ಕಳೆದ ಬಾರಿ ಬಿಜೆಪಿ 40% ಸರ್ಕಾರ ಎಂಬ ದೊಡ್ಡ ಆರೋಪಕ್ಕೆ ಸಿಲುಕಿ ಅಧಿಕಾರ ಕಳೆದುಕೊಂಡಿತ್ತು. ಗುತ್ತಿಗೆದಾರರ ಸಂಘದ ಅಂದಿನ ಅಧ್ಯಕ್ಷ ಕೆಂಪಣ್ಣ ಅವರ ಈ ಆರೋಪವನ್ನೇ ಪ್ರಬಲ ಚುನಾವಣಾ ಅಸ್ತ್ರವನ್ನಾಗಿಸಿಕೊಂಡ ಕಾಂಗ್ರೆಸ್ ಕೈಗೆ ಬಿಜೆಪಿ ಸಲೀಸಾಗಿ ಅಧಿಕಾರದ ಚುಕ್ಕಾಣಿ ವರ್ಗಾಯಿಸಿತ್ತು. ಆದರೆ ಇದೀಗ ಕಮಿಷನ್‌ಗೆ ಕೈ ಚಾಚುವಲ್ಲಿ ಕಾಂಗ್ರೆಸ್ ಕೂಡ ಹಿಂದೆ ಬಿದ್ದಿಲ್ಲ ಎನ್ನುವ ಆರೋಪ ಕೇಳಿಬರುತ್ತಿದೆ.
ಅಂದು ಬಿಜೆಪಿ ಸರ್ಕಾರವನ್ನು ಜರೆದಿದ್ದ ಕಾಂಗ್ರೆಸ್ ನಾಯಕರು, ರಾಜ್ಯಾದ್ಯಂತ ‘ಪೇ ಸಿಎಂ’ ಅಭಿಯಾನವನ್ನೇ ನಡೆಸಿದ್ದರು. ರಾಜಕೀಯ ವಿಶ್ಲೇಷಕರ ಪ್ರಕಾರ, ಇದು ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ವರವಾಗಿ ಪರಿಣಮಿಸಿತ್ತು. ಈಗ ಗುತ್ತಿಗೆದಾರರ ಸಂಘ ರಾಜ್ಯ ಸರ್ಕಾರದ ವಿರುದ್ಧ ಮತ್ತೆ ಹಲವು ಆರೋಪಗಳನ್ನು ಮಾಡಿದೆ.
ಕಳೆದ ಮಾರ್ಚ್‌ನಲ್ಲಿ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾದ ಗುತ್ತಿಗೆದಾರರ ಸಂಘದ ಈಗಿನ ಅಧ್ಯಕ್ಷ ಮಂಜುನಾಥ್, “ಕಮಿಷನ್ ಪರ್ಸೆಂಟೇಜ್ ಇಲ್ಲ ಅಂತ ಹೇಳೋಕೆ ಆಗಲ್ಲ. ಹಿಂದಿನ ಸರ್ಕಾರಕ್ಕಿಂತಲೂ ಈಗ ಜಾಸ್ತಿ ಇದೆ. ಅಧಿಕಾರಿಗಳು ಹಣ ಬಿಡುಗಡೆ ಮಾಡಬೇಕಾದರೂ ಕಮಿಷನ್ ಪಡೆಯುತ್ತಾರೆ” ಎನ್ನುವ ಆರೋಪ ಮಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಸಣ್ಣ ನೀರಾವರಿ ಸಚಿವ ಎನ್.ಎಸ್ ಬೋಸರಾಜು ಅವರಿಗೆ ಏಪ್ರಿಲ್ 3ರಂದು ಪತ್ರ ಬರೆದಿರುವ ಸಂಘದ ಅಧ್ಯಕ್ಷ ಮಂಜುನಾಥ್ ಹಾಗೂ ಪ್ರಧಾನ ಕಾರ್ಯದರ್ಶಿ ಜಿ.ಎಂ ರವೀಂದ್ರ, ‘ಕಾಣದ ಕೈಗಳು ಕೆಲಸ ಮಾಡುತ್ತಿವೆ’ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಕಾಣದ ಕೈಗಳು ಯಾವೆಂದು ಮಾತ್ರ ಸ್ಪಷ್ಟವಾಗಿ ಹೇಳಿಲ್ಲ.
