ದಲಿತ ಪ್ರಾತಿನಿಧ್ಯವನ್ನು ತಮ್ಮ ಸ್ವಂತ ಒಳಿತಿಗಾಗಿ ಒತ್ತೆಯಿಟ್ಟಿದ್ದಾರೆ… ಸವರ್ಣೀಯರು ಹಾಕಿದ ಮೂಗುದಾರ ತೊಟ್ಟು ತಲೆಯಾಡಿಸಿದ್ದಾರೆ. ಆಯ್ಕೆ ಆಗಬೇಕಿದ್ದರೆ ಮೇಲ್ಜಾತಿಗಳೆನ್ನುವವರ ಮತಗಳು ಬೇಕೇ ಬೇಕು. ಅವರ ಕೈಕಾಲು ಹಿಡಿಯಬೇಕು. ಅವರ ಬೇಕು ಬೇಡಗಳ ಲೆಕ್ಕವಿಡಲೇಬೇಕು. ಮೇಲ್ಜಾತಿಗಳೆನ್ನುವವರನ್ನು ಖುಷಿ ಮಾಡುವವರು ದಲಿತರ ಹಿತ ಕಾಯುವುದು ಹೇಗೆ ಸಾಧ್ಯ?
ಬಾಬಾಸಾಹೇಬ ಅಂಬೇಡ್ಕರ್ ಅವರಂತಹ ಮಹಾನಾಯಕನನ್ನು ಸ್ವತಂತ್ರ ಭಾರತ ಎರಡು ಸಲ ಸೋಲಿಸಿದ್ದು ಅದರ ಪಾಲಿನ ದಾರುಣ ದುರಂತ. ಚರಿತ್ರೆ ಬರೆದಿಟ್ಟಿರುವ ಈ ಮಾತಿನ ಅಗಾಧತೆಯನ್ನು ಭವಿಷ್ಯತ್ತಿನಲ್ಲಿ ಕನಿಷ್ಠ ಪಕ್ಷ ದಲಿತರಾದರೂ ಅರಿಯುತ್ತಾರೆ ನಿಶ್ಚಿತವಾಗಿ.
1951 ಮತ್ತು 1954 (ಉಪಚುನಾವಣೆ)ಯಲ್ಲಿ ಸೋತ ಈ ಮಹಾ ನಾಯಕ, 1957ರಲ್ಲಿ ನಡೆದ ದೇಶದ ಎರಡನೆಯ ಲೋಕಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಲು ಅವರು ಬದುಕಿಯೇ ಇರುವುದಿಲ್ಲ. 1956ರ ಡಿಸೆಂಬರ್ ನಲ್ಲಿ ಸಾವು ಅವರನ್ನು ಸೆಳೆದೊಯ್ಯುತ್ತದೆ
ದುಂಡು ಮೇಜಿನ ಪರಿಷತ್ತುಗಳಲ್ಲಿ ಪ್ರತಿಪಾದಿಸಿ ಬ್ರಿಟಿಷರನ್ನು ಒಪ್ಪಿಸಿದ್ದ ‘ಕಮ್ಯೂನಲ್ ಅವಾರ್ಡ್’ Communal Award ಪ್ರಕಾರ ದಲಿತರಿಗೆ ಪ್ರತ್ಯೇಕ ಮತಕ್ಷೇತ್ರಗಳು ಇದ್ದಿದ್ದ ಪಕ್ಷದಲ್ಲಿ ದೇಶದ ಯಾವ ಭಾಗದಿಂದ ನಿಂತಿದ್ದರೂ ಅವರನ್ನು ಸೋಲಿಸುವುದು ಸಾಧ್ಯವಿತ್ತೇ?
ಪ್ರತ್ಯೇಕ ಮತಕ್ಷೇತ್ರ ವ್ಯವಸ್ಥೆ ಹಿಂದೂ ಧರ್ಮವನ್ನು ಒಡೆಯುತ್ತದೆ ಮತ್ತು ದಲಿತರ ಮೇಲಿನ ದೌರ್ಜನ್ಯಗಳು ದಟ್ಟವಾಗುತ್ತವೆಂದು ಆಮರಣ ಉಪವಾಸಕ್ಕೆ ಕುಳಿತ ಗಾಂಧೀಜಿಯ ಮುಂದೆ ಬಾಬಾಸಾಹೇಬರು ಅಸಹಾಯಕರಾಗುತ್ತಾರೆ. ಪೂನಾ ಒಡಂಬಡಿಕೆಯನ್ನು ಒಪ್ಪದೆ ಅವರಿಗೆ ಬೇರೆ ದಾರಿ ಉಳಿಯುವುದಿಲ್ಲ.
ದಲಿತರಿಗೆ ಪ್ರತ್ಯೇಕ ಮತಕ್ಷೇತ್ರಗಳ ವ್ಯವಸ್ಥೆ ಭಾರತದ ಹಳ್ಳಿ ಹಳ್ಳಿಗಳನ್ನು ಛಿದ್ರಗೊಳಿಸುತ್ತದೆ. ಭಾರತದ ಅಂದಿನ ಪರಿಸ್ಥಿತಿಯಲ್ಲಿ ದಲಿತರ ಮೇಲೆ ಎಣೆಯಿಲ್ಲದ ದೌರ್ಜನ್ಯಕ್ಕೆ ಕಾರಣವಾಗುತ್ತದೆ ಎಂಬ ಭೀತಿಯನ್ನು ಗಾಂಧೀಜಿ ವ್ಯಕ್ತಪಡಿಸಿರುತ್ತಾರೆ.
ಐದು ವರ್ಷಗಳಿಗೊಮ್ಮೆ ದಲಿತರು ತಮ್ಮ ಪ್ರತಿನಿಧಿಯೊಬ್ಬನನ್ನು ಆರಿಸಲು ಮತ ಚಲಾಯಿಸಿದರೆ ಹಿಂದೂ ಧರ್ಮ ಹೇಗೆ ಒಡೆದಂತಾಗುತ್ತದೆ. ಹಿಂದೂ ಧರ್ಮ ಈಗಾಗಲೇ ಸಾಕಷ್ಟು ಒಡೆದು ಹೋಗಿಲ್ಲವೇ ಎಂಬ ಪ್ರಶ್ನೆಯನ್ನು ಬಾಬಾಸಾಹೇಬರು ಕೇಳುತ್ತಾರೆ.
ದಲಿತರಿಗೆ ಪ್ರತ್ಯೇಕ ಮತಕ್ಷೇತ್ರಗಳಿಗಾಗಿ ತಮ್ಮ ಸರ್ವಸ್ವವನ್ನೂ ಪಣಕ್ಕಿಟ್ಟು ಹೋರಾಡಿದ್ದರು ಬಾಬಾಸಾಹೇಬರು. ಈ ಹೋರಾಟಕ್ಕಾಗಿ ಹಿಂದೂ ಭಾರತದ ತೀವ್ರ ದ್ವೇಷವನ್ನು ತಾವು ಕಟ್ಟಿಕೊಳ್ಳಬೇಕಾಯಿತು ಎಂದು ಅವರು ಬರೆದಿದ್ದಾರೆ. ದೇಶದ್ರೋಹಿಯಂತೆ ತಮ್ಮನ್ನು ನಡೆಸಿಕೊಳ್ಳಲಾಯಿತು ಎಂದು ಅವರು ದಾಖಲಿಸಿದ್ದಾರೆ. 1932ರ ಪೂನಾ ಒಡಂಬಡಿಕೆ ದಲಿತ ಪ್ರಾತಿನಿಧ್ಯದ ಸಮಾಧಿಯನ್ನು ತೋಡಿತು. ಸದ್ಯ ಭವಿಷ್ಯದಲ್ಲಿ ಈ ಸಮಾಧಿ ನಿರಂತರವೆಂದೇ ತೋರುತ್ತಿದೆ.
