ಶಬರಿಮಲೆ ದೇವಸ್ಥಾನದಲ್ಲಿ ಮಹಿಳೆಯರಿಗೆ ನಿರ್ಬಂಧ ಹೇರಿರುವುದು ತಾರತಮ್ಯ ಮತ್ತು ಅಸ್ಪೃಶ್ಯತೆ ಎಂದೇ ಪರಿಗಣಿಸಬೇಕು. ಋತುಚಕ್ರದ ಕಾರಣಕ್ಕೆ ತಾರತಮ್ಯ ಮಾಡುವುದು ಸಂವಿಧಾನದ ವಿಧಿ 14, 15(1), 19(1), 21 ಮತ್ತು 25(1)ರ ಉಲ್ಲಂಘನೆಯಾಗಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು.
ತಮಿಳುನಾಡಿನ ಹಳ್ಳಿಯೊಂದರಲ್ಲಿ 8ನೇ ತರಗತಿಯ ದಲಿತ ವಿದ್ಯಾರ್ಥಿನಿ ಮುಟ್ಟಾದ ಕಾರಣಕ್ಕೆ ಆಕೆಯನ್ನು ಶಾಲೆಯ ಹೊರಗೆ ಕೂರಿಸಿ ಪರೀಕ್ಷೆ ಬರೆಸಿರುವ ಘಟನೆ ವರದಿಯಾಗಿದೆ. ನಂತರ, ಶಾಲೆ ಆಡಳಿತಾಧಿಕಾರಿಗಳ ಮೇಲೆ ಎಸ್‍ಸಿ/ಎಸ್‍ಟಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗಿದೆ. ಪ್ರಾಂಶುಪಾಲೆ ಅಮಾನತಿನಲ್ಲೂ ಇದ್ದಾರೆ.
ಆದರೆ, ಇದು ತಮಿಳುನಾಡಿನ ಹಳ್ಳಿಯೊಂದಕ್ಕೆ ಸೀಮಿತವಾದ ವಿಚಾರವೇ? ಖಂಡಿತಾ ಅಲ್ಲ. ನಮ್ಮ ದೇಶದುದ್ದಕ್ಕೂ ಎಲ್ಲೆಡೆ ಪಾಲಿಸುತ್ತಾ ಪೋಷಿಸಿಕೊಂಡು ಬಂದಿರುವಂತಹ ಒಂದು ಅನಿಷ್ಟ ಪದ್ಧತಿ ಇದು. ಋತುಚಕ್ರವನ್ನು ಅಪವಿತ್ರವೆಂದು ನೋಡುವ ಸಾಮಾಜಿಕ ದೃಷ್ಟಿಕೋನಕ್ಕೆ ಜನಮನ್ನಣೆ ಇದೆ. ಮುಟ್ಟಾದರೆ ಆಕೆ ಅಡುಗೆ ಮಾಡುವಂತಿಲ್ಲ; ಮನೆಯ ಕೋಣೆಯೊಳಗೆ ಸೀಮಿತವಾಗಿರಬೇಕು. ಋತುಮತಿಯಾದ ಹೆಣ್ಣುಮಗಳನ್ನು ಅಪವಿತ್ರಳೆಂದೇ ನೋಡಲಾಗುತ್ತದೆ.
