ಉತ್ತರ ಪ್ರದೇಶದ ಕಾಸ್‌ಗಂಜ್‌ನಲ್ಲಿ ಏಪ್ರಿಲ್ 10ರಂದು ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ನಾಯಕ ಅಖಿಲೇಶ್ ಪ್ರತಾಪ್ ಸಿಂಗ್ ಸೇರಿದಂತೆ ಒಟ್ಟು 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರತಾಪ್ ಸಿಂಗ್ ಕಾಸ್‌ಗಂಜ್‌ನ ಶಾಸಕ ದೇವೇಂದ್ರ ರಜಪುತ್ ಮತ್ತು ಹರಿಓಂ ವರ್ಮಾ ಅವರ ಆಪ್ತ ಎಂದು ಹೇಳಲಾಗಿದೆ.
ಪ್ರತಾಪ್ ಸಿಂಗ್ ಕಳೆದ 15 ವರ್ಷಗಳಿಂದ ಉತ್ತರ ಪ್ರದೇಶದ ಆಡಳಿತಾರೂಢ ಬಿಜೆಪಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ. ಬಿಜೆಪಿ ಶಾಸಕ ಮತ್ತು ಕಾಸ್‌ಗಂಜ್‌ನ ಮಾಜಿ ಸಂಸದ ರಜ್‌ವೀರ್ ಸಿಂಗ್ ಅಲಿಯಾಸ್ ರಜ್ಜು ಬೈಯಾ ಅವರ ಜೊತೆಯೂ ಹಲವು ಬಾರಿ ಕಾಣಿಸಿಕೊಂಡಿದ್ದ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಉತ್ತರ ಪ್ರದೇಶ | ಅಪ್ರಾಪ್ತ ಬಾಲಕನ ಮೇಲೆ ಸ್ನೇಹಿತರಿಂದಲೇ ಸಾಮೂಹಿಕ ಅತ್ಯಾಚಾರ
ಜಿಲ್ಲಾ ಪೊಲೀಸರು ಕಾಸ್‌ಗಂಜ್‌ನ ಹಲವು ಪ್ರದೇಶಗಳಿಗೆ ಶೋಧ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿ ಬಿಜೆಪಿ ನಾಯಕನನ್ನು ಗಬ್ಬರ್ ಎಂದು ಕೂಡಾ ಕರೆಯಲಾಗುತ್ತದೆ. ಅಕ್ರಮ ಗಣಿಗಾರಿಕೆ ನಡೆಸಿದ ಆರೋಪವನ್ನು ಹೊತ್ತಿರುವ ಗಬ್ಬರ್ ಈಗಾಗಲೇ ಕ್ರಿಮಿನಲ್ ಹಿನ್ನೆಲೆ ಹೊಂದಿರುವವನು.
ಏಪ್ರಿಲ್ 10ರಂದು ಸುಮಾರು 17 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ತಾನು ಮತ್ತು ತನ್ನನ್ನು ವಿವಾಹವಾಗುವ ಯುವಕ ಪಡಿತರ ಚೀಟಿ ಸಂಬಂಧಿತ ಸಣ್ಣ ಕೆಲಸವೊಂದನ್ನು ಮುಗಿಸಿ ಹಿಂದಿರುಗುತ್ತಿದ್ದಾಗ ಹಸಿವಾದ ಕಾರಣ ಕಾಲುವೆಯೊಂದರ ಬಳಿ ಆಹಾರ ಸೇವಿಸಲು ನಿಂತೆವು. ಈ ವೇಳೆ ಆರೋಪಿಗಳು ಬಂದು ಹಲ್ಲೆ ನಡೆಸಿ, ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಸಂತ್ರಸ್ತೆ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ರೈಲಿನಿಂದ ಯುವತಿ ಅಪಹರಣ; ಮೂವರು ಕಾಮುಕರಿಂದ ಸಾಮೂಹಿಕ ಅತ್ಯಾಚಾರ
“ನಾವಿಬ್ಬರು ಜೊತೆಯಾಗಿ ಕೂತು ಆಹಾರ ಸೇವಿಸುವುದನ್ನು ನೋಡಿದ ಆರೋಪಿಗಳು ಬಂದು ನಮ್ಮ ಮೇಲೆ ಹಲ್ಲೆ ಮಾಡಿದರು. ನನ್ನನ್ನು ಎಳೆದೊಯ್ದು ಅತ್ಯಾಚಾರ ಮಾಡಿದ್ದಾರೆ. ನನ್ನ ಪ್ರೇಮಿಯ ಎದುರೇ ಮೂವರು ಅತ್ಯಾಚಾರ ನಡೆಸಿದ್ದಾರೆ” ಎಂದು ಸಂತ್ರಸ್ತೆ ಪೊಲೀಸರಿಗೆ ತಿಳಿಸಿದ್ದಾರೆ.
ಆರೋಪಿಗಳು ಜೀವ ಬೆದರಿಕೆ ಹಾಕಿ ಸ್ಥಳದಿಂದ ಪರಾರಿಯಾಗಿದ್ದು, ಸಂತ್ರಸ್ತರ ಬಳಿಯಿದ್ದ ಐದು ಸಾವಿರ ರೂಪಾಯಿ ನಗದು, ಚಿನ್ನದ ಸರ, ಕಿವಿಯೋಳೆಯನ್ನೂ ದೋಚಿದ್ದಾರೆ ಎಂದು ವರದಿಯಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಗಬ್ಬರ್ ಸೇರಿ ಒಟ್ಟು ಎಂಟು ಮಂದಿಯನ್ನು ಬಂಧಿಸಲಾಗಿದೆ. ಇನ್ನೂ ಇಬ್ಬರ ಹುಡುಕಾಟ ನಡೆಯುತ್ತಿದೆ.
