ರಾಜ್ಯ ಸರ್ಕಾರ ಇತ್ತೀಚೆಗೆ ಸಚಿವ ಸಂಪುಟದಲ್ಲಿ ಮಂಡಿಸಿದ ಜಾತಿ ಗಣತಿ (ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ) ವರದಿಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಇದೀಗ ರಾಜ್ಯ ಒಕ್ಕಲಿಗರ ಸಂಘ ಈ ವರದಿ ಜಾರಿಗೆ ಆಕ್ರೋಶ ವ್ಯಕ್ತಪಡಿಸಿದೆ. ವರದಿಯನ್ನು ತಿರಸ್ಕರಿಸುವಂತೆ ಆಗ್ರಹಿಸಿ ಲಿಂಗಾಯತ ಸೇರಿದಂತೆ ಇತರ ಸಮುದಾಯಗಳೊಂದಿಗೆ ಸೇರಿ ಸಂಘಟಿತ ಹೋರಾಟಕ್ಕೆ ನಿರ್ಧರಿಸಿದೆ.
ಹಿಂದುಳಿದ ವರ್ಗಗಳ ಜಾತಿಗಣತಿ ವರದಿಯನ್ನು ರಾಜ್ಯ ಸಂಪುಟ ಸಭೆ ಸ್ವೀಕರಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಒಕ್ಕಲಿಗರ ಮಂಗಳವಾರ ಸಂಘ ತುರ್ತು ಸಭೆ ನಡೆಸಿತು. ಸಭೆಯಲ್ಲಿ ಕಾಂತರಾಜು ನೇತೃತ್ವದ ಆಯೋಗ ನಡೆಸಿದ ಸಮೀಕ್ಷೆಯ ದತ್ತಾಂಶಗಳನ್ನು ಆಧರಿಸಿ ಜಯಪ್ರಕಾಶ್ ಹೆಗಡೆ ನೇತೃತ್ವದ ಆಯೋಗ ನೀಡಿರುವ ವರದಿ ಸಂಪೂರ್ಣ ಅವೈಜ್ಞಾನಿಕವಾಗಿದೆ ಎನ್ನುವ ತೀರ್ಮಾನಕ್ಕೆ ಬರಲಾಯಿತು.
ಸಂಘದ ಅಧ್ಯಕ್ಷ ಕೆಂಚಪ್ಪಗೌಡ ಈ ದಿನ.ಕಾಂ ಜೊತೆ ಮಾತನಾಡಿ, “ಏಪ್ರಿಲ್ 17ರಂದು ನಡೆಯಲಿರುವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರ ಈ ವರದಿಯ ಬಗ್ಗೆ ಯಾವ ತೀರ್ಮಾನ ಕೈಗೊಳ್ಳಲಿದೆ ಎಂಬುದನ್ನು ನೋಡಿಕೊಂಡು ಮುಂದಿನ ನಿರ್ಧಾರ ಮಾಡುತ್ತೇವೆ” ಎಂದು ಹೇಳಿದರು.
“ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ವರದಿ ಬಗ್ಗೆ ನಮಗೆ ಒಪ್ಪಿಗೆ ಇಲ್ಲ. ಮರಳಿ ಅಧ್ಯಯನ ನಡೆಯಲಿ. ಅಧ್ಯಯನ ನಡೆಯದಿದ್ದರೆ ಬೆಂಗಳೂರು ಮತ್ತು ಕರ್ನಾಟಕ ಬಂದ್‌ಗೆ ಕರೆ ನೀಡುತ್ತೇವೆ. ಮರಳಿ ಅಧ್ಯಯನ ನಡೆಸಿದರೆ ಮೂರು ತಿಂಗಳಲ್ಲಿ ಮುಗಿಸಬಹುದು. ನಾವೂ ಈ ಬಗ್ಗೆ ಯೋಚಿಸುತ್ತಿದ್ದು ನಮ್ಮ ಸಮುದಾಯ ಜಾತಿ ಜನಗಣತಿನ್ನು ನಾವು ಪ್ರತ್ಯೇಕವಾಗಿ ಮಾಡಿಕೊಳ್ಳುತ್ತೇವೆ” ಎಂದು ಸ್ಪಷ್ಟಪಡಿಸಿದರು.
“ಜಯಪ್ರಕಾಶ್ ಹೆಗಡೆ ನೇತೃತ್ವದ ಆಯೋಗ ಸಲ್ಲಿಸಿರುವ ವರದಿ ಸಂಪೂರ್ಣ ಅವೈಜ್ಞಾನಿಕವಾಗಿದೆ. ಹತ್ತು ವರ್ಷಗಳ ಹಿಂದೆ ನಡೆದ ಸಮೀಕ್ಷೆಯನ್ನು ಆದರಿಸಿ ಈಗ ವರದಿ ಸಿದ್ದಪಡಿಸಲಾಗಿದೆ ಇದಕ್ಕೆ ಯಾವುದೇ ರೀತಿಯ ವೈಜ್ಞಾನಿಕ ತಳಹದಿ ಇಲ್ಲ. ಈ ವರದಿಯಿಂದ ಅನ್ಯಾಯಕ್ಕೆ ಒಳಗಾಗಿರುವ ಲಿಂಗಾಯತ, ಬ್ರಾಹ್ಮಣ ಸೇರಿ ಇತರ ಸಮುದಾಯಗಳನ್ನು ಒಟ್ಟುಗೂಡಿಸಿ ರಾಜ್ಯವನ್ನೇ ಬಂದ್ ಆಗುವ ರೀತಿಯಲ್ಲಿ ಹೋರಾಟ ಮಾಡುತ್ತೇವೆ” ಎಂದು ಪ್ರಕಟಿಸಿದರು.