ಗುಬ್ಬಿ ತಾಲ್ಲೂಕಿನ ನಿಟ್ಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನಿಟ್ಟೂರು ಸದಸ್ಯೆ ಮಂಗಳಗೌರಮ್ಮ ಅಧ್ಯಕ್ಷರಾಗಿ, ನಿಟ್ಟೂರು ಮತ್ತೋರ್ವ ಸದಸ್ಯ ನರಸಯ್ಯ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು.
ಪಂಚಾಯಿತಿ ಕಚೇರಿಯಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾ ಅಧಿಕಾರಿ ಶಿವಪ್ರಕಾಶ್ ಹಾಗೂ ಕಂದಾಯ ನಿರೀಕ್ಷಕ ಗುರು ಪ್ರಸಾದ್ ಚುನಾವಣಾಧಿಕಾರಿಯಾಗಿ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.
ಈ ಹಿಂದೆ ಅಧ್ಯಕ್ಷರಾಗಿದ್ದ ಸುಮಂಗಳ ಹಾಗೂ ಉಪಾಧ್ಯಕ್ಷರಾಗಿದ್ದ ಮಂಗಳಗೌರಮ್ಮ ನೀಡಿದ ರಾಜೀನಾಮೆ ಹಿನ್ನಲೆ ತೆರವಾದ ಸಾಮಾನ್ಯ ಮಹಿಳಾ ಮೀಸಲು ಅಧ್ಯಕ್ಷ ಸ್ಥಾನ ಹಾಗೂ ಹಿಂದುಳಿದ ವರ್ಗ(ಅ) ಮೀಸಲಿನ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಏಕೈಕ ಅಭ್ಯರ್ಥಿಯಾಗಿದ್ದ ಕಾರಣ ಮಂಗಳಗೌರಮ್ಮ ಅಧ್ಯಕ್ಷೆಯಾಗಿ, ನರಸಯ್ಯ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ ಘೋಷಣೆ ಮಾಡಲಾಯಿತು. ಉಪಾಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ ನೀಡಿದ ಮಂಗಳಗೌರಮ್ಮ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದು ಎಲ್ಲಾ ಸದಸ್ಯರಲ್ಲಿ ಸಂತಸ ಮೂಡಿದೆ.
ನೂತನ ಅಧ್ಯಕ್ಷೆ ಮಂಗಳಗೌರಮ್ಮ ಮಾತನಾಡಿ ಪ್ರಮುಖ ವ್ಯಾಪಾರಿ ಕೇಂದ್ರ ಎನಿಸಿದ ರಾಷ್ಟ್ರೀಯ ಹೆದ್ದಾರಿ ರಸ್ತೆಯ ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ಅಗತ್ಯ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಅಧ್ಯಕ್ಷರ ಜೊತೆ ಸೇರಿ ಎಲ್ಲಾ ಸದಸ್ಯರ ವಿಶ್ವಾಸ ಗಳಿಸಿ ಕೆಲಸ ಮಾಡುತ್ತೇನೆ. ಚುನಾಯಿತ ಪ್ರತಿನಿಧಿಗಳ ಮೂಲಕ ಸರ್ಕಾರದಿಂದ ಅನುದಾನ ತಂದು ಕೆಲಸ ಮಾಡಿ ಅಭಿವೃದ್ದಿ ವಿಚಾರದಲ್ಲಿ ಮಾದರಿ ಗ್ರಾಮ ಪಂಚಾಯಿತಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ನೂತನ ಉಪಾಧ್ಯಕ್ಷ ನರಸಯ್ಯ ಮಾತನಾಡಿ ಎಚ್ ಎಎಲ್ ಘಟಕ ಸ್ಥಾಪನೆ ಮೂಲಕ ದೇಶಕ್ಕೆ ಪರಿಚಯವಾದ ನಿಟ್ಟೂರು ಗ್ರಾಮ ಪಂಚಾಯಿತಿ ಪಟ್ಟಣ ಪ್ರದೇಶದಂತೆ ಬೆಳೆದ ಗ್ರಾಮವಾಗಿದೆ. ಜೊತೆಯಲ್ಲಿ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ಅವಶ್ಯ ಸೌಕರ್ಯ ಒದಗಿಸುತ್ತೇವೆ. ಆದಾಯದ ಮೂಲ ಹೆಚ್ಚಿಸಿ ತೆರಿಗೆ ಹಣದಲ್ಲಿ ಶಾಲೆ, ಆಸ್ಪತ್ರೆ, ಅಂಗನವಾಡಿ, ಕುಡಿಯುವ ನೀರಿನ ಘಟಕ, ರಸ್ತೆ ಚರಂಡಿ ಹೀಗೆ ಅನೇಕ ಸವಲತ್ತು ಒದಗಿಸಿ ಮಾದರಿ ಗ್ರಾಮ ಪಂಚಾಯಿತಿಯಾಗಿ ಮಾರ್ಪಾಡು ಮಾಡುತ್ತೇವೆ ಎಂದರು.
ಇದೇ ಸಂದರ್ಭದಲ್ಲಿ ನೂತನ ಉಪಾಧ್ಯಕ್ಷರ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾರನಹಳ್ಳಿ ಪ್ರಭಣ್ಣ, ಮುಖಂಡರಾದ ನಾಗರಾಜ್, ಜಗದೀಶ್, ಗಿರೀಶ್, ಯೋಗೀಶ್ ಸೇರಿದಂತೆ ಎಲ್ಲಾ ಗ್ರಾಪಂ ಸದಸ್ಯರು, ಪಿಡಿಓ ಉಮೇಶ್ ಇತರರು ಇದ್ದರು.