ಸಂವಿಧಾನ ಲೋಕಸಭೆಯ ಕೇಂದ್ರ ಬಿಂದುವಾಗಿದೆ ಬಲದಿಂದಲೇ ನಾವಿಂದು ಅಧಿಕಾರದಲ್ಲಿದ್ದೇವೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಪ್ರತಿಯೊಬ್ಬರಿಗೂ ಶ್ರೇಷ್ಠವಾದ ಮಾರ್ಗದರ್ಶಕ ಗ್ರಂಥವಾಗಿದೆ ಎಂದು ಸಂಸದ ಜಿ.ಕುಮಾರ ನಾಯಕ ಹೇಳಿದರು.
ಅವರಿಂದು ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಸಂವಿಧಾನಶಿಲ್ಪಿ, ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರರ 134 ನೇ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.
ಅಂಬೇಡ್ಕರ್ ಅವರ ಆಚರಣೆಯನ್ನು ಇಡೀ ಜಗತ್ತು ಆಚರಣೆ ಮಾಡುತ್ತಿದ್ದು, ಇದೊಂದು ಹಬ್ಬದ ದಿನವಾಗಿದೆ. ಅಂಬೇಡ್ಕರ್ ಅವರ ರಚಿಸಿದ ಸಂವಿಧಾನದ ಮೂಲಕ ನಾವೆಲ್ಲಾ ಸ್ವತಂತ್ರವಾಗಿ ಅಧಿಕಾರದಲ್ಲಿದ್ದೇವೆ.ಲೋಕಸಭೆಯಲ್ಲಿ ಪ್ರತಿಯೊಬ್ಬರೂ ಸಂವಿಧಾನ ಎತ್ತಿ ಹಿಡಿಯುವ ಕೆಲಸ ಮಾಡುತ್ತಾರೆ ಎಂದರು.
ಅಂಬೇಡ್ಕರ್ ಅವರ ದೂರದೃಷ್ಠಿ,ದೇಶದ ಅಭಿವೃದ್ದಿಗೆ ದೇಶದಲ್ಲಿ ಪ್ರತಿಯೊಬ್ಬರಿಗೂ ಅವಕಾಶಗಳು ಸಿಗಬೇಕು. ಅಭಿವೃದ್ಧಿ ಹೊಂದಲು ಬೇಕಾದ ಮಾರ್ಗದರ್ಶನ ಪ್ರತಿಯೊಬ್ಬರಿಗೂ ಸಿಗಬೇಕೆಂಬ ಆಶಯವನ್ನು ಅಂಬೇಡ್ಕರ್ ಅವರು ಹೊಂದಿದ್ದರು. ಅವರ ಆಶಯಗಳನ್ನು ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಬಸನಗೌಡ ಯತ್ನಾಳ ಮಾತನಾಡುವಾಗ ಲಾಂಗ್ ಹಿಡಿದು ನುಗ್ಗಿದ ವ್ಯಕ್ತಿಯ ಬಂಧನ
ನಂತರ ಮಾತನಾಡಿದ ಜಿಲ್ಲಾಧಿಕಾರಿ ಕೆ.ನಿತೀಶ್ ಭಾರತದ ಪ್ರಜೆಗಳ ಮೇಲೆ ಅತ್ಯಂತ ಹೆಚ್ಚಿನ ಪ್ರಭಾವ ಬೀರಿದ ಶ್ರೇಷ್ಠ ವ್ಯಕ್ತಿ ಅಂಬೇಡ್ಕರ್ ಅವರಾಗಿದ್ದು, ಒಂದು ವೇಳೆ ಅಂಬೇಡ್ಕರ್ ಅವರು ದೂರ ದೃಷ್ಠಿಕೋನದಿಂದ ಸಂವಿಧಾನ ನೀಡದೇ ಹೋಗಿದ್ದರೆ ಇಂದು ಭಾರತದ ಪರಿಸ್ಥಿತಿ ಪಾಕಿಸ್ತಾನದಂತಾಗುತ್ತಿತ್ತು ಎಂದರು.
ಸಾಕಷ್ಟು ಮುಂದುವರೆದ ದೇಶಗಳಲ್ಲಿ ಈಗಲೂ ಅಸಮಾನತೆ ಕಂಡರೆ ಅಂಬೇಡ್ಕರ್ ಅವರ ಸಂವಿಧಾನವನ್ನು ನೆನಪಿಸಿಕೊಳ್ಳಲಾಗುತ್ತದೆ. ಅಷ್ಟು ಸಮೃದ್ಧವಾದ ಸಂವಿಧಾನವನ್ನು ದೇಶಕ್ಕೆ ಬಾಬಾಸಾಹೇಬರು ನೀಡಿದ್ದಾರೆ. ಸಮಾಜದಲ್ಲಿ ಉತ್ತಮ ವ್ಯಕ್ತಿತ್ವ, ಉತ್ತಮ ಪ್ರಜೆಗಳಾಗಲು ಪ್ರತಿಯೊಬ್ಬರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಾಹುಲ್ ತುಕಾರಾಂ ಪಾಂಡ್ವೆ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ಎಲ್ಲಾ ಕ್ಷೇತ್ರದಲ್ಲಿಯೂ ಪರಿಣಿತರಾಗಿದ್ದರು. ಇದೇ ಕಾರಣದಿಂದ ಪ್ರತಿಯೊಬ್ಬರಿಗೂ ಸಮಾನತೆ ಸಿಗಲಿ ಎಂದು ಉತ್ತಮ ಸಂವಿಧಾನವನ್ನು ನೀಡಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಮಹಾಪೌರರಾದ ನರಸಮ್ಮ ನರಸಿಂಹಲು ಮಾಡಗಿರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಚಿದಾನಂದಪ್ಪ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ರಾಜೇಂದ್ರ ಜಲ್ದಾರ್, ರಾಯಚೂರು ತಾಲೂಕು ಪಂಚಾಯತ್ ಇಒ ಚಂದ್ರಶೇಖರ ಪವಾರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ವಿಜಯಲಕ್ಷ್ಮೀ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಂಗಮೇಶ್ವರ ಸೇರಿದಂತೆ ಇನ್ನಿತರರು ಹಾಜರಿದ್ದರು.