ಬೆಂಗಳೂರಿಗೆ ಮುದ ನೀಡುವ ನೆಲದ ಹಬ್ಬ ಕರಗ ಉತ್ಸವ!

Date:

Advertisements

ತಿಗಳ ಸಮುದಾಯದ ವಿವಿಧ ಪಂಗಡಗಳು ದ್ರೌಪದಿಯನ್ನು ಕುಲದೇವತೆಯಾಗಿ ಆರಾಧಿಸುತ್ತಾರೆ. ದ್ರೌಪದಿ ಹೆಸರಿನಲ್ಲಿಯೇ ಕರಗ ನಡೆಸುತ್ತಾರೆ. ಚೈತ್ರ ಮಾಸದ ಸಪ್ತಮಿ ದಿನದಿಂದ ಹನ್ನೊಂದು ದಿನಗಳ ಕಾಲ ತಿಗಳ ಪೇಟೆಯಲ್ಲಿ ಕರಗ ಸಂಭ್ರಮ ನಡೆಯುತ್ತವೆ.

ವಸಂತಕಾಲದ ಆಗಮನ, ಚಿಗುರುವ ಮರ-ಗಿಡಗಳು, ಮೈ ತಣಿಸುವ ಚಳಿ, ಚೈತ್ರ ಮಾಸದಲ್ಲಿ ಹುಣ್ಣಿಮೆ ಚಂದ್ರನ ಹೊಳಪು, ಸುವಾಸನೆ ಬೀರುವ ವಿವಿಧ ಹೂಗಳು ಅರಳುವ ದಿನಗಳು, ಶಿವರಾತ್ರಿಯ ಜಾಗರಣೆ – ಇವೆಲ್ಲವೂ ಫೆಬ್ರವರಿ-ಮಾರ್ಚ್ ತಿಂಗಳುಗಳ ವಿಶೇ‍ಷಗಳು. ಇವೆಲ್ಲದರ ನಡುವೆ ವರ್ಷವಿಡೀ ಟ್ರಾಫಿಕ್, ಉದ್ಯೋಗ, ಪ್ರಾಜೆಕ್ಟ್‌ ಎಂದು ಸಮಯದ ಹಿಂದೆ ಓಡುವ ಬೆಂಗಳೂರಿಗೆ ಮಾರ್ಚ್ ತಿಂಗಳು ಸಂಭ್ರಮದ ದಿನಗಳು. ಅದಕ್ಕೆ ಕಾರಣ, ರಾಜ್ಯ ರಾಜಧಾನಿಯ ವಿವಧ ಭಾಗಗಳಲ್ಲಿ ನಡೆಯುವ ಕರಗ ಮಹೋತ್ಸವಗಳು.

ಶತಮಾನಗಳ ಇತಿಹಾಸ ಹೊಂದಿರುವ ಕರಗ ಉತ್ಸವಕ್ಕೆ ಬೆಂಗಳೂರು ಸುಪ್ರಸಿದ್ದ. ಮಲ್ಲಿಗೆ ಹೂಗಳ ಸುವಾಸನೆಯೊಂದಿಗೆ ರಾತ್ರಿ ಇಡೀ ಮೆರವಣಿಗೆ ಹೋಗುವ ಹತ್ತಾರು ರಥಗಳು, ಬೀದಿ-ಬೀದಿಗಳಲ್ಲಿ ಕಟ್ಟುವ ಜಾತ್ರೆ, ಮನೆಯಲ್ಲಿ ಹಬ್ಬದ ಊಟದ ಸಂಭ್ರಮ ವರ್ಷಪೂರ್ತಿ ಧಣಿಯುವ ಬೆಂಗಳೂರಿಗರ ಮನಸ್ಸಿಗೆ ಮುದ ನೀಡುತ್ತವೆ. ಕರಗ ಉತ್ಸವು ವಹ್ನಿನುಕುಲ ಕ್ಷತ್ರಿಯರ (ತಿಗಳರು) ಮುಂದಾಳತ್ವದಲ್ಲಿ ನಡೆದರೂ, ಉತ್ಸವವು ಜಾತಿ-ಧರ್ಮಗಳ ಎಲ್ಲೆ ಮೀರಿ ಎಲ್ಲರನ್ನೂ ಒಳಗೊಳ್ಳುತ್ತದೆ. ಎಲ್ಲಾ ಸಮುದಾಯದ ಜನರು ತಮ್ಮ ಮನೆಯ ಹಬ್ಬವೆಂಬಂತೆ ಭಾಗವಹಿಸುತ್ತಾರೆ, ಆಚರಿಸುತ್ತಾರೆ.

