ಜವಾಹರ್ ಬಾಲ್ ಮಂಚ್ ವತಿಯಿಂದ ದಾವಣಗೆರೆಯಲ್ಲಿ ಮಕ್ಕಳ ವಿಶಿಷ್ಟ ಪ್ರತಿಭೆಗೆ ವೇದಿಕೆ ಕಲ್ಪಿಸುವ ಮೊದಲ ಬಾರಿಗೆ ರಾಜ್ಯ ಮಟ್ಟದ ಮಕ್ಕಳೋತ್ಸವ- 2025 ಆಯೋಜಿಸಲಾಗಿದ್ದು, ದಾವಣಗೆರೆ ದೃಶ್ಯಕಲಾ ಮಹಾವಿದ್ಯಾಲಯ ಸಭಾಂಗಣ ಮತ್ತು ಮಕ್ಕಳ ಥೀಮ್ ಪಾರ್ಕ್ ನಲ್ಲಿ ಕಾರ್ಯಕ್ರಮ ನಡೆಯಲಿದೆ.
ಮಕ್ಕಳೋತ್ಸವ ಕಾರ್ಯಕ್ರಮದ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಜವಾಹರ್ ಬಾಲ್ ಮಂಚ್ ರಾಜ್ಯಾಧ್ಯಕ್ಷ ಎಚ್.ಜೆ. ಮೈನುದ್ದೀನ್ “ರಾಜ್ಯ ಮಟ್ಟದ ಮಕ್ಕಳೋತ್ಸವದಲ್ಲಿ ಪ್ರತಿ ಜಿಲ್ಲೆಯಿಂದ ಐದು ಮಕ್ಕಳು ಸೇರಿದಂತೆ 300-400 ಮಕ್ಕಳು ಭಾಗವಹಿಸಲಿದ್ದಾರೆ.15 ರಿಂದ 18 ವರ್ಷದೊಳಗಿನ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ದಾವಣಗೆರೆಯಲ್ಲಿ ನಡೆಯುವ ರಾಜ್ಯ ಮಟ್ಟದ ಮಕ್ಕಳೋತ್ಸವದಲ್ಲಿ ಆಯ್ಕೆಯಾದವರು ಮೇ.15 ರಂದು ಜೈಪುರದಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆ ಮಾಡಲಾಗುತ್ತದೆ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಅಂಬೇಡ್ಕರ್ ಭವನದ ನಿರ್ಮಾಣಕ್ಕೆ ಶಂಕುಸ್ಥಾಪನೆ, ದಲಿತ ಹೋರಾಟಗಾರರ ಸಂತಸ.
‘ಮಕ್ಕಳ ವಿಶಿಷ್ಟ, ವಿಶೇಷ ಪ್ರತಿಭೆ ಅನಾವರಣಕ್ಕೆ ವೇದಿಕೆ ಕಲ್ಪಿಸುವ ಉದ್ದೇಶದೊಂದಿಗೆ ರಾಜ್ಯ ಮಟ್ಟದ ಮಕ್ಕಳೋತ್ಸವ ಹಮ್ಮಿಕೊಳ್ಳಲಾಗಿದೆ. ಹಾಡುಗಾರಿಕೆ, ನೃತ್ಯ, ಏಕಪಾತ್ರಾಭಿನಯ, ಮಿಮಿಕ್ರಿ, ಚಿತ್ರಕಲೆ, ಭಾಷಣ, ಸಂಗೀತ. ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆಯಲಿವೆ ಎಂದು ತಿಳಿಸಿದರು. “ಏ. 20 ರ ಬೆಳಗ್ಗೆ 10ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಮಾಜಿ ಮೇಯರ್ ಕೆ. ಚಮನ್ ಸಾಬ್, ರಾಜ್ಯ ಉಸ್ತುವಾರಿ ಜಯಕುಮಾರ್ ಪಿಳ್ಳಯ್, ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು ಭಾಗವಹಿಸುವರು” ಎಂದು ಮಾಹಿತಿ ನೀಡಿದ್ದಾರೆ.
ಜಿಲ್ಲಾಧ್ಯಕ್ಷ ಮಹಮ್ಮದ್ ಜಿಕ್ರಿಯಾ, ಲಿಯಾ ಖತ್ ಅಲಿ, ಸಲ್ಮಾಬಾನು, ಕೆ.ಎಚ್. ಪ್ರೇಮ, ಶಿಲ್ಪ, ಅಜಂ, ಫಯಾಜ್ ಅಹಮದ್, ನಾಗರಾಜ್, ದರ್ಶನ್ ಇತರರು ಜೊತೆಯಲ್ಲಿದ್ದರು.