ಸಣ್ಣ ಮತ್ತು ಮಧ್ಯಮ ವರ್ಗದ ಗುತ್ತಿಗೆದಾರರಿಗೆ 15ರಿಂದ 150 ಲಕ್ಷದವರೆಗಿನ ಬಿಲ್‌ಗಳನ್ನು ಪಾವತಿಸಲು ಹಣ ಬಿಡುಗಡೆ ಮಾಡದೆ, ‘ಸ್ಪೆಷಲ್ ಎಲ್‌ಒಸಿ’ ನೆಪದಲ್ಲಿ ಬಲಾಢ್ಯ ಗುತ್ತಿಗೆದಾರರಿಗೆ ವಿತರಿಸಲಾಗುತ್ತಿದೆ. ಇಲಾಖೆಗಳಲ್ಲಿ ಹಿಡಿತ ಸಾಧಿಸಿರುವ ‘ಕಾಣದ ಕೈಗಳು’ ವ್ಯವಸ್ಥೆಯನ್ನು ಹದಗೆಡಿಸುತ್ತಿದ್ದಾರೆ ಎಂದು ಸಂಘ ದೂರಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿಕೆ ಶಿವಕುಮಾರ್, “ನಮ್ಮ ಸರ್ಕಾರ ನ್ಯಾಯಬದ್ಧವಾಗಿ ಆಡಳಿತ ನೀಡುತ್ತಿದೆ. ನಾವು ಯಾವುದೇ ಲಂಚಕ್ಕೆ ಪ್ರೋತ್ಸಾಹ ನೀಡುವವರಲ್ಲ. ನನ್ನ ಇಲಾಖೆ ಮೇಲೆ ಆರೋಪ ಇದ್ದರೂ ಸರಿ.. ಅವರು ಲಿಖಿತವಾಗಿ ದೂರು ಕೊಟ್ಟರೆ ತನಿಖೆ ಮಾಡಿಸೋಣ. ಯಾವ ವಿಶೇಷ ಎಲ್‌ಒಸಿಯೂ ಇಲ್ಲ. ಏನೂ ಇಲ್ಲ. ವರ್ಷಕ್ಕೆ ಶೇ.10-20ರಷ್ಟು ಬಿಲ್ ಬಿಡುಗಡೆ ಮಾಡಿರುತ್ತೇವೆ. ಹಾಗೇನಾದರೂ ಅನುಮಾನಗಳಿದ್ದರೆ ಕಮಿಷನ್ ಕೇಳುತ್ತಿರುವವರ ಬಗ್ಗೆ ಗುತ್ತಿಗೆದಾರರ ಸಂಘದವರು ಲೋಕಾಯುಕ್ತಕ್ಕೋ ಪೊಲೀಸರಿಗೋ ದೂರು ನೀಡಲಿ” ಎಂದು ಹೇಳುವ ಮೂಲಕ ಗುತ್ತಿಗೆದಾರರ ಸಂಘದ ಆರೋಪವನ್ನು ತಳ್ಳಿಹಾಕಿದ್ದಾರೆ.
