ಡಾ. ಬಿ ಆರ್ ಅಂಬೇಡ್ಕರ್ ಅವರು ಮನೋಸ್ವಾತಂತ್ರ್ಯ, ಧಾರ್ಮಿಕ ಸುಧಾರಣೆ, ಸಮಾನತೆ ಮತ್ತು ಸಾಮಾಜಿಕ ಪ್ರಜಾಪ್ರಭುತ್ವಕ್ಕೆ ಹೆಚ್ಚಿನ ಮಹತ್ವ ನೀಡಿದ್ದವರು. ಸಾಮಾಜಿಕ ಪ್ರಜಾಪ್ರಭುತ್ವದ ಹಾದಿಯ ಮೂಲಕ ನವ ಭಾರತವನ್ನು ರೂಪಿಸಿದರು ಎಂದು ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಪ್ರಶಾಂತ ಜೆ ಸಿ ಅಭಿಪ್ರಾಯಪಟ್ಟರು.
ಭಾರತ ರತ್ನ ಬಾಬಾ ಸಾಹೇಬರ 134ನೇ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಅಂಬೇಡ್ಕರ್ ಅವರು ಪಾಶ್ಚಾತ್ಯ ಶಿಕ್ಷಣ ಪಡೆದಿದ್ದರೂ ಭಾರತೀಯ ಸಮಾಜದ ಮೂಲಭೂತ ಸಮಸ್ಯೆಗಳತ್ತ ತಮ್ಮ ದೃಷ್ಟಿಯನ್ನು ಕೇಂದ್ರಗೊಳಿಸಿದ್ದರು. ಅಂಬೇಡ್ಕರ್ ಅವರನ್ನು ‘ಆಧುನಿಕ ಬುದ್ಧ’ ಎಂದೂ ಕರೆಯಬಹುದು” ಎಂದರು.
ವಿವಿ ಕುಲಪತಿ ಪ್ರೊ. ಸುರೇಶ ವಿ ನಾಡಗೌಡರ ಮಾತನಾಡಿ, “ಅಂಬೇಡ್ಕರ್ ಯುಗಪುರುಷರಾಗಿದ್ದು, ಅವರು ನವಯುಗದ ಚಿಂತಕರು. ಅವರು ಕಾನೂನಿನ ಶ್ರೇಷ್ಠತೆಯನ್ನು ಸಾರಿದ ಚೇತನ. ಅಂಬೇಡ್ಕರ್ ಅವರು ವ್ಯಕ್ತಿ ಮಾತ್ರವಲ್ಲ, ಜೀವಂತ ಪ್ರತಿಮೆ. ಅವರು ಭಾರತೀಯ ಜನತೆಗಾಗಿ ಎಡಬಿಡದೆ ಹೋರಾಡಿದ ಸಾರ್ವತ್ರಿಕ ನಾಯಕ. ಅವರನ್ನು ಯಾವುದೇ ಒಂದು ವರ್ಗಕ್ಕೆ ಸೀಮಿತಗೊಳಿಸುವ ಪ್ರಯತ್ನ ಆಗಬಾರದು. ಅವರ ಶ್ರೇಷ್ಠ ಆದರ್ಶಗಳನ್ನು ನಾವು ಪಾಲಿಸಬೇಕು” ಎಂದು ಹೇಳಿದರು.
ಇದನ್ನೂ ಓದಿ: ಗದಗ | ವರ್ಗಾವಣೆಯಾದ ಅಧಿಕಾರಿಗಳಿಗೆ ಗೌರವಪೂರ್ವಕ ಬೀಳ್ಕೊಡುಗೆ
ಕಾರ್ಯಕ್ರಮದಲ್ಲಿ ಡಾ. ಶ್ರೀಧರ ಹಾದಿಮನಿ, ಉಮೇಶ ಬಾರಕೇರ, ಉಪನ್ಯಾಸಕ ಪ್ರಕಾಶ ಮಾಚೇನಹಳ್ಳಿ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.