ರಾಜ ಮಹಾರಾಜರ ಇತಿಹಾಸ ಇರುವ ಈ ದೇಶದಲ್ಲಿ ತಳ ಸಮುದಾಯಕ್ಕೆ ,ದಲಿತರಿಗೆ ಯಾವುದೇ ಇತಿಹಾಸ ಇರಲಿಲ್ಲ. ಆ ಇತಿಹಾಸ ರಚನೆಯಾದದ್ದು ಬಿ .ಆರ್. ಅಂಬೇಡ್ಕರ್ ಸಂವಿಧಾನ ರಚಿಸಿದ ಬಳಿಕ. ನಮ್ಮ ದೇಶದಲ್ಲಿ ತಳ ಸಮುದಾಯವನ್ನು ಶೋಷಿಸಲು ಸೃಜನಾತ್ಮಕವಾಗಿ ದಾರಿಯನ್ನು ಕಂಡು ಹಿಡಿಲಾಗಿತ್ತು. ಆ ಸಂದರ್ಭದಲ್ಲಿ ಅಂಬೇಡ್ಕರ್ ರವರು ತಾನು ಇದರಿಂದ ಮುಕ್ತವಾಗಿ ತನ್ನ ಮಂದಿಯನ್ನು ಮುಕ್ತರಾಗಿಸಲು ಪ್ರಯತ್ನವನ್ನು ಮಾಡಿದರು. ಈಗ ಜಾತಿ ಗೀತಿ ಇಲ್ಲ ಎಂದು ನಾವು ಮಾತಿನಲ್ಲಿ ಹೇಳುತ್ತೇವೆ. ಆದರೆ ಎಲ್ಲಾ ಕಡೆಗಳಲ್ಲಿ ಜಾತಿಯೇ ಮುಂಚೂಣಿಗೆ ಬರುತ್ತದೆ ಮತ್ತು ವಿಜೃಂಬಿಸುತ್ತದೆ, ಹಾಗಾಗಿ ಈ ಮಧ್ಯೆ ಬದುಕಲು ಅಂಬೇಡ್ಕರ್ ತತ್ವ ಮುಖ್ಯವಾಗುತ್ತದೆ. ಬಸವಣ್ಣ ವೀರಶೈವರಿಗೆ, ಗೌತಮ ಬುದ್ಧ ಬೌದ್ಧರಿಗೆ, ನಾರಾಯಣ ಗುರುಗಳು ಬಿಲ್ಲವರಿಗೆ, ಅಂಬೇಡ್ಕರ್ ದಲಿತರಿಗೆ ಮಾತ್ರ ಸೀಮಿತಗೊಳಿಸ ಬಾರದು ಅವರ ಚಿಂತನೆಗಳು ಎಲ್ಲರಿಗೂ ಎಲ್ಲಾ ಸಮಯದಲ್ಲಿಯೂ ದಕ್ಕುವಂತವುಗಳು. ಬೇರೆ ದೇಶದ ಸಂವಿಧಾನವನ್ನು ನಮ್ಮ ಸಂವಿಧಾನಕ್ಕೆ ಹೋಲಿಸಿದಾಗ ಭಾರತದ ಸಂವಿಧಾನದ ಶ್ರೇಷ್ಠತೆ ಅರಿವಾಗುತ್ತದೆ ಬೇರೆ ದೇಶದ ಸಂವಿಧಾನಗಳು ಕಾಲಾಂತರದಲ್ಲಿ ಬದಲಾವಣೆಗಳನ್ನು ಕಂಡಿದೆ. ಆದರೆ ಭಾರತ ದೇಶದ ಸಂವಿಧಾನ 80 ವರ್ಷಗಳಿಂದ ಕೂಡ ಅದೇ ಇರುವುದು ಅದರ ಜೀವಂತಿಕೆಗೆ ಸಾಕ್ಷಿ. ಇಂತಹ ಜೀವಂತ ಸಂವಿಧಾನ ರಚನೆಯಾಗಲು ಮುಖ್ಯ ಕಾರಣ ಅಂಬೇಡ್ಕರ್ ರವರ ಚಿಂತನೆ ಎಂದು ಸಂಶೋಧನಾ ವಿದ್ಯಾರ್ಥಿ, ಯುವ ಚಿಂತಕ ಶ್ರೇಯಸ್ ಜಿ. ಕೋಟ್ಯಾನ್ ಅವರು ಉಡುಪಿ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಘಟಕದ ಆಶ್ರಯದಲ್ಲಿ ಓಸ್ಕರ್ ಸ್ಮಾರಕ ಕಾಂಗ್ರೆಸ್ ಭವನದಲ್ಲಿ ಜರಗಿದ, ಭಾರತ ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ 134ನೇ ಜನ್ಮದಿನೋತ್ಸವದಲ್ಲಿ ವಿಶೇಷ ಉಪನ್ಯಾಸಕರಾಗಿ ಆಗಮಿಸಿ ನುಡಿದರು.