ಶಾಸಕರ, ಸಚಿವರ ವೇತನ-ಭತ್ಯೆಗಳನ್ನು ಹೆಚ್ಚಳ ಮಾಡಿಕೊಳ್ಳಲು ತೀರಾ ಮುತುವರ್ಜಿ ವಹಿಸುವ ಆಡಳಿತ ಪಕ್ಷಗಳು.. ಹೀಗೆ ʼಪರ್ಸಂಟೇಜ್ʼ ಲೆಕ್ಕದಲ್ಲಿ ಗುತ್ತಿಗೆದಾರರ ಬಿಲ್ ಪಾವತಿ ಮಾಡ್ತೇವೆ ಎಂದು ಬಹಿರಂಗವಾಗಿ ಹೇಳಿಕೆ ಕೊಡಲು ಮೀನಾಮೇಷ ಎಣಿಸಲ್ಲ.
‘ಕಾಮಗಾರಿಗಳ ಬಿಲ್ ಪಾವತಿಯಲ್ಲಿ ಯಾರದೂ ಹಸ್ತಕ್ಷೇಪವಿಲ್ಲ. ಬಾಕಿ ಬಿಲ್‌ಗಳ ಪಾವತಿಗೆ ಶಿಫಾರಸುಗಳು ಸಾಮಾನ್ಯವಾಗಿ ಬರುತ್ತವೆ. ಅದನ್ನು ಇಲಾಖೆ ಪರಿಗಣಿಸುತ್ತದೆ. ವಿಶೇಷವಾಗಿ ಶೇ 20ರಷ್ಟು ಬಿಲ್ ಪಾವತಿಗೆ ಮೊದಲಿನಿಂದಲೂ ಅವಕಾಶವಿದೆ. ಉಳಿದಂತೆ ಜೇಷ್ಠತೆ ಆಧಾರದಲ್ಲಿ ಹಣ ಬಿಡುಗಡೆಯಾಗುತ್ತದೆ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.
ಬಿಜೆಪಿ ಅಧಿಕಾರದಲ್ಲಿದ್ದಾಗ ಜನರ ಜೀವ ಹಿಂಡುತ್ತಿತ್ತು. ಆದರೆ ನಾವು ಮಾತ್ರ ಜನಪರ ಆಡಳಿತ ಕೊಡುತ್ತಿದ್ದೇವೆ. ಬಿಜೆಪಿ ನಾಯಕರು ಮಾಡುತ್ತಿರುವ ಕಮಿಷನ್ ಆರೋಪ ಸತ್ಯಕ್ಕೆ ದೂರವಾದ ಮಾತು. ಬಿಜೆಪಿ ಭ್ರಷ್ಟಾಚಾರವನ್ನು ಕೆಲವೇ ದಿನಗಳಲ್ಲಿ ಬಯಲಿಗೆಳೆಯುತ್ತೇವೆ ಎನ್ನುವುದು ಕಾಂಗ್ರೆಸ್ ನಾಯಕರ ಪ್ರಚಂಡ ವಾದ.
ಏತನ್ಮಧ್ಯೆ, ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಡಲಾಗಿದ್ದ ಕಮಿಷನ್ ದಂಧೆ ಆರೋಪ ಸಂಬಂಧದ ತನಿಖೆಗೆ ಎಸ್‌ಐಟಿ ರಚಿಸಲು ಕಾಂಗ್ರೆಸ್ ಸಚಿವ ಸಂಪುಟ ಸಭೆ ನಿರ್ಧರಿಸಿದೆ. ಈ ಬಗ್ಗೆ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್ ಕೆ ಪಾಟೀಲ್, “ಗುತ್ತಿಗೆದಾರರ ಸಂಘದ ಆರೋಪದ ಬಗ್ಗೆ ನಾಗಮೋಹನ್ ದಾಸ್ ನೇತೃತ್ವದಲ್ಲಿ ವಿಚಾರಣಾ ಆಯೋಗ ರಚಿಸಲಾಗಿತ್ತು. ದಾಸ್ ಅವರ ವರದಿ ಸಲ್ಲಿಕೆಯಾದ ಬಳಿಕ ಸಂಪುಟದಲ್ಲಿ ಮಂಡಿಸಲಾಗಿದೆ. 