ಹೊಸ ಪುಸ್ತಕ | ʼಸತ್ಯೊಲು – ಶ್ರಮಿಕರ ಜನಪದ ಐತಿಹ್ಯʼ; ಸತ್ಯಕ್ಕೊಂದು ಮುನ್ನುಡಿ

Date:

Advertisements

ಪತ್ರಕರ್ತ, ಲೇಖಕ ನವೀನ್‌ ಸೂರಿಂಜೆ ಅವರ ಐದನೇ ಕೃತಿ ʼಸತ್ಯೊಲು – ಶ್ರಮಿಕರ ಜನಪದ ಐತಿಹ್ಯʼ ಏ.20 ರಂದು ಮಂಗಳೂರಿನಲ್ಲಿ ಬಿಡುಗಡೆಯಾಗಲಿದೆ. ಈ ಕೃತಿಗೆ ತುಳು ಹಾಗೂ ಕನ್ನಡ ಸಾಹಿತಿ, ಜಾನಪದ ಸಂಶೋಧಕ ಡಾ. ಗಣನಾಥ ಶೆಟ್ಟಿ ಎಕ್ಕಾರು ಬರೆದಿರುವ ಮುನ್ನುಡಿ

ನವೀನ್ ಸೂರಿಂಜೆಯವರು ನಾನು ಅತಿ ಗೌರವದಿಂದ ಕಾಣುವ ಪ್ರಗತಿಪರ ಚಿಂತಕ. ಕರಾವಳಿಯ ನಿಜವಾದ ಅಂತಃಸತ್ವವನ್ನು ಅರ್ಥಮಾಡಿಕೊಂಡು ಪ್ರತಿಕ್ರಿಯಿಸುವ ಅವರ ರೀತಿ ನನಗೆ ವೈಯಕ್ತಿಕವಾಗಿ ಅಚ್ಚು-ಮೆಚ್ಚು. ನೇರ, ನಿಷ್ಠುರ, ಅಧ್ಯಯನಶೀಲ ವ್ಯಕ್ತಿತ್ವ ಅವರದ್ದು. ಇದನ್ನು ಅವರ ಹೋರಾಟ ಮತ್ತು ಬರವಣಿಗೆಗಳಲ್ಲಿ ಗುರುತಿಸಬಹುದಾಗಿದೆ. ಅವರ ಈ ವ್ಯಕ್ತಿತ್ವದ ಪ್ರತಿಫಲನವನ್ನು ‘ಸತ್ಯೊಲು’ ಕೃತಿಯಲ್ಲೂ ಕಾಣಬಹುದು.

ತುಳುನಾಡಿನ ದೈವಾರಾಧನೆ ಒಂದು ಸಂಕೀರ್ಣ ಆಚರಣೆ. ಕಲೆ ಮತ್ತು ಆಚರಣೆಗಳು ಮೇಳೈಸಿದ ಒಂದು ವಿಶಿಷ್ಟ ಅಭಿವ್ಯಕ್ತಿ. ಅದು ಆರಾಧನೆಯೂ ಹೌದು. ರಂಗಭೂಮಿಯೂ ಹೌದು. ತುಳುನಾಡಿನ ಸಂಸ್ಕೃತಿಯನ್ನು ವ್ಯಾಖ್ಯಾನಿಸಲು ದೈವಾರಾಧನೆಯಷ್ಟು ಪರಿಪಕ್ವವಾಗಿರುವ ಆಚರಣೆ ಇನ್ನೊಂದಿಲ್ಲ. ಈ ಬಗ್ಗೆ ಕಳೆದ ಒಂದೂವರೆ ಶತಮಾನಗಳಿಂದ ಅಧ್ಯಯನ ನಡೆದಿದೆ. 1878ರಲ್ಲಿ ಅಗಸ್ಟ್ ಮೆನರ್ ಅವರ 21 ದೈವಗಳ ಪಾಡ್ದನಗಳನ್ನು ಮಂಗಳೂರಿನ ಬಾಸೆಲ್ ಮಿಷನ್ ಪ್ರಕಟಿಸಿದೆ. ಹೆಚ್ಚು ಕಡಿಮೆ ಅದೇ ಕಾಲದಲ್ಲಿ ಎ.ಸಿ. ಬರ್ನೆಲ್ ಅವರ ದಿ ಡೆವಿಲ್ ವರ್ಶಿಪ್ ಆಫ್ ತುಳುವಾಸ್ ಕೃತಿ ಪ್ರಕಟವಾಯಿತು. ಅಲ್ಲಿಂದ ಇದುವರೆಗೆ ಈ ಬಗ್ಗೆ ಹಲವಾರು ಗಂಭೀರವಾದ ಅಧ್ಯಯನಗಳು ನಡೆದಿವೆ.