Advertisements

ತಮಿಳುನಾಡಿನಲ್ಲಿ ವೈಭವದಿಂದ ನಡೆಯುತ್ತಿದ್ದ ಕರಗವನ್ನು ಬೆಂಗಳೂರಿನಲ್ಲಿ ಮೈಸೂರು ಒಡೆಯರು ಆರಂಭಿಸಿದರು. ಅಂದಿನಿಂದ ಇಂದಿನವರೆಗೂ ಕರಗ ಪ್ರತಿವರ್ಷವೂ ನಡೆಯುತ್ತಿವೆ. ಚೈತ್ರ ಮಾಸದ ಹುಣ್ಣಿಮೆಯಲ್ಲಿ ಮುಖ್ಯ ಕರಗ ನಡೆಯುತ್ತದೆ. ಪ್ರತಿ ವರ್ಷ ಮಾರ್ಚ್‌ ಕಡೆಯ ವಾರ ಮತ್ತು ಏಪ್ರಿಲ್‌ ಮೊದಲ ವಾರದಲ್ಲಿ ನಗರದ ವಿವಿಧೆಡೆಗಳಲ್ಲಿ ಕರಗದ ಹಬ್ಬಗಳು ನಡೆಯಲಿವೆ. ಬೆಂಗಳೂರಿನ ತಿಗಳರ ಪೇಟೆಯಲ್ಲಿರುವ ದ್ರೌಪದಿ ಹಾಗೂ ಧರ್ಮರಾಯ ಸ್ವಾಮಿ ದೇವಾಲಯದ ಬಳಿ ಕೊನೆಯ (ಮುಖ್ಯ) ಕರಗ ನಡೆಯಲಿದೆ.

ಕರಗ ಉತ್ಸವದಲ್ಲಿ ಕರಗವನ್ನು ಹೊರುವವರು ಹುಣ್ಣಿಮೆಗೆ ಒಂಭತ್ತು ದಿನಗಳ ಮುಂಚಿತವಾಗಿಯೇ ಕರಗ ಆಚರಣೆ ವಿಧಿವಿಧಾನಗಳನ್ನು ಪಾಲಿಸಲು ಆರಂಭಿಸುತ್ತಾರೆ. ಈ ಒಂಬತ್ತು ದಿನಗಳೂ ದೀಪಾರತಿ ಉತ್ಸವ, ಹಸಿ ಕರಗ, ಪೊಂಗಲು ಸೇವೆ, ಹೂವಿನ ಕರಗ, ವಸಂತೋತ್ಸವ, ಗಾವುಸೇವೆ ಇತ್ಯಾದಿಗಳು ನಡೆಯುತ್ತವೆ.

ಕರಗ ಉತ್ಸವದ ಹಿಂದಿನ ರಾತ್ರಿ ಕಳಸದ ಆಕೃತಿಯ ಮಲ್ಲಿಗೆ ಹೂವಿನ ಕರಗವನ್ನು ಮುಖ ಮುಚ್ಚುವಂತೆ ತಲೆಯ ಮೇಲೆ ಹೊತ್ತ ಪೂಜಾರಿ ನರ್ತಿಸುತ್ತಾ ಗುಡಿಯಿಂದ ಹೊರಬರುತ್ತಾರೆ. ಖಡ್ಗವನ್ನು ಮೆರವಣಿಗೆ-ಉತ್ಸವ ನಡೆಸುತ್ತಾರೆ.

ಬೆಂಗಳೂರಿನಲ್ಲಿ ತಿಗಳರ ಪೇಟೆ, ಬಳೇಪೇಟೆ, ಚಿಕ್ಕಪೇಟೆ, ಅಣ್ಣಮ್ಮ ದೇವಸ್ಥಾನ ಇತ್ಯಾದಿ ಭಾಗಗಳಲ್ಲಿ ಕರಗದ ಉತ್ಸವಗಳು ಇಡೀ ರಾತ್ರಿ ನಡೆಯುತ್ತವೆ. ಕರಗಧಾರಿಗಳು ಬೆಳಗಿನ ಜಾವ ಧರ್ಮರಾಯಸ್ವಾಮಿ ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸುತ್ತಾರೆ. ನಂತರ, ಮಸ್ತಾನ್ ಸಾಬ್ ದರ್ಗಾಕ್ಕೆ ತೆರಳಿ ಧೂಪದಾರತಿ ಪಡೆಯುತ್ತಾರೆ.

