ಅಂಬೇಡ್ಕರ್ ಅವರು ಕೇವಲ ಒಂದು ಜಾತಿ, ವರ್ಗಕ್ಕೆ ವೀಸಲಾದವರಲ್ಲ, ಅವರು ವಿಶ್ವಮಾನವ. ಹಾಗಾಗಿ ಅವರ ನೆನಪು ಕೇವಲ ದಿನಾಚರಣೆಗಷ್ಟೇ ಸೀಮಿತವಾಗಬಾರದು. ಅವರ ನಡವಳಿಕೆ ಹಾಗೂ ಆಲೋಚನೆಗಳನ್ನು ಪ್ರತಿಯೊಬ್ಬರೂ ತಮ್ಮ ನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮುಖ್ಯೋಪಧ್ಯಾಯ ಎಂ ಕೆ ವೇದಾಂತ್ ಅವರು ಕರೆ ನೀಡಿದರು.
ಹಾಸನ ತಾಲೂಕಿನ ಹಿರೀಕಡಲೂರು ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135ನೇ ಜಯಂತಿ ಕಾರ್ಯಕ್ರಮಕ್ಕೆ ಆಗಮಿಸಿದವರನ್ನು ಸ್ವಾಗತಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂಸಿ ಸದಸ್ಯ ಎಚ್ ಜಿ ಪಾಂಡುರಂಗ ಮಾತನಾಡಿ, “ಡಾ ಬಿ ಆರ್ ಅಂಬೇಡ್ಕರ್ ಅವರು ಒಂದು ಜಾತಿಗೆ ಸೀಮಿತವಲ್ಲ. ದೇಶದ ಕಟ್ಟ ಕಡೆಯ ವ್ಯಕ್ತಿಯೂ ಘನತೆಯಿಂದ ಬದುಕಬೇಕೆಂದು ಅಂಬೇಡ್ಕರ್ ಅವರು ತಮ್ಮ ಜೀವನದುದ್ದಕ್ಕೂ ಹೋರಾಟ ಮಾಡಿದರು. ಶಿಕ್ಷಣ, ಸಂಘಟನೆ, ಹೋರಾಟ ಎಂಬ ಘೋಷ ವಾಕ್ಯಗಳನ್ನು ಸಾರಿದರು. ನಮ್ಮ ದೇಶದ ಮೇಲ್ಜಾತಿಯ ಮಹಿಳೆಯರ ಬದುಕು ದಲಿತರಷ್ಟೇ ಹೀನಾಯವಾಗಿತ್ತು. ಪುರುಷ ಪ್ರಾಧಾನ್ಯತೆಯ ಈ ದೇಶದಲ್ಲಿ ಮಹಿಳೆಯರನ್ನು ಶೋಷಣೆಗೊಳಪಡಿಸಿದ್ದರು, ಅವರ ಘನತೆಯ ಬದುಕನ್ನು ಕಿತ್ತುಕೊಂಡಿದ್ದರು. ಮಹಿಳೆಯರ ಹಕ್ಕುಗಳಿಗಾಗಿ ಅಂಬೇಡ್ಕರ್ ರಚಿಸಿದ ʼಹಿಂದೂ ಕೋಡ್ ಬಿಲ್ʼನಿಂದ ಇಂದು ಮಹಿಳೆಯರು ಘನತೆಯಿಂದ ಬದುಕುವಂತಾಗಿದೆ” ಎಂದು ಹೇಳಿದರು.