ಹಿರಿಯ ವಿದ್ವಾಂಸರಾದ ಡಾ. ಕೆ. ಚಿನ್ನಪ್ಪಗೌಡರ ‘ಭೂತಾರಾಧನೆ-ಜಾನಪದೀಯ ಅಧ್ಯಯನ’ ಕೃತಿಯು ಬಹುಮುಖ್ಯವಾಗುತ್ತದೆ. ಸೂಕ್ಷ್ಮ ಮತ್ತು ಆಳವಾದ ಕ್ಷೇತ್ರಕಾರ್ಯದ ಮೂಲಕ ವಸ್ತುನಿಷ್ಠವಾಗಿ ಈ ಆರಾಧನೆಯನ್ನು ಗಂಭೀರವಾಗಿ ವಿಶ್ಲೇಷಿಸಿರುವ ಸಂಶೋಧನಾ ಕೃತಿ ಅದಾಗಿದೆ. ಬನ್ನಂಜೆ ಬಾಬು ಅಮೀನ್‌ರವರ ‘ದೈವಾರಾಧನೆ’, ಗಣೇಶ್ ಅಮೀನ್ ಸಂಕಮಾರ್‌ರ ‘ನುಡಿಸಿಂಗಾರ’ ಎ.ವಿ. ನಾವಡರ ‘ತುಳು ಪಾಡ್ದನದ ಬಂಧ ಮತ್ತು ವಿನ್ಯಾಸ’ ಮುಂತಾದ ಕೃತಿಗಳನ್ನು ಹೆಸರಿಸಬಹುದು. ಒಟ್ಟಿನಲ್ಲಿ ಈ ಆರಾಧನೆಯ ಹಿನ್ನೆಲೆ, ಸ್ವರೂಪ ಅರ್ಥ ಮತ್ತು ಕಾರ್ಯಗಳನ್ನು ವಿಶ್ಲೇಷಿಸುವ ಪ್ರಯತ್ನ ವಿದ್ವಾಂಸರಿAದ ನಡೆದಿದೆ. ಈಗ ನವೀನ್ ಸೂರಿಂಜೆಯವರದು ಅದಕ್ಕೊಂದು ‘ವಿಶಿಷ್ಟ ಸೇರ್ಪಡೆ’.

Advertisements

‘ವಿಶಿಷ್ಟ ಸೇರ್ಪಡೆ’ ಎಂಬ ಪದವನ್ನು ಉದ್ದೇಶಪೂರ್ವಕವಾಗಿಯೇ ಬಳಸಿದ್ದೇನೆ. ಮೇಲಿನ ಅಧ್ಯಯನಗಳಿಗಿಂತ ತುಸು ಭಿನ್ನವಾದ ಸಮಕಾಲೀನ ಎನಿಸುವ ವ್ಯಾಖ್ಯಾನವನ್ನು ನವೀನ್ ಸೂರಿಂಜೆಯವರು ನೀಡಿದ್ದಾರೆ. ಈ ದೃಷ್ಟಿಯಿಂದ ಈ ಪುಟ್ಟ ಕೃತಿಗೆ ಸಮಕಾಲೀನ ಐತಿಹಾಸಿಕ ಮಹತ್ವವಿದೆ. ಇಪ್ಪತ್ತನಾಲ್ಕು ಎಸಳುಗಳಲ್ಲಿ ದೈವಾರಾಧನೆಯನ್ನು ವಾಸ್ತವಿಕ ನೆಲೆಗಳಲ್ಲಿ ವಿಶ್ಲೇಷಿಸುವ ಕೃತಿಯಾಗಿದೆ. ಕೆಲವು ಲೇಖನಗಳು ವಿಸ್ತಾರವಾಗಿದ್ದರೆ ಇನ್ನು ಕೆಲವು ಸಂಕ್ಷಿಪ್ತವಾಗಿವೆ. ಈ ಆರಾಧನೆಗೆ ಹೊಸ ಅರ್ಥ ಮತ್ತು ವ್ಯಾಖ್ಯಾನವನ್ನು ನೀಡಿರುವುದು ಈ ಕೃತಿಯ ಹೆಚ್ಚುಗಾರಿಕೆ. ಗಂಭೀರವಾದ ಕ್ಷೇತ್ರಕಾರ್ಯ, ಆಳವಾದ ಅಧ್ಯಯನ ಮತ್ತು ಒಳನೋಟಗಳಿಂದ ರೂಪುಗೊಂಡ ಕೃತಿ ಇದಾಗಿದೆ.