ರಾಜಶೇಖರ ವುಂಡ್ರು ಅವರು ‘Ambedkar, Gandhi and Patel: The Making of India’s Electoral System’ ಪುಸ್ತಕದಲ್ಲಿ ಪೂನಾ ಒಪ್ಪಂದದ ಒಳ ಹೊರಗನ್ನು ಸವಿಸ್ತಾರವಾಗಿ ದಾಖಲಿಸಿ ವಿಮರ್ಶಿಸಿದ್ದಾರೆ.
ಬಾಬಾಸಾಹೇಬರು ಮತ್ತು ಮುಂಬಯಿ, ಮದ್ರಾಸ್ ಹಾಗೂ ಕೊಲ್ಕತ್ತ ಪ್ರೆಸಿಡೆನ್ಸಿಗಳಲ್ಲಿನ ಅವರ ಸಮಕಾಲೀನರು ಹತ್ತೊಂಬತ್ತನೆಯ ಶತಮಾನದ ಆರಂಭದಲ್ಲಿ ದಲಿತರಿಗೆ ಪ್ರತ್ಯೇಕ ಮತಕ್ಷೇತ್ರಗಳಿಗಾಗಿ ದೊಡ್ಡ ಹೋರಾಟವನ್ನೇ ನಡೆಸಿದರು. ಈ ಹೋರಾಟ ಫಲ ನೀಡಿತು. ವಸಾಹತುಶಾಹಿ ಬ್ರಿಟಿಷ್ ಸರ್ಕಾರ 1930ರ ದುಂಡುಮೇಜು ಪರಿಷತ್ತಿಗೆ ಅಸ್ಪೃಶ್ಯ ಜನಸಮುದಾಯಗಳ ಇಬ್ಬರು ಪ್ರತಿನಿಧಿಗಳನ್ನು ನಾಮಕರಣ ಮಾಡಿತು. ಅಸ್ಪೃಶ್ಯ ಸಮುದಾಯಗಳಿಗೆ ಪ್ರತ್ಯೇಕ ಮತಕ್ಷೇತ್ರಗಳ ಮೂಲಕ ಮೀಸಲು ಪ್ರಾತಿನಿಧ್ಯವನ್ನು ಒದಗಿಸಬೇಕೆಂದು ಬಾಬಾಸಾಹೇಬರು ಮತ್ತು ರೆಟ್ಟಮಲೈ ಶ್ರೀನಿವಾಸನ್ ಪ್ರತಿಪಾದನೆಯನ್ನು 1930ರ ದುಂಡುಮೇಜಿನ ಪರಿಷತ್ತು ಒಪ್ಪಿತು. 1931ರಲ್ಲಿ ನಡೆದ ಎರಡನೆಯ ದುಂಡುಮೇಜಿನ ಪರಿಷತ್ತಿನಲ್ಲಿ ಅಸ್ಪೃಶ್ಯರಿಗೆ ಚುನಾವಣೆ ಪ್ರಕ್ರಿಯೆಯ ಮೂಲಕ ಪ್ರತ್ಯೇಕ ಪ್ರಾತಿನಿಧ್ಯ ಮತ್ತು ಪ್ರತ್ಯೇಕ ಮತಕ್ಷೇತ್ರಗಳ ಏರ್ಪಾಡನ್ನೂ ಗಾಂಧೀಜಿ ವಿರೋಧಿಸಿದರು. ಅಸ್ಪೃಶ್ಯ ಜನಸಮುದಾಯಗಳು ಹಿಂದೂ ಸಮಾಜದ ಅವಿಭಾಜ್ಯ ಅಂಗ. ಪ್ರತ್ಯೇಕ ಮತಕ್ಷೇತ್ರಗಳ ಮೂಲಕ ಅವರನ್ನು ಹಿಂದೂ ಸಮಾಜದಿಂದ ದೂರ ಮಾಡಲಾಗುತ್ತಿದೆ ಎಂಬುದು ಗಾಂಧೀಜಿ ವಿರೋಧದ ಮೂಲವಾಗಿತ್ತು.

ಈ ವಿರೋಧವನ್ನು ತಾರ್ಕಿಕ ಅಂತ್ಯ ಮುಟ್ಟಿಸುವುದಕ್ಕಾಗಿಯೇ ಆಮರಣ ಉಪವಾಸದ ಬೆದರಿಕೆಯನ್ನು 1932ರಲ್ಲಿ ಅವರು ಕಾರ್ಯರೂಪಕ್ಕೆ ತಂದರು. ಪ್ರತ್ಯೇಕ ಮತಕ್ಷೇತ್ರದ ವ್ಯವಸ್ಥೆಯನ್ನು ಕೈಬಿಟ್ಟು ಅಸ್ಪೃಶ್ಯರು ಮತ್ತು ಹಿಂದೂಗಳು ಒಟ್ಟಾಗಿ ಮತ ಚಲಾಯಿಸಿ ಅಸ್ಪೃಶ್ಯರ ಜನಪ್ರತಿನಿಧಿಗಳನ್ನು ಆರಿಸುವ ಒಪ್ಪಂದವೊಂದು ಏರ್ಪಟ್ಟಿತು. ಉಪವಾಸ ಕುಳಿತಿದ್ದ ಗಾಂಧೀಜಿಯ ಪ್ರಾಣ ಉಳಿಸಲೆಂದು ಹಿಂದೂಗಳು ಮತ್ತು ಅಸ್ಪೃಶ್ಯ ಸಮುದಾಯದ ನಾಯಕರ ನಡುವೆ ನಡೆದ ರಾಜೀ ಒಪ್ಪಂದವೇ ಪೂನಾ ಒಡಂಬಡಿಕೆ. ಸಾಮಾನ್ಯ ಅಂದರೆ ಜನರಲ್ ಮತಕ್ಷೇತ್ರಗಳಲ್ಲಿ ಮೀಸಲು ಕ್ಷೇತ್ರಗಳನ್ನು ಈ ಒಡಂಬಡಿಕೆ ಸೃಷ್ಟಿಸಿತು. ಚುನಾವಣೆಯ ವಿಧಾನವನ್ನು ಬದಲಾಯಿಸಿತು. ದಲಿತರಿಗೆಂದೇ ಪ್ರತ್ಯೇಕ ಮತಕ್ಷೇತ್ರಗಳ ಅಂಶವನ್ನೂ ಕೈಬಿಟ್ಟಿತು. ಬದಲಿಗೆ ಮೀಸಲು ಮತಕ್ಷೇತ್ರದ ದಲಿತ ಅಭ್ಯರ್ಥಿಯನ್ನು ಕೇವಲ ದಲಿತರು ಮಾತ್ರವಲ್ಲದೆ ಇತರೆ ಎಲ್ಲ ಜಾತಿಗಳ ಮತದಾರರೂ ಸೇರಿ ಆಯ್ಕೆ ಮಾಡುವ ಜಂಟಿ ವಿಧಾನವನ್ನು ನಿಗದಿ ಮಾಡಿತು. ಪರಸ್ಪರ ಒಪ್ಪಿಗೆ ಇರುವ ತನಕವೂ ಈ ಪದ್ಧತಿ ಮುಂದುವರೆಯುವುದಾಗಿ ಸಾರಿತು.