 ದ್ರೌಪದಿ ಹೆಸರಿನಲ್ಲಿ ಕರಗ ಉತ್ಸವ:

ಕರಗ ಎಂಬ ಪದವು ತನ್ನದೇ ಆದ ಅರ್ಥವನ್ನು ಹೊಂದಿದೆ. ಕ-ಕೈಯಿಂದ ಮುಟ್ಟದೆ, ರ-ರುಂಡದ ಮೇಲೆ ಧರಿಸಿ, ಗ-ಗತಿಸುವುದು (ತಿರುಗುವುದು) ಎಂಬ ಅರ್ಥ ವಿವರಣೆಯನ್ನು ಕರಗಕ್ಕೆ ನೀಡಲಾಗಿದೆ. ಕರಗ ಉತ್ಸವವನ್ನು ‘ದ್ರೌಪದಿ ಕರಗ’ ಎಂದು ಕರೆಯಲಾಗುತ್ತದೆ. ಕರಗ ಉತ್ಸವರದಲ್ಲಿ ಮಹಾಭಾರತದ ದ್ರೌಪದಿಗೆ ಹೆಚ್ಚಿನ ಪ್ರಾತಿನಿಧ್ಯವಿದೆ. ಕರಗ ಶಕ್ತಿಯ ಮೂಲಸೆಲೆಯೇ ದ್ರೌಪದಿ ಎಂದು ತಿಗಳರು ನಂಬಿದ್ದಾರೆ.

ತಿಗಳ ಸಮುದಾಯದ ವಿವಿಧ ಪಂಗಡಗಳು ದ್ರೌಪದಿಯನ್ನು ಕುಲದೇವತೆಯಾಗಿ ಆರಾಧಿಸುತ್ತಾರೆ. ದ್ರೌಪದಿ ಹೆಸರಿನಲ್ಲಿಯೇ ಕರಗ ನಡೆಸುತ್ತಾರೆ. ಚೈತ್ರ ಮಾಸದ ಸಪ್ತಮಿ ದಿನದಿಂದ ಮುಂದಿನ ಹನ್ನೊಂದು ದಿನಗಳ ಕಾಲ ತಿಗಳ ಪೇಟೆಯಲ್ಲಿ ಕರಗದ ಸಂಭ್ರಮದ ನಡೆಯುತ್ತವೆ. ಆ ಹನ್ನೊಂದು ದಿನಗಳ ಪೈಕಿ ಯಾವುದಾರೂ ಮೂರು ದಿನಗಳ ಕಾಲ ತಾವು ಆರಾಧಿಸುವ ದ್ರೌಪದಿ ತಮ್ಮೊಂದಿಗೆ ಇರುತ್ತಾಳೆ ಎಂದು ತಿಗಳರು ನಂಬುತ್ತಾರೆ.

ಉತ್ಸವದ ವೇಳೆ ತಿಗಳ ಸಮುದಾಯ ಕೆಲವರು ಕಳಸ ಹೊತ್ತು ನೃತ್ಯ ಮಾಡುತ್ತಾ ದೇವರ ಹರಕೆಯನ್ನು ಒಪ್ಪಿಸುವ ಆಚರಣೆ ಮಾಡುತ್ತಾರೆ. ಆದರೂ, ವಹ್ನಿಕುಲ ಕ್ಷತ್ರಿಯ ಮನೆತನದ ಹಿರಿಯ ಪೂಜಾರಿಗಳು ಈ ಆಚರಣೆಯ ಹಿಂದಿನ ರಹಸ್ಯವನ್ನು ಗೌಪ್ಯವಾಗಿಟ್ಟಿದ್ದಾರೆ. ಅದನ್ನು ಬಹಿರಂಗ ಪಡಿಸುವುದು ಕುಲಕ್ಕೆ ಕೇಡು ಎಂದು ನಂಬಿರುವುದರಿಂದ ಅವರ ಬಗ್ಗೆ ಹೆಚ್ಚು ತಿಳಿಯಲು ಯಾರೂ ಹೋಗಿಲ್ಲ ಎಂದು ತಿಗಳರು ಹೇಳುತ್ತಾರೆ.  

