ಬೆಲೆ ಏರಿಕೆ ಖಂಡಿಸಿ ರಾಜ್ಯದಲ್ಲಿ ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್ ಹಾಗೂ ಅಧಿಕಾರದಲ್ಲಿರುವ ಕಾಂಗ್ರೆಸ್ ಪ್ರತಿಭಟನೆಗೆ ಮುಂದಾಗಿವೆ. ಜನಸಾಮಾನ್ಯರ ನೋವಿಗೆ ಧ್ವನಿಯಾಗಲು ಪ್ರತಿಭಟನೆ ನಡೆಸುವುದು ಯಾವುದೇ ಕಾರಣಕ್ಕೂ ತಪ್ಪಲ್ಲ. ವಿಪರ್ಯಾಸವೆಂದರೆ ರಾಜ್ಯದಲ್ಲಿ ಮೂರು ಪಕ್ಷಗಳು ಬೆಲೆ ಏರಿಕೆ ವಿಷಯವನ್ನಿಟ್ಟುಕೊಂಡು ಸ್ವಾರ್ಥ ರಾಜಕಾರಣಕ್ಕೆ ಪ್ರತಿಭಟನೆಗಳ ಮೊರೆ ಹೋಗಿವೆ.
ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬೆಲೆ ಏರಿಕೆಗಳ ಸರಣಿಗೆ ಜನಸಾಮಾನ್ಯರು ಬಸವಳಿದಿದ್ದಾರೆ. ಈಗಾಗಲೇ ಪೆಟ್ರೋಲ್, ವಿದ್ಯುತ್ ದರಗಳ ಏರಿಕೆ ಮಧ್ಯೆ ತರಕಾರಿ, ಹಾಲು ಸೇರಿ ದಿನಸಿ ಬೆಲೆಗಳು ಮತ್ತಷ್ಟು ಜನರಿಗೆ ಹೊರೆಯಾಗಿ ಪರಿಣಮಿಸಿದೆ.
ಬೆಲೆ ಏರಿಕೆ ಖಂಡಿಸಿ ರಾಜ್ಯದಲ್ಲಿ ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್ ಹಾಗೂ ಅಧಿಕಾರದಲ್ಲಿರುವ ಕಾಂಗ್ರೆಸ್ ಪ್ರತಿಭಟನೆಗೆ ಮುಂದಾಗಿವೆ. ಜನಸಾಮಾನ್ಯರ ನೋವಿಗೆ ಧ್ವನಿಯಾಗಲು ಪ್ರತಿಭಟನೆ ನಡೆಸುವುದು ಯಾವುದೇ ಕಾರಣಕ್ಕೂ ತಪ್ಪಲ್ಲ. ವಿಪರ್ಯಾಸವೆಂದರೆ ರಾಜ್ಯದಲ್ಲಿ ಮೂರು ಪಕ್ಷಗಳು ಬೆಲೆ ಏರಿಕೆ ವಿಷಯವನ್ನಿಟ್ಟುಕೊಂಡು ಸ್ವಾರ್ಥ ರಾಜಕಾರಣಕ್ಕೆ ಪ್ರತಿಭಟನೆಗಳ ಮೊರೆ ಹೋಗಿವೆ.
ಬೆಲೆ ಏರಿಕೆ ಎಂಬುದು ಕೇವಲ ಕಾಂಗ್ರೆಸ್ ಸರ್ಕಾರದ ಬಳುವಳಿಯಲ್ಲ. ನರೇಂದ್ರ ಮೋದಿ ಅವರು ಯಾವಾಗ ಪ್ರಧಾನಿಪಟ್ಟಕ್ಕೆ ಬಂದರೋ ಅಂದಿನಿಂದ ಜನರ ಜೇಬು ಸುಡುತ್ತ ಬಂದಿದೆ. 2014ರಲ್ಲಿ ಡೀಸೆಲ್ 60 ರೂ. ಮತ್ತು ಪೆಟ್ರೋಲ್ ದರ 77 ರೂ. ಇತ್ತು. ಈಗ ಕ್ರಮವಾಗಿ 91 ರೂ. ಮತ್ತು103 ರೂ. ಇದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಗಣನೀಯವಾಗಿ ಇಳಿಕೆ ಕಂಡಿದ್ದರೂ ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆ ಕಾಣುತ್ತಿಲ್ಲ. ಇನ್ನು ಅಡುಗೆ ಎಣ್ಣೆ 11 ವರ್ಷದಲ್ಲಿ 80 ರೂ. ಯಿಂದ 180 ರೂ.ವರೆಗೂ ಏರಿಕೆ ಕಂಡಿದೆ. ಹಾಗೆಯೇ 410 ರೂ. ಇದ್ದ ಗ್ಯಾಸ್ ಬೆಲೆ ಈಗ 1200 ರೂ.ವರೆಗೂ ಏರಿಕೆಯಾಗಿ ಈಗ 900 ರೂ. ಆಸುಪಾಸಿನಲ್ಲಿದೆ. ಇದು ಕೇವಲ ಉದಾಹರಣೆ ಅಷ್ಟೇ.
