ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ನಿಟ್ಟೂರು(ಬಿ) ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ವಸತಿ ನಿಲಯದ ಮೇಲ್ಛಾವಣಿಯಿಂದ ವಿದ್ಯಾರ್ಥಿನಿಯೊಬ್ಬಳು ಜಿಗಿದ ದುರ್ಘಟನೆ ಇತ್ತೀಚೆಗೆ ಸಂಭವಿಸಿತ್ತು. ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿದ್ದಾಳೆ.
ಭಾಲ್ಕಿ ತಾಲೂಕಿನ ಗೊರನಾಳ ಗ್ರಾಮದ ಭಾಗ್ಯಲಕ್ಷ್ಮಿ ಓಂಕಾರ ಕಾಂಬಳೆ ಎಂಬ ವಿದ್ಯಾರ್ಥಿನಿ ಒಂಬತ್ತನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದಳು. ವಾರದ ಹಿಂದೆ ವಸತಿ ನಿಲಯದಲ್ಲಿ ಸಹಪಾಠಿಗಳೊಂದಿಗೆ ವ್ಯಾಸಂಗ ಮಾಡುವ ವೇಳೆ ಮೇಲ್ಚಾವಣಿ ಹತ್ತಿ ಹಾರಿದ ಪರಿಣಾಮ ವಿದ್ಯಾರ್ಥಿನಿ ಗಂಭೀರವಾಗಿ ಗಾಯಗೊಂಡಿದ್ದಳು.
ತೀವ್ರವಾಗಿ ಗಾಯಗೊಂಡ ವಿದ್ಯಾರ್ಥಿನಿಗೆ ಮಹಾರಾಷ್ಟ್ರದ ಸೋಲಾಪುರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿದ್ದಾಳೆ. ವಿದ್ಯಾರ್ಥಿನಿ ಸಾವಿಗೆ ಮೂಲ ಕಾರಣ ಏನೆಂಬುದು ತಿಳಿದುಬಂದಿಲ್ಲ.
ಪರಿಹಾರಕ್ಕೆ ಸೂಚನೆ:
ವಿದ್ಯಾರ್ಥಿನಿ ಮೃತಪಟ್ಟಿರುವ ಘಟನೆಗೆ ಕಂಬನಿ ಮಿಡಿದ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ವಿದ್ಯಾರ್ಥಿನಿ ಚಿಕಿತ್ಸೆಗೆ ತಗುಲಿದ ಸಂಪೂರ್ಣ ವೆಚ್ಚ ಭರಿಸುವಂತೆ ಹಾಗೂ ಕುಟುಂಬಕ್ಕೆ ಪರಿಹಾರ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ವಸತಿ ಶಾಲೆ ಮೇಲ್ಛಾವಣಿಯಿಂದ ವಿದ್ಯಾರ್ಥಿನಿ ಜಿಗಿದ ಪ್ರಕರಣ; ತನಿಖೆಗೆ ಸೂಚನೆ
ತನಿಖೆಗೆ ಆಗ್ರಹ: ಘಟನೆ ನಡೆದ ನಂತರ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯ ಶಶಿಧರ ಕೋಸಂಬೆ ಭೇಟಿ ನೀಡಿ ವಿದ್ಯಾರ್ಥಿನಿ ಮೇಲ್ಛಾವಣಿಗೆ ಹೋಗುವ ಬಾಗಿಲು ಸರಿಯಾಗಿದ್ದು, ಚಿಲಕ ಹಾಕಿದ್ದರೆ ಈ ದುರ್ಘಟನೆ ಸಂಭವಿಸುತ್ತಿರಲಿಲ್ಲ. ಎಂದು ಹೇಳಿದ್ದು, ಈ ಘಟನೆಗೆ ಕಾರಣ ಏನೆಂಬುವುದನ್ನು ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದರು.
ಇದೇ ವೇಳೆ ವಿದ್ಯಾರ್ಥಿಗಳು ವಸತಿ ನಿಲಯದಲ್ಲಿ ಸೋಲಾರ್ ಕೆಟ್ಟಿದ್ದು, ಪ್ರತಿದಿನ ತಣ್ಣೀರಿನಿಂದ ಸ್ನಾನ ಮಾಡುವ ಪರಿಸ್ಥಿತಿ ಇದೆ. ಮೆನು ಪ್ರಕಾರ ಊಟ ನೀಡುತ್ತಿಲ್ಲ, ವಸತಿ ನಿಲಯದಲ್ಲಿ ಪ್ರಾಚಾರ್ಯರು ವಾಸ ಮಾಡುತ್ತಿಲ್ಲ ಎಂದು ವಿದ್ಯಾರ್ಥಿಗಳು ಸಮಸ್ಯೆಗಳ ಸರಮಾಲೆ ಬಿಚ್ಚಿಟ್ಟಿದ್ದರು. ಇದೀಗ ವಿದ್ಯಾರ್ಥಿನಿ ಸಾವನ್ನಪ್ಪಿರುವ ಧಾರುಣ ಘಟನೆ ವಸತಿ ನಿಲಯದ ಅಂಗಳದಲ್ಲಿ ನಡೆದಿದೆ. ಈ ಬಗ್ಗೆ ಸೂಕ್ತ ತನಿಖೆ ಆಗಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.