ತುಳುನಾಡಿನ ಎಲ್ಲಾ ಹಬ್ಬ, ಆಚರಣೆಗಳಲ್ಲಿ ವೈದಿಕ ಪ್ರವೇಶ ಇತ್ತೀಚಿನ ದಶಕಗಳ ಹೊಸ ಬೆಳವಣಿಗೆ. ನನ್ನ ಬಾಲ್ಯದಲ್ಲಿ 50-60 ವರ್ಷಗಳ ಹಿಂದೆ ದೈವಗಳ ಆರಾಧನೆಗೆ ಬ್ರಾಹ್ಮಣ ಪುರೋಹಿತರಿಗೆ ಪ್ರವೇಶವಿರಲಿಲ್ಲ. ‘ಹಿಂದೆ ಯಕ್ಷಗಾನ ಅಥವಾ ದೈವಕೋಲ ನೋಡಿದರೆ ಬ್ರಾಹ್ಮಣರು ಸ್ನಾನ ಮಾಡಿ, ಅವರ ಮನೆಯೊಳಗೆ ಪ್ರವೇಶಮಾಡಬೇಕು ಎಂಬ ನಂಬಿಕೆ ಇತ್ತು’ ಎಂಬುದನ್ನು ಖ್ಯಾತ ಭಾಗವತರಾದ ದಿ. ಬಲಿಪ ನಾರಾಯಣ ಭಾಗವತರು ನನ್ನಲ್ಲಿ ಚರ್ಚೆಯ ಸಂದರ್ಭದಲ್ಲಿ ಹೇಳಿದ್ದಾರೆ. ತುಳುನಾಡಿನ ಯಕ್ಷಗಾನ ಮತ್ತು ದೈವಾರಾಧನೆ ಎರಡೂ ಕೂಡ ಇಲ್ಲಿನ ದಲಿತ ಮತ್ತು ಶೂದ್ರರ ಆಚರಣೆ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ. ಆದರೆ ಇಂದಿನ ವೈಜ್ಞಾನಿಕ ಯುಗದಲ್ಲಿ ಮೇಲ್ಜಾತಿಯ ವೈದಿಕರು ಇದನ್ನು ನಿಯಂತ್ರಿಸುತ್ತಿರುವುದು ಕಾಲದ ಕ್ರೂರ ವ್ಯಂಗ್ಯ. ನವೀನ್ ಸೂರಿಂಜೆ Naveen soorinje ಯವರು ತಮ್ಮ ಲೇಖನಗಳಲ್ಲಿ ಆಧಾರ ಸಹಿತ ಇದನ್ನು ಸ್ಪಷ್ಟಪಡಿಸುತ್ತಾರೆ. ನಿಜವಾದ ದೈವಾರಾಧಕ ದಲಿತ-ಶೂದ್ರರು ಈ ಸತ್ಯವನ್ನು ಅರ್ಥಮಾಡಿಕೊಂಡು, ಈ ಆಚರಣೆಯ ಅನನ್ಯತೆಯನ್ನು ಉಳಿಸಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಈ ಕೃತಿಯು ಬಹುಮುಖ್ಯವಾಗುತ್ತದೆ. ‘ನನ್ನ ಸ್ಥಾನ ಆಶುದ್ಧವಾಯಿತು ಎಂದು ನಿಮಗೆ ಅನಿಸಿದರೆ ನನ್ನ ಕುಟುಂಬವಾಗಿರುವ ನಿಮ್ಮ ಮನೆಯ ಬಾವಿಯಿಂದ ಒಂದು ಚೆಂಬು ನೀರು ತಂದು ಸಿಂಪಡಿಸಿದರೆ ನನ್ನ ಗುಡಿ ಶುದ್ಧವಾಗುತ್ತದೆ. ನನ್ನ ಗುಡಿಯೊಳಗೆ ಬ್ರಾಹ್ಮಣ ಪುರೋಹಿತ ಬಂದರೆ ಅವನಿಗೆ ಹುಚ್ಚು ಹಿಡಿಸುತ್ತೇನೆ’ ಎನ್ನುವ ದೈವದ ನುಡಿಯ ಉಲ್ಲೇಖ ಈ ಸತ್ಯವನ್ನು ಅನಾವರಣಗೊಳಿಸುತ್ತದೆ.