ಈಗಾಗಲೇ ಒಂದಲ್ಲ ಒಂದು ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನಸಾಮಾನ್ಯರಿಗೆ ಪ್ರಯಾಣ ದರ, ಹಾಲಿನ ದರ ಹಾಗೂ ರಾಜಧಾನಿ ಜನರಿಗೆ ಮೆಟ್ರೋ ದರ ಏರಿಕೆ ಗಾಯದ ಮೇಲೆ ಮತ್ತೆ ಬರೆ ಎಳೆದಂತಾಗಿದೆ. ಅಡುಗೆ ಮನೆಯ ದಿನಸಿಗಳ ದರ ಅಂತೂ ಬಲು ದುಬಾರಿ. ನಿತ್ಯ ಕೂಲಿ ಮಾಡಿ ಬದುಕು ಸಾಗಿಸುವ ಜನರಿಗೆ ಜೀವನ ನಿರ್ವಹಣೆಯೇ ಈಗ ಸವಾಲಾಗಿದೆ.
ಬೆಲೆ ಏರಿಕೆಯಲ್ಲಿ ಬೇಯುತ್ತಿದ್ದ ಜನರಿಗೆ ನೆರವಾಗಲು ಕಾಂಗ್ರೆಸ್ ರಾಜ್ಯದಲ್ಲಿ “ಪಂಚ ಗ್ಯಾರಂಟಿ”ಗಳನ್ನು ಘೋಷಿಸಿ ಅಧಿಕಾರಕ್ಕೆ ಬಂದಿತು. ಅನ್ನಭಾಗ್ಯ, ಶಕ್ತಿ ಯೋಜನೆ, ಗೃಹಲಕ್ಷ್ಮಿ ಹಾಗೂ ಗೃಹ ಜ್ಯೋತಿ ಯೋಜನೆಗಳಿಂದ ಮನೆಯೊಂದಕ್ಕೆ ತಿಂಗಳಿಗೆ ಸುಮಾರು ನಾಲ್ಕು ಸಾವಿರ ರೂ. ವರೆಗೂ ಆರ್ಥಿಕ ಸಹಾಯಧನ ಸಿಗುತ್ತಿದೆ. ಗ್ಯಾರಂಟಿಗಳ ಲಾಭ ಪಡೆದ ಜನರು ಸ್ವಲ್ಪ ನಿರಾಳವಾಗಿದ್ದಾರೆ.
ಆದರೆ, ಗ್ಯಾರಂಟಿಗಳಿಂದಲೇ ರಾಜ್ಯದಲ್ಲಿ ಬೆಲೆ ಏರಿಕೆಯಾಗಿದೆ ಎಂದು ಆರೋಪಿಸಿ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಗ್ಯಾರಂಟಿಗಳಿಗೆ ಮಸಿ ಬಳಿಯುತ್ತಲೇ ಜನಪರವಾಗಿರುವ ಯೋಜನೆಗಳಿಗೆ ಅಡ್ಡಗಾಲು ಹಾಕುತ್ತಿವೆ. ಹಾಗೆ ನೋಡಿದರೆ ಗ್ಯಾರಂಟಿ ಯೋಜನೆಗಳಿಗಾಗಿಯೇ ರಾಜ್ಯ ಸರ್ಕಾರ ಪ್ರತಿ ವರ್ಷ ಪ್ರತ್ಯೇಕವಾಗಿ ಅನುದಾನ ಮೀಸಲಿರಿಸಿದೆ. ಕೇಂದ್ರದಿಂದ ಬರಬೇಕಾದ ಜಿಎಸ್‌ಟಿ ಪಾಲಿನಲ್ಲಿ ದೊಡ್ಡ ಅನ್ಯಾಯವಾಗಿ ಅದನ್ನು ಸರಿದೂಗಿಸಲು ಯಾವುದೇ ಸರ್ಕಾರ ಇದ್ದರೂ ಸಹಜವಾಗಿ ಬೆಲೆ ಏರಿಕೆಯ ಮೊರೆ ಹೋಗುತ್ತವೆ. ಕಾಂಗ್ರೆಸ್ ಸಹ ಕೇಂದ್ರದಿಂದ ಅನ್ಯಾಯಕ್ಕೆ ಒಳಗಾಗಿ ಬೆಲೆ ಏರಿಕೆ ಅನಿವಾರ್ಯ ಎಂದು ಸಮರ್ಥಿಸಿಕೊಳ್ಳುತ್ತಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪೊಲೀಸರ ಬಂದೂಕಿನ ನ್ಯಾಯ ಸಮಾಜಕ್ಕೆ ಮಾರಕ