ಪರಸ್ಪರ ಒಪ್ಪಿಗೆ ಅಥವಾ ಮ್ಯೂಚ್ಯುವಲ್ ಅಗ್ರೀಮೆಂಟ್ ಎಂಬುದನ್ನು ಇಲ್ಲಿ ಗಮನಿಸಬೇಕು. ಈ ಪದ ಬಳಕೆಯೇ ಮೀಸಲಾತಿಯನ್ನು ಇಲ್ಲಿಯವರೆಗೆ ವಿಸ್ತರಿಸಿಕೊಂಡು ತಂದಿದೆ. What Congress and Gandhi Have Done To Untouchables ಎಂಬ ಪುಸ್ತಕದಲ್ಲಿ ಈ ವಿವರಗಳನ್ನು ಕಾಣಬಹುದು
ಬಾಬಾಸಾಹೇಬರು ತಾವು ಬದುಕಿರುವ ತನಕವೂ ಪೂನಾ ಒಡಂಬಡಿಕೆಯನ್ನು ಮೋಸವೆಂದು ಹೀಗಳೆದಿದ್ದರು.
ಅತಿ ಹೆಚ್ಚು ಮತ ಗಳಿಸಿದ ಅಭ್ಯರ್ಥಿಯನ್ನು ವಿಜಯಿ ಎಂದು ಘೋಷಿಸುವ First past the post ವ್ಯವಸ್ಥೆಯ ಸಂಸದೀಯ ಜನತಂತ್ರವನ್ನು ಬಾಬಾಸಾಹೇಬರು ಒಪ್ಪಿರಲಿಲ್ಲ. ಅಲ್ಪಸಂಖ್ಯಾತ ಜನಸಮುದಾಯಗಳ ಮಿಶ್ರಣವಿರುವ ಸಮಾಜಗಳಲ್ಲಂತೂ ಈ ಪದ್ಧತಿ ಸೂಕ್ತ ಅಲ್ಲವೇ ಅಲ್ಲ ಎಂದು ಅವರು ನಂಬಿದ್ದರು. ಇಂತಹ ಚುನಾವಣೆ ಪದ್ಧತಿಯಲ್ಲಿ ಅಸ್ಪೃಶ್ಯರನ್ನು ಶಾಸನಸಭೆಗಳಿಗೆ ಆರಿಸಿ ತರುವುದರಿಂದ ಆ ಜನಸಮುದಾಯಗಳಿಗೆ ನ್ಯಾಯ ಸಿಗುವುದಿಲ್ಲ ಎಂದಿದ್ದರು. ದಲಿತರು, ಮುಸಲ್ಮಾನರು, ಸಿಖ್ಖರು, ಆಂಗ್ಲೋ ಇಂಡಿಯನ್ನರನ್ನು ಒಳಗೊಂಡ ಅಲ್ಪಸಂಖ್ಯಾತ ಸಮುದಾಯಗಳಿಗೆ ಅವರ ಜನಸಂಖ್ಯಾ ಪ್ರಮಾಣಕ್ಕಿಂತ ಹೆಚ್ಚಿನ ಪ್ರಾತಿನಿಧ್ಯ ಶಾಸನಸಭೆಗಳಲ್ಲಿ ದೊರೆಯಬೇಕು. ಈ ಅಲ್ಪಸಂಖ್ಯಾತ ಜನಸಮುದಾಯಗಳನ್ನು ಬಹುಸಂಖ್ಯಾತರು ಬೆಚ್ಚಿಸಿ ಬಾಯಿ ಬಡಿಯದಿರಲು ಇಂತಹ ಪ್ರಾತಿನಿಧ್ಯ ಅತ್ಯಗತ್ಯ ಎಂದು ಬಾಬಾಸಾಹೇಬರು ಪ್ರತಿಪಾದಿಸಿದ್ದರು. ಒಬ್ಬ ವ್ಯಕ್ತಿಗೆ ಒಂದು ವೋಟು ಮತ್ತು ಅತಿ ಹೆಚ್ಚು ಮತಗಳನ್ನು ಗಳಿಸಿದ ಅಭ್ಯರ್ಥಿ ವಿಜಯಿ ಎಂದು ಘೋಷಿಸುವ ಮತ್ತು ಸರಳ ಬಹುಮತ ಪದ್ಧತಿ ಅಥವಾ ಬಹುಮತದ ಮತದಾನ ಪದ್ಧತಿ (First past the post system) ತತ್ವಗಳು ಸಮಾನ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿ ಮಾತ್ರವೇ ಪ್ರಸ್ತುತವೆನಿಸುತ್ತವೆ. ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ಮತ್ತು ಸೋದರತೆ ಸಂಪೂರ್ಣವಾಗಿ ಮರೆಯಾಗಿರುವ ಭಾರತದಂತಹ ಜಾತಿ ತಾರತಮ್ಯದ ಅಸಮಾನ ವ್ಯವಸ್ಥೆಯಲ್ಲಿ ಈ ತತ್ವಗಳು ಅಪ್ರಸ್ತುತ ಎಂಬುದು ಬಾಬಾಸಾಹೇಬರ ಪ್ರತಿಪಾದನೆಯಾಗಿತ್ತು.
ಐತಿಹಾಸಿಕವಾಗಿ ಅನ್ಯಾಯ ಮತ್ತು ತಾರತಮ್ಯಗಳಿಗೆ ತುತ್ತಾದ ಜನಸಮುದಾಯಗಳ ಪಾಲಿಗೆ ರಾಜಕಾರಣದಲ್ಲಿ ಭಾಗವಹಿಸುವಿಕೆ ಅಥವಾ ಪಾಲುದಾರಿಕೆಯ ಮಹತ್ವದ ಸಂಗತಿಯೇ ಹೌದು. ಆದರೆ ದಲಿತರಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಕ್ಕ ಮಾತ್ರಕ್ಕೆ ಅವರ ಹಿತಗಳ ಅಭಿವ್ಯಕ್ಕಿ ಕೂಡ ಅಷ್ಟೇ ದೊಡ್ಡ ಪ್ರಮಾಣದಲ್ಲಿ ಆಗುವುದಿಲ್ಲ. ಅಂದರೆ ಪ್ರಾತಿನಿಧ್ಯದ ಪ್ರಮಾಣಕ್ಕೂ ಹಿತಸಾಧನೆಗೂ ಸಂಬಂಧ ಇಲ್ಲ.