ತುಳುನಾಡಿನ ಧರ್ಮ ಮತ್ತು ಜಾತಿಗಳ ಸಾಮರಸ್ಯದಲ್ಲಿ ದೈವಾರಾಧನೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮುಸ್ಲಿಂ, ಕ್ರೈಸ್ತ, ಜೈನ ಹಾಗೂ ಇಲ್ಲಿನ ದಲಿತ ಹಿಂದುಳಿದ ವರ್ಗಗಳ ಸಾಮರಸ್ಯದ ಬದುಕಿಗೆ ದೈವಾರಾಧನೆಯ ಹಲವಾರು ಕಥೆಗಳು ಸಂಕೇತಗಳಾಗಿವೆ. ಕುಟ್ಟಿ ದೈವ-ಬೊಟ್ಟಕಲ್ಲು-ಸಾಯಿಬರ ಮಲೆಕುಡಿಯ ಶಿವ, ಅರಬ್ಬೀ ಮುಸ್ಲಿಂ, ಬ್ರಾಹ್ಮಣ ಕನ್ಯೆ ಮತ್ತು ಮಲರಾಯ, 14 ಜಾತಿ ಸಾವಿರ ಮಸೀದಿಯ ಅಣ್ಣ ತಮ್ಮ ದೈವ, ಮುತ್ತು ಶೆಟ್ಟಿ ಮತ್ತು ಮರುವ ಬ್ಯಾರಿಯ ಬೊಬ್ಬರ್ಯ, ಕಾಪು ಮಾರಿಗುಡಿ ಮತ್ತು ಮುಸ್ಲಿಮರು ಇತ್ಯಾದಿ ಲೇಖನಗಳನ್ನು ಗಮನಿಸಬಹುದು. ಹಲವಾರು ಶತಮಾನಗಳಿಂದ ಇಲ್ಲಿನ ದುಡಿಯುವ ವರ್ಗ ಮತ್ತು ಮುಸ್ಲಿಮರ ನಡುವೆ ವ್ಯಾವಹಾರಿಕ ಮತ್ತು ಸಾಮಾಜಿಕ ಸಂಬಂಧ ಇತ್ತು ಎಂಬುದನ್ನು ತುಳುನಾಡಿನ ಇತಿಹಾಸದ ಹಲವು ಘಟನೆಗಳು ಹೇಳುತ್ತವೆ. ಶಾಸನಗಳಲ್ಲೂ ಈ ಬಗ್ಗೆ ಉಲ್ಲೇಖಗಳಿವೆ. ದೈವಾರಾಧನೆ ಈ ಸಂಬಂಧಗಳನ್ನು ಗಟ್ಟಿಗೊಳಿಸಿದೆ ಎಂಬುವುದಕ್ಕೆ ಈ ಕೃತಿಯಲ್ಲಿ ಹಲವಾರು ಉದಾಹರಣೆಗಳಿವೆ.

