ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಕುಪ್ಪೆಪದವು ಗ್ರಾಮ ಪಂಚಾಯಿತಿ ವ್ಯಾಪ್ತಿಯ 97 ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಿ ಏಳು ವರ್ಷಗಳು ಕಳೆದರೂ ನಿವೇಶನ ಸ್ವಾಧೀನ ನೀಡದೆ ವಂಚಿಸುತ್ತಿರುವುದನ್ನು ಖಂಡಿಸಿ, ನಿವೇಶನ ರಹಿತರ ಹೋರಾಟ ಸಮಿತಿ ನೇತೃತ್ವದಲ್ಲಿ ಸಂತ್ರಸ್ತರು ಗುರುಪುರ ನಾಡ ಕಚೇರಿ ಎದುರು ಪ್ರತಿಭಟನೆ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
2018ರಲ್ಲಿ ಶಾಸಕ ಭರತ್ ಶೆಟ್ಡಿ ನೇತೃತ್ವದಲ್ಲಿ ತರಾತುರಿಯುಲ್ಲಿ 97 ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಿ ನಿವೇಶನಗಳನ್ನು ಗುರುತು ಮಾಡಲಾಗಿತ್ತು. ಆ ತರುವಾಯ ನಿವೇಶನ ಸ್ವಾಧೀನ ನೀಡದೆ ಬಡ ನಿವೇಶನರಹಿತರನ್ನು ಸತಾಯಿಸಲಾಗುತ್ತಿತ್ತು. ಕಳೆದ ಜನವರಿಯಲ್ಲಿ ಸಂತ್ರಸ್ತರು ಹೋರಾಟ ಸಮಿತಿ ರಚಿಸಿಕೊಂಡು ಜಮೀನು ಸ್ವಾಧೀನ ನೀಡುವಂತೆ ಹೋರಾಟ ಆರಂಭಿಸಿದ್ದರು. ಈ ಕುರಿತು ಜನವರಿಯಲ್ಲಿ ಕುಪ್ಪೆಪದವು ಪಂಚಾಯಿತಿ ಎದುರು ನಡೆದ ಧರಣಿಯಲ್ಲಿ ಮನವಿ ಸ್ವೀಕರಿಸಲು ಆಗಮಿಸಿದ ಡೆಪ್ಯೂಟಿ ತಹಶೀಲ್ದಾರ್, ಫೆಬ್ರವರಿ ಕೊನೆಯಲ್ಲಿ ನಿವೇಶನ ಸ್ವಾಧೀನ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ತಾಲೂಕು ಆಡಳಿತ ಮಾತು ತಪ್ಪಿದ್ದರಿಂದ ಗುರುಪುರ ನಾಡ ಕಚೇರಿ ಎದುರು ಪ್ರತಿಭಟನಾ ಪ್ರದರ್ಶನ ನಡೆಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಉಪ ತಹಶೀಲ್ದಾರ್ “ನಿವೇಶನ ಸ್ವಾಧೀನ ನೀಡಲು ತಾಂತ್ರಿಕ ಸಮಸ್ಯೆಗಳು ಇವೆ” ಎಂದು ಹೇಳಿದ್ದರಿಂದ ಸಂತ್ರಸ್ತರನ್ನು ಸಿಟ್ಟಿಗೆಬ್ಬಿಸಿತು.

“ಹಕ್ಕುಪತ್ರ ಪಡೆದಿರುವ ಸಂತ್ರಸ್ತ ನಿವೇಶನ ರಹಿತರು ಒಗ್ಗೂಡಿ, ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಬೇಕಾಗುತ್ತದೆ. ಜತೆಗೆ ಗುರುತಿಸಿರುವ ಜಮೀನನ್ನು ನೇರ ಕಾರ್ಯಾಚರಣೆ ಮೂಲಕ ವಶಕ್ಕೆ ಪಡೆಯಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಬಡ ನಿವೇಶನ ರಹಿತರನ್ನು ಕಡೆಗಣಿಸಿರುವ ಶಾಸಕ ಭರತ್ ಶೆಟ್ಟಿ, ಈ ಕುರಿತು ಧ್ವನಿ ಎತ್ತದ ಕಾಂಗ್ರೆಸ್ ಮುಖಂಡ ಇನಾಯತ್ ಅಲಿಯ ನಡೆಯ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಹಾಸನ | ಹಿರೀಕಡಲೂರು ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ
ಪ್ರತಿಭಟನಾ ಪ್ರದರ್ಶನವನ್ನು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಉದ್ಘಾಟಿಸಿದರು. ಕಾರ್ಮಿಕ ಮುಂದಾಳುಗಳಾದ ಸದಾಶಿವ ದಾಸ್, ನೋಣಯ್ಯ ಗೌಡ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ನಿವೇಶನ ರಹಿತರ ಹೋರಾಟ ಸಮಿತಿಯ ಸಂಚಾಲಕಿ ವಸಂತಿ ಕುಪ್ಪೆಪದವು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕರ್ನಾಟಕ ಪ್ರಾಂತ ರೈತ ಸಂಘದ ವಲಯ ಅಧ್ಯಕ್ಷ ಬಾಬು ಸಾಲ್ಯಾನ್, ಗುರುಪುರ ವಲಯ ಬೀಡಿ ಕಾರ್ಮಿಕರ ಸಂಘದ ಮುಖಂಡರಾದ ಹೊನ್ನಯ್ಯ ಅಮೀನ್, ವಾರಿಜ ಕುಪ್ಪೆಪದವು, ಹೋರಾಟ ಸಮಿತಿಯ ಸದಾಶಿವ ಕಟ್ಟೆಮಾರ್, ಜಮೀಲಾ ಮಾಣಿಪಳ್ಳ, ಮಜೀದ್ ಕಲ್ಲಾಡಿ, ಕುಸುಮಾ ಕುಪ್ಪೆಪದವು, ರಜಿಯಾ ಮಾಣಿಪಳ್ಳ, ಬಾಲಕೃಷ್ಣ ಶೆಟ್ಟಿ ಮತ್ತಿತರರು ಇದ್ದರು.