ಅವರು ಮುಂದುವರಿಯುತ್ತಾ ಈ ದೇಶ ಬ್ರಿಟಿಷರಿಂದ ಸ್ವಾತಂತ್ರ ಪಡೆದರೆ ಸಾಲದು ಇಲ್ಲಿನ ಜನರ ಸಾಮಾಜಿಕವಾಗಿ ಸ್ವಾತಂತ್ರ್ಯವನ್ನು ಪಡೆದಾಗ ಮಾತ್ರ ನಿಜವಾದ ಸ್ವಾತಂತ್ರ್ಯವನ್ನು ದೊರಕುತ್ತದೆ ಎಂದು ಅಂಬೇಡ್ಕರ್ ನಂಬಿದ್ದರು. ಹೀಗಾಗಿ ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಗಾಂಧಿ ನೆಹರು ಹಿಂಸಾ ಮಾರ್ಗದಲ್ಲಿ ಚಳವಳಿಯನ್ನ ಮಾಡಿದರೆ, ಸುಭಾಷ್ ಭಗತ್ ಸಿಂಗ್ ಅಂತವರು ಕ್ರಾಂತಿ ಮಾರ್ಗವನ್ನು ಅನುಸರಿಸಿದರು. ಅಂಬೇಡ್ಕರ್ ಅವರು ಸಾಮಾಜಿಕ ಕ್ರಾಂತಿಯ ಮೂಲಕ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು. ಗಾಂಧಿ ಮತ್ತು ಅಂಬೇಡ್ಕರ್ ರವರದ್ದು ಸೈದ್ಧಾಂತಿಕ ಭಿನ್ನತೆ ಇತ್ತೇ ವಿನಃ ವೈಯಕ್ತಿಕ ಭಿನ್ನತೆ ಅಲ್ಲ. ಹೀಗಿದ್ದು ಕೂಡ ನೆಹರು, ಗಾಂಧಿ ಸಂವಿಧಾನ ರಚನೆಯ ನೇತೃತ್ವವನ್ನು ಅಂಬೇಡ್ಕರ್ ಅವರಿಗೆ ವಹಿಸಿಕೊಟ್ಟಿದ್ದರು. ಮಹಿಳೆಯರಿಗೆ ಉಪಯೋಗವಾಗುವ ಹಿಂದೂ ಕೋಡ್ ಬಿಲ್ಲನ್ನು ಜಾರಿ ಮಾಡಲು ನೆಹರು ಮತ್ತು ಅಂಬೇಡ್ಕರ್ ಬಯಸಿದ್ದರು. ಆದರೆ ಅವರ ಸಂಪುಟ ಅದಕ್ಕೆ ಸಹಕರಿಸಲಿಲ್ಲ. ಹಾಗಾಗಿ ಹಿಂದೂ ಕೋಡ್ ಬಿಲ್ ತಿರಸ್ಕೃತವಾಗುತ್ತದೆ. ಆಗ ಸಂಪುಟದಿಂದ ಹೊರಬರುವ ನಿರ್ಧಾರವನ್ನು ಅಂಬೇಡ್ಕರ್ ಕೈಗೊಳ್ಳುತ್ತಾರೆ .ಹಾಗಾಗಿ ಅಂಬೇಡ್ಕರ್ ರವರು ರಾಜಿರಹಿತ ಮನುಷ್ಯರಾಗಿದ್ದರು. ಇಂದು ಕೂಡ ರಿಸರ್ವೇಶನ್ ನ ಬಗ್ಗೆ ಗೇಲಿ ಮಾಡಲಾಗುತ್ತಿದೆ. ಅಕಾಡಮಿಕ್ ವಲಯ ಈ ಅಂಶಗಳು ಜಾಸ್ತಿಯಾಗಿವೆ. ಹಾಗಾಗಿ ವಿಶ್ವವಿದ್ಯಾಲಯಗಳ ಪ್ರೊಫೆಸರ್ ಹುದ್ದೆಗಳಲ್ಲಿ ದಲಿತರ ನೇಮಕಾತಿ ಆಗುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಮುಂದುವರಿದ ವರ್ಗಗಳ ಅಸಹನೆ. ಈ ಬಗ್ಗೆ ನಾವು ಎಚ್ಚರವನ್ನು ವಹಿಸಿಕೊಳ್ಳಬೇಕು ಇದು ಇಲ್ಲವಾಗಿಸಲು ಅಂಬೇಡ್ಕರ್ ಚಿಂತನೆಯನ್ನು ನಮ್ಮಲ್ಲಿ ಮೈಗೂಡಿಸಿಕೊಳ್ಳಬೇಕು. ಅದು ಆಗಲಿ ಎಂದು ನಾನು ಹಾರೈಸುತ್ತೇನೆ ಎಂದರು.
ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ,ಮಾಜಿ ಸಂಸದರಾದ ಕೆ.ಜಯಪ್ರಕಾಶ್ ಹೆಗ್ಡೆ ಕೆಪಿಸಿಸಿ ಉಪಾಧ್ಯಕ್ಷರಾದ ಎಮ್.ಎ. ಗಪೂರ್ ಸಂದರ್ಭೊಚಿತವಾಗಿ ಮಾತನಾಡಿದರು
ಸಭೆಯ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ವಹಿಸಿದ್ದರು.
ಪ್ರಾರಂಭದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಜಯಕುಮಾರ್ ಸ್ವಾಗತಿಸಿದರು. ಪರಿಶಿಷ್ಟ ಪಂಗಡ ಅಧ್ಯಕ್ಷ ಜಯರಾಮ್ ನಾಯ್ಕ್ ಸಂವಿಧಾನ ಪೀಠಿಕೆಯನ್ನು ವಾಚಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಡುಪಿ ನಗರಸಭೆ ಮಾಜಿ ಅಧ್ಯಕ್ಷ ಯುವರಾಜ್ ಪುತ್ತೂರು ಅವರು ವಂದಿಸಿದರು. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶ್ರೀಮತಿ ಗೋಪಿ ಕೆ .ನಾಯ್ಕ್ ಕಾರ್ಯಕ್ರಮ ನಿರ್ವಹಿಸಿದರು .
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಪ್ರಚಾರ ಸಮಿತಿ ಅಧ್ಯಕ್ಷ ಹರೀಶ್ ಕಿಣಿ, ಕೆಪಿಸಿಸಿ ಪ್ಯಾನಲಿಸ್ಟ್ ವೆರೋನಿಕ ಕರ್ನೇಲಿಯೋ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಬಿ.ಭುಜಂಗ ಶೆಟ್ಟಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಲೆ ,ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಶೆಟ್ಟಿ ಬಜಗೋಳಿ ,ಜಿಲ್ಲಾ ಇಂಟೆಕ್ ಅಧ್ಯಕ್ಷ ಕಿರಣ್ ಹೆಗಡೆ,ಜಿಲ್ಲಾ ಸೇವಾದಳದ ಅಧ್ಯಕ್ಷ ಕಿಶೋರ್ ಎರ್ಮಾಳ್ , ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶರ್ಪುದ್ದೀನ್ ಶೇಕ್ ಜಿಲ್ಲಾ ಲೀಗಲ್ ಸೆಲ್ ಅಧ್ಯಕ್ಷ ಹರೀಶ್ ಶೆಟ್ಟಿ ಪಾಂಗಳ, ಕಿಸಾನ್ ಸೆಲ್ ಅಧ್ಯಕ್ಷ ಎಲ್ಲೂರು ಶಶಿಧರ್ ಶೆಟ್ಟಿ, ಸಾಮಾಜಿಕ ಜಾಲತಾಣದ ಅಧ್ಯಕ್ಷ ರೋಶನ್ ಶೆಟ್ಟಿ ಕುಂದಾಪುರ ಮೊದಲಾದವರು ಉಪಸ್ಥಿತರಿದ್ದರು.