1932ರ ಪೂನಾ ಒಪ್ಪಂದದ ನಂತರ 1936ರಲ್ಲಿ ಬಾಬಾಸಾಹೇಬರು ಇಂಡಿಪೆಂಡೆಂಟ್ ಲೇಬರ್ ಪಾರ್ಟಿ (ಐಎಲ್ ಪಿ) ಎಂಬ ಪಕ್ಷ ಸ್ಥಾಪಿಸುತ್ತಾರೆ. ಪೂನಾ ಒಡಂಬಡಿಕೆಯ ಪ್ರಕಾರವೇ 1937ರಲ್ಲಿ ಪ್ರಾಂತೀಯ ಶಾಸನಸಭೆಗಳಿಗಳು ನಡೆಯುತ್ತವೆ. ಈ ಚುನಾವಣೆಯ ಫಲಿತಾಂಶಗಳನ್ನು ಬಾಬಾ ಸಾಹೇಬರು 1945ರಲ್ಲಿ ವಿಮರ್ಶಿಸಿದ್ದಾರೆ.
ಈ ಪ್ರಾಂತೀಯ ಚುನಾವಣೆಗಳಲ್ಲಿ ಐಎಲ್ ಪಿ ಸ್ಪರ್ಧಿಸುತ್ತದೆ. ದಲಿತರಿಗೆ 151 ಸೀಟುಗಳು ದಕ್ಕಿರುತ್ತವೆ. ಈ ಪೈಕಿ ಐ.ಎಲ್.ಪಿ ಹನ್ನೆರಡನ್ನು ಗೆದ್ದಿರುತ್ತದೆ. ಉಳಿದ ಎಲ್ಲ 139 ದಲಿತ ಸೀಟುಗಳು ಕಾಂಗ್ರೆಸ್ ಪಾಲಾಗಿರುತ್ತವೆ. ದಲಿತರ ಪ್ರತಿನಿಧಿ ತಾನೇ ಎಂದು ಕಾಂಗ್ರೆಸ್ ಎದೆ ಸೆಟೆಸಿ ಬೀಗುತ್ತದೆ.
ಅಂದು ಕಾಂಗ್ರೆಸ್ ವಹಿಸಿದ್ದ ಪಾತ್ರವನ್ನು ಇಂದು ಬಿಜೆಪಿ ಧರಿಸಿ ಮೆರೆಯುತ್ತಿದೆ. ತಮ್ಮನ್ನು ತಲೆ ತಲಾಂತರಗಳಿಂದ ಇಲ್ಲಿಯ ತನಕ ತುಳಿದಿಟ್ಟು, ಸಾವಿರಾರು ಬಗೆಗಳಲ್ಲಿ ತಮ್ಮನ್ನು ವಂಚಿಸುತ್ತ ಬಂದಿರುವ, ತಮ್ಮ ವಿರುದ್ಧ ವಿಷವನ್ನೇ ಕಾರುವ, ತಮ್ಮ ಹಿತವನ್ನು ವಿಮೋಚನೆಯನ್ನು ನಿರ್ದಯೆಯಿಂದ ವಿರೋಧಿಸಿದ್ದ ಪಕ್ಷಗಳ ದಾಸರಾಗಿ ಹೋಗಿದ್ದಾರೆ ದಲಿತರು. ಹಾವಿನ ಹೆಡೆಯ ಅಡಿಯ ನೆರಳನ್ನು ನಿಜ ನೆರಳೆಂದು ಭ್ರಮಿಸಿ ತಮ್ಮನ್ನು ನುಂಗುವ ಸರ್ಪಗಳತ್ತ ಕುಪ್ಪಳಿಸುತ್ತಿದ್ದಾರೆ.
ಆರ್ಥಿಕ ಮತ್ತು ಸಾಮಾಜಿಕ ಸಮಾನತೆಯಿಲ್ಲದ ರಾಜಕೀಯ ಸಮಾನತೆಗೆ ಯಾವ ಅರ್ಥವೂ ಇಲ್ಲ ಎಂದಿದ್ದರು ಬಾಬಾಸಾಹೇಬರು. ಆರ್ಥಿಕ ಮತ್ತು ಸಾಮಾಜಿಕ ಸಮಾನತೆ ದಲಿತರಿಗೆ ಇನ್ನೂ ದೂರ ದಿಗಂತದ ಕನಸಾಗಿಯೇ ಉಳಿದಿದೆ. ಜಾತಿ ತಾರತಮ್ಯದ ನೀಚತನ ದಿನದಿಂದ ದಿನಕ್ಕೆ ಹೆಚ್ಚು ಕ್ರೌರ್ಯ ಧರಿಸಿ ಹೂಂಕರಿಸುತ್ತಿದೆ. ರಾಜಕೀಯ ಸಮಾನತೆಯನ್ನು ದಲಿತರಿಗೆ ಗಳಿಸಿಕೊಡುವ ಬಾಬಾಸಾಹೇಬರ ಅಪ್ರತಿಮ ಹೋರಾಟ ಪೂನಾ ಒಪ್ಪಂದದಲ್ಲಿ ಮಣ್ಣು ಪಾಲಾಯಿತು.
ಪೂನಾ ಒಡಂಬಡಿಕೆಯ ನಂತರ 1945ರಲ್ಲಿ ಅವರು ಬರೆದಿದ್ದ ಕೃತಿಯೊಂದರ ಶೀರ್ಷಿಕೆ- What Congress have done to the untouchables. ಅಲ್ಲಿಂದಾಚೆಗೆ 1947ರಲ್ಲಿ ರಚಿಸಿದ ಪ್ರಸಿದ್ಧ ಕೃತಿ- States and Minorities. ಈ ಎರಡೂ ಪುಸ್ತಕಗಳಲ್ಲಿ ಪೂನಾ ಒಡಂಬಡಿಕೆಯಿಂದ ದಲಿತರಿಗೆ ಜರುಗಿದ ಮೋಸದ ಕುರಿತ ಅವರ ಒಡಲ ಸಂಕಟ ಅಲ್ಲಲ್ಲಿ ಹೊರಚೆಲ್ಲಿದೆ. ಈ ಸಂಕಟದ ಕೆಲವು ಮಾದರಿಗಳು ಹೀಗಿವೆ-

- ಉಪವಾಸದಲ್ಲಿ ಉತ್ತಮವಾದದ್ದೇನೂ ಇರಲಿಲ್ಲ. ಅದೊಂದು ಹೊಲಸು ಕೃತ್ಯ. ಅಸ್ಪೃಶ್ಯರಿಗೆ ಪ್ರಯೋಜನ ಆಗಬೇಕೆಂದು ಮಾಡಿದ ಉಪವಾಸವಲ್ಲ ಅದು. ತಮಗೆ (ಬ್ರಿಟಿಷ್) ಪ್ರಧಾನಿಯಿಂದ ದೊರೆತ ಸಂವಿಧಾನಾತ್ಮಕ ರಕ್ಷಣೆಗಳನ್ನು ಬಿಟ್ಟುಕೊಟ್ಟು ಹಿಂದೂಗಳ ಮರ್ಜಿಯ ಮೇರೆಗೆ ಬದುಕುವಂತೆ ಅಸಹಾಯಕರ ಮೇಲೆ ಹೇರಿದ ಅತಿ ಕೆಟ್ಟ ಬಲವಂತ. ದುಷ್ಟ ಕೃತ್ಯ. ಇಂತಹ ವ್ಯಕ್ತಿಯನ್ನು ಪ್ರಾಮಾಣಿಕನೆಂದು ಒಪ್ಪಿಕೊಳ್ಳುವುದಾದರೂ ಹೇಗೆ?