ಆದರೆ ದೈವಾರಾಧನೆಗೆ ವೈದಿಕರ ಪ್ರವೇಶದ ಬಳಿಕ ಈ ಸಂಬಂಧಗಳಲ್ಲಿ ಬಿರುಕು ಮೂಡಿಸುವ ಪ್ರಯತ್ನಗಳು ನಡೆಯುತ್ತಾ ಬಂದಿವೆ. ಬಹು ಸಂಸ್ಕೃತಿಯ ತುಳುನಾಡನ್ನು ಏಕ ಸಂಸ್ಕೃತಿಗೆ ಒಳಪಡಿಸಲು ಇರುವ ಬಹುದೊಡ್ಡ ಅಡ್ಡಿ ದೈವಾರಾಧನೆ. ಈ ದೃಷ್ಟಿಯಿಂದ ನೆಲಮೂಲದ ಕಥೆಯನ್ನು ಹೊಂದಿದ ಹೋರಾಟದ ಕಥೆಗಳಿಗೆ ಪುರಾಣಗಳನ್ನು ತಳುಕು ಹಾಕುವ ಪ್ರಯತ್ನಗಳು ನಡೆದವು. ದೈವಾರಾಧನೆಯ ನೈಜತೆಯನ್ನು ಕಾಪಾಡುವ ದೃಷ್ಟಿಯಿಂದ ಈ ಬಗ್ಗೆ ಗಮನ ಹರಿಸುವ ಪ್ರಯತ್ನ ಅತೀ ಅಗತ್ಯ. ನವೀನ್ ಸೂರಿಂಜೆಯವರ ಈ ಕೃತಿಯಲ್ಲಿ ಆ ಕಳಕಳಿಯನ್ನು ಕೂಡಾ ಗುರುತಿಸಿದ್ದೇವೆ.

ಈ ಕೃತಿಯಲ್ಲಿ ಹಲವು ಮಹತ್ವದ ವಿಚಾರಗಳನ್ನು ನವೀನ್ ಸೂರಿಂಜೆಯವರು ಚರ್ಚಿಸಿದ್ದಾರೆ. ದೈವಾರಾಧನೆಗೆ ಎಲ್ಲರನ್ನು ಒಳಗೊಳ್ಳುವ ಗುಣವಿದೆ. ಮುಸ್ಲಿಂ, ಕ್ರೈಸ್ತರು, ಜೈನರು, ಬೌದ್ಧರು ಹೀಗೆ ಇತರ ಧರ್ಮಗಳನ್ನು ಆರಾಧನೆ, ಗೌರವದಿಂದ ಕಾಣುತ್ತದೆ. ಈ ಆರಾಧನೆಯು ಪರಂಪರೆಯಲ್ಲಿ ಕೆಟ್ಟವರನ್ನು ಒಳ್ಳೆಯವರನ್ನಾಗಿ ಪರಿವರ್ತಿಸುವ ಧನಾತ್ಮಕ ಗುಣವಿದೆ. ಹಾಗೆಯೇ ಯಾವ ಜಾತಿಯವರನ್ನೂ ದೂರ ಇಡುವ ಪರಂಪರೆ ಇದಲ್ಲ. ಎಲ್ಲಾ ಜಾತಿಯ ಜನರನ್ನು ಕರೆದು ಗೌರವಿಸುವ ಪರಂಪರೆ ಅಲ್ಲಿದೆ. ‘ಪತ್ತಪ್ಪೆ ಜೋಕುಲೆನ್ ಒಂಜಿ ಮಟ್ಟೆಲ್ದ್ ಪಾಡುನ ಶಕ್ತಿ’ (ಹತ್ತು ತಾಯಿಯ ಮಕ್ಕಳನ್ನು ಒಂದೇ ಮಡಿಲಲ್ಲಿ ಹಾಕಿ ಸಾಕುವ ಶಕ್ತಿಗಳು) ಎಂಬ ದೈವದ ನುಡಿ ಇದನ್ನು ಪ್ರತಿನಿಧಿಸುತ್ತದೆ. ಧರ್ಮ ಮತ್ತು ಜಾತಿಗಳ ಕೊಡುಕೊಳ್ಳುವಿಕೆ ಮತ್ತು ಸಾಮರಸ್ಯಕ್ಕೂ ದೈವರಾದನೆಗೂ ಇರುವ ಸಂಬಂಧವನ್ನು ಸೊಗಸಾಗಿ ವಿಶ್ಲೇಷಿಸಿದ್ದಾರೆ.

