಿನ ವ್ಯತ್ಯಾಸಕ್ಕೆ ಸಂಬಂಧಿಸಿವೆ. ಆಡಳಿತಾತ್ಮಕ ತೊಂದರೆಗಳ ಕಾರಣಕ್ಕಾಗಿ ಜವಾಬ್ದಾರಿಯನ್ನು ನಿರಾಕರಿಸಲು ಅಥವಾ ತ್ಯಜಿಸಲು ಸಾಧ್ಯವಿಲ್ಲ. ಇಂತಹ ಪ್ರಕರಣಗಳಲ್ಲಿ ಶೈಕ್ಷಣಿಕ ಮಂಡಳಿಯು ಯಾವ ರೀತಿಯ ಕ್ರಮ ತೆಗೆದುಕೊಂಡಿದೆ ಎಂಬುದನ್ನು ಪರಿಶೀಲಿಸಬೇಕಿದೆ” ಎಂದು ನ್ಯಾಯಾಧೀಶರು ಹೇಳಿದ್ದಾರೆ.
“ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸುವಾಗಲೇ ಅವುಗಳಿಗೆ ಮಾದರಿ ಉತ್ತರಗಳು ಅಥವಾ ಪ್ರಮುಖ ಉತ್ತರಗಳನ್ನು ಪ್ರಶ್ನೆ ಪತ್ರಿಕೆ ಹೊಂದಿಸಿದವರಿಂದಲೇ ಸಿದ್ದಪಡಿಸಬಹುದು. ಇದು ವಿಶ್ವವಿದ್ಯಾಲಯದ ಮೇಲೆ ಯಾವುದೇ ರೀತಿಯ ಆಡಳಿತಾತ್ಮಕ ಒತ್ತಡ ಉಂಟುಮಾಡುವುದಿಲ್ಲ. ಬದಲಾಗಿ, ವಿದ್ಯಾರ್ಥಿಗಳು ಎದುರಿಸುತ್ತಿರುವ ತೊಂದರೆಗಳನ್ನು ಪರಿಹರಿಸಲು ನೆರವಾಗುತ್ತದೆ” ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.