ಬಿಜೆಪಿ-ಜೆಡಿಎಸ್‌ನದ್ದು ಪಕ್ಷಪಾತಿ ಪ್ರತಿಭಟನೆ
ರಾಜ್ಯದಲ್ಲಿ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಮತ್ತು ಜೆಡಿಎಸ್ ಪ್ರತ್ಯೇಕವಾಗಿ ಬೀದಿಗಿಳಿದು ಹೋರಾಟ ನಡೆಸುತ್ತಿವೆ. ಬಿಜೆಪಿ ಜೊತೆ ಮೈತ್ರಿಕೊಂಡು, ಕೇಂದ್ರದಲ್ಲಿ ಸಚಿವ ಸ್ಥಾನವನ್ನು ಪಡೆದಿರುವ ಹೆಚ್ ಡಿ ಕುಮಾರಸ್ವಾಮಿ ಅವರ ನೇತೃತ್ವದ ಜೆಡಿಎಸ್ ಪಕ್ಷ ಒಂದು ಹೆಜ್ಜೆ ಮುಂದೆ ಹೋಗಿ, “ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ” ಎನ್ನುವ ಘೋಷವಾಕ್ಯದಡಿ ಪ್ರತಿಭಟನೆ ಮಾಡಿದೆ. ಈ ಪ್ರತಿಭಟನೆಯ ಉಸ್ತುವಾರಿ ಹೊತ್ತಿದ್ದು ಮಂಡ್ಯ ಲೋಕಸಭೆ ಹಾಗೂ ರಾಮನಗರ ಮತ್ತು ಚನ್ನಪಟ್ಟಣ ವಿಧಾನಸಭೆಯಲ್ಲಿ ಸತತವಾಗಿ ಸೋತು ಸುಣ್ಣವಾಗಿರುವ ನಿಖಿಲ್ ಕುಮಾರಸ್ವಾಮಿ. ಪ್ರತಿ ಸಲವೂ ಕ್ಷೇತ್ರ ಬದಲಿಸಿರುವ ನಿಖಿಲ್ ಕುಮಾರಸ್ವಾಮಿ ಅವರು ಈಗ ಅತ್ಯಾಚಾರ ಆರೋಪದ ಮೇಲೆ ಜೈಲಿನಲ್ಲಿರುವ ದೊಡ್ಡಪ್ಪ ಹೆಚ್ ರೇವಣ್ಣ ಅವರ ಮಗ ಪ್ರಜ್ವಲ್ ರೇವಣ್ಣ ಪ್ರತಿನಿಧಿಸಿದ್ದ ಹಾಸನ ಲೋಕಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಮುಂದಿನ ತಯಾರಿಗಾಗಿ ಪ್ರತಿಭಟನೆ ನೆಪದಲ್ಲಿ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ ಅಷ್ಟೇ. ಕೇಂದ್ರವನ್ನೂ ಪ್ರಶ್ನಿಸಿ ಪ್ರತಿಭಟಿಸಿದ್ದರೆ ಜೆಡಿಎಸ್ ಪ್ರತಿಭಟನೆಗೆ ಅರ್ಥವಿರುತ್ತಿತ್ತು.
ಕೇಂದ್ರ ಸರ್ಕಾರದ ಟೋಲ್ ಸಂಗ್ರಹ, ಪೆಟ್ರೋಲ್ ಡೀಸೆಲ್ ಹಾಗೂ ಗ್ಯಾಸ್ ಬೆಲೆ ಏರಿಕೆ ಬಗ್ಗೆ ತುಟಿ ಬಿಚ್ಚದೇ ಕೇವಲ ಕಾಂಗ್ರೆಸ್ ವಿರುದ್ಧ ಪ್ರತಿಭಟಿಸುತ್ತಿರುವ ಜೆಡಿಎಸ್ ನಡೆ ಪಕ್ಷಪಾತಿಯಿಂದ ಕೂಡಿದೆ. ತನ್ನ ರಾಜಕೀಯ ಸ್ವಾರ್ಥಕ್ಕಾಗಿ ಜನಸಾಮಾನ್ಯರ ಹಿತವನ್ನು ಜೆಡಿಎಸ್ ಬಲಿಕೊಡುತ್ತಿದೆ.
ಬಿಜೆಪಿ ಕೂಡ ಸಾಚಾ ಅಲ್ಲ. ಕೇಂದ್ರ ಸರ್ಕಾರದ ಬೆಲೆ ಏರಿಕೆ ಬಗ್ಗೆ ಮಾತನಾಡುವುದೇ ಮಹಾ ಅಪರಾಧ ಎನ್ನುವಂತೆ ರಾಜ್ಯದ ಬಿಜೆಪಿ ನಾಯಕರು ವರ್ತಿಸುತ್ತಿದ್ದಾರೆ. ಸ್ವಾಭಿಮಾನವನ್ನು ದೆಹಲಿ ವರಿಷ್ಠರ ಮುಂದೆ ಅಡವಟ್ಟಿರುವ ಬಿಜೆಪಿ ನಾಯಕರು ಯಾವ ನೈತಿಕತೆ ಮೇಲೆ ಬೆಲೆ ಏರಿಕೆ ಬಗ್ಗೆ ಮಾತನಾಡುತ್ತಾರೆ? ಇವರ ಪಕ್ಷಪಾತಿ ಪ್ರತಿಭಟನೆಯಿಂದ ಜನಸಾಮಾನ್ಯರಿಗೆ ಹೇಗೆ ಅನುಕೂಲವಾಗುತ್ತದೆ? ಜೆಡಿಎಸ್ ಮತ್ತು ಬಿಜೆಪಿ ಪ್ರತಿಭಟನೆ ಎಂಬುದು ಕೇವಲ ಸ್ವಾರ್ಥ ರಾಜಕೀಯದಿಂದ ಕೂಡಿದ ಪ್ರತಿಭಟನೆಯೇ ಹೊರತು ಜನಸಾಮಾನ್ಯರ ನೋವಿನ ಧ್ವನಿಯಂತೂ ಅಲ್ಲವೇ ಅಲ್ಲ.
ಇನ್ನು, ಬೆಲೆ ಏರಿಕೆ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ಪ್ರತಿಭಟನೆಗೆ ಕೌಂಟರ್ ಕೊಡಲು ರಾಜ್ಯ ಸರಕಾರ ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿದೆ. ಏ. 17ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈಗಾಗಲೇ ಘೋಷಿಸಿದ್ದಾರೆ.
ಗ್ಯಾರಂಟಿ ಯೋಜನೆಗಳನ್ನು ಕೊಟ್ಟಿದ್ದೇವೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ಸರ್ಕಾರ ಜನರಿಂದ ಸುಲಿಗೆಗೆ ಇಳಿಯವುದು ಖಂಡಿತ ಒಪ್ಪುವ ನಡೆಯಲ್ಲ. ಬೆಲೆ ಏರಿಕೆ ಬಗ್ಗೆ ನ್ಯಾಯವಾಗಿ ಮಾತನಾಡಿ, ತಾವೂ ಬೆಲೆ ಏರಿಕೆ ಮಾಡಿದರೆ ಜನಸಾಮಾನ್ಯರ ಬದುಕು ಹೇಗಾಗಬೇಡ? ಬಹುಮತ ಕೊಟ್ಟ ಮತದಾರರಿಗೆ ಕನಿಷ್ಠ ಪಕ್ಷ ಕೃತಜ್ಞತೆಯಿಂದ ಸಿದ್ದರಾಮಯ್ಯ ಸರ್ಕಾರ ನಡೆದುಕೊಳ್ಳಬೇಕು.
ಕೇಂದ್ರ ಸರ್ಕಾರದ ಜೊತೆ ಕಾನೂನು ಹೋರಾಟ ಮಾಡಿಯಾದರೂ ರಾಜ್ಯದ ಪಾಲನ್ನು ಪಡೆದು, ಜನರ ಬದುಕಿನ ಮೇಲೆ ಎಳೆದ ಬೆಲೆ ಏರಿಕೆಯ ಬರೆಯನ್ನು ಅಳಿಸಬೇಕು. ಈ ಕೆಲಸ ಮಾಡದೇ ಕೇವಲ ಕೌಂಟರ್‌ಗಾಗಿ ಕೇಂದ್ರದ ವಿರುದ್ಧ ಪ್ರತಿಭಟಿಸಿ ಮೌನವಾದರೆ ಜನರು ಕ್ಷಮಿಸಲ್ಲ. ಮುಂದಿನ ಸರ್ಕಾರವನ್ನು ನಿರ್ಧರಿಸುವುದು ಇದೇ ಜನರಾಗಿದ್ದಾರೆ ಎಂಬ ಎಚ್ಚರಿಕೆಯೂ ಸರ್ಕಾರಕ್ಕೆ ಇರಲಿ.

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.