ಡೊನೇಷನ್ ಹಾವಳಿ ತಡೆಗಟ್ಟಲು ಹಾಗೂ ಸರ್ಕಾರದ ನಿಯಮಗಳನ್ನು ಉಲ್ಲಂಘನೆ ಮಾಡುವ ಖಾಸಗಿ ಶಿಕ್ಷಣ ಮೇಲೆ ಕ್ರಮ ತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳು ಮುಂದಾಗಬೇಕು ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಹಾವೇರಿ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಆಗ್ರಹಿಸಿದರು.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, “ರಾಜ್ಯದಲ್ಲಿ 2025-26ನೇ ಸಾಲಿನ ಖಾಸಗಿ ಶಾಲೆಗಳ ಪ್ರವೇಶವನ್ನು ಪ್ರಾರಂಭಿಸಿ ದಾಖಲಾತಿ ಪ್ರಾರಂಭ ಮಾಡಿರುವ ಬಹುತೇಕ ಖಾಸಗಿ ಶಾಲೆಗಳಲ್ಲಿ ಮನಬಂದಂತೆ ಡೊನೇಷನ್ ವಸೂಲಿ ಮಾಡಲು ಮುಂದಾಗಿವೆ. ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಸರ್ಕಾರದ ನಿಯಮ ಮೀರಿ ಹಣ ವಸೂಲಿಗೆ ಮುಂದಾದರೂ ರಾಜ್ಯದಲ್ಲಿನ ಶಿಕ್ಷಣ ಇಲಾಖೆಯ ಆಯುಕ್ತರು, ಅಪರ ಆಯುಕ್ತರು, ವಿವಿಧ ಜಿಲ್ಲೆಯ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಸರ್ಕಾರ ತಮಗೆ ಯಾವುದೇ ಸಂಬಂಧವಿಲ್ಲದಂತೆ ಕಣ್ಣು ಮುಚ್ಚಿ ಕುಳಿತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವಂತಹ ಸಮಿತಿಯು ಸಭೆ ಸೇರಿ ಖಾಸಗಿ ಶಾಲೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡದಿರುವ ಕಾರಣ 1983ರ ಶಿಕ್ಷಣ ಕಾಯ್ದೆ ಮತ್ತು 2009ರ ಆರ್.ಟಿ.ಇ ಕಾಯ್ದೆಯನ್ನು ಸಂಪೂರ್ಣವಾಗಿ ಉಲ್ಲಂಘನೆ ಮಾಡುವುದರ ಮೂಲಕ ಹಗಲು ದರೋಡೆ ಮಾಡಲು ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಮುಂದಾಗುತ್ತಿವೆ. ಒಂದೆಡೆ ರಾಜ್ಯಾದ್ಯಂತ ಅಣಬೆಗಳಂತೆ ಖಾಸಗಿ ಶಾಲೆಗಳು ತಲೆ ಎತ್ತುತ್ತಿವೆ, ಮತ್ತೊಂದೆಡೆ ರಾಜ್ಯದಲ್ಲಿ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುತ್ತಿವೆ. ಈಗಾಗಲೆ ಖಾಸಗಿ ಶಾಲೆಗಳಲ್ಲಿ ದಾಖಲಾತಿ ಹೆಸರಲ್ಲಿ ಡೊನೇಷನ್ ಹಣವನ್ನು ಮನಬಂದತೆ ವಸೂಲಿ ಮಾಡಲು ಮುಂದಾಗಿದ್ದಾರೆ. ಬಡ ಹಿಂದುಳಿದ, ದಲಿತ ಅಲ್ಪಸಂಖ್ಯಾತರ ಮಕ್ಕಳು ಖಾಸಗಿ ಶಾಲೆಗಳಲ್ಲಿ ಡೊನೇಷನ್ ಪಿಡುಗಿನಿಂದ ಶಾಲೆಗಳಲ್ಲಿ ಓದುವುದು ಅಸಾಧ್ಯವಾಗುತ್ತಿದೆ” ಕೂಡಲೇ ಇದಕ್ಕೆ ರಾಜ್ಯ ಸರ್ಕಾರ ಕಡಿವಾಣ ಹಾಕಬೇಕು” ಎಂದರು.
“ಶಿಕ್ಷಣ ಹಕ್ಕು ಕಾಯ್ದೆ-1983 ಮತ್ತು 2009ರ ಆರ್.ಟಿ.ಇ ಕಾಯ್ದೆ ಜಾರಿಯಾದರೂ ಸಮರ್ಪಕವಾಗಿ ಪಾಲನೆಯಾಗುತ್ತಿಲ್ಲ. ಬಹುತೇಕ ಖಾಸಗಿ ಶಾಲೆಗಳಲ್ಲಿ ಲಕ್ಷಾಂತರ ರೂಪಾಯಿಗಳವರೆಗೂ ಹಣ ವಸೂಲಿ ಮಾಡುವುದರ ಮೂಲಕ ಹಗಲು ದರೋಡೆ ಮಾಡುತ್ತಿದ್ದಾರೆ. ಹಾಗೂ ಆಕ್ರಮವಾಗಿ ಟ್ಯೂಷನ್, ಟ್ಯೂಟರಿಯಲ್ಸ್, ಆನದೀಕೃತವಾಗಿ CSC CBSC ಕೆಲವು ಪ್ರತಿಷ್ಟಿತ ಪಿ.ಯು.ಸಿ ಕಾಲೇಜುಗಳು JEE, NEET, CET ಹೆಸರಿನಲ್ಲಿ ಶಾಲಾ ಕಾಲೇಜುಗಳು ನಡೆಯುತ್ತಿವೆ” ಎಂದು ಹೇಳಿದರು.