ತುಳುನಾಡಿನ ಸಂಸ್ಕೃತಿಯ ಸ್ವರೂಪವನ್ನು ನಿರ್ಧರಿಸುವುದು ಮೂರು ಅಂಶಗಳು 1) ಕೃಷಿ ಪದ್ಧತಿ 2) ಮಾತೃಮೂಲೀಯ ಕೌಟುಂಬಿಕ ವ್ಯವಸ್ಥೆ 3) ಅವೈದಿಕ ಆಚರಣೆಗಳು. ಇಂದು ಈ ಮೂರು ಅಂಶಗಳು ಸಡಿಲವಾಗುತ್ತಿರುವುದನ್ನು ಸ್ಪಷ್ಟವಾಗಿ ಗುರಿತಿಸಬಹುದಾಗಿದೆ. ಜಾಗತೀಕರಣದ ಪರಿಣಾಮ ಇಲ್ಲಿ ಕೃಷಿ ಪ್ರಾಧಾನ್ಯತೆ ಹೊರಟು ಹೋಗಿ, ಕೈಗಾರಿಕೆ ಮತ್ತು ಉದ್ಯಮಗಳು ಅದರ ಸ್ಥಾನವನ್ನು ಆಕ್ರಮಿಸಿವೆ. ಮಾತೃ ಮೂಲೀಯ ಕೌಟುಂಬಿಕ ವ್ಯವಸ್ಥೆ ಶಿಥಿಲಗೊಂಡು ಪಿತೃ ಪ್ರಾಧಾನ್ಯತೆಯ ಸಣ್ಣ ಕುಟುಂಬಗಳು ಅಸ್ತಿತ್ವದಲ್ಲಿದೆ. ಅವೈದಿಕ ಆಚರಣೆಗಳಿಗೆ ವೈದಿಕರ ಪ್ರವೇಶದಿಂದಾಗಿ ಆಚರಣೆಗಳ ಸ್ವರೂಪವೇ ಬದಲಾಗಿದೆ. ಇದಕ್ಕೆ ದೈವಾರಾಧನೆ ಒಂದು ಒಳ್ಳೆಯ ಉದಾಹರಣೆ. ಈ ಪರಿವರ್ತನೆಯನ್ನು ನವೀನ್ ಸೂರಿಂಜೆಯವರು ಈ ಲೇಖನಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಈ ದೃಷ್ಟಿಯಿಂದ ಕೃತಿಗೆ ಮಹತ್ವವಿದೆ.

ಒಬ್ಬ ಸಂಶೋಧಕನಲ್ಲಿ ಇರಬೇಕಾದ ಶ್ರಮ, ಆಳವಾದ ಅಧ್ಯಯನ, ಸತ್ಯದ ಹುಡುಕಾಟದ ತುಡಿತ ಇವೆಲ್ಲವನ್ನೂ ನವೀನ್ ಸೂರಿಂಜೆಯವರ ಅಧ್ಯಯನದಲ್ಲಿ ಕಾಣಬಹುದಾಗಿದೆ. ಅವರೇ ಹೇಳುವಂತೆ ಅಧ್ಯಯನಗಳು ಜನಪದ ಪಾಡ್ದನಗಳಲ್ಲಿರುವ ಪ್ರಾಕ್ಟಿಕಲ್ ಅಲ್ಲದ ಅತಿಮಾನುಷ ಶಕ್ತಿಗಳನ್ನು ನಿರ್ಲಕ್ಷಿಸಿ, ದೈವಗಳೆಂದು ಕರೆಯುವ ಕ್ರಾಂತಿಕಾರಿ ಹೋರಾಟಗಾರರ ಆಶಯವನ್ನು ಜನರಿಗೆ ತಿಳಿಸುವ ಕೆಲಸ ಮಾಡಬೇಕಿತ್ತು. ದೈವಗಳು ಒಂದು ಕಾಲದ ಜನ ಸಮುದಾಯದ ನಾಯಕರು ಎಂಬುದನ್ನು ಇದುವರೆಗೆ ತಿಳಿಸದೆ ಇರುವಂತಹ ಹೊಸ ಒಳನೋಟಗಳು ಕೃತಿಯಲ್ಲಿದೆ. ಅಲ್ಲದೆ ದೈವಾರಾಧನೆಗಳೂ, ಊಳಿಗಮಾನ್ಯ ಪದ್ಧತಿಗೂ ಇರುವ ಸಂಬಂಧಗಳನ್ನು ಸಕಾರಣವಾಗಿ ವಿವರಿಸಿದ್ದಾರೆ. ಈ ದೃಷ್ಟಿಯಿಂದ ಇದುವರೆಗೆ ನಡೆದ ಅಧ್ಯಯನಗಳಿಗಿಂತ ಇದು ಭಿನ್ನವಾಗಿದೆ. ಇದುವರೆಗೆ ಸಂಶೋಧಕರು ಹೇಳಲು ಹಿಂಜರಿಯುತ್ತಿದ್ದ ಹಲವು ಸಂಗತಿಗಳನ್ನು ಹೇಳುವ ಧೈರ್ಯ ಈ ಅಧ್ಯಯನದಲ್ಲಿ ಕಾಣುತ್ತದೆ. ಹನುಮಂತ ದೈವದ ಕುರಿತಾದ ವಿಶ್ಲೇಷಣೆಯಲ್ಲಿ ಕರಾವಳಿಯ ಹನುಮಂತ ದೈವವು ಹೃದಯವಂತ, ಸೌಮ್ಯವಾದಿ ದೈವ. ಹನುಮಂತನನ್ನು ಉಗ್ರಸ್ವರೂಪಿ ಎಂದೂ, ಭಜರಂಗಿ ಎಂದೂ ತೋರಿಸುವುದು ತುಳುನಾಡಿನ ಹನುಮಂತ ದೈವಕ್ಕೆ ಮಾಡುವ ಅವಮಾನ ಎಂದು ವಿಶ್ಲೇಷಿಸಿದ್ದಾರೆ. ಈ ರೀತಿ ನವೀನ ವಿಶ್ಲೇಷಣೆಯನ್ನು ಅವರ ಎಲ್ಲಾ ಲೇಖನಗಳಲ್ಲಿ ಗುರುತಿಸಬಹುದಾಗಿದೆ.