ಋತುಚಕ್ರವನ್ನು ಅಪವಿತ್ರವೆಂದು ನಂಬಿಸುವ ಸಂಪ್ರದಾಯವೊಂದು ಕೇರಳದ ಶಬರಿಮಲೆಯಲ್ಲಿದೆ. ಶಬರಿಮಲೆಯ ಅಯ್ಯಪ್ಪನ ದೇವಸ್ಥಾನಕ್ಕೆ 10ರಿಂದ 50 ವರ್ಷದ ಹೆಣ್ಣುಮಕ್ಕಳಿಗೆ ನಿಷೇಧವಿದೆ. ಮುಟ್ಟಾದವರು ಅಸ್ಪೃಶ್ಯರು ಅಥವಾ ದೇವರನ್ನು ಭೇಟಿ ಮಾಡಲು ಅರ್ಹರಲ್ಲ ಎನ್ನುವ ಪುರುಷ ಪ್ರಧಾನ ವ್ಯವಸ್ಥೆ ರೂಪಿಸಿರುವ ಧೋರಣೆಯೇ ಅದಕ್ಕೆ ಮೂಲ. ಇದನ್ನು ದೇವಸ್ಥಾನದ ನಿಯಮದಲ್ಲೇ ನೀಡಲಾಗಿದೆ. ಶಿಕ್ಷಣ ಮತ್ತು ಸಾಮಾಜಿಕ ಕ್ರಾಂತಿಯಲ್ಲಿ ಮುಂಚೂಣಿಯಲ್ಲಿರುವ ಕೇರಳದಲ್ಲಿ ಈಗಲೂ ಈ ಪದ್ಧತಿ ಚಾಲ್ತಿಯಲ್ಲಿದೆ ಎಂದರೆ ನಂಬಲಸಾಧ್ಯ. ಆದರೆ ವಾಸ್ತವ. ಇದನ್ನು ಪ್ರಶ್ನೆ ಮಾಡಿ ನಾಲ್ಕೈದು ಮಹಿಳೆಯರು ಸುಪ್ರೀಂ ಕೋರ್ಟ್‍ನ ಕದ ತಟ್ಟಿದ್ದನ್ನು ನೀವು ಸ್ಮರಿಸಬಹುದು. ಅವರ ಅರ್ಜಿಯ ಮೇಲೆ ಸುಪ್ರೀಂ ಕೋರ್ಟ್ 2018ರಲ್ಲಿ ಕೊಟ್ಟ ಐತಿಹಾಸಿಕ ತೀರ್ಪು ಕೇರಳದಲ್ಲಿ ವಿವಾದವನ್ನೇ ಸೃಷ್ಟಿಸಿತು. ಸಮಾನತೆ ಮತ್ತು ಆರಾಧನಾ ಸ್ವಾತಂತ್ರ್ಯ ಪ್ರತಿಯೊಬ್ಬ ಭಾರತೀಯ ಪ್ರಜೆಯ ಹಕ್ಕು. ಅಲ್ಲಿ ಗಂಡು-ಹೆಣ್ಣು ಭೇದ ಇಲ್ಲ. ನಮ್ಮ ಸಂವಿಧಾನವು ಎಲ್ಲರಿಗೂ ಆರಾಧನಾ ಸ್ವಾತಂತ್ರ್ಯವನ್ನು ಕಲ್ಪಿಸಿಕೊಟ್ಟಿದೆ. ಅದಲ್ಲದೆ, ಋತುಚಕ್ರ ಎನ್ನುವುದು ಜೀವಕಳೆಯ ಲಕ್ಷಣ. ಅದನ್ನು ಋಣಾತ್ಮಕವಾಗಿ ನೋಡುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾದದ್ದು. ಶಬರಿಮಲೆ ದೇವಸ್ಥಾನದಲ್ಲಿ ಮಹಿಳೆಯರಿಗೆ ನಿರ್ಬಂಧ ಹೇರಿರುವುದು ತಾರತಮ್ಯ ಮತ್ತು ಅಸ್ಪೃಶ್ಯತೆ ಎಂದೇ ಪರಿಗಣಿಸಬೇಕು. ಋತುಚಕ್ರದ ಕಾರಣಕ್ಕೆ ತಾರತಮ್ಯ ಮಾಡುವುದು ಸಂವಿಧಾನದ ವಿಧಿ 14, 15(1), 19(1), 21 ಮತ್ತು 25(1)ರ ಉಲ್ಲಂಘನೆಯಾಗಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು.