- ಪೂನಾ ಒಡಂಬಡಿಕೆಯಿಂದ ಅಸ್ಪೃಶ್ಯರಿಗೆ ದೊರೆಯುವ ಮೀಸಲು ಸೀಟುಗಳ ಸಂಖ್ಯೆ ಹೆಚ್ಚಿದೆಯೆಂದು ಹೇಳಲಾಗಿದೆ. ಆದರೆ ಕಮ್ಯೂನಲ್ ಅವಾರ್ಡ್ ನೀಡಿದ್ದ ಡಬಲ್ ವೋಟಿನ ಹಕ್ಕನ್ನು ಕಿತ್ತುಕೊಂಡು ಸೀಟುಗಳ ಸಂಖ್ಯೆಯನ್ನು ಎಷ್ಟು ಹೆಚ್ಚಿಸಿದರೇನು ಉಪಯೋಗ? ‘ಡಬಲ್ ವೋಟನ್ನು’ ಕಿತ್ತುಕೊಂಡದ್ದರಿಂದ ಉಂಟಾದ ನಷ್ಟವನ್ನು ಸೀಟುಗಳ ಹೆಚ್ಚಳ ತುಂಬಿಕೊಡುವುದು ಅಸಾಧ್ಯ. ‘ಕಮ್ಯೂನಲ್ ಅವಾರ್ಡು’ ನೀಡಿದ್ದ ಎರಡನೆಯ ಮತವು ದಲಿತರ ಪಾಲಿಗೆ ಅಮೂಲ್ಯ ವಿಶೇಷಾಧಿಕಾರ. ರಾಜಕೀಯ ಅಸ್ತ್ರವಾಗಿ ಅದರ ಬೆಲೆ ಊಹಿಸಲಾರದಷ್ಟು ದೊಡ್ಡದು.
- ಪೂನಾ ಒಡಂಬಡಿಕೆಯ ಫಲವಾಗಿ ದಲಿತರಿಗೆ ಇಂದು ಒಂದಷ್ಟು ಸೀಟುಗಳು ಹೆಚ್ಚು ದೊರೆತಿವೆ. ಆದರೆ ಅವರ ಪಾಲಿಗೆ ಉಳಿದದ್ದು ಈ ಹೆಚ್ಚು ಸೀಟುಗಳು ಮಾತ್ರ. ಡಬಲ್ ವೋಟಿನ ಅಧಿಕಾರದ ಕಮ್ಯೂನಲ್ ಅವಾರ್ಡ್ ಜಾರಿಗೆ ಬಂದಿದ್ದರೆ, ಅಸ್ಪೃಶ್ಯರಿಗೆ ಸೀಟುಗಳು ಒಂದಷ್ಟು ಕಡಿಮೆ ದೊರೆಯುತ್ತಿದ್ದವು. ಆದರೆ ಈ ಸೀಟುಗಳಿಂದ ಆಯ್ಕೆಯಾಗಿ ಬಂದ ಪ್ರತಿಯೊಬ್ಬ ಜನಪ್ರತಿನಿಧಿಯೂ ನೂರಕ್ಕೆ ನೂರರಷ್ಟು ಅಸ್ಪೃಶ್ಯರ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದ. ಪ್ರತ್ಯೇಕ ಮತಕ್ಷೇತ್ರಗಳನ್ನು ಕೈ ಬಿಟ್ಟು, ಮೀಸಲು ಕ್ಷೇತ್ರದ ಅಭ್ಯರ್ಥಿಯನ್ನು ಆರಿಸುವ ಮತಾಧಿಕಾರವನ್ನು ದಲಿತರು ಮಾತ್ರವಲ್ಲದೆ ಇತರೆ ಸಾಮಾನ್ಯ ವರ್ಗಕ್ಕೂ ನೀಡಲಾದ ಜಂಟಿ ಮತಕ್ಷೇತ್ರಗಳು ದಲಿತರ ಮತಾಧಿಕಾರವನ್ನು ಸಂಪೂರ್ಣವಾಗಿ ಕಿತ್ತುಕೊಂಡಿವೆ. ಈ ಹಿಂದೆ ನಡೆದ ಚುನಾವಣೆಗಳ (1937ರ ಪ್ರಾಂತೀಯ ಚುನಾವಣೆಗಳು) ಫಲಿತಾಂಶಗಳೇ ಈ ಮಾತಿಗೆ ಉದಾಹರಣೆ.
- ಪೂನಾ ಒಡಂಬಡಿಕೆಯ ನಂತರ ಮೀಸಲು ಕ್ಷೇತ್ರಗಳಲ್ಲಿ ಹಿಂದೂಗಳ ತಾಳಕ್ಕೆ ಕುಣಿಯುವ ದಲಿತರನ್ನು ಹುರಿಯಾಳುಗಳನ್ನಾಗಿ ಹೂಡದಂತೆ ಕಾಂಗ್ರೆಸ್ ಪಕ್ಷವನ್ನು ಮಿಸ್ಟರ್ ಗಾಂಧೀ ತಡೆಯಬೇಕಿತ್ತು. ಅಸ್ಪೃಶ್ಯರ ಹಿತದ ರಾಜಕಾರಣವನ್ನು ಕೆಡಿಸದಂತೆ ಕಾಯಬೇಕಿತ್ತು. ಹಾಗೆ ಮಾಡಲಿಲ್ಲವೇಕೆ?
- ಅಸ್ಪೃಶ್ಯರ ವಿರುದ್ಧದ ಸಮರದ ಹಾದಿಯನ್ನು ಮಿಸ್ಟರ್ ಗಾಂಧೀ ಇನ್ನೂತೊರೆದಿಲ್ಲ. ಮತ್ತೆ ತೊಂದರೆ ಕೊಟ್ಟರೂ ಕೊಡಬಹುದು. ಅವರನ್ನು ನಂಬುವ ಕಾಲ ಇನ್ನೂ ಬಂದಿಲ್ಲ. ಅಸ್ಪೃಶ್ಯರು ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕಿದ್ದರೆ ಮಿಸ್ಟರ್ ಗಾಂಧೀ ಕುರಿತು ಎಚ್ಚರಿಕೆಯಿಂದಿರಿ (ಬಿವೇರ್ ಆಫ್ ಮಿಸ್ಟರ್ ಗಾಂಧೀ) ಎಂದು ಸಾರುವುದೊಂದೇ ಸರಿಯಾದ ದಾರಿ.
