ಕಾರ್ಖಾನೆಯೊಂದರಲ್ಲಿ ನೀರು ಕುಡಿದು 118 ಕಾರ್ಮಿಕರು ಅಸ್ವಸ್ಥರಾಗಿರುವ ಘಟನೆ ಗುಜರಾತ್‌ನ ಸೂರತ್‌ನಲ್ಲಿ ನಡೆದಿದೆ. ಕುಡಿಯುವ ನೀರಿಗೆ ವಿಷ ಹಾಕಿ ಅವರನ್ನು ಸಾಮೂಹಿಕವಾಗಿ ಹತ್ಯೆಗೈಯಲು ಯತ್ನಿಸಲಾಗಿದೆ ಎಂದು ಆರೋಪಿಸಲಾಗಿದೆ. ಕೊಲೆ ಯತ್ನದ ಆರೋಪದ ಮೇಲೆ ಪ್ರಕರಣ ಕೂಡ ದಾಖಲಾಗಿದೆ.
ಸೂರತ್‌ನಲ್ಲಿರುವ ವಜ್ರ ಪಾಲಿಶ್ ಮಾಡುವ ‘ಅನ್ಭಾ ಡೈಮಂಡ್’ ಕಾರ್ಖಾನೆಯಲ್ಲಿ ಘಟನೆ ನಡೆದಿದೆ. ಆರಂಭದಲ್ಲಿ ಕಾರ್ಮಿಕರು ಕಲುಷಿತ ನೀರು ಕುಡಿದು ಅಸ್ವಸ್ಥರಾಗಿದ್ದಾರೆ ಎಂದು ಭಾವಿಸಲಾಗಿತ್ತು. ಆದರೆ, ಇದೀಗ ಪ್ರಕರಣವು ತಿರುವು ಪಡೆದಿದ್ದು, ಕುಡಿಯುವ ನೀರಿಗೆ ವಿಷಕಾರಿ 10 ವಿಷಕಾರಿ (ಸೆಲ್ಫೋಸ್) ಮಾತ್ರೆಗಳನ್ನು ಹಾಕಿ ಹತ್ಯೆಗೆ ಯತ್ನಿಸಲಾಗಿದೆ ಎಂದು ಕಾರ್ಖಾನೆಯ ವ್ಯವಸ್ಥಾಪಕ ಸಂಜಯ್ ರಾಮೋಲಿಯಾ ಆರೋಪಿಸಿದ್ದಾರೆ. ಅಪರಿಚಿತರ ವಿರುದ್ಧ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಕುಡಿಯುವ ನೀರಿಗೆ ವಿಷಕಾರಿ ರಾಸಾಯನಿಕ ಬೆರೆಸಿದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಕಾರ್ಖಾನೆಯಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಆರೋಪಕ್ಕೆ ಪೂರಕವಾದ ದೃಶ್ಯಗಳು ಕಂಡುಬಂದಿವೆ ಎಂದು ವರದಿಯಾಗಿದೆ.
ಈ ವರದಿ ಓದಿದ್ದೀರಾ?: ಟ್ಯಾರಿಫ್ ವಾರ್: ಅಮೆರಿಕಾದ ಕುತ್ತಿಗೆಗೇ ಕೈ ಹಾಕಿರುವ ಚೀನಾ, ಮುಂದೇನಾಗಲಿದೆ?
ಅನ್ಭಾ ಡೈಮಂಡ್ ಕಾರ್ಖಾನೆಯಲ್ಲಿ ಸುಮಾರು 120ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಅವರೆಲ್ಲಿ 118 ಮಂದಿ ಏಪ್ರಿಲ್ 9ರಂದು ಕೆಲಸ ಮಾಡುವ ಸಮಯಲ್ಲಿಯೇ ಅಸ್ವಸ್ಥರಾಗಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕುಡಿಯುವ ನೀರಿನಲ್ಲಿ ಕೆಟ್ಟ ವಾಸನೆ ಬರುತ್ತಿದ್ದರಿಂದ, ನೀರನ್ನು ಪರಿಶೀಲಿಸಲಾಗಿದ್ದು, ಅದರಲ್ಲಿ ವಿಷಕಾರಿ ರಸಾಯನಿಕ ಬೆರೆಸಿರುವುದು ಕಂಡುಬಂದಿದೆ.
ಪ್ರಸ್ತುತ, 111 ಮಂದಿ ಚೇತರಿಸಿಕೊಂಡಿದ್ದಾರೆ. ಅವರೆಲ್ಲರಿಗೂ ವಿಶ್ರಾಂತಿ ಪಡೆಯಲು ಸೂಚಿಸಲಾಗಿದ್ದು, ಎಲ್ಲರಿಗೂ ರಜೆ ನೀಡಲಾಗಿದೆ. ಉಳಿದ 7 ಮಂದಿಯ ಪರಿಸ್ಥಿತಿ ಗಂಭೀರವಾಗಿದೆ. ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ವಿಷಕಾರಿ ಮಾತ್ರೆಯನ್ನು ನೀರಿಗೆ ಹಾಕಿರುವುದರ ಹಿಂದಿನ ಉದ್ದೇಶ ಅಪಾಯಕಾರಿಯಾಗಿದೆ. ಸಾಮೂಹಿಕ ಹತ್ಯೆಗೆ ಯತ್ನ ನಡೆದಿದೆ ಎಂಬ ಅನುಮಾನಗಳಿವೆ. ಆರೋಪಿಗಳ ಪತ್ತೆಗೆ ನಾಲ್ಕು ತಂಡಗಳನ್ನು ರಚಿಸಲಾಗಿದೆ” ಎಂದು ಡಿಸಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.