ಆದರೆ, ದ್ರೌಪದಿ ಹೆಸರಿನಲ್ಲಿ ಕರಗ ಉತ್ಸವ ನಡೆಸುತ್ತಿರುವುದರ ಸುತ್ತ ಇರುವ ಕತೆಯನ್ನು ಅವರು ನಂಬಿದ್ದಾರೆ. ಕುರುಕ್ಷೇತ್ರ ಯುದ್ದದ ನಂತರ ಪಾಂಡವರು ಸ್ವರ್ಗಾರೋಹಣ ಮಾಡುವ ಸಂದರ್ಭದಲ್ಲಿ ದ್ರೌಪದಿ ಮೂರ್ಚೆತಪ್ಪಿ ಬೀಳುತ್ತಾಳೆ. ಆಕೆ ಬಿದ್ದದ್ದನ್ನು ಗಮನಿಸದ ಪಾಂಡವರು ಮುಂದೆ ಹೋಗಿಬಿಡುತ್ತಾರೆ. ದ್ರೌಪದಿಗೆ ಎಚ್ಚರವಾದಾಗ, ಆಕೆಯ ಸಮೀಪದಲ್ಲಿ ತಿಮಿರಾಸುರ ಎಂಬ ರಾಕ್ಷಸ ನಿಂತಿದ್ದ. ಆತನನ್ನು ನೋಡಿದ ದ್ರೌಪದಿ ಆದಿಶಕ್ತಿಯ ರೂಪತಾಳಿ ತಿಮರಾಸುರನನ್ನು ಸದೆ ಬಡಿಯಲು ತನ್ನ ತಲೆಯಿಂದ ‘ಯಜಮಾನ’ರನ್ನು, ಹಣೆಯಿಂದ ‘ಗಣಾಚಾರಿ’ಗಳನ್ನು, ಕಿವಿಗಳಿಂದ ‘ಗೌಡ’ರನ್ನು, ಬಾಯಿಯಿಂದ ‘ಗಂಟೆಪೂಜಾರಿ’ಗಳನ್ನು ಮತ್ತು ಹೆಗಲಿನಿಂದ ‘ವೀರಕುಮಾರ’ರನ್ನು ಸೃಷ್ಥಿ ಮಾಡುತ್ತಾಳೆ.

ಆಕೆಯ ಸೃಷ್ಟಿಯಿಂದ ಹುಟ್ಟಿದ ಇವರೆಲ್ಲರೂ ಸೇರಿ ತಿಮರಾಸುರನ ವಿರುದ್ದ ಹೋರಾಡಿ ಗೆಲ್ಲುತ್ತಾರೆ. ಆ ಬಳಿಕ ದ್ರೌಪತಿ ಆದಿಶಕ್ತಿಯಾಗಿ ಕೈಲಾಸಕ್ಕೆ ಹೋಗಿಬಿಡುತ್ತಾಳೆ. ಕೈಲಾಸಕ್ಕೆ ಹೋಗದಂತೆ ಆಕೆಯನ್ನು ತಡೆಯುವಂತೆ ಇವರೆಲ್ಲರಿಗೂ ಕೃಷ್ಣ ಸೂಚಿಸುತ್ತಾನೆ. ಅದರಂತೆ, ಅವರೆಲ್ಲರೂ ತಮ್ಮಲ್ಲಿದ್ದ ಕತ್ತಿಗಳಿಂದ ತಮ್ಮ ಎದೆಗೆ ತಿವಿದುಕೊಳ್ಳುತ್ತಾ (ಅಲಗುಸೇವೆ) “ನಮಗೆ ನೀನಲ್ಲದೆ ಇನ್ಯಾರು ದಿಕ್ಕು, ಹೋಗದಿರು” ಎಂದು ಅಲವತ್ತು ಕೊಳ್ಳುತ್ತಾರೆ. ಅದನ್ನು ನೋಡಿದ ದ್ರೌಪದಿ ಮರುಕವಾಗಿ ಪ್ರತಿ ವರ್ಷವೂ ಮೂರು ದಿನ ಭೂಮಿಗೆ ಬಂದು ಮಕ್ಕಳೊಂದಿಗೆ ಇದ್ದು ಹೋಗುವುದಾಗಿ ಮಾತು ಕೊಟ್ಟಿದ್ದಳು ಎಂದು ತಿಗರಳು ನಂಬಿದ್ದಾರೆ. ಆ ಮೂರು ದಿನಗಳನ್ನು ಕರಗ ಹಬ್ಬವಾಗಿ ತಿಗಳರು ಆಚರಿಸುತ್ತಾರೆ.