- ತನ್ನಿಂದ ಆಯ್ಕೆಯಾಗಿರುವ ಅಸ್ಪೃಶ್ಯ ಕಾಂಗ್ರೆಸ್ ಜನಪ್ರತಿನಿಧಿಗಳನ್ನು ಪಕ್ಷದ ಶಿಸ್ತಿಗೆ ಗುರಿ ಮಾಡಿರುವುದು ಕಾಂಗ್ರೆಸ್ ಪಕ್ಷದ ಮತ್ತೊಂದು ಕೆಟ್ಟ ಕೃತ್ಯ. ಕಾಂಗ್ರೆಸ್ ಗೆ ಇಷ್ಟವಿಲ್ಲದ ಒಂದೇ ಒಂದು ಪ್ರಶ್ನೆಯನ್ನೂ ಅವರು ಕೇಳುವಂತಿಲ್ಲ. ಕಾಂಗ್ರೆಸ್ ಅನುಮತಿ ನೀಡದಿರುವ ಯಾವುದೇ ನಿರ್ಣಯವನ್ನೂ ಅವರು ಮಂಡಿಸುವಂತಿಲ್ಲ. ಅದು ಆಕ್ಷೇಪಿಸುವ ಯಾವುದೇ ಶಾಸನವನ್ನೂ ಅವರು ತರುವಂತಿಲ್ಲ. ತಮಗೆ ಇಷ್ಟ ಬಂದಂತೆ ಮತ ಚಲಾಯಿಸುವ, ತಮಗೆ ಅನಿಸಿದ್ದನ್ನು ಮಾತಾಡುವ ಸ್ವಾತಂತ್ರ್ಯವೂ ಅವರಿಗೆ ಇಲ್ಲ. ಹೊಡೆದತ್ತ ನಡೆಯುವ ಪಶುಗಳಂತೆ ಅವರನ್ನು ನಡೆಸಿಕೊಳ್ಳಲಾಗುತ್ತಿದೆ. ತಮ್ಮ ದೂರು ದುಮ್ಮಾನಗಳನ್ನು ಸದನದಲ್ಲಿ ತೋಡಿಕೊಂಡು, ಅವುಗಳಿಗೆ ಪರಿಹಾರ ಪಡೆಯುವುದೇ ಅಸ್ಪೃಶ್ಯರನ್ನು ಶಾಸನಸಭೆಗಳಿಗೆ ಆರಿಸಿ ತರುವ ಮುಖ್ಯ ಉದ್ದೇಶವಾಗಿತ್ತು. ಈ ಉದ್ದೇಶವನ್ನು ಕಾಂಗ್ರೆಸ್ ಅತ್ಯಂತ ಯಶಸ್ವಿಯಾಗಿ ಮತ್ತು ಪರಿಣಾಮಕಾರಿಯಾಗಿ ಭಂಗಗೊಳಿಸಿದೆ.
- ಈ ಸುದೀರ್ಘ ದುಃಖದ ಕತೆಯನ್ನು ಚುಟುಕಾಗಿ ಹೀಗೆ ಹೇಳಿ ಮುಗಿಸಬಹುದು- ಪೂನಾ ಒಡಂಬಡಿಕೆಯ ಎಲ್ಲ ಜೀವರಸವನ್ನು ಹೀರಿದ ಕಾಂಗ್ರೆಸ್ ಪಕ್ಷ, ಅಳಿದುಳಿದ ಒಣ ದಂಟನ್ನು ಅಸ್ಪೃಶ್ಯರ ಮುಖದ ಮೇಲೆ ರಾಚಿ ಎಸೆದಿದೆ.
- ಪ್ರಾಥಮಿಕ ಚುನಾವಣೆಗಳಲ್ಲಿ ಅಸ್ಪೃಶ್ಯರು ತಿರಸ್ಕರಿಸಿದ್ದ ಅದೇ ಹುರಿಯಾಳುಗಳನ್ನು ಅಂತಿಮ ಚುನಾವಣೆಗಳಲ್ಲಿ ಸವರ್ಣೀಯ ಹಿಂದೂಗಳ ಮತಗಳಿಂದ ಗೆಲ್ಲಿಸಿ ತರುವ ಮೂಲಕ ಅಸ್ಪೃಶ್ಯರ ಮತಾಧಿಕಾರವನ್ನು ಅಳಿಸಿ ಹಾಕಿದೆ ಕಾಂಗ್ರೆಸ್ ಪಕ್ಷ.
- ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುವ ಅಸ್ಪೃಶ್ಯನನ್ನು ಅಸ್ಪೃಶ್ಯರ ಪ್ರತಿನಿಧಿಯೆಂದು ನಾಮಕರಣ ಮಾಡುವ ಅಧಿಕಾರವನ್ನು ಹಿಂದೂಗಳ ಕೈಗೆ ಇರಿಸಿರುವ ಒಪ್ಪಂದವೇ ಪೂನಾ ಒಪ್ಪಂದ.
ಈ ಪರಿಸ್ಥಿತಿ ಬದಲಾಗಿದೆ ಎಂದು ಎದೆ ತಟ್ಟಿ ಹೇಳುವವರು ಯಾರಾದರೂ ಇದ್ದಾರಾ? ಪೂನಾ ಒಪ್ಪಂದ ಜಾರಿಯಾಗಿ 90 ವರ್ಷಗಳು ಉರುಳಿವೆ. ಮುಖ್ಯಧಾರೆಯ ರಾಜಕೀಯ ಪಕ್ಷಗಳು ದಲಿತರನ್ನು ಮತ್ತು ಅವರನ್ನು ನಡೆಸಿಕೊಳ್ಳುವ ವೈಖರಿ ಅಚ್ಚ ಬಾಬಾಸಾಹೇಬರು ಹೇಳಿದ್ದಂತೆಯೇ ಮುಂದುವರೆದಿದೆ. ಇಲ್ಲಿಯ ತನಕ ಬದಲಾಗದ್ದು ಮುಂದೆಂದಾದರೂ ಬದಲಾದೀತೆಂದು ನಂಬುವುದಾದರೂ ಹೇಗೆ? ಇನ್ನಷ್ಟು ಹದಗೆಡಬಹುದೆಂದು ಧಾರಾಳವಾಗಿ ಹೇಳಬಹುದು.
ದಲಿತ ಜನಪ್ರತಿನಿಧಿಗಳದು ಹಳ್ಳಿಯಿಂದ ದಿಲ್ಲಿಯವರೆಗೆ ಒಂದೇ ದುಸ್ಥಿತಿ. ಬಾಬಾಸಾಹೇಬರು ಬಣ್ಣಿಸಿದ್ದಕ್ಕಿಂತ ಕೆಟ್ಟ ಸ್ಥಿತಿ. ಕೆಲವು ದಲಿತ ನಾಯಕರು ಕಣ್ಣು ಕುಕ್ಕುವಂತೆ ಕಂಡಾರು. ಆದರೆ ಅವರು ಕೂಡ ದಲಿತ ಪ್ರಾತಿನಿಧ್ಯವನ್ನು ತಮ್ಮ ಸ್ವಂತ ಒಳಿತಿಗಾಗಿ ಒತ್ತೆಯಿಟ್ಟವರೇ. ಸವರ್ಣೀಯರು ಹಾಕಿದ ಮೂಗುದಾರ ತೊಟ್ಟು ತಲೆಯಾಡಿಸಿದವರೇ.
ಪೂನಾ ಒಡಂಬಡಿಕೆ ಇವರನ್ನು ರಾಜಕೀಯ ಪಕ್ಷಗಳ ಶಾಶ್ವತ ಗುಲಾಮಗಿರಿಗೆ ನೂಕಿದೆ. ಮೀಸಲು ಮತಕ್ಷೇತ್ರಗಳೇ ಇರಬಹುದು. ಆದರೆ ಅಲ್ಲಿಂದ ಆಯ್ಕೆ ಆಗಬೇಕಿದ್ದರೆ ಮೇಲ್ಜಾತಿಗಳೆನ್ನುವವರ ಮತಗಳು ಬೇಕೇ ಬೇಕು. ಅವರ ಕೈಕಾಲು ಹಿಡಿಯಬೇಕು. ಅವರ ಬೇಕು ಬೇಡಗಳ ಲೆಕ್ಕವಿಡಲೇಬೇಕು. ಮೇಲ್ಜಾತಿಗಳೆನ್ನುವವರನ್ನು ಖುಷಿ ಮಾಡುವವರು ದಲಿತರ ಹಿತ ಕಾಯುವುದು ಹೇಗೆ ಸಾಧ್ಯ?
