ರಾಜ್ಯ ಬಿಜೆಪಿಯಲ್ಲಿ ಪ್ರತಿಪಕ್ಷದ ನಾಯಕ ಯಾರು ಎಂಬ ಪ್ರಶ್ನೆ ಇನ್ನೂ ಕಗ್ಗಂಟಾಗಿಯೇ ಉಳಿದಿದೆ. ಬಜೆಟ್ ಅಧಿವೇಶನ ಜುಲೈ 3ರಿಂದ ಆರಂಭವಾಗಲಿದ್ದು, ಅಷ್ಟರೊಳಗೆ ಪ್ರತಿಪಕ್ಷ ನಾಯಕನನ್ನು ಬಿಜೆಪಿ ಆಯ್ಕೆ ಮಾಡಬೇಕಾಗಿದೆ. ಆದರೆ, ಚುನಾವಣಾ ಸೋಲಿನ ಬಗ್ಗೆ ಒಬ್ಬರ ಮೇಲೊಬ್ಬರು ಆರೋಪ-ಪ್ರತ್ಯಾರೋಪಗಳನ್ನು ಮಾಡುವುದರಲ್ಲಿಯೇ ಬಿಜೆಪಿ ನಾಯಕರು ತಲ್ಲೀನರಾಗಿದ್ದು, ವಿಪಕ್ಷ ನಾಯಕನ ಆಯ್ಕೆ ಬಗ್ಗೆ ಸೊಲ್ಲಿಲ್ಲದಂತಾಗಿದೆ.
ಬಿಜೆಪಿ ಮೂಲಗಳ ಪ್ರಕಾರ, ಪ್ರತಿಪಕ್ಷ ನಾಯಕನ ಹುದ್ದೆಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಸನಗೌಡ ಯತ್ನಾಳ್ ಮುಂಚೂಣಿಯಲ್ಲಿದ್ದಾರೆ. ಆದರೆ, ಪಕ್ಷದ ಹೈಕಮಾಂಡ್ ಇನ್ನೂ ಯಾವುದೇ ನಿರ್ಧಾರವನ್ನು ಪ್ರಕಟಿಸಿಲ್ಲ. ಜುಲೈ 3ರಿಂದ ಅಧಿವೇಶನ ಇರುವುದರಿಂದ ಜುಲೈ 2ರೊಳಗೆ ವಿಪಕ್ಷ ನಾಯಕನ ಆಯ್ಕೆಯಾಗುತ್ತದೆಂಬ ಭರವಸೆಯಲ್ಲಿ ಬಿಜೆಪಿಗರಿದ್ದಾರೆ.
ದೆಹಲಿ ನಾಯಕರು ಬಿಡುವಿಲ್ಲದ ವೇಳಪಟ್ಟಿ ಹೊಂದಿದ್ದಾರೆ. ಹೀಗಾಗಿ, ಈ ಬಗ್ಗೆ ಚರ್ಚೆಗೆ ಸಮಯವಿಲ್ಲದ ಕಾರಣ ವಿಳಂಬವಾಗುತ್ತಿದೆ ಎಂದು ರಾಜ್ಯ ಬಿಜೆಪಿಗರು ಹೇಳಿಕೊಳ್ಳುತ್ತಿದ್ದಾರೆ.
“ಒಂದು ಅಥವಾ ಎರಡು ದಿನಗಳಲ್ಲಿ ಹೆಸರು ಅಂತಿಮವಾಗಲಿದೆ. ಬೊಮ್ಮಾಯಿ ಮತ್ತು ಯತ್ನಾಳ್ ಹೆಸರುಗಳು ಮುಂಚೂಣಿಯಲ್ಲಿದ್ದರೂ, ಸಾಧಕ-ಬಾಧಕಗಳನ್ನು ಪಟ್ಟಿಮಾಡಿಕೊಂಡು ವಿಪಕ್ಷ ನಾಯಕನನ್ನು ಆಯ್ಕೆ ಮಾಡಬೇಕಾಗಿದೆ” ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿರುವುದಾಗಿ ಟಿಎನ್ಐಇ ವರದಿ ಮಾಡಿದೆ.
ಏತನ್ಮಧ್ಯೆ, ವಿಧಾನ ಪರಿಷತ್ನಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಎಂಎಲ್ಸಿ ಕೋಟಾ ಶ್ರೀನಿವಾಸ ಪೂಜಾರಿ ಅವರ ಹೆಸರು ಕೇಳಿಬರುತ್ತಿದೆ. ಅಲ್ಲದೆ, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಡಾ.ಸಿ.ಎನ್ ಅಶ್ವನಾರಾಯಣ್ ಮತ್ತು ವಿ ಸೋಮಣ್ಣ ಹೆಸರು ಮುಂಚೂಣಿಯಲ್ಲಿವೆ.