ಪ್ರಸ್ತುತ ದಿನಗಳಲ್ಲಿ ರಾಜಕೀಯ ಜನಪ್ರತಿನಿಧಿಗಳು ಬಾಬಾ ಸಾಹೇಬರು ಶೋಷಿತರಿಗೆ ನೀಡಿದ ಮೀಸಲಾತಿಯ ವಿಚಾರದಲ್ಲಿ ಕಿತ್ತಾಡುತ್ತಿದ್ದಾರೆ ವಿನಾ ಅವರ ಆಶಯಗಳನ್ನು ಸಾಕಾರಗೊಳಿಸುತ್ತಿಲ್ಲ. ಮೀಸಲಾತಿ ಹಗ್ಗಜಗ್ಗಾಟ ಬಿಟ್ಟು, ವಿದ್ಯಾರ್ಥಿ-ಯುವಜನರಿಗೆ ಶಿಕ್ಷಣ ಉದ್ಯೋಗ ಕೊಡಿ ಎಂದು ಎಸ್ಎಫ್ಐ ಹಾವೇರಿ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಹೇಳಿದರು.
ನಗರದ ಶಿವಾಜಿ ನಗರದಲ್ಲಿರುವ ಎಸ್ಎಫ್ಐ ಕಚೇರಿಯಲ್ಲಿ ಭಾರತ ವಿದ್ಯಾರ್ಥಿ ಫೆಡರೇಶನ್ ಹಾವೇರಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಆಯೋಜಿಸಿದ್ದ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಎಲ್ಲಾ ಭಾರತೀಯರು ಬದುಕು ನಡೆಸುವ ಅತ್ಯುತ್ತಮ ಸಂವಿಧಾನ ನೀಡಿದ ಅಂಬೇಡ್ಕರ್ ವಕೀಲರಾಗಿದ್ದರು ಎಂಬುದು ಅತ್ಯಂತ ಹೆಮ್ಮೆಯ ಸಂಗತಿ. ಕಟ್ಟಕಡೆಯ ಜನರಿಗೂ ಸ್ವಾತಂತ್ರ್ಯ, ಶಿಕ್ಷಣ, ಉದ್ಯೋಗ, ಬದುಕುವ ಹಕ್ಕಿನ ಹಿಂದೆ ಬಾಬಾ ಸಾಹೇಬರ ಶ್ರಮವಿದೆ. ಸ್ವಾತಂತ್ರ್ಯ ಸಮಾನತೆ ಮತ್ತು ಸಹೋದರತೆ ತಳಹದಿಯ ಮೇಲೆ ಕಟ್ಟಲ್ಪಟ್ಟ ಒಂದು ಸಮಾಜವೇ ನನ್ನ ಆದರ್ಶ ಸಮಾಜ ಎಂದ ಬಾಬಾ ಸಾಹೇಬರ ಮಾತನ್ನು ಸಾಕಾರಗೊಳಿಸುವ ಕೆಲಸವಾಗಬೇಕಿದೆ” ಎಂದರು.
“ಶಿಕ್ಷಣದ ಮೂಲಕ ಮಹಿಳೆಯರ ಸಬಲೀಕರಣಕ್ಕಾಗಿ ದುಡಿದರು ಮತ್ತು ಸಮಾಜದ ಎಲ್ಲ ಜನರಿಗೆ ಸಮಾನತೆಯನ್ನು ಖಾತ್ರಿಪಡಿಸಿಕೊಳ್ಳಲು ಜಾತಿ ಅಡೆತಡೆಗಳನ್ನು ಕೆಡವಲು ಶ್ರಮಿಸಿದವರು. ಸಮಾಜದ ಎಲ್ಲಾ ಸಮುದಾಯದ ಜನರಿಗೆ ಶಿಕ್ಷಣವನ್ನು ತಲುಪುವಂತೆ ಮಾಡಲು ಮತ್ತು ಅವರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಒತ್ತು ನೀಡಿದವರು. ಇಂದಿನ ಸಮಾಜದಲ್ಲಿ ಜಾತಿ ಎಂಬ ಪಿಡುಗನ್ನು ಕೈ ಬಿಡದ ಹೊರತು ಸಮಾಜದ ಸುಧಾರಣೆ ಅಸಾಧ್ಯ” ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಹಾವೇರಿ | ಮಹಾವೀರರ ಬದುಕು ಮತ್ತು ಬೋಧನೆಗಳು ಸರ್ವಕಾಲಕ್ಕೂ ಆದರಣೀಯ
ಕಾರ್ಯಕ್ರಮದಲ್ಲಿ ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ದುರುಗಪ್ಪ ಯಮ್ಮಿಯವ, ಜಿಲ್ಲಾ ಸಹ ಕಾರ್ಯದರ್ಶಿ ಕೃಷ್ಣ ನಾಯಕ, ಎಂಜಿನಿಯರಿಂಗ್ ಕಾಲೇಜ್ ಘಟಕ ಅಧ್ಯಕ್ಷ ರೇವಣಸಿದ್ದು ವಿ, ಹಾಸ್ಟೆಲ್ ಘಟಕ ಅಧ್ಯಕ್ಷ ದಯಾನಂದ, ಬಾಲ ಸಂಘಂನ ಧನುಷ್ ದೊಡ್ಡಮನಿ, ತೇಜಸ್ ಎನ್ ಡಿ, ಆಧ್ಯಾ ಎನ್ ಆರ್, ಮೈನು ಎಲಿಬುಡ್ಡಿ, ಅಭಿ ಬಂಡಿವಡ್ಡರ, ಅನುಪಮ ಬಿ, ಮುಖಂಡರಾದ ಸುನೀಲ್ ಕುಮಾರ್ ಎಲ್, ವಸಂತ ವಿ, ಸುನಿಲ್ ಲಮಾಣಿ, ಕೃಷ್ಣ ಕೆ, ಮಂಜು ಹೆಚ್, ಜಯೇಶ್, ವಿಜಯ ಲಮಾಣಿ, ಆನಂದ ಎಲ್, ಗದಿಗೇಪ್ಪ ಹರಿಜನ,ಕಾರ್ತಿಕ ಕಮ್ಮಾರ, ಸೇರಿದಂತೆ ಅನೇಕ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.