3 ಲಕ್ಷ ಕಾಮಗಾರಿಗಳ ಪೈಕಿ 1729 ಕಾಮಗಾರಿಗಳ ಬಗ್ಗೆ ಆಪಾದನೆಗಳಿವೆ. ಯೋಜನೆ, ಹಣ ಬಿಡುಗಡೆ, ಎಲ್‌ಒಸಿ ಬಿಡುಗಡೆ ಸರಿಯಾದ ರೀತಿಯಲ್ಲಿ ಇಲ್ಲ. ಯಾವ ಪ್ರಮಾಣದಲ್ಲಿ ವ್ಯತ್ಯಾಸಗಳಾಗಿವೆ ಎಂಬುದನ್ನು ಚರ್ಚೆ ನಡೆಸಿದ್ದೇವೆ. ಗಂಭೀರವಾದ ವರದಿಯಾದ ಹಿನ್ನೆಲೆಯಲ್ಲಿ ಎಸ್‌ಐಟಿ ರಚನೆ ಮಾಡಲು ತೀರ್ಮಾನಿಸಲಾಗಿದೆ. ಎರಡ್ಮೂರು ತಿಂಗಳಲ್ಲಿ ಕ್ರಮ ಕೈಗೊಳ್ಳಲು ಎಸ್ಐಟಿಗೆ ಸೂಚನೆ ನೀಡಲಾಗಿದೆ” ಎಂದಿದ್ದಾರೆ.
“ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಮಾಡಿದ್ದ ಕಮಿಷನ್ ಆರೋಪ ಚುನಾವಣೆಗಾಗಿ ಸೃಷ್ಟಿ ಮಾಡಿದ್ದ ಸುಳ್ಳು, ಅಪಪ್ರಚಾರ ಎಂದು ಹಲವಾರು ಕಾಂಗ್ರೆಸ್ ನಾಯಕರು ಈಗಾಗಲೇ ಒಪ್ಪಿಕೊಂಡಿದ್ದಾರೆ. ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಅವರು ಬಿಬಿಎಂಪಿಗೆ ಸಂಬಂಧಿಸಿದಂತೆ ಮಾಡಿದ್ದ 40% ಕಮಿಷನ್ ಆರೋಪಗಳು ಶುದ್ಧ ಸುಳ್ಳೆಂದು ಲೋಕಾಯುಕ್ತ ತನಿಖಾ ಅಧಿಕಾರಿಗಳು ಸಲ್ಲಿಸಿರುವ ವರದಿಯಲ್ಲೂ ಸಾಬೀತಾಗಿದೆ. ಇಷ್ಟಾದರೂ ಮತ್ತೊಮ್ಮೆ ಎಸ್ ಐಟಿ ರಚನೆ ಮಾಡುತ್ತಿರುವ ಉದ್ದೇಶವೇನು? ಇದು ದ್ವೇಷ ರಾಜಕಾರಣವಲ್ಲದೇ ಮತ್ತೇನು?” ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
“ಬಿಜೆಪಿ ವಿರುದ್ಧ ಮಾಡಿದ್ದ ಭ್ರಷ್ಟಾಚಾರದ ಆರೋಪ ಸಾಬೀತಾಗಿಲ್ಲ. ಆದರೆ, ತನಿಖೆಗೆ ಎಸ್‌ಐಟಿ ರಚಿಸಲು ತೀರ್ಮಾನಿಸಲಾಗಿದೆ. ಇದರ ಜತೆಗೆ ರಾಜ್ಯ ಸರ್ಕಾರದ ವಿರುದ್ದ ಕೇಳಿ ಬಂದಿರುವ 60% ಕಮಿಷನ್ ಆರೋಪವನ್ನೂ ಸೇರಿಸಿ ಎಸ್‌ಐಟಿ ತನಿಖೆಗೆ ವಹಿಸುವಂತೆ” ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
“ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಕಮಿಷನ್ 60% ತಲುಪಿದೆ. ಹಿಂದೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಲಂಚ ವಸೂಲಿ ಮಾಡುತ್ತಿದ್ದರು. ಆದರೆ ಈಗ, ವಿಧಾನಸೌಧದಲ್ಲಿ ಸಚಿವರು ಬಹಿರಂಗವಾಗಿಯೇ ಲಂಚ ಸ್ವೀಕರಿಸುತ್ತಿದ್ದಾರೆ. ಇದನ್ನೇ ನೀವು ಸತ್ಯಮೇವ ಜಯತೇ ಎಂದು ಕರೆಯುತ್ತೀರಾ? ಅವರಿಗೆ ಸತ್ಯಮೇವ ಜಯತೇ ಕೇವಲ ಜಾಹೀರಾತು ಘೋಷಣೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಗಾಂಧೀಜಿಯವರ ಸತ್ಯಮೇವ ಜಯತೇ ತತ್ವದ ಪ್ರಕಾರ ಬದುಕುತ್ತಿದ್ದಾರೆಯೇ? ಅವರು ತಮ್ಮ ಆತ್ಮಸಾಕ್ಷಿಗೆ ಉತ್ತರಿಸಲಿ. ಸಾರ್ವಜನಿಕ ಹಣವನ್ನು ಲೂಟಿ ಮಾಡುವ ಅವರ ದುರಾಸೆಗೆ ಮಿತಿಯಿಲ್ಲವೇ?” ಎಂದು ಕೇಂದ್ರ ಕೈಗಾರಿಕಾ ಸಚಿವ ಎಚ್‌ಡಿ ಕುಮಾರಸ್ವಾಮಿ ಕೂಡ ಹರಿಹಾಯ್ದಿದ್ದಾರೆ.
ಇನ್ನು ಪರ್ಸಂಟೇಜ್ ಆರೋಪದ ಕುರಿತು ಈ ದಿನ ಡಾಟ್ ಕಾಮ್ ಜತೆ ಮಾತನಾಡಿದ ಈಗಿನ ಗುತ್ತಿಗೆದಾರರ ಸಂಘ (ಬಿಬಿಎಂಪಿ)ದ ಗೌರವಾಧ್ಯಕ್ಷ ಜಗನ್ನಾಥ್, “ಕಾಂಗ್ರೆಸ್ ಸರ್ಕಾರ ಗುತ್ತಿಗೆದಾರರಿಂದ 60% ವರೆಗೆ ಕಮಿಷನ್ ವಸೂಲಿ ಮಾಡುತ್ತಿದೆ ಎಂದು ಬಿಜೆಪಿ ನಾಯಕರು ಆರೋಪ ಮಾಡುತ್ತಿರುವುದು ಸತ್ಯಕ್ಕೆ ದೂರವಾದ ಮಾತು. ಸರ್ಕಾರ ಅನುದಾನ ಇದ್ದಾಗ ಗುತ್ತಿಗೆದಾರರಿಗೆ ಜೇಷ್ಠತೆ ಆಧಾರದ ಮೇಲೆ ಹಣ ಬಿಡುಗಡೆ ಮಾಡುತ್ತಿದೆ. ಅನುದಾನದ ಕೊರತೆ ಇದ್ದಾಗ ಕೆಲವೊಮ್ಮೆ ವರ್ಷಗಳವರೆಗೆ ಬಿಲ್ ಬಾಕಿ ಇರುತ್ತದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸಭೆ ನಡೆಸಿ, ಮುಂದಿನ ಬಜೆಟ್ ಬಳಿಕ ವರ್ಷಕ್ಕೆ ಶೇ.50 ರಷ್ಟು ಬಿಲ್ ಪಾವತಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ” ಎಂದರು.
“ಸಂಘದ ಅಧ್ಯಕ್ಷ ಮಂಜುನಾಥ್ ಸಮಿತಿಯ ಸದಸ್ಯರನ್ನಾಗಲೀ, ಗೌರವಾಧ್ಯಕ್ಷರನ್ನಾಗಲೀ, ಸಂಘದ ಸೆಕ್ರೆಟರಿಯನ್ನಾಗಲೀ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಮನಸಿಗೆ ಬಂದಂತೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಜೇಷ್ಠತೆ ಆಧಾರದ ಮೇಲೆ ಮಾಡುತ್ತಿರುವ ಬಿಲ್ ಪಾವತಿ ಪ್ರಕ್ರಿಯೆಯನ್ನು ತಿರುಚಿ.. ಬಲಾಢ್ಯ ಟೆಂಡರ್‌ದಾರರಿಗೆ, ಸರ್ಕಾರದ ಪರವಾಗಿರುವ ಗುತ್ತಿಗೆದಾರರಿಗೆ ಶೀಘ್ರವಾಗಿ ಬಿಲ್ ಮಾಡಲಾಗುತ್ತಿದೆ ಎಂದು ಮಾಧ್ಯಮ ಹೇಳಿಕೆ ನೀಡಿದ್ದಾರೆ. ಇದೂ ಕೂಡ ಸತ್ಯವಲ್ಲ” ಎಂದು ತಿಳಿಸಿದರು.
“ಕಳೆದ ಡಿಸೆಂಬರ್‌ನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರ ಸೇರಿದಂತೆ ಹಲವರ ಮೇಲೆ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡ ಸಚಿನ್ ಮೋನಪ್ಪ ಪಾಂಚಾಲ್ (26) ನೋಂದಣಿ ಮಾಡಿಕೊಂಡ ಗುತ್ತಿಗೆದಾರನೇ ಅಲ್ಲ. ಸರ್ಕಾರ ಗುತ್ತಿಗೆ ನೀಡಿಲ್ಲ ಎಂದು ಆತ್ಮಹತ್ಯೆ ಮಾಡಿಕೊಳ್ಳುವುದು ಸರಿಯಲ್ಲ. ಇನ್ನು.. ಕೆಲವರಿಗೆ ಬಿಲ್ ಪಾವತಿ ತಡವಾಗಬಹುದು ಅಥವಾ ಆಗದೆಯೂ ಇರಬಹುದು, ಎಲ್ಲದ್ದಕ್ಕೂ ಆತ್ಮಹತ್ಯೆ ಪರಿಹಾರವಲ್ಲ. ಯಾರೇ ಆಗಲಿ ಪ್ರಾಮಾಣಿಕವಾಗಿರುವುದೇ ಆದರೆ ಹೋರಾಟ ಮಾಡಿ ನ್ಯಾಯ ದಕ್ಕಿಸಿಕೊಳ್ಳಬಹುದಲ್ಲವೇ ಎಂದು ಪ್ರಶ್ನಿಸಿದ ಅವರು, ಇದರಲ್ಲಿ ಗುತ್ತಿಗೆದಾರರ ಸಂಘದ ಪಾತ್ರವಿಲ್ಲ” ಎಂದರು.
