ಮಂಡ್ಯ ಜಿಲ್ಲೆಯಲ್ಲಿ ಬೆಳೆ ವಿಮೆಗೆ ಹೆಚ್ಚಿನ ರೈತರು ನೋಂದಣಿ ಮಾಡಿಕೊಂಡಿಲ್ಲ. ವಿಮೆ ಕುರಿತು ರೈತರಿಗೆ ಅರಿವು ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚೆಲುವರಾಯಸ್ವಾಮಿ ಸೂಚಿಸಿದ್ದಾರೆ.
ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. “ಬೆಳೆ ವಿಮೆಯು ಬರ ಅಥವಾ ಪ್ರವಾಹದ ಸಂದರ್ಭದಲ್ಲಿ ರೈತರಿಗೆ ಪ್ರಯೋಜನವಾಗಲಿದೆ. ಕಳೆದ ವರ್ಷ ರೈತರಿಗೆ ಕಡಿಮೆ ಗುಣಮಟ್ಟದ ಬೀಜಗಳು ಮತ್ತು ರಸಗೊಬ್ಬರಗಳನ್ನು ಸರಬರಾಜು ಮಾಡಲಾಗಿದೆ ಎಂಬ ದೂರುಗಳು ಬಂದಿವೆ. ಸರ್ಕಾರ ಇಂತಹ ಧೋರಣೆಗಳನ್ನು ಸಹಿಸುವುದಿಲ್ಲ. ಮುಂಗಾರು ಆರಂಭದಲ್ಲಿ ರೈತರಿಗೆ ಅಗತ್ಯವಿರುವಷ್ಟು ಬೀಜಗಳು ಮತ್ತು ರಸಗೊಬ್ಬರಗಳ ದಾಸ್ತಾನು ಸರ್ಕಾರದ ಬಳಿ ಇದೆ” ಎಂದರು.
ಕೃಷಿ ಇಲಾಖೆಯೊಂದಿಗೆ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳನ್ನು ವಿಲೀನಗೊಳಿಸುವ ಸಾಧ್ಯತೆಯ ಕುರಿತು ಮಾತನಾಡಿದ ಸಚಿವರು, “ರಾಜ್ಯ ಸರ್ಕಾರದ ಮುಂದೆ ಅಂತಹ ಯಾವುದೇ ಪ್ರಸ್ತಾಪವಿಲ್ಲ. ಹಿಂದಿನ ಸರ್ಕಾರದ ಆಡಳಿತದಲ್ಲಿ ಮಾತ್ರ ಚರ್ಚಿಸಲಾಗಿದೆ. ಆ ಬಗ್ಗೆ ಕಾಂಗ್ರೆಸ್ ಸರ್ಕಾರ ಯಾವುದೇ ಚರ್ಚೆ ನಡೆಸಿಲ್ಲ” ಎಂದು ಹೇಳಿದರು.
“ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿರುವ ಕ್ಯಾನ್ಸರ್ ಮತ್ತು ಟ್ರಾಮಾ ಕೇರ್ ಸೆಂಟರ್‌ಅನ್ನು ಮೇಲ್ದರ್ಜೆಗೇರಿಸಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಬೇಕು” ಎಂದು ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.