ಬಿಹಾರದಲ್ಲಿ ಈ ವರ್ಷವೇ ವಿಧಾನಸಭೆ ಚುನಾವಣೆ ನಡೆಯಲಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿದೆ. ಈ ನಡುವೆ ಬಿಹಾರದಲ್ಲಿ ಎನ್‌ಡಿಎ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಇದಕ್ಕೆ ಬಿಜೆಪಿ ಸಚಿವರೊಬ್ಬರು ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಅಂಬೇಡ್ಕರ್ ಜಯಂತಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಬಿಹಾರ ಉಪ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ, ನಿತೀಶ್ ಕುಮಾರ್ ಅವರ ನೇತೃತ್ವದಲ್ಲೇ ನಾವು ಮುಂದಿನ ವಿಧಾನಸಭೆ ಚುನಾವಣೆಯನ್ನು ಎದುರಿಸಲಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ಚುನಾವಣೆ ಬಂದಾಗ ‘ಗೋಮಾತೆ’ ಸ್ಮರಣೆ: ದೇಸಿ ಹಸು ರಾಜ್ಯ ಮಾತೆಯಾದರೆ, ಇತರೆ ತಳಿಗಳು ಆಹಾರವೇ?
ಇತ್ತೀಚೆಗೆ ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರು ಸಾಮ್ರಾಟ್ ಚೌಧರಿ ಬಿಹಾರದ ಮುಂದಿನ ಮುಖ್ಯಮಂತ್ರಿಯಾಗಬಹುದು ಎಂದು ಊಹಿಸಿದ್ದರು. ಈ ಬಗ್ಗೆ ಸಾಮ್ರಾಟ್ ಅವರೇ ಸ್ಪಷ್ಟನೆ ನೀಡಿದ್ದಾರೆ.
“ಎನ್‌ಡಿಎ ಸರ್ಕಾರವು ಒಗ್ಗಟ್ಟಿನಲ್ಲಿದೆ. ನಾವು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನಾಯಕತ್ವದಲ್ಲಿ ವಿಧಾನಸಭೆ ಚುನಾವಣೆಯನ್ನು ಎದುರಿಸಲಿದ್ದೇವೆ. ನಿತೀಶ್ ಕುಮಾರ್ ಅವರು ಎನ್‌ಡಿಎಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದಾರೆ, ಅವರೇ ಸಿಎಂ ಅಭ್ಯರ್ಥಿ” ಎಂದು ಹೇಳಿದ್ದಾರೆ.
ಹಾಗೆಯೇ ನಿತೀಶ್ ಕುಮಾರ್ ಅವರನ್ನು ಹಾಡಿ ಹೊಗಳಿದ್ದಾರೆ. ಹಳ್ಳಿಗಳಿಗೆ ವಿದ್ಯುತ್ ಸೌಲಭ್ಯ ಒದಗಿಸಿದ್ದಾರೆ, ರಸ್ತೆ ಸಂಪರ್ಕ ಕಲ್ಪಿಸಿದ್ದಾರೆ, ಉದ್ಯೋಗ ಸೃಷ್ಟಿಗಾಗಿ ನಿರಂತರವಾಗಿ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ನಿತೀಶ್ ಕುಮಾರ್ ವಕ್ಫ್ ಮಸೂದೆ ವಿರೋಧಿಸಬಹುದೆಂಬ ಭರವಸೆ ಈಗಲೂ ಇದೆ: ಕಾಂಗ್ರೆಸ್ ನಾಯಕ ತಾರಿಕ್
ಈ ಹಿಂದೆ ಕೇಂದ್ರ ಸಚಿವ, ಹಿಂದೂಸ್ತಾನಿ ಅವಾಮ್ ಮೋರ್ಚಾ (ಎಚ್‌ಎಎಂ) ಮುಖ್ಯಸ್ಥ ಜಿತನ್ ರಾಮ್ ಮಾಂಜ್ಹಿ ಅವರೂ ಬಿಹಾರ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂಬ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು ಮತ್ತು ಎಲ್ಲಾ ಪ್ರಕ್ರಿಯೆಯೂ ಪ್ರಜಾಪ್ರಭುತ್ವ ಮಾದರಿಯಲ್ಲಿ ನಡೆಯಬೇಕು ಎಂದಿದ್ದರು.
“ಇದು ಪ್ರಜಾಪ್ರಭುತ್ವ ದೇಶ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಮಗೆ ಮತ ಹಾಕುವ ಹಕ್ಕನ್ನು ನೀಡಿದ್ದಾರೆ. ಚುನಾವಣೆಗೂ ಮುನ್ನ ಸಿಎಂ ಅಭ್ಯರ್ಥಿ ಬಗ್ಗೆ ನಾವು ಮಾತನಾಡುವುದು ಸರಿಯಲ್ಲ. 2025ರ ವಿಧಾನಸಭೆ ಚುನಾವಣೆ ನಡೆದ ಬಳಿಕ ಚುನಾಯಿತರಾದ ಶಾಸಕರುಗಳು ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬ ನಿರ್ಧಾರವನ್ನು ಕೈಗೊಳ್ಳುತ್ತಾರೆ” ಎಂದು ಹೇಳಿದ್ದರು.