ಕಾಂಗ್ರೆಸ್ ಸರ್ಕಾರದ ಇತ್ತೀಚಿನ ಬೆಲೆ ಏರಿಕೆ ಮತ್ತು ಭ್ರಷ್ಟಾಚಾರದ ಆರೋಪದ ವಿರುದ್ಧ ಜೆಡಿಎಸ್ ನಿನ್ನೆ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿತು. ಅತ್ತ ಕೇಂದ್ರ ಬಿಜೆಪಿ ಸರ್ಕಾರ ಮಾಡಿರುವ ಅಡುಗೆ ಅನಿಲದ ಬೆಲ ಹೆಚ್ಚಳ ವಿರೋಧಿಸಿ ಕಾಂಗ್ರೆಸ್ ನಾಯಕರು ಬೀದಿಗಿಳಿದಿದ್ದಾರೆ. ಹೀಗೆ ಒಬ್ಬರ ವಿರುದ್ಧ ಮತ್ತೊಬ್ಬರು ಹರಿಹಾಯುವುದು, ನಾಲಗೆ ಹರಿಬಿಡುವುದು ಸಾಮಾನ್ಯವಾಗಿಬಿಟ್ಟಿದೆ. ಕೇಂದ್ರ-ರಾಜ್ಯ ಸರ್ಕಾರಗಳ ಬೆಲೆ ಏರಿಕೆ ಬಿಸಿ ಜನಸಾಮಾನ್ಯರ ಜೇಬು ಸುಡುತ್ತಿದೆ. ಈ ಬಗ್ಗೆ ತುಟಿ ಬಿಚ್ಚದ ನಾಯಕರು ಆರೋಪ ಪ್ರತ್ಯಾರೋಪಗಳಲ್ಲಿ ಮುಳುಗಿದ್ದಾರೆ ಎನ್ನುತ್ತಾರೆ ನಾಡಿನ ಪ್ರಜ್ಞಾವಂತ ಪ್ರಜೆಗಳು.
ಆಡಳಿತ ಪಕ್ಷದ ವಿರುದ್ಧ ವಿಪಕ್ಷ ಆರೋಪ ಮಾಡುವುದು ತಪ್ಪಲ್ಲ.. ಆದರೆ ಅದು ಆರೋಪಕ್ಕಷ್ಟೇ ಸೀಮಿತವಾಗಬಾರದು. ಜನಸಾಮಾನ್ಯರ ಕೋಟ್ಯಂತರ ತೆರಿಗೆ ಹಣ ಜನಪ್ರತಿನಿಧಿಗಳ ದುಂದುವೆಚ್ಚದಲ್ಲಿ, ಭ್ರಷ್ಟಾಚಾರದಲ್ಲಿ ಪೋಲಾಗುತ್ತಿರುವ ಬಗ್ಗೆ ಯಾಕೆ ಯಾರೂ ದನಿ ಎತ್ತುವುದಿಲ್ಲ ಎನ್ನುವುದು ಗಮನಿಸಬೇಕಾದ ಪ್ರಶ್ನೆ. ರಾಜ್ಯದಲ್ಲಿ ಗುತ್ತಿಗೆದಾರರು ನಿಜಕ್ಕೂ ಕಮಿಷನ್, ಪರ್ಸಂಟೇಜ್ ಕೂಪಕ್ಕೆ ಬಿದ್ದಿದ್ದಾರೆಯೇ ಎನ್ನುವುದು ಪಾರದರ್ಶಕ ತನಿಖೆಯಿಂದಷ್ಟೇ ಹೊರಬರಬೇಕಿದೆ.
ಬಿಜೆಪಿ ಸರ್ಕಾರಾವಧಿಯ ಆರೋಪಗಳನ್ನು ಸಾಬೀತು ಮಾಡಲು ಕಾಂಗ್ರೆಸ್ ಎಸ್‌ಐಟಿ ಮೊರೆ ಹೋಗಿದೆ. ಹಾಗೆಯೇ ಬಿಜೆಪಿ ಕೂಡ ಕಾಂಗ್ರೆಸ್ ವಿರುದ್ಧ ಆರೋಪ ಮಾಡುವುದರೊಂದಿಗೆ ಸಾಕ್ಷಿ ಪುರಾವೆಗಳಿದ್ದರೆ ಜನರೆದುರು ಬಹಿರಂಗಗೊಳಿಸಲಿ. ಇಲ್ಲದಿದ್ದಲ್ಲಿ ಎರಡೂ ಪಕ್ಷದ ನಾಯಕರುಗಳು ಜನರ ಮುಂದೆ ಮತ್ತಷ್ಟು ಬಿಳಿಚಿಕೊಳ್ಳಲಿದ್ದಾರೆ.