ಮೈಸೂರು ಜಿಲ್ಲೆ, ಹುಣಸೂರು ತಾಲ್ಲೂಕು ಹೆಮ್ಮಿಗೆ ಹಾಡಿಯಲ್ಲಿ ಜಮೀನು ಹಾಗೂ ಕಾಡಿಗೆ ಹೋಗುವ ರಸ್ತೆಯನ್ನು ಒತ್ತುವರಿ ಮಾಡಿದ್ದು, ಸದರಿ ವಿಚಾರವಾಗಿ ಕಂದಾಯ ಇಲಾಖೆ, ತಹಶೀಲ್ದಾರ್ ಅವರಿಗೆ ಎಷ್ಟೇ ಮನವಿ ಕೊಟ್ಟರು ಸ್ಪಂದಿಸುತಿಲ್ಲ ಎಂದು ಬುಡಕಟ್ಟು ಕೃಷಿಕರ ಸಂಘಟನೆಯ ಅಧ್ಯಕ್ಷ ಕೊಳವಿಗೆ ಜಯಪ್ಪ ಆರೋಪ ಮಾಡಿದ್ದಾರೆ.
ಬುಡಕಟ್ಟು ಕೃಷಿಕರ ಸಂಘದ ಮಾಸಿಕ ಸಭೆಯಲ್ಲಿ ಮಾತನಾಡಿದ ಆದಿವಾಸಿ ಬುಡಕಟ್ಟು ಸಮುದಾಯದ ಮುಖಂಡರು ಇದುವರೆಗೆ ನೀಡಿದ ಮನವಿಗಳಿಗೆ ಯಾವುದೇ ಸ್ಪಂದನೆ ಇಲ್ಲದಿರುವುದರಿಂದ ತಾಲ್ಲೂಕು ಕಚೇರಿ ಮುಂದೆ ಧರಣಿ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ರಸ್ತೆ ಬಿಡಿಸಿಕೊಡುವಂತೆ ಒತ್ತಾಯಿಸಲಾಗುವುದು ಎಂದಿದ್ದಾರೆ.
ಗೃಹಜ್ಯೋತಿ ಯೋಜನೆಯಡಿಯಲ್ಲಿ ಕಲ್ಪಿಸಲಾದ ವಿದ್ಯುತ್ ಸಂಪರ್ಕಕ್ಕೆ ಸರ್ಕಾರದಿಂದ ಹಣ ಪಾವತಿ ಮಾಡುವುದಿದ್ದರೂ ಸಹ ಸೆಸ್ಕ್ ಸರಿ ಸುಮಾರು 30 ಮನೆಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಿದೆ. ಗ್ಯಾರೆಂಟಿ ಯೋಜನೆಯ ಫಲಾನುಭವಿಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಸರ್ವಧಿಕಾರ ಧೋರಣೆ ತೋರಿದೆ. ಸರ್ಕಾರದ ಯೋಜನೆಗಳನ್ನು ಸಹ ಅಧಿಕಾರಿಗಳು ಪಾಲನೆ ಮಾಡುತ್ತಿಲ್ಲ. ಬಡವರ ಮೇಲೆ ಗದಪ್ರಹಾರ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗಿರಿಜನ ಹಾಡಿಗಳ ಮನೆ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಗಿರಿಜನ ಕಲ್ಯಾಣ ಇಲಾಖೆಗೆ ಸೂಚನೆ ಇದ್ದರು ಕ್ರಮವಹಿಸಿಲ್ಲ, ಅಧಿಕಾರಿಗಳಿಗೆ ಹಾಡಿ ಜೀವನದ ಕಷ್ಟದ ಅರಿವು ಇಲ್ಲ, ಅವರಿಗೇನು ಮನಬಂದಂತೆ ನಡೆದುಕೊಳ್ಳುತ್ತಾರೆ. ಕಷ್ಟ ಪಡುವುದು, ತೊಂದರೆ ಅನುಭವಿಸುವುದು ಹಾಡಿ ಕುಟುಂಬಗಳು. ಇದೆಲ್ಲ ಸರ್ಕಾರದ ಕಣ್ಣಿಗೆ ಕಾಣೋದೆ ಇಲ್ಲ. ಕತ್ತಲೆಯಲ್ಲಿ ಜೀವನ ಮಾಡುತಿದ್ದೇವೆ ಎಂದು ಅಳಲು ತೋಡಿಕೊಂಡಿದ್ದಾರೆ.

ಚಿಕ್ಕ ಹುಣಸೂರಿನ ಡೀಡ್ ಸಂಸ್ಥೆಯ ನಿರ್ದೇಶಕ ಶ್ರೀಕಾಂತ್ ಮಾತನಾಡಿ ” ಬಿಲ್ಲೆನಹೊಸಹಳ್ಳಿ ಹಾಡಿಯಲ್ಲಿ ಮೈಸೂರಿನ ಎನ್ಐಇ ಕಾಲೇಜು ವತಿಯಿಂದ ಕಳೆದ ವರ್ಷ ಸೋಲಾರ್ ಮೈಕ್ರೋಗಿಡ್ ಸ್ಥಾಪಿಸಿ 70 ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ. ಇದರಂತೆಯೇ ಹಮ್ಮಿಗೆ ಹಾಡಿಯಲ್ಲಿ ಮೈಕ್ರೋಗಿಡ್ ಸ್ಥಾಪಿಸುವ ಮನವಿ ಬಂದಿದ್ದು ಡೀಡ್ ಈ ಬಗ್ಗೆ ಚಿಂತನೆ ನಡೆಸಿದೆ.
ಮೈಸೂರು ವಿಶ್ವವಿದ್ಯಾಲಯದ ಸಂಶೋಧನಾ ಕೇಂದ್ರದ ಸಹಕಾರದಿಂದ ತಾಲ್ಲೂಕಿನ ಕೊಳವಿಗೆ ಹಾಡಿಯಲ್ಲಿ ಏ. 23 ರಂದು ಸರ್ಕಾರಿ ಯೋಜನೆಗಳ ಪರಿಚಯ ಹಾಗೂ ಸಂಶೋಧಕರೊಂದಿಗೆ ಡಾ. ನಂಜುಂಡ ಅವರ ನೇತೃತ್ವದಲ್ಲಿ ಆದಿವಾಸಿ ಮುಖಂಡರ ಚರ್ಚೆ ನಡೆಯಲಿದೆ ” ಎಂದು ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ವನ್ಯಜೀವಿ ಬೇಟೆ; ಮಾಂಸ ಮಾರಾಟ, ಮಾವುತರ ವಿರುದ್ಧ ಕ್ರಮ
ಸಭೆಯಲ್ಲಿ ಆದಿವಾಸಿ ಮುಖಂಡ ವಿಠಲ್ ನಾಣಚ್ಚಿ, ಹರ್ಷ, ಶಿವಣ್ಣ, ಮುನಿ ರಾಮಯ್ಯ, ದೊಡ್ಡ ಮಾರಯ್ಯ, ಗಂಗಮ್ಮ ಇದ್ದರು.