- 5 ಕೆಜಿ ಅಕ್ಕಿ ಬದಲಾಗಿ ಹಣ ನೀಡಲು ಸದ್ಯ ತೀರ್ಮಾನಿಸಲಾಗಿದೆ
- ಬಡವರ ಪರವಾಗಿ ರೂಪಿಸಿದ ಯೋಜನೆಯನ್ನು ಕೇಂದ್ರ ಧಿಕ್ಕರಿಸಿದೆ
ಅನ್ನ ಭಾಗ್ಯ ಯೋಜನೆಯಡಿ ಘೋಷಿಸಿದಂತೆ ತಲಾ 10 ಕೆಜಿ ಅಕ್ಕಿ ಕೊಡಲು ನಾವು ಈಗಲೂ ಸಿದ್ಧರಿದ್ದೇವೆ. ಆದರೆ ಕೇಂದ್ರ ಸರ್ಕಾರ ನಾವು ದುಡ್ಡು ಕೊಡುತ್ತೇವೆ ಎಂದರೂ ಅಕ್ಕಿ ಕೊಡುತ್ತಿಲ್ಲ. ಹೀಗಾಗಿ ಓಪನ್ ಮಾರ್ಕೆಟ್‌ನಲ್ಲಿ ನಾವು ಟೆಂಡರ್ ಕರೆಯುತ್ತಿದ್ದೇವೆ. ಅಲ್ಲಿವರೆಗೂ ಉಳಿದ 5 ಕೆಜಿ ಅಕ್ಕಿ ಬದಲಾಗಿ ಹಣ ನೀಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಸಚಿವ ಸಂಪುಟ ಸಭೆ ಬಳಿಕ ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಜನರಿಗೆ ನಾವು ಜುಲೈನಿಂದ ಅಕ್ಕಿ ಕೊಡುವುದಾಗಿ ಪ್ರಾಮಿಸ್ ಮಾಡಿದ್ದೇವೆ. ಆದರೆ, ಅಗತ್ಯವಿರುವಷ್ಟು ಅಕ್ಕಿ ನಮಗೆ ಸಿಗುತ್ತಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ನಾವು ಮನವಿ ಮಾಡಿದರೂ ಅವರು ಸೂಕ್ತವಾಗಿ ಸ್ಪಂದಿಸದೇ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.
“ಭಾರತೀಯ ಆಹಾರ ನಿಗಮ (ಎಫ್‌ಸಿಐ) ಮೊದಲು ಅಕ್ಕಿ ಕೊಡುವುದಾಗಿ ಹೇಳಿ, ನಂತರ ಅಕ್ಕಿ ಕೊಡುವುದಿಲ್ಲ ಎಂದು ತಿಳಿಸಿತು. ನಂತರ ನಾನು ಅಮಿತ್ ಶಾ ಅವರನ್ನು ಭೇಟಿಯಾದೆ. ನಮ್ಮ ಆಹಾರ ಇಲಾಖೆ ಸಚಿವರು ಕೇಂದ್ರ ಆಹಾರ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿದರೂ ಅಕ್ಕಿ ಕೊಡಲು ಮುಂದೆ ಬರಲಿಲ್ಲ” ಎಂದು ಕಿಡಿ ಕಾರಿದರು.
ಈ ಸುದ್ದಿ ಓದಿದ್ದೀರಾ? ವಿದ್ಯಾರ್ಥಿನಿ ಬರೆದ ಸಾಮಾಜಿಕ ಕಳಕಳಿ ಪತ್ರಕ್ಕೆ ಸಿಎಂ ಸಿದ್ದರಾಮಯ್ಯ ಮೆಚ್ಚುಗೆ
“ದಾಸ್ತಾನು ಇಲ್ಲದೇ ಹೋದರೆ ಪರವಾಗಿಲ್ಲ. ಆದ್ರೆ ದಾಸ್ತಾನು ಇಟ್ಟುಕೊಂಡು ಅಕ್ಕಿಯನ್ನು ಕೇಂದ್ರ ಸರ್ಕಾರ ಕೊಡುತ್ತಿಲ್ಲ. ಖಾಸಗಿಯವರಿಗೆ ಅಕ್ಕಿ ಮಾರಾಟ ಮಾಡಲು ಕೇಂದ್ರ ಅನುಮತಿ ನೀಡಿದೆ. ಆದರೆ ರಾಜ್ಯಗಳು ಮಾತ್ರ ಭಾಗಿಯಾಗದಂತೆ ನೋಡಿಕೊಂಡಿದೆ. ಇದರ ಅರ್ಥವೇನು? ಉದ್ದೇಶಪೂರ್ವಕವಾಗಿ ಅಕ್ಕಿ ವಿತರಿಸದೇ ಇರುವುದು. ಬಡವರ ಪರವಾಗಿ ರೂಪಿಸಿದ ಯೋಜನೆಗಳನ್ನು ಧಿಕ್ಕರಿಸುವುದು” ಎಂದು ಹರಿಹಾಯ್ದರು.
“ಕೇಂದ್ರ ಸರ್ಕಾರದ ನಡೆ ಜನಸಾಮಾನ್ಯರಿಗೆ ಮಾಡುತ್ತಿರುವ ದ್ರೋಹವಾಗಿದೆ. ಯಡಿಯೂರಪ್ಪ ಮತ್ತು ಬೊಮ್ಮಾಯಿ ಅವರು ಅಕ್ಕಿ ಕೊಡಿ ಎಂದು ನಮ್ಮನ್ನು ಕೇಳುತ್ತಿದ್ದಾರೆ. ದಯವಿಟ್ಟು ಬಡವರಿಗಾಗಿ ರೂಪಿಸಿರುವ ಅನ್ನ ಭಾಗ್ಯ ಯೋಜನೆಗೆ ಅಕ್ಕಿ ಕೊಡುವಂತೆ ಕೇಂದ್ರವನ್ನು ಕೋರಲಿ. ಅಕ್ಕಿ ಸಿಗದಿದ್ದರೆ ದುಡ್ಡು ಕೊಡಿ ಎಂದಿದ್ದರು. ಈಗ ದುಡ್ಡು ಕೊಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಅಕ್ಕಿ ವ್ಯವಸ್ಥೆ ಮಾಡಿಕೊಂಡು ಆಹಾರ ಧಾನ್ಯ ವಿತರಿಸುತ್ತೇವೆ” ಎಂದರು.
ನೇರವಾಗಿ ಡಿಬಿಟಿ ಮೂಲಕ ಹಣ
“ನಮ್ಮ ಸರ್ಕಾರ ನೀಡಿದ ಅನ್ನಭಾಗ್ಯ ಭರವಸೆಯಂತೆ 10 ಕೆಜಿ ಆಹಾರಧಾನ್ಯವನ್ನು ಜುಲೈ1 ರಿಂದ ನೀಡಬೇಕಾಗಿದೆ. ರಾಜ್ಯ ಸರ್ಕಾರಕ್ಕೆ ಅಕ್ಕಿ ಲಭ್ಯವಾಗುವವರೆಗೆ ಪ್ರತಿ ಕೆಜಿ ಅಕ್ಕಿಗೆ 34 ರೂ. ನಂತೆ 5 ಕೆಜಿ ಅಕ್ಕಿಯ ಮೊತ್ತ ರೂ.170 ನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಡಿಬಿಟಿ ಮಾಡಲು ತೀರ್ಮಾನಿಸಲಾಗಿದೆ” ಎಂದರು.
“ರಾಜ್ಯಕ್ಕೆ ಅಕ್ಕಿ ದಾಸ್ತಾನು ದೊರೆತ ತಕ್ಷಣದಿಂದ ಹಣದ ಬದಲು ಅಕ್ಕಿಯನ್ನು ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡುದಾರರಿಗೆ ವಿತರಿಸಲಾಗುವುದು. ರಾಜ್ಯದ ಜನರಿಗೆ ನಮ್ಮ ಸರ್ಕಾರ ನೀಡಿರುವ ಗ್ಯಾರೆಂಟಿಯಿಂದ ಹಿಂದೆ ಸರಿಯಬಾರದೆಂಬ ಉದ್ದೇಶದಿಂದ ಸಚಿವ ಸಂಪುಟದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ” ಎಂದು ವಿವರಿಸಿದರು.
“ಎನ್‌ಸಿಎಫ್, ನಫೆಡ್, ಕೇಂದ್ರೀಯ ಭಂಡಾರ ಈ ಮೂರು ಸಂಸ್ಥೆಗಳು ಅಕ್ಕಿ ಪೂರೈಸುತ್ತವೆ. ಆದರೆ, ನಮಗೆ ಅಕ್ಕಿ ವಿತರಣೆಗೆ ಸೂಚಿಸಿರುವ ದರ ಹೆಚ್ಚಾಗಿದೆ. ಎನ್‌ಸಿಎಫ್ ನವರು 32.94 ಪೈಸೆ ಸೂಚಿಸಿದ್ದು, ನಾವು 32.24 ರೂ.ಗಳಿಗೆ ನೀಡಬೇಕೆಂದು ಕೋರಿದ್ದೇವೆ. ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿಸಲು ಪಾರದರ್ಶಕವಾಗಿ ಟೆಂಡರ್ ಕರೆಯಲಾಗುತ್ತಿದೆ” ಎಂದು ತಿಳಿಸಿದರು.
ಬಿಜೆಪಿ ಸವಾಲನ್ನು ಸರಿಗಟ್ಟಿದ ಸಿಎಂ
ರಾಜ್ಯ ಸರ್ಕಾರ ಬಡವರು ಮತ್ತು ಮಧ್ಯಮ ವರ್ಗದವರಿಗೆ ಅಕ್ಕಿ ಕೊಡಲು ಶ್ರಮಿಸುತ್ತಿದ್ದಾಗ ಬಿಜೆಪಿಯು ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರವನ್ನು ಆಡಿಕೊಂಡಿತ್ತು. ಅಕ್ಕಿ ಕೊಡಲು ಸಾಧ್ಯವಾಗದಿದ್ದರೆ ಅಕ್ಕಿ ಮೊತ್ತದ ಹಣ ಕೊಡಿ ಎನ್ನುವ ಸವಾಲನ್ನು ಸರ್ಕಾರದ ಮುಂದೆ ಇಟ್ಟಿತ್ತು. ಈ ಸವಾಲನ್ನು ಸರಿಗಟ್ಟಿದ ಸರ್ಕಾರ ಅಕ್ಕಿ ಬದಲಿಗೆ ಅಕ್ಕಿ ಮೊತ್ತದ ಹಣವನ್ನು ನೇರವಾಗಿ ಅರ್ಹ ಫಲಾನುಭವಿಗಳ ಖಾತೆಗೆ ಹಾಕುವ ನಿರ್ಧಾರ ತೆಗೆದುಕೊಂಡು ಬಿಜೆಪಿಯ ಬತ್ತಳಿಕೆಯನ್ನು ಬರಿದು ಮಾಡಿದೆ.