ಬೆಂಳೂರಿನಲ್ಲೇಕೆ ಕರಗ ಪ್ರಸಿದ್ದಿ:

ಹದಿನಾರನೇ ಶತಮಾನದಲ್ಲಿ ವಹ್ನಿಕುಲ(ತಿಗಳರು)ದವರು ಬೆಂಗಳೂರಿಗೆ ಬಂದು ನೆಲೆಸಿದರು ಎಂದು ಹೇಳಲಾಗಿದೆ. ಅವರು ಮೂಲತಃ ತಮಿಳುನಾಡು ಮೂಲದವರು. ಹದಿನಾರನೇ ಶತಮಾನದಲ್ಲಿ ಹೈದರಾಲಿ ದಂಡಯಾತ್ರೆ ನಡೆಸುತ್ತಿದ್ದ ವೇಳೆ, ವಹ್ನಿಕುಲ ಕ್ಷತ್ರಿಯರಲ್ಲಿನ ಧೈರ್ಯ ಹಾಗೂ ಅವರ ತೋಟಗಾರಿಕೆಯನ್ನು ಕೌಶಲ್ಯವನ್ನು ನೋಡಿ, ಅವರಲ್ಲಿ ಕೆಲವರನ್ನು ಮೈಸೂರು ಸಂಸ್ಥಾನಕ್ಕೆ ಕರೆತಂದರು ಎಂದು ಹೇಳಲಾಗಿದೆ. ಇವರೆಲ್ಲರೂ, ಬೆಂಗಳೂರಿನ ತಿಗಳಪೇಟೆ, ಶ್ರೀರಂಗಪಟ್ಟಣದ ಗಂಜಾಂನಲ್ಲಿ ನೆಲೆಯೂರಿದರು.

ಇವರೆಲ್ಲರೂ ಮೂಲದಿಂದಲೂ ದ್ರೌಪದಿಯ ಆರಾಧಕರಾಗಿದ್ದು, ತಾವು ಬೆಂಗಳೂರಿನಲ್ಲಿ ನೆಲೆಸಿದ ನಂತರ, ತಿಗಳರಪೇಟೆಯಲ್ಲಿ ತಮ್ಮ ಆರಾಧ್ಯ ದೈವ ದ್ರೌಪದಿ ಮತ್ತು ಧರ್ಮರಾಯ ಸ್ವಾಮಿಯ ದೇವಾಲಯವನ್ನು ನಿರ್ಮಿಸಿಕೊಂಡು ಹಬ್ಬ ಆರಂಭಿಸಿದರು. ಕರಗ ಉತ್ಸವವನ್ನು ವರ್ಷಗಳುರುಳಿದಂತೆ ಹೆಚ್ಚು ಪ್ರಖ್ಯಾತಿ ಪಡೆದುಕೊಂಡಿತು. ಇದು ಈಗ ಜಾತಿ-ಧರ್ಮಗಳನ್ನು ಮೀರಿ ಎಲ್ಲರ ಹಬ್ಬ-ಉತ್ಸವವಾಗಿ ಮಾರ್ಪಟ್ಟಿದೆ. ಇದು ಬೆಂಗಳೂರು ನೆಲದ ಹಬ್ಬ ಎಂಬಂತಾಗಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪರಿಸರ ಸ್ನೇಹಿ ಗಣೇಶ ಹಬ್ಬಕ್ಕೆ ಮಾರ್ಗಸೂಚಿ ಪ್ರಕಟ, ನಿಯಮ ಉಲ್ಲಂಘಿಸಿದರೆ ಕ್ರಿಮಿನಲ್‌ ಕೇಸ್‌ ದಾಖಲು

ಬೆಂಗಳೂರು ನಗರದಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಮಾತ್ರ ಪೂಜಿಸಬೇಕಾಗಿ ಮತ್ತು...

ಗದಗ | ಮುಶಿಗೇರಿ ವಸತಿ ನಿಲಯಕ್ಕೆ ಮೂಲ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಗೋಳು ಕೇಳೋರ್ಯಾರು?

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ವಸತಿ...

ಉಪರಾಷ್ಟ್ರಪತಿ ಚುನಾವಣೆ | ಜಾತ್ಯತೀತ ಹೋರಾಟದ ಹಿನ್ನೆಲೆಯ ಅಭ್ಯರ್ಥಿಗೆ RSS ಕಟ್ಟಾಳು ಎದುರಾಳಿ

2025ರ ಉಪರಾಷ್ಟ್ರಪತಿ ಚುನಾವಣೆಯು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸ್ಪರ್ಧೆಯಲ್ಲ; ಅದು...

ಅಲೆಮಾರಿಗಳಿಗೆ ಅನ್ಯಾಯ; ಸರ್ಕಾರದ ವಿರುದ್ಧ ಭುಗಿಲೆದ್ದ ಜನಾಕ್ರೋಶ

ಮೀಸಲು ಹಂಚಿಕೆಯ ವಿವರಗಳು ಸ್ಪಷ್ಟವಾಗುತ್ತಿದ್ದಂತೆ ಸಂಭ್ರಮದ ಮನೆಯಲ್ಲಿ ಸಾವಿನ ಸೂತಕ ಆವರಿಸತೊಡಗಿತು....

Download Eedina App Android / iOS

X