ಇದನ್ನೂ ಓದಿ: ಹಾವೇರಿ | ಅಪರಿಚಿತ ವಾಹನ ಡಿಕ್ಕಿ ಬೈಕ್ ಸವಾರ ಸಾವು
ಶಾಲೆಗಳಲ್ಲಿ ಪ್ರವೇಶ ಪರೀಕ್ಷೆ ನಡೆಸುವುದರ ಜೊತೆಗೆ ನೋಟ್‌ಬುಕ್, ಶಾಲಾ ಬ್ಯಾಗ್, ಬೂಟು, ಬಟ್ಟೆ, ಜಾಮಿಟ್ರಿ ಬಾಕ್ಸ್ ಕಡ್ಡಾಯವಾಗಿ ಆಯಾ ಶಾಲೆಗಳಲ್ಲಿ ತೆಗೆದುಕೊಳ್ಳಬೇಕೆಂದು ಪಾಲಕರಿಗೆ ಹೇಳಿ ಹೆಚ್ಚಿನ ದರದಲ್ಲಿ ಕೊಟ್ಟು ಶಾಲೆಗಳನ್ನು ಅಂಗಡಿಯಾಗಿ ಮಾರ್ಪಟ್ಟು ಮಾಡಿದ ಶಾಲೆಗಳ ವಿರುದ್ಧ ಮಾನ್ಯತೆಯನ್ನು ರದ್ದು ಮಾಡಿ ಮತ್ತು ಬಹುತೇಕ ಶಾಲೆಗಳು ಇಲಾಖೆಯ ಆದೇಶವನ್ನು ಉಲ್ಲಂಘಿಸಿದ್ದು, ಅಂತಹ ಶಾಲೆಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಅನಧಿಕೃತ ಟ್ಯೂಷನ್ ಸೆಂಟರ್‌ಗಳನ್ನು ಮುಚ್ಚತಕ್ಕದ್ದು ಮತ್ತು ಈ ಕೂಡಲೇ ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರ ಸಭೆ ಸೇರಿಸಬೇಕೆಂದು ಎಸ್ಎಫ್ಐ ಜಿಲ್ಲಾ ಸಮಿತಿ ಕಾರ್ಯದರ್ಶಿ ದುರಗಪ್ಪ ಯಮ್ಮಿಯವರ ತಿಳಿಸಿದರು.
ಎಸ್‌ಎಫ್‌ಐ ಬೇಡಿಕೆಗಳು:
- ಡೊನೆಷನ್ ನಿಯಂತ್ರಣಕ್ಕೆ ‘ಜಿಲ್ಲಾ ಶಿಕ್ಷಣ ರೆಗ್ಯುಲೆಟಿಂಗ ಪ್ರಾಧಿಕಾರ’ ( ಡೊನೇಷನ್ ವಿರೋಧಿ ಸಮಿತಿ) ವನ್ನು ತಕ್ಷಣ ರಚಿಸಬೇಕು. ವಂತಿಗೆ ವಸೂಲಿಮಾಡುತ್ತಿರುವ ಶಿಕ್ಷಣ ಸಂಸ್ಥೆಗಳ ಮೇಲೆ. ಕ್ರಮಕೈಗೊಳ್ಳಬೇಕು.
- ಜಿಲ್ಲಾ ಮತ್ತು ತಾಲೂಕ ಮಟ್ಟದಲ್ಲಿ ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ ನೇತೃತ್ವದಲ್ಲಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಮತ್ತು ಶಿಕ್ಷಣ ಇಲಾಖೆಯ ಮುಖ್ಯಸ್ಥರು, ಪಾಲಕರು, ವಿದ್ಯಾರ್ಥಿ ಸಂಘಟನೆಯ ಪ್ರತಿನಿಧಿಗಳ ಜಂಟಿ ಸಭೆಯನ್ನು ಕರೆಯಬೇಕು.
- ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಿಯಂತ್ರಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿರುವ ಕೇಂದ್ರೀಯ ಶಾಸನ ಜಾರಿಗೆ ತರಬೇಕು.
- ಸರ್ಕಾರ ನಿಗದಿಗೊಳಿಸಿರುವ ಪ್ರವೇಶ ಶುಲ್ಕದ ವಿವರವನ್ನು ಮಾಧ್ಯಮಗಳ ಮೂಲಕ ಮತ್ತು ಚಿತ್ತಿ ಪತ್ರ. ಕರಪತ್ರಗಳ ಮೂಲಕ ಪ್ರಚಾರ ಪಡಿಸಬೇಕು.
- ಶಿಕ್ಷಣ ಸಂಸ್ಥೆಗಳು ಪ್ರತಿ ತಿಂಗಳಿಗೊಮ್ಮೆ ಪಾಲಕರ ಸಭೆ ಕರೆದು ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸುವಂತೆ ನಿರ್ದೇಶಿಸಬೇಕು.
- ಜಿಲ್ಲಾಧಿಕಾರಿಗಳು ಪ್ರಾಧಿಕಾರ ರಚನೆ ಕುರಿತು ಪಾಲಕರು ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು. ಶಿಕ್ಷಣ ಇಲಾಖೆಯ ಮುಖ್ಯಸ್ಥರು, ವಿದ್ಯಾರ್ಥಿ ಸಂಘಟನೆಯ ಪ್ರತಿನಿಧಿಗಳ ಜಂಟಿಸಭೆ ಕರೆಯಬೇಕು.