ವಿಷಮ ಭಾರತ | ಸರ್ಪಗಳತ್ತ ಕುಪ್ಪಳಿಸುತ್ತಿರುವ ದಲಿತ ಕಪ್ಪೆಗಳು; ಪ್ರತ್ಯೇಕ ಮತಕ್ಷೇತ್ರಗಳೇ ಪರಿಹಾರ?

ಜಾನಪದದಲ್ಲಿ ಅನ್ವಯಿಕ ದೃಷ್ಟಿಕೋನ ಅತಿ ಮುಖ್ಯ. ಅಂತಹ ಅಧ್ಯಯನಗಳ ಅತೀ ಮಹತ್ವವಿದೆ. ಸಮಕಾಲೀನ ಸಂದರ್ಭದಲ್ಲಿ ದೈವಾರಾಧನೆಯ ಅಂಶಗಳಿಂದ ಹೇಗೆ ಕರಾವಳಿಯ ಸಾಮರಸ್ಯದ ಬದುಕನ್ನು ಕಟ್ಟಬಹುದು ಎಂಬ ಆಶಯ ಈ ಅಧ್ಯಯನದ್ದಾಗಿದೆ. ಕೋಮುವಾದದ ಜ್ವಾಲೆಗೆ ಸಿಕ್ಕಿ ನರಳುತ್ತಿರುವ ಯುವ ಪೀಳಿಗೆ ಸಂಯಮದಿಂದ ಈ ಕೃತಿಯನ್ನು ಅಧ್ಯಯನ ಮಾಡಿದರೆ, ಸಮಕಾಲೀನ ಹಲವು ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ.

ಈ ದೃಷ್ಟಿಗಳಿಂದ ನವೀನ್ ಸೂರಿಂಜೆಯವರ ‘ಸತ್ಯೊಲು’ ಸಮಕಾಲೀನ ಸಂದರ್ಭ ಬಯಸುವ ಅತಿ ತುರ್ತಾಗಿದ್ದ ಮಹತ್ವದ ಬರವಣಿಗೆಯಾಗಿದೆ. ತುಳುನಾಡಿನ ಪಾರಂಪರಿಕ ಸಾಮರಸ್ಯದ ಬದುಕಿಗೆ ಈ ಕೃತಿ ಮಹತ್ವದ ಕೊಂಡಿಯಾಗಲಿ ಎಂಬ ಆಶಯದೊಂದಿಗೆ ಅವರನ್ನು ಅಭಿನಂದಿಸುತ್ತಿದ್ದೇನೆ.
-ಡಾ. ಗಣನಾಥ ಶೆಟ್ಟಿ ಎಕ್ಕಾರು

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X