ಈ ತೀರ್ಪು ಹೊರಬಿದ್ದ ಕೂಡಲೇ ಕೆಲವು ಮಹಿಳೆಯರು ಶಬರಿಮಲೆ ದೇವಸ್ಥಾನಕ್ಕೆ ತೆರಳಲು ತಯಾರಿ ನಡೆಸಿದರು. ಅದು ದೊಡ್ಡ ವಿವಾದಕ್ಕೆ ತಿರುಗಿತ್ತು. ಕೇರಳ ರಾಜ್ಯದಲ್ಲಿ ಕನಿಷ್ಠ ಪಕ್ಷವಾಗಿ ಉಳಿದಿರುವ ಬಿಜೆಪಿ ಈ ಸನ್ನಿವೇಶದ ಲಾಭ ಪಡೆಯಲು ಅಯ್ಯಪ್ಪ ಭಕ್ತಾದಿಗಳ ಸಂಘಗಳನ್ನು ಮಾಡಿ ಬೀದಿಗಿಳಿದು ಹೋರಾಟವನ್ನು ಪ್ರಾರಂಭಿಸಿದರು. ಪಿಣರಾಯಿ ವಿಜಯನ್ ನೇತೃತ್ವದ ಎಡರಂಗ ಸರ್ಕಾರಕ್ಕೆ ಇದು ದೊಡ್ಡ ತಲೆನೋವಾಗಿ ಪರಿಣಮಿಸಿತು. ಮಹಿಳೆಯರು ಗರ್ಭಗುಡಿ ಪ್ರವೇಶಿಸಿದರೆ, ಶಬರಿಮಲೆ ಪೂರ್ತಿ ಅಶುದ್ಧವಾಗುತ್ತದೆ ಎಂಬಂತೆ ಬಿಜೆಪಿಯ ಮಿತ್ರ ಸಂಘಟನೆಗಳು ಪ್ರಚಾರ ಮಾಡಿದವು. ಹೋರಾಟವು ಕೆಲವು ಕಾಲ ಮುಂದುವರೆಯಿತು. ಕೊನೆಗೂ ಮಹಿಳೆಯರು ಶಬರಿಮಲೆ ದೇವಸ್ಥಾನಕ್ಕೆ ಪ್ರವೇಶಿಸದಂತೆ ತಡೆಯುವುದರಲ್ಲಿ ಭಕ್ತರು ಯಶಸ್ವಿಯಾದರು. ಸುಪ್ರೀಂ ಕೋರ್ಟ್ ನೀಡಿದ ಸಾಮಾಜಿಕ ನ್ಯಾಯವು ನೀರುಪಾಲಾಯಿತು.
ಋತುಚಕ್ರವನ್ನು ಎಷ್ಟು ಕೀಳು ಮಟ್ಟದಲ್ಲಿ ಸಮಾಜವು ಪರಿಗಣಿಸಿದೆ ಎನ್ನುವುದಕ್ಕೆ ಮೇಲಿನ ಘಟನೆ ಉತ್ತಮ ನಿದರ್ಶನ. ದೇಶದ ಅತ್ಯುನ್ನತ ನ್ಯಾಯಪೀಠವೇ ಜೊತೆ ನಿಂತರೂ ಕೇರಳದಂತಹ ರಾಜ್ಯದ ಜನಸಮುದಾಯವೇ ಅದನ್ನು ಜಾರಿ ಮಾಡಲು ಬಿಡಲಿಲ್ಲ.
ಋತುಚಕ್ರಕ್ಕೂ ಅಪವಿತ್ರತೆಗೂ ನಂಟು ಕಲ್ಪಿಸಿ ಅದನ್ನು ನೂರಾರು ವರ್ಷಗಳಿಂದ ಆಳವಾಗಿ ನಂಬಿರುವ ಸಮಾಜದಲ್ಲಿ ಸಾಂವಿಧಾನಿಕ ಹಕ್ಕುಗಳನ್ನು ಜಾರಿ ಮಾಡಲು ಹೇಗೆ ಸಾಧ್ಯ? ತಮಿಳುನಾಡಿನ ಹಳ್ಳಿಯಾಗಲಿ ಕರ್ನಾಟಕದ ಹಳ್ಳಿಯಾಗಲಿ, ಎಲ್ಲೆಡೆ ಮಹಿಳೆಯರ ಬಗೆಗಿನ ಮಿಥ್ಯಾಧೋರಣೆಗಳು ಸಮಾನವಾಗಿವೆ. ಋತುಮತಿಯಾದವಳು ಪವಿತ್ರಳಲ್ಲ ಎನ್ನುವ ಕಾರಣಕ್ಕೆ ಆಕೆಯನ್ನು ಆಚೆ ಕೂರಿಸುತ್ತಾರೆ. ಇಂತವು ಕೆಲವು ಕಡೆ ನಮ್ಮ ಕಣ್ಣಿಗೆ ಕಾಣಸಿಗುತ್ತವೆ. ಮನೆಯೊಳಗೆ ಕತ್ತಲೆ ಕೋಣೆಯಲ್ಲಿ ಅದೆಷ್ಟೋ ಮಹಿಳೆಯರು ದನಿಯಿಲ್ಲದೆ ಈ ತಾರತಮ್ಯವನ್ನು ನಿರಂತರ ಅನುಭವಿಸುತ್ತಾ ತಮ್ಮ ಒಳನೋವನ್ನು ನುಂಗಿ ಬದುಕು ಸಾಗಿಸುತ್ತಿದ್ದಾರೆ. ಇವರ ಬಳಿ ಸಂವಿಧಾನವು ತಲುಪುವುದು ಯಾವಾಗ?
ಇದನ್ನೂ ಓದಿ ಎಂಪುರಾನ್ | ಮುನ್ನಾ ಮತ್ತು ಜೂಡಾಸ್; ಮೋಸದ ನವ ವಿದ್ಯಮಾನಗಳು
ಈ ತಾರತಮ್ಯ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಜಾರಿಮಾಡುವುದರಲ್ಲಿ ಮಹಿಳೆಯರೇ ಮುಂದೆ ಇದ್ದಾರೆನ್ನುವುದು ಕಟುವಾಸ್ತವ. ಈ ತಾರತಮ್ಯವು ಅಪ್ಪಟ ಮಹಿಳಾ ಶೋಷಣೆ ಮತ್ತು ಕಾನೂನುಬಾಹಿರ ಅಲ್ಲದೆ ಸಂವಿಧಾನ ವಿರೋಧಿಯೂ ಕೂಡ ಎನ್ನುವ ವಾದವನ್ನು ನಾವು ಮುಂದಿಟ್ಟರೆ, ಪುರುಷ ಪ್ರಧಾನ ವ್ಯವಸ್ಥೆಯ ಮೂಲಗಳಾದ ಪರಂಪರೆ, ಜಾತಿ, ಧರ್ಮ, ನಂಬಿಕೆ, ಭಕ್ತಿ ಮತ್ತು ಭಯವನ್ನು ಮುಂಚೂಣಿಗೆ ತಂದು ನಮ್ಮನ್ನು ದುರ್ಬಲಗೊಳಸುವ ಚತುರತೆ ಅವರು ಪ್ರದರ್ಶಿಸುತ್ತಾರೆ. ಗೆಲ್ಲುವುದು ಅವರೇ, ಗೆಲ್ಲುತ್ತಿರೋರೂ ಅವರೇ. ಆದ್ದರಿಂದಲೇ ಈ ಸಮಾಜವು ಇನ್ನೂ ಮಹಿಳಾಪರವಾಗದೇ ಉಳಿದಿದೆ.
ತಮಿಳುನಾಡಿನ ಹಳ್ಳಿಯ ಶಾಲೆಯಲ್ಲಿ ದಲಿತ ಹೆಣ್ಣುಮಗುವನ್ನು ಹೊರಗೆ ಕೂರಿಸಿದ್ದು ಅಚ್ಚರಿಯೇನಲ್ಲ. ಈ ಸಮಾಜವು ಇನ್ನೂ ಉಳಿಸಿಕೊಂಡಿರುವ ನಿಕೃಷ್ಟ ಅಸಮಾನತೆಯ ನಿರಂತರ ಅಭಿವ್ಯಕ್ತಿಗಳಲ್ಲಿ ಇದೂ ಒಂದು.
ಇದನ್ನೂ ಓದಿ ವಿಷಮ ಭಾರತ | ಸರ್ಪಗಳತ್ತ ಕುಪ್ಪಳಿಸುತ್ತಿರುವ ದಲಿತ ಕಪ್ಪೆಗಳು; ಪ್ರತ್ಯೇಕ ಮತಕ್ಷೇತ್ರಗಳೇ ಪರಿಹಾರ?

ಬಾಬುರಾಜ್ ಪಲ್ಲದನ್
ಮೈಸೂರಿನಲ್ಲಿ ವಕೀಲರು ಮತ್ತು ಪೀಪಲ್ಸ್ ಲೀಗಲ್ ಫೋರಂನ ನಿರ್ದೇಶಕ