ಇತ್ತೀಚೆಗೆ ನಡೆದ ಸಂಸತ್ ಅಧಿವೇಶನದಲ್ಲಿ ಅಂಗೀಕಾರಗೊಂಡು, ರಾಷ್ಟ್ರಪತಿ ಅಂಕಿತ ಪಡೆದು ಕಾನೂನಿನ ರೂಪ ಪಡೆದಿರುವ ‘ವಕ್ಫ್ ತಿದ್ದುಪಡಿ ಕಾಯ್ದೆ-2025’ಅನ್ನು ಮೊದಲ ಬಾರಿಗೆ ಪ್ರಧಾನಿ ಮೋದಿ ಸಮರ್ಥಿಸಿಕೊಂಡಿದ್ದಾರೆ. ಆ ಬಗ್ಗೆ ಹೇಳಿಕೆ ನೀಡಿದ್ದಾರೆ. ತಾವು 2002ಕ್ಕೂ ಹಿಂದೆ ಬಳಸಿದ್ದ ‘ಪಂಕ್ಚರ್ ವಾಲಾ’ ಮತ್ತು ‘ಮತ ಬ್ಯಾಂಕ್ ವೈರಸ್’ ಎಂಬ ಪದಗಳನ್ನು ಬಳಸಿ ಮುಸ್ಲಿಮರನ್ನು ಅಪಮಾನಿಸಿದ್ದಾರೆ. ಕಾಂಗ್ರೆಸ್ಸನ್ನು ದೂಷಿಸಿದ್ದಾರೆ.
ಏಪ್ರಿಲ್ 14ರಂದು ಹರಿಯಾಣದ ಹಿಸಾರ್‌ನಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, “ಎಸ್‌ಸಿ, ಎಸ್‌ಟಿ, ಒಬಿಸಿಗಳ ಹಕ್ಕುಗಳನ್ನು ಕಾಂಗ್ರೆಸ್ ‘ಕಿತ್ತುಕೊಳ್ಳುತ್ತಿದೆ’ ಮತ್ತು ಅವರನ್ನು ‘ಎರಡನೇ ದರ್ಜೆಯ ನಾಗರಿಕ’ರನ್ನಾಗಿ ನೋಡುತ್ತಿದೆ” ಎಂದು ