ಗುಬ್ಬಿ ತಾಲೂಕಿನ ಎಂ.ಹೆಚ್.ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಶನಿವಾರ ಮಧ್ಯಾಹ್ನ 12:30 ಕ್ಕೆ ಚಿತ್ತಪೂರ್ಣಿಮಾ ಅಭಿಜಿತ್ ಮುಹೂರ್ತದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಬ್ರಹ್ಮರಥೋತ್ಸವದ ಅಂಗವಾಗಿ ಶ್ರೀ ಲಕ್ಷ್ಮೀನರಸಿಂಹಸ್ವಾಮಿಗೆ ಬೆಳಗಿನ ಜಾವದಿಂದ ವಿವಿಧ ಅಭಿಷೇಕಗಳು, ಮಹಾಮಂಗಳಾರತಿ, ಅನ್ನ ಸಂತರ್ಪಣೆ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ವಿಧಿವತ್ತಾಗಿ ನಡೆದವು.
ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಯ ಉತ್ಸವ ಮೂರ್ತಿಯನ್ನು ಅಡ್ಡಪಲ್ಲಕ್ಕಿಯಲ್ಲಿ ಕೂರಿಸಿ ಹೂವಿನಿಂದ ಅಲಂಕಾರ ಮಾಡಿಕೊಂಡು ವಿವಿಧ ವಾದ್ಯಗಳೊಂದಿಗೆ ಮೆರವಣಿಗೆ ಮಾಡುತ್ತ ರಥಕ್ಕೆ ಕೂರಿಸಿ, ನಂತರ ಭಕ್ತರು ರಥವನ್ನು ಜಯ ಘೋಷ ಕೂಗುತ್ತಾ ರಥ ಎಳೆಯಲು ಪ್ರಾರಂಭಿಸಿದಂತೆ ಭಕ್ತರು ತಮ್ಮ ಹರಕೆಯನ್ನು ದವನ ಬಾಳೆಹಣ್ಣು ತೆರಿಗೆ ಎಸೆಯುವ ಮೂಲಕ ಭಕ್ತಿಯನ್ನು ಸಮರ್ಪಿಸಿದರು.
ಬಿರು ಬಿಸಿಲಿನಲ್ಲಿ ರಥೋತ್ಸವಕ್ಕೆ ಆಗಮಿಸಿದ ಭಕ್ತಾಧಿಗಳಿಗೆ ಮಜ್ಜಿಗೆ, ಪಾನಕ, ಕೋಸಂಬರಿ ವಿತರಣೆ ಮಾಡಲಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರಿಂದ ದೇವಸ್ಥಾನದ ಸುತ್ತಲೂ ನೂಕುನುಗ್ಗಲು ಉಂಟಾಗಿತ್ತು. ಉಳಿದಂತೆ ಎಲ್ಲಾ ಧಾರ್ಮಿಕ ಕೈಂಕರ್ಯ ವಿಧಿವತ್ತಾಗಿ ಜರುಗಿತು.