ಜಿ.ಬಿ.ಜೋಶಿಯವರ ಈ ನಾಟಕ ಮಠಗಳ, ಬೃಂದಾವನಗಳ ಹಿಂದಿನ ಕಥೆಯನ್ನು ಹೇಳುತ್ತದೆ; ಜನರ ಭಕ್ತಿಯ, ನಂಬಿಕೆಯ ಪೊಳ್ಳುತನವನ್ನೂ ತೋರಿಸುತ್ತದೆ. ಧರ್ಮ ಎನ್ನುವುದು ಜನರ ಬದುಕಿಗೆ ಆಸರೆಯನ್ನು ಒದಗಿಸುವಂತೆಯೇ ಅವರ ತಿಳಿವನ್ನು ತಿಳಿಗೊಳಿಸುತ್ತದೆ; ಬಾಳಿಗೊಂದು ನಂಬಿಕೆಯನ್ನು ಕಟ್ಟಿಕೊಡುವಂತೆಯೇ ಮನುಷ್ಯನ ಮೌಲ್ಯಗಳನ್ನುಗಟ್ಟಿಗೊಳಿಸುತ್ತದೆ.
ಸುಮಾರು ಅರ್ಧ ಶತಮಾನದ ಹಿಂದೆ ಬಿ.ವಿ.ಕಾರಂತರು ʼಸತ್ತವರ ನೆರಳುʼ ನಾಟಕವನ್ನು ರಂಗದ ಮೇಲೆ ತಂದಾಗ ಅದೊಂದು ಮಹತ್ವದ ಘಟನೆಯಾಗಿ ರಂಗರಸಿಕರನ್ನು ಸೆಳೆದುಕೊಂಡಿತು. ಈ ನಾಟಕದ ದಾಸರ ಪದಗಳು ಕೊನೆಯಿಲ್ಲದ ಗುಂಗಾಗಿ ಕಾಡಿದವು. ಈ ನಾಟಕ ಬೆಂಗಳೂರಿನ ರಂಗಭೂಮಿಯಲ್ಲಿ ಹೊಸ ಅಲೆಯನ್ನೇ ಎಬ್ಬಿಸಿತು. ರಾಜ್ಯದ ಪ್ರಮುಖ ಕೇಂದ್ರಗಳಲ್ಲಿಯೂ ಪ್ರದರ್ಶನಗೊಂಡು ಜನರ ಮನಸ್ಸನ್ನು ಸೂರೆಗೊಂಡಿತು. ಹುಚ್ಚೆದ್ದು ಜನ ಈ ನಾಟಕವನ್ನು ಮತ್ತೆ ಮತ್ತೆ ನೋಡಿ ಹಾಡುಗಳನ್ನು ಚಪ್ಪರಿಸಿದರು. ಜನಪ್ರಿಯತೆಯ ಉತ್ತುಂಗಕ್ಕೇರಿದ ಈ ನಾಟಕ ಅದೆಷ್ಟೋ ಪ್ರಯೋಗಗಳನ್ನು ಕಂಡಿತು. ಜೊತೆಗೆ ರಂಗಭೂಮಿಯ ಮುಖ್ಯ ಪ್ರಯೋಗಗಳು ಹುಟ್ಟಿಕೊಳ್ಳಲು ಕಾರಣವಾಯಿತು.
ವಿಚಿತ್ರ ಎಂದರೆ, ಈ ನಾಟಕದ ಹಾಡುಗಳ ಗುಂಗಿನಲ್ಲಿ ನಾಟಕದ ತಿರುಳಾದ ವೈಚಾರಿಕ ಚಿಂತನೆ ಮುಳುಗಿಹೋಯಿತು. ಈ ನಾಟಕದ ಪ್ರಾಮುಖ್ಯತೆ ಇರುವುದೇ ವೈಚಾರಿಕ ನಡೆಯಲ್ಲಿ. ದಾಸರ ಪದಗಳು ಈ ವೈಚಾರಿಕ ನಡೆಯನ್ನು ಗಟ್ಟಿಗೊಳಿಸಲು, ಚುರುಕುಗೊಳಿಸಲು ನೆರವಾಗುತ್ತವೆ. ಆದರೆ ಜನ ಹಿಡಿದುಕೊಂಡದ್ದು ಹಾಡುಗಳನ್ನು; ಅವುಗಳ ಇಂಪನ್ನು.
ಜಿ.ಬಿ.ಜೋಶಿಯವರ ಈ ನಾಟಕ ಮಠಗಳ, ಬೃಂದಾವನಗಳ ಹಿಂದಿನ ಕಥೆಯನ್ನು ಹೇಳುತ್ತದೆ; ಜನರ ಭಕ್ತಿಯ, ನಂಬಿಕೆಯ ಪೊಳ್ಳುತನವನ್ನೂ ತೋರಿಸುತ್ತದೆ. ಧರ್ಮ ಎನ್ನುವುದು ಜನರ ಬದುಕಿಗೆ ಆಸರೆಯನ್ನು ಒದಗಿಸುವಂತೆಯೇ ಅವರ ತಿಳಿವನ್ನು ತಿಳಿಗೊಳಿಸುತ್ತದೆ; ಬಾಳಿಗೊಂದು ನಂಬಿಕೆಯನ್ನು ಕಟ್ಟಿಕೊಡುವಂತೆಯೇ ಮನುಷ್ಯನ ಮೌಲ್ಯಗಳನ್ನುಗಟ್ಟಿಗೊಳಿಸುತ್ತದೆ. ಈ ಮೌಲ್ಯಗಳು- ನೈತಿಕ ನೆಲಗಟ್ಟಿನ ಮೇಲೆ ಕಟ್ಟಿರುವಂತೆಯೇ,ವೈಚಾರಿಕ ಅರಿವಿನ ಮೇಲೆ, ಮನುಷ್ಯ ಪಡೆದುಕೊಂಡ ಜ್ಞಾನದ ಮೇಲೆ ರೂಪಿತಗೊಂಡವು. ಜ್ಞಾನಿಯೊಬ್ಬ ಗುರುವಾಗುವುದು ಈ ನೆಲೆಯಲ್ಲಿಯೇ. ಅವನ ಜ್ಞಾನದ ಬೆಳಕು ಜನ ಸಮುದಾಯವನ್ನು ಮುನ್ನಡೆಸಬೇಕು. ಜನ ಗುರುವನ್ನು ನಂಬುತ್ತಾರೆ; ಅವನ ಮಾತುಗಳಲ್ಲಿ ಧರ್ಮ ಅಡಗಿದೆ ಎಂದು ತಿಳಿಯುತ್ತಾರೆ. ಹೀಗಾಗಿಯೇ ಧರ್ಮ ಮತ್ತು ಗುರುಗಳು ಸಮಾಜದಲ್ಲಿ ಮುಖ್ಯ ಜಾಗವನ್ನು ಪಡೆದುಕೊಳ್ಳುತ್ತಾರೆ.

ಆದರೆ ವಾಸ್ತವದಲ್ಲಿ ಏನಾಗಿದೆ? ಗುರು, ಧರ್ಮ, ಮಠ, ಬೃಂದಾವನ ಎಲ್ಲವೂ ಯಾರದೋ ಹಿಡಿತಕ್ಕೆ ಸಿಕ್ಕಿ ತಮ್ಮ ಅರ್ಥಗಳನ್ನು ಕಳೆದುಕೊಂಡಿವೆ. ಈ ಹಿಡಿತವೇ ಒಂದು ಪ್ರಬಲ ಶಕ್ತಿಯಾಗಿ ಅದು ಧರ್ಮವನ್ನು, ಮಠವನ್ನು ಮತ್ತು ಗುರುವನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಂಡು, ಜನರ ನಂಬಿಕೆಯನ್ನು ಮೌಢ್ಯವಾಗಿ ಪರಿವರ್ತಿಸಿ ಅಧಿಕಾರ ಸ್ಥಾಪಿಸುತ್ತದೆ. ಸಿಂಹಾಸನದ ಮೇಲೆ ಕುಳಿತ ರಾಜನಷ್ಟೇ ಪ್ರಬಲ ಶಕ್ತಿಯಾಗಿ ಈ ಶಕ್ತಿಗಳು ತೆರೆಮರೆಯಲ್ಲೇ ಕ್ರಿಯಾಶೀಲವಾಗಿರುತ್ತವೆ. ಜ್ಞಾನಿಯಾದ ಗುರುವನ್ನು ತುಳಿದು, ಅವನನ್ನು ಗೊಂಬೆಯಾಗಿಸಿ, ಅವನು ಸತ್ತಮೇಲೆ ಅವನ ಮೇಲೊಂದು ಬೃಂದಾವನ ಸೃಷ್ಟಿಸುವುದು, ಮಠಕ್ಕೆ ಇನ್ನೊಂದು ಬಲಿಪಶುವನ್ನು ತರುವುದು ಅಧಿಕಾರವನ್ನು ಹಿಡಿದ ಶಕ್ತಿಗಳ ಹುನ್ನಾರವಾಗುತ್ತದೆ.
ಜಿ.ಬಿ.ಜೋಶಿ ಒಂದು ಧರ್ಮದ ಒಳಗಿನವರಾಗಿ, ಅದರ ಕೊಳಕುಗಳನ್ನು, ಕಪಟತನಗಳನ್ನು ತೋರಿಸುವ ಈ ನಾಟಕವನ್ನು ರಚಿಸಿದ್ದಾರೆ. ಅತಿ ದಿಟ್ಟವಾಗಿ, ಕಟುವಾಗಿ ಸತ್ಯವನ್ನು ಹೇಳುವ ಎದೆಗಾರಿಕೆಯನ್ನೂ ತೋರಿಸಿದ್ದಾರೆ. ದಾಸರ ಪದಗಳಲ್ಲಿರುವ ತಿರುಳೂ ಇದನ್ನೇ ಹೇಳುತ್ತದೆ. ಮಠಗಳು ಕೊಳೆಯುತ್ತಾ, ನಿಜ ಧರ್ಮದಿಂದ ದೂರವಾಗುತ್ತ, ಕುಟಿಲ ಕಾರಸ್ಥಾನದ ಕಪಟಿಗಳ ಆಟದ ಮೈದಾನವಾಗುವುದನ್ನು ಈ ನಾಟಕ ಹೇಳುತ್ತದೆ. ಜ್ಞಾನಿಗಳಾದ, ನಿಜವಾದ ಅರ್ಥದಲ್ಲಿ ಗುರುಗಳಾದವರು ಇಲ್ಲಿ ಬಂಧಿತರಾಗುವುದು, ಅಸಹಾಯಕರಾಗುವುದು, ಬಲಿಪಶುಗಳಾಗುವುದು ಎಂಥ ದುರಂತ! ಈ ಕತೆಯನ್ನು ನಾಟಕ ತೋರಿಸುತ್ತದೆ. ಸಾಮಾನ್ಯ ಜನರಿಗೆ, ಭಕ್ತರಿಗೆ ಮಠ ಬೇಕು, ಧರ್ಮ ಬೇಕು, ವಿಚಾರದ ಬೆಳಕು ಬೇಡ; ಸ್ವಾಮಿಗಳ, ಗುರುಗಳ ಪವಾಡವನ್ನು ಬಣ್ಣಿಸುವವರು ಬೇಕು. ಪವಾಡಗಳ ಹಿಂದಿನ ನಿಜ ಏನಾದರೂ ಆಗಿರಲಿ, ಅವರ ಧಾರ್ಮಿಕ ನಂಬಿಕೆಗಳನ್ನು ಕಲಕದ ಕಟ್ಟುಕಥೆಗಳು, ಕಲ್ಪನೆಗಳು, ಗುರುವನ್ನು ಬಣ್ಣಿಸುವ ʼದೈವಿಕʼ ನಡೆಗಳು ಬೇಕು. ಜ್ಞಾನಿಯೊಬ್ಬ ಗುರುವಾಗುವ ಬದಲು ಮಠದ ಕತ್ತಲಲ್ಲಿ ಗುಲಾಮನಾಗಿರುವ ದಾರುಣ ಸತ್ಯ ಯಾವ ಭಕ್ತರಿಗೂ ಬೇಕಾಗುವುದಿಲ್ಲ.
ಈ ಸತ್ಯವನ್ನು ಹೇಳಿದ ನಾಟಕ ದೊಡ್ಡ ವೈಚಾರಿಕ ಕ್ರಾಂತಿಗೆ ಕಾರಣವಾಗಬೇಕಾಗಿತ್ತು. ನಿಂತ ನೀರಾಗಿದ್ದ ಸಮಾಜದಲ್ಲಿ ಸುನಾಮಿಯೇ ಹುಟ್ಟಬೇಕಾಗಿತ್ತು. ಆದರೆ ಅಂಥದೇನೂ ಆಗಲಿಲ್ಲ. ಕಲಾವಿದರು ಮತ್ತೆ ಮತ್ತೆ ಈ ನಾಟಕವನ್ನು ಅಭಿನಯಿಸಿದರು. ಜನ ಮತ್ತೆ ಮತ್ತೆ ನೋಡಿ ಖುಷಿಪಟ್ಟರು; ಹಾಡಿನ ಗುಂಗಿನಲ್ಲಿ ಮೈಮರೆತರು. ಸತ್ತವರ ನೆರಳು ಎಲ್ಲವನ್ನೂ ಮುಚ್ಚಿಹಾಕಿತು. ಇದೆಲ್ಲವನ್ನು ಕಂಡ ಬಿ.ವಿ.ಕಾರಂತರ ಒಳಗೆ ಯಾವ ತಳಮಳವಿತ್ತೊ?
ಸಾಹಿತ್ಯದಲ್ಲಿ ಇಂಥ ಕೃತಿಗಳು ಸದ್ದಿಲ್ಲದೆ ಕರಗಿ ಹೋಗುತ್ತವೆ ಎಂದು ಸಾರಾಸಗಟಾಗಿ ಹೇಳಲು ಸಾಧ್ಯವಿಲ್ಲ. ಮಾಸ್ತಿಯವರ ಕಾದಂಬರಿ, ʼಚಿಕವೀರ ರಾಜೇಂದ್ರʼ ಪ್ರಕಟವಾದಾಗ ದೊಡ್ಡ ಗದ್ದಲ ಎದ್ದಿತು. ಇದು ವೈಚಾರಿಕ ಗದ್ದಲವಲ್ಲ. ನಮ್ಮ ಧರ್ಮಕ್ಕೆ, ಜಾತಿಗೆ ಮಾಸ್ತಿ ಕಳಂಕ ತಂದರು. ಅದರಲ್ಲಿ ಚಿತ್ರಿತವಾಗಿರುವ ರಾಜ ನಮ್ಮ ಜಾತಿಯವನು, ಅವನನ್ನು ಹೀಗೆ ಚಿತ್ರಿಸಬಾರದಿತ್ತು ಎಂದು ಕೂಗಿದ ಗದ್ದಲ.
ಅನಂತಮೂರ್ತಿಯವರ ʼಸಂಸ್ಕಾರʼ ಚಲನಚಿತ್ರವಾದಾಗಲೂ ಇಂಥದೇ ಗದ್ದಲ. ಅಲ್ಲಿಯೂ ಅನಂತಮೂರ್ತಿ ಧರ್ಮದ ಒಳಗೇ ಇದ್ದವರಾಗಿ ಧರ್ಮದ ಬಗ್ಗೆ ಎತ್ತಿದ ಪ್ರಶ್ನೆಗಳು ಆ ಧರ್ಮದವರನ್ನು, ಜಾತಿಯವರನ್ನು, ಜಾತಿಯ ಒಳಪಂಗಡದವರನ್ನು ಕೆರಳಿಸಿತು.
ಲಂಕೇಶರ ʼಸಂಕ್ರಾಂತಿʼ. ಗಿರೀಶ್ ಕಾರ್ನಾಡರ, ʼನಾನೇ ಬಿಜ್ಜಳʼ, ಶಿವಪ್ರಕಾಶರ ʼಮಹಾಚೈತ್ರʼ ನಾಟಕಗಳು ಹನ್ನೆರಡನೇ ಶತಮಾನದ ಶರಣರ ವೈಚಾರಿಕ ಕ್ರಾಂತಿಯ ಮೇಲೆ ಕಣ್ಣುನೆಟ್ಟು ಮುಂದೆ ಅವುಗಳಿಗಾದ ಗತಿಯನ್ನು ಚರ್ಚಿಸಿದ ನಾಟಕಗಳು. ಮಹಾಚೈತ್ರ ಗದ್ದಲ ಏಳಿಸಿತು. ಇದು ವೈಚಾರಿಕ ನಿಲುವನ್ನು ಕೇಂದ್ರೀಕರಿಸಿಕೊಂಡ ಗದ್ದಲವಲ್ಲ; ತಮ್ಮ ಜಾತಿಗೆ, ಧರ್ಮಕ್ಕೆ ಈ ನಾಟಕ ಧಕ್ಕೆ ತಂದಿದೆ, ನಮ್ಮ ನಂಬಿಕೆಗಳನ್ನು ಘಾಸಿಗೊಳಿಸಿದೆ ಎಂಬ ಕಾರಣಕ್ಕೆ.

ಈ ನಾಟಕಗಳು, ಈ ಚಲನಚಿತ್ರ, ಈ ಕಾದಂಬರಿ ಎಲ್ಲವೂ ಕನ್ನಡ ನಾಡಿನ ವೈಚಾರಿಕ ಚಿಂತನೆಯನ್ನು ಬೆಳೆಸಬೇಕಾಗಿತ್ತು; ಬೆಂಬಲಿಸಬೇಕಾಗಿತ್ತು. ಜನ ಈ ಕೃತಿಗಳನ್ನು ಕೊಂಡಾಡಿ ಗೌರವಿಸಬೇಕಾಗಿತ್ತು. ಆದರೆ ಅದಕ್ಕೆ ವಿರುದ್ಧವಾದ ಬೆಳವಣಿಗೆಗಳನ್ನು ಉಂಟುಮಾಡಿದ್ದು ಒಂದು ಸಮಾಜದ ಹಿಮ್ಮುಖ ಚಲನೆಯನ್ನು, ಅಂಧ ಅಭಿಮಾನವನ್ನು ತೋರಿಸಿದ್ದು ಬಹುದೊಡ್ಡ ದುರಂತ.
ಬಿ.ವಿ. ಕಾರಂತರ ಗರಡಿಯಲ್ಲಿಯೇ ತಯಾರಾದ ಉಸ್ತಾದ ಹುಲಗಪ್ಪ ಕಟ್ಟೀಮನಿ ಮೊನ್ನೆ ಮೈಸೂರಿನ ರಂಗಾಯಣದಲ್ಲಿ ʼಸತ್ತವರ ನೆರಳುʼ ನಾಟಕವನ್ನು ಪ್ರಯೋಗಿಸಿದರು. ಧಾರವಾಡ ರಂಗಾಯಣದ ತಾತ್ಕಾಲಿಕ ರೆಪರ್ಟರಿ ಈ ನಾಟಕವನ್ನು ರಂಗದ ಮೇಲೆ ಮೂಡಿಸಿತು. ಅರ್ಧ ಶತಮಾನದ ನಂತರ ಗುರುವಿನ ನಾಟಕವನ್ನೇ ಶಿಷ್ಯ ರಂಗದ ಮೇಲೆ ತಂದದ್ದು ಒಂದು ಮೈಲಿಗಲ್ಲು.
ವಿಶೇಷವೆಂದರೆ ಕಾರಂತರು ಮರುಳಾಗಿದ್ದ ದಾಸರ ಪದಗಳಿಂದಕಟ್ಟೀಮನಿ ಬಿಡುಗಡೆಪಡೆಯಲು ಬೇಂದ್ರೆಯವರ ಕವಿತೆಗಳಿಗೆ ಮೊರೆಹೋಗಿದ್ದು. ದಾಸರ ಪದಗಳನ್ನು ಅವು ಕಟ್ಟಿಕೊಡುವ ವೈಚಾರಿಕ ಒಳನೋಟಗಳನ್ನು ಕಟ್ಟೀಮನಿ ಬಿಟ್ಟುಕೊಟ್ಟು ಬೇಂದ್ರೆ ಮಾಸ್ತರನ್ನು ತಂದರೆಂದಲ್ಲ. ದಾಸರ ಪದಗಳು ಇದ್ದವು. ಬೇಂದ್ರೆ ಮಾಸ್ತರೂ ಇದ್ದರು. ದಾಸರ ಪದಗಳ ಗುಂಗನ್ನು ತುಸು ಕಮ್ಮಿ ಮಾಡಿ ಬೇಂದ್ರೆ ಮಾಸ್ತರ ಕವಿತೆಯನು ಅರ್ಥಪೂರ್ಣವಾಗಿ ಬಳಸಿಕೊಂಡರು. ಈ ಗೀತೆಗಳನ್ನು ಹಾಡಿದ ತಂಡವೂ ಸಮರ್ಥವಾಗಿತ್ತು. ರಾಘವ ಕಮ್ಮಾರರ ಸಂಗೀತ ತಲೆದೂಗುವಂತಿತ್ತು. ತಂಡದ ಹಿರಿ ಕಿರಿಯ ಕಲಾವಿದರು ಬಹುಕಾಲ ಮನಸ್ಸಿನಲ್ಲಿ ಉಳಿಯುವಂಥ ಅಭಿನಯವನ್ನು ನೀಡಿದರು. ರಂಗಪ್ರಯೋಗದ ಎಲ್ಲ ಅಂಶಗಳಲ್ಲೂ ಕಲಾವಿದರ ಪರಿಶ್ರಮ ಮತ್ತು ತಜ್ಜರ ಕೌಶಲ, ಹಾಗೆಯೇ ನಿರ್ದೇಶಕರ ಶ್ರದ್ಧೆ ಎದ್ದುಕಾಣುವಂತಿದ್ದವು.
ಇದನ್ನೂ ಓದಿ ರಾಯಭಾರ | ಜಾತಿ ಗಣತಿ; ಹೆಜ್ಜೆ ಮುಂದಿಟ್ಟರಷ್ಟೇ ದಾರಿ ನಿಚ್ಚಳ
ನೋಟಕರಲ್ಲಿ ಹಿಂದೆ ಕಾರಂತರ ಪ್ರದರ್ಶನವನ್ನು ಸವಿದವರೂ ಇದ್ದರು. ಹರೆಯದವರೂ ಇದ್ದರು. ಜೋಶಿ (ಜಡಭರತ)ಯವರ ನಾಟಕ ಅದೇ ವೈಚಾರಿಕ ಚಿಂತನೆಯ ಕಿರೀಟವನ್ನು ಧರಿಸಿಕೊಂಡೇ ಕಾಣಿಸಿಕೊಂಡಿತು. ವೈಚಾರಿಕ ಎಚ್ಚರವನ್ನು ಈ ಪ್ರದರ್ಶನ ಮೂಡಿಸಿತೇ? ಒಂದು ಪ್ರದರ್ಶನದಿಂದ, ಒಂದು ನಾಟಕದಿಂದ ಒಂದು ಸಾಹಿತ್ಯ ಕೃತಿಯಿಂದ ಇಂಥ ಪ್ರಶ್ನೆಯನ್ನು ಎತ್ತಬಾರದು.
ಇವತ್ತು ನಮ್ಮ ಸಮಾಜ ಹೆಚ್ಚು ಹೆಚ್ಚು ಜಾತಿ ಕೇಂದ್ರದಲ್ಲಿಯೇ ಸುತ್ತುತ್ತಿರುವುದು ಮತ್ತು ನಮ್ಮ ಇಂದಿನ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆಗಳ ಶಕ್ತಿ ಕೇಂದ್ರವೇ ಜಾತಿಯಾಗುತ್ತಿರುವುದು ಇತ್ಯಾದಿ ಇವತ್ತಿನ ವಿದ್ಯಮಾನಗಳ ಬೆಳಕಿನಲ್ಲಿ ನಾವು ಈ ಪ್ರಶ್ನೆಯನ್ನು ಕೇಳಿಕೊಳ್ಳಬೇಕಾಗಿದೆ.