ರಾಜ್ಯ ಸಚಿವ ಸಂಪುಟಗಳಲ್ಲಿ ಪ್ರಮುಖ ಖಾತೆಗಳನ್ನು ನಿರ್ವಹಿಸಿ ಕೇಂದ್ರದಲ್ಲೂ ಮಂತ್ರಿಯಾಗಿದ್ದವರೊಬ್ಬರು ಮೀಸಲು ಕ್ಷೇತ್ರಗಳಿಂದ ಹಲವಾರು ಸಲ ಆರಿಸಿ ಬಂದಿದ್ದಾರೆ. ಆದರೆ ಮೇಲ್ಜಾತಿಗಳು ಎನ್ನಲಾಗುವವರ ಮತ ಯಾಚನೆಗೆ ಹೋದಾಗ ಇವರನ್ನು ಮನೆಯೊಳಗೆ, ಮಠದೊಳಗೆ, ಗುಡಿಯೊಳಗೆ ಬರುವಂತೆ ತುಟಿಯ ಮೇಲಿನ ಉಪಚಾರಕ್ಕಾದರೂ ಕರೆಯಲಾಗುತ್ತದೆ. ಆದರೆ ಇವರು ಅಂಗಳದಿಂದ ಮುಂದೆ ಹೋಗಿ ಜಗುಲಿ ಕಟ್ಟೆಯ ಮೇಲೂ ಕುಳಿತುಕೊಳ್ಳುವುದಿಲ್ಲ. ಮಂದಿರ ಮಠಗಳ ಒಳಗೆ ಕರೆದರೆ ಪರವಾಗಿಲ್ಲವೆಂದು ಹೊರಬಾಗಿಲಲ್ಲೇ ಉಳಿದು ಕುಳಿತಾರು. ಅವರು ಕರೆಯುತ್ತಾರೆಂದು ಒಳಗ ಹೋಗಾಕ ಬರತೇತೇನೋ ಅಣ್ಣಾ…ಹೋದರೆ ಏಟು ಸೊಕ್ಕಲೇ ಈ ಹೊಲೆಮಾದಿಗನಿಗೆ, ಕರೀತಾರಂತ ಬಂದೇ ಬಿಡತಾನಲ ಎಂದು ಒಳಗೊಳಗೇ ಹಲ್ಲು ಮಸೆದು ಸೋಲಿಸುವುದು ಕಾಯಂ ಎನ್ನುತ್ತಾರೆ ಈತ.
ಕರ್ನಾಟಕದ ಬಲಿಷ್ಠ ಜಾತಿಯೊಂದರ ಕಾಂಗ್ರೆಸ್ ನಾಯಕರ ನಿಯೋಗ ದೆಹಲಿಗೆ ಬಂದಿತ್ತು. ಸೋನಿಯಾಗಾಂಧೀ ಮತ್ತು ಇತರೆ ನಾಯಕರನ್ನು ಕಂಡಿತು. ಬೇಡಿಕೆಗಳ ಪಟ್ಟಿಯನ್ನೂ ಸಲ್ಲಿಸಿತು. ಒಂದು ಪ್ರಮುಖ ಬೇಡಿಕೆ ಹೀಗಿತ್ತು- ಮೇಲ್ಜಾತಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹೋಗಬಲ್ಲ ಸೌಮ್ಯ ಸ್ವಭಾವದ ಅಭ್ಯರ್ಥಿಗಳನ್ನೇ ಮೀಸಲು ಕ್ಷೇತ್ರಗಳಿಗೆ ಆರಿಸಬೇಕು. ಮೇಲ್ಜಾತಿಗಳೊಂದಿಗೆ ಕಾಲು ಕೆರೆದು ಜಗಳಕ್ಕೆ ಬರುವವರನ್ನು ಪ್ರೋತ್ಸಾಹಿಸಕೂಡದು. ಸ್ಪೃಶ್ಯ ಪರಿಶಿಷ್ಟರನ್ನು ಆರಿಸಿದರೆ ಇನ್ನೂ ಉತ್ತಮ.
ಕಾಂಗ್ರೆಸ್ ಪಕ್ಷದ ಬಲಿಷ್ಠ ಜಾತಿಗಳ ನಾಯಕರು ಇಂತಹ ಬೇಡಿಕೆಯನ್ನು ಇಡುತ್ತಿದ್ದರು. ಆದರೆ ಮತ್ತೊಂದು ಮುಖ್ಯ ಪಕ್ಷದ ನಾಯಕರು ಇದನ್ನು ಬಹಳ ಕಾಲದಿಂದ ಪಾಲಿಸುತ್ತ ಬಂದಿದ್ದಾರೆ. ಸಾಧ್ಯವಿದ್ದಲ್ಲೆಲ್ಲ ಸ್ಪೃಶ್ಯ ಪರಿಶಿಷ್ಟರಿಗೆ ಮಣೆ ಹಾಕುತ್ತಿದ್ದಾರೆ.
ಹಳೆಯ ಕಾಂಗ್ರೆಸ್ಸಿನ ಸ್ಥಾನದಲ್ಲಿ ಬಿಜೆಪಿ ಕುಳಿತಿದೆ. ತಾನೇ ದಲಿತರ ಹಿತರಕ್ಷಕ ಎಂದು ಕಾಂಗ್ರೆಸ್ ಹೇಳಿಕೊಂಡು ಬಂದಿದ್ದ ಮಾತನ್ನು ಇಂದು ಬಿಜೆಪಿ ಹೇಳತೊಡಗಿದೆ. ಅತಿ ಹೆಚ್ಚಿನ ಸಂಖ್ಯೆಯ ದಲಿತ ಶಾಸಕರು- ದಲಿತ ಲೋಕಸಭಾ ಸದಸ್ಯರು ಆರಿಸಿ ಬರುತ್ತಿರುವುದು ಭಾರತೀಯ ಜನತಾಪಕ್ಷದಿಂದಲೇ ಎಂದು ಬೀಗುತ್ತಿದೆ.
ಅಸ್ಪೃಶ್ಯ ಸಮುದಾಯಗಳ ಚುನಾಯಿತ ಪ್ರತಿನಿಧಿಗಳನ್ನು ಗುಲಾಮರನ್ನಾಗಿ ಮಾಡಿದರೆಂದು ಗಾಂಧೀಜಿಯನ್ನು ದೂರಿದ್ದಾರೆ. ಅಸ್ಪೃಶ್ಯ ಸಮುದಾಯಗಳ ಮತದಾರರನ್ನು ಮಾತ್ರವೇ ಹೊಂದಿರುವ ಪ್ರತ್ಯೇಕ ಮತಕ್ಷೇತ್ರಗಳ ಮೂಲ ಅಂಶಕ್ಕೆ ಮರಳುವುದೇ ಈ ಗುಲಾಮಗಿರಿಗೆ ಏಕೈಕ ಪರಿಹಾರ ಎಂದು ಬಾಬಾಸಾಹೇಬರು ಖಡಾ ಖಂಡಿತವಾಗಿ ಸಾರಿದ್ದಾರೆ.
ಪ್ರತ್ಯೇಕ ಮತಕ್ಷೇತ್ರಗಳ ವ್ಯವಸ್ಥೆ 25 ವರ್ಷಗಳ ಕಾಲ ಇರಬೇಕು. ಆನಂತರ ಈ ಏರ್ಪಾಡನ್ನು ಮುಂದುವರೆಸುವುದು ಅಥವಾ ಕೈಬಿಡುವ ಕುರಿತ ಯಾವುದೇ ತೀರ್ಮಾನಕ್ಕೆ ಸಂಸತ್ತಿನ ಮೂರನೆಯ ಎರಡರಷ್ಟು ಸದಸ್ಯರು ಮತ್ತು ಮೂರನೆಯ ಎರಡರಷ್ಟು ಪರಿಶಿಷ್ಟ ಜಾತಿಗಳ ಸದಸ್ಯರ ಅನುಮೋದನೆ ಅತ್ಯಗತ್ಯ. ಪರಿಶಿಷ್ಟ ಜಾತಿಗಳ ಈ ಎಲ್ಲ ಸದಸ್ಯರು ಪ್ರತ್ಯೇಕ ಮತಕ್ಷೇತ್ರಗಳಿಂದಲೇ ಆರಿಸಿ ಬಂದವರಾಗಿರಬೇಕು.

ಸಂವಿಧಾನ ರಚನಾ ಸಭೆ ಅಥವಾ Constituent Assemblyಯಲ್ಲಿ ಪ್ರತ್ಯೇಕ ಮತ ಕ್ಷೇತ್ರದ ಪರಿಕಲ್ಪನೆಗೆ ಅಡ್ಡಗಲ್ಲಾದವರು ಸರ್ದಾರ್ ಪಟೇಲ್ ಎಂದು ರಾಜಶೇಖರ ವುಂಡ್ರು ಬಣ್ಣಿಸುತ್ತಾರೆ.
ಭಾರತದ ವಿಭಜನೆ ಮತ್ತು ಗಾಂಧೀ ಹತ್ಯೆಯ ನಂತರ 1948ರ ಡಿಸೆಂಬರಿನಲ್ಲಿ ರಾಜಕೀಯ ಪ್ರಾತಿನಿಧ್ಯಕ್ಕೆ ಸಂಬಂಧಿಸಿದ ಎಲ್ಲ ಮೀಸಲಾತಿ ಸೀಟುಗಳನ್ನು ರದ್ದು ಮಾಡುವ ಪ್ರಸ್ತಾಪವನ್ನು ಮಂಡಿಸಿದರು. ಈ ಕ್ರಮವನ್ನು ಬಾಬಾಸಾಹೇಬರು ವಿರೋಧಿಸಿದರು ಮತ್ತು ಸಂವಿಧಾನ ರಚನಾ ಸಭೆಯನ್ನು ತ್ಯಜಿಸುವುದಾಗಿ ಬೆದರಿಕೆ ಹಾಕಿದರು. ಈ ಬಿಕ್ಕಟ್ಟಿನ ಸ್ಥಿತಿ ಆರು ತಿಂಗಳ ಕಾಲ ಮುಂದುವರೆಯಿತು. ಪರಿಶಿಷ್ಟ ಜಾತಿಗಳಿಗೆ ಮೀಸಲು ಸೀಟುಗಳ ವ್ಯವಸ್ಥೆಯನ್ನು ಕಡೆಗೂ 1949ರ ಮೇ ತಿಂಗಳಿನಲ್ಲಿ ಒಪ್ಪಬೇಕಾಯಿತು ಸರ್ದಾರ್ ಪಟೇಲ್. ಆದರೆ ಅದಕ್ಕೊಂದು ಷರತ್ತನ್ನು ಹಾಕಲಾಯಿತು. ಈ ಮೀಸಲಾತಿಯು ಹತ್ತು ವರ್ಷಗಳ ಕಾಲ ಜಾರಿಯಲ್ಲಿರುತ್ತದೆ, ಈ ಅವಧಿಯ ಕೊನೆಯಲ್ಲಿ ಮೀಸಲಾತಿ ಮುಂದುವರಿಕೆಯನ್ನು ಮರುಪರಿಗಣಿಸಲಾಗುವುದು ಎಂಬುದೇ ಈ ಷರತ್ತಿನ ಸಾರಾಂಶ.
1949ರ ಮೇ 25ರಂದು ಸಂವಿಧಾನ ರಚನಾ ಸಭೆಯಲ್ಲಿ ಪಟೇಲ್ ಮಂಡಿಸಿದ ಈ ಪ್ರಸ್ತಾವದಲ್ಲಿ ಪರಿಶಿಷ್ಟರ ವಿನಾ ಉಳಿದೆಲ್ಲ ಅಲ್ಪಸಂಖ್ಯಾತರ ಮೀಸಲಾತಿಯನ್ನು ರದ್ದು ಮಾಡಲಾಗಿತ್ತು. ಮರುದಿನ ಪ್ರಸ್ತಾವವನ್ನು ಅಂಗೀಕರಿಸಿದಾಗ ಬಾಬಾಸಾಹೇಬರು ಗೈರುಹಾಜರಾಗಿದ್ದರು. ಹತ್ತು ವರ್ಷಗಳ ನಿಬಂಧನೆಗೆ ಬಾಬಾಸಾಹೇಬರ ಸಮ್ಮತಿ ಇರಲಿಲ್ಲ. ಅಸ್ಪೃಶ್ಯರಿಗೆ ಪ್ರತ್ಯೇಕ್ಷ ಮತಕ್ಷೇತ್ರಗಳ ಮೀಸಲು ವ್ಯವಸ್ಥೆ ಮತ್ತು ಪರಸ್ಪರ ಸಮ್ಮತಿಯ ಮೇರೆಗೆ ಮಾತ್ರವೇ ಈ ವ್ಯವಸ್ಥೆಯ ವಿಸ್ತರಣೆ ಅಥವಾ ರದ್ದತಿ ಜರುಗಬೇಕು ಎಂಬ ವಾದ ಅವರ ಸಾವಿನ ತನಕವೂ ಬಾಬಾಸಾಹೇಬರ ಹೃದಯಕ್ಕೆ ಹತ್ತಿರವಾಗಿ ಉಳಿದಿತ್ತು. States and Minorities ಕೃತಿಯಲ್ಲಿ ಈ ಅಂಶ ನಿಚ್ಚಳವಾಗಿ ದಾಖಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾತಿಯನ್ನು 2019ರ ಡಿಸೆಂಬರಿನಲ್ಲಿ ಸಂಸತ್ತು ಸರ್ವಾನುಮತದಿಂದ ಇನ್ನೂ ಹತ್ತು ವರ್ಷಗಳ ಕಾಲ ಅಂದರೆ 2030ರ ತನಕ ವಿಸ್ತರಿಸುತ್ತದೆ.
ಇದನ್ನೂ ಓದಿ ಭಾರತೀಯ ಇತಿಹಾಸ ಶುರುವಾಗುವುದೇ ಬುದ್ಧನಿಂದ- ಡಾ ಮೂಡ್ನಾಕೂಡು ಚಿನ್ನಸ್ವಾಮಿ

ಡಿ ಉಮಾಪತಿ
ಹಿರಿಯ ಪತ್ರಕರ್ತರು