“ಕೇವಲ ಅಡುಗೆ ಮನೆಗೆ ಸೀಮಿತವಾಗಿದ್ದ ಮಹಿಳೆಯರು ಇಂದು ಅಂತರಿಕ್ಷದವರೆಗೂ ಸಾಗುವಂತಹ ಹಕ್ಕು, ಘನತೆಯನ್ನು ಅಂಬೇಡ್ಕರ್ ಕಲ್ಪಿಸಿಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಪ್ರತಿ ಕ್ಷೇತ್ರದಲ್ಲಿಯೂ ಕೂಡ ಮಹಿಳೆಯರು ತನ್ನದೇ ಆದ ಛಾಪನ್ನು ಮೂಡಿಸಲು ಸಾಧ್ಯವಾಗಿದೆ. ಹಾಗಾಗಿ ಅಂಬೇಡ್ಕರ್ ಅವರನ್ನು ಕೇವಲ ʼಜಾತಿ ಐಕಾನ್ʼ ಆಗಿ ಗುರುತಿಸುವುದು ಸೂಕ್ತವಲ್ಲ. ಪ್ರಸ್ತುತ ದಿನಗಳಲ್ಲಿಯೂ ಕೂಡ ಅಂಬೇಡ್ಕರ್ ಅವರನ್ನು ವಿದೇಶಗಳಲ್ಲಿಯೂ ಸ್ಮರಿಸುತ್ತಾರೆ. ಅವರು ವಿಶ್ವ ಮಾನವರಾಗಿ ಮಾರ್ಪಟ್ಟಿದ್ದಾರೆ” ಎಂದು ತಿಳಿಸಿದರು.

“ನಮ್ಮ ಗ್ರಾಮದ ಶಾಲೆಯಲ್ಲಿ ಆಚರಿಸುವ ಯಾವುದೇ ದಿನಾಚರಣೆ ಸೇರಿದಂತೆ ಹಲವು ಮಹನೀಯರ ಜಯಂತಿ ಆಚರಣೆಗೆ ಊರಿನ ಬಹುತೇಕರು ಆಗಮಿಸುತ್ತಾರೆ, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಇದರಿಂದ ಸಮಾರಂಭಕ್ಕೆ ಒಂದು ರೀತಿಯ ಮೆರಗು ಬರುತ್ತದೆ. ಆದರೆ ಅಂಬೇಡ್ಕರ್ ಜಯಂತಿ ಆಚರಣೆಗೆ ಗ್ರಾಮಸ್ಥರಾಗಲಿ, ಸ್ಥಳೀಯ ಜನಪ್ರತಿನಿಧಿಗಳಾಗಲಿ ಕಾರ್ಯಕ್ರಮಕ್ಕೆ ಆಗಮಿಸದಿರುವುದು ವಿಷಾದನೀಯ. ಆದರೆ ಮುಂದಿನ ದಿನಗಳಲ್ಲಿ ಇತರೆ ಜಯಂತಿಗಳಿಗೆ ಆಗಮಿಸಿದಾಗ ಅವರಿಗೆ ಉತ್ತರ ನೀಡಲಾಗುವುದು ಮತ್ತು ಇದೇ ರೀತಿ ಮುಂದುವರೆದರೆ ತಕ್ಕ ಉತ್ತರ ನೀಡಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಸ್ಥಳೀಯ ನಿವಾಸಿ ಕವನಾ ಅವರು ಅಂಬೇಡ್ಕರ್ ವಿಚಾರ, ಹೋರಾಟ, ಅಸ್ಪೃಶ್ಯತೆ ಹಾಗೂ ಮುಂದಿನ ನಡೆಗಳ ಕುರಿತು ಮಾತನಡಿದರು.
ಶಾಲಾ ಮಕ್ಕಳು ದೇಶ ಭಕ್ತಿ ಗೀತೆ ಹಾಡಿದರು, ಮನುಪ್ರಕಾಶ್ ಮತ್ತು ಕವನ ದಂಪತಿ ಅಂಬೇಡ್ಕರ್ ಗೀತೆಗಳನ್ನು ಹಾಡಿದರು. ರಕ್ಷಿತ್ ಎಚ್ ಬಿ ವಂದನಾರ್ಪಣೆ ಮಾಡಿದರು. ಬಳಿಕ ಸಿಹಿ ಹಂಚಿಕೆಯೊಂದಿಗೆ ಕಾರ್ಯಕ್ರಮ ಅಂತ್ಯಗೊಳಿದರು.
ಎಸ್‌ಡಿಎಂಸಿ ಸದಸ್ಯ ಅವಿನಾಶ್, ಶಾಲೆಯ ಹಳೇ ವಿದ್ಯಾರ್ಥಿಗಳಾದ ರಕ್ಷಿತ್ ಎಚ್ ಬಿ, ರತೀಶ್ ಎಚ್ ಬಿ, ರಾಮು, ಲಿಖಿತ್ ಎಚ್ ಪಿ, ಜೀವನ್, ಶಶಿಕುಮಾರ, ಪ್ರವೀಣ, ಕಿಶೋರ್ ಎಚ್ ಕೆ, ಕಿರಣ ಎಚ್ ಕೆ, ಸುಮಂತ್, ಚಿರಂತ್, ಚಂದು, ಸೇರಿದಂತೆ ಶಾಲಾ ವಿದ್ಯಾರ್ಥಿಗಳು, ಶಿಕ್ಷಕಿ ವಸುಧಾ ಹಾಗೂ ಅಡುಗೆ ಸಿಬ್ಬಂದಿ ಇದ್ದರು.
ಹಿರೀಕಡಲೂರು ಗ್ರಾಮದ ದಲಿತ ಕಾಲೋನಿಯಲ್ಲಿ ಸ್ಥಳೀಯ ಯುವಜನರು ಹಾಗೂ ಬುದ್ಧಿಜೀವಿಗಳು ಒಗ್ಗೂಡಿ ಅಂಬೇಂಡ್ಕರ್ ಜಯಂತಿಯನ್ನು ಆಚರಿಸುವ ಮೂಲಕ ಸಂಭ್ರಮಿಸಿದರು.

ಈ ಸುದ್ದಿ ಓದಿದ್ದೀರಾ? ತುಮಕೂರು | ಭಾರತ ಭಾಗ್ಯವಿಧಾತನ ಅಪರೂಪದ ಛಾಯಾಚಿತ್ರ ಪ್ರದರ್ಶನ
ಹೊನ್ನಾವರ ಗ್ರಾಮ ಪಂಚಾಯಿತಿಯಲ್ಲಿ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ ಪಿ ಕೆ ಸುರೇಶ್ ಮಾತನಾಡಿ, “ಇವತ್ತು ನಾವು ಬದುಕಲು ಗಾಳಿ, ನೀರು ಸೇರಿದಂತೆ ಪಂಚಭೂತಗಳು ಎಷ್ಟು ಮುಖ್ಯವಾಗಿವೆಯೋ, ಡಾ ಬಿ ಆರ್ ಅಂಬೇಡ್ಕರ್ ಅವರು ನಮಗೆ ಕೊಟ್ಟಿರುವ ಕಾನೂನುಗಳೂ ಕೂಡ ಅಷ್ಟೇ ಮುಖ್ಯವಾಗಿವೆ. ದೇಶದ ಪ್ರತಿಯೊಬ್ಬ ಪ್ರಜೆಗೂ ಕೂಡ ಕಾನೂನು ಅತ್ಯಗತ್ಯ. ಹಾಗಾಗಿ ಪ್ರತಿಯೊಬ್ಬರಿಗೂ ಕಾನೂನಿನ ಅರಿವಿರಬೇಕು” ಎಂದು ತಿಳಿಸುತ್ತ ಶುಭಾಷಯ ಕೋರಿದರು.
ಪಿಡಿಒ ಆರ್ ಪ್ರಭಾ ಅಂಬೇಡ್ಕರ್ ಕುರಿತು ಮಾತನಾಡಿದರು. ಪಂಚಾಯಿತಿಯ ಸದಸ್ಯರು, ಗ್ರಾಮಸ್ಥರು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಗ್ರಂಥಪಾಲಕ ಎಚ್ ಜಿ ಪಾಂಡುರಂಗ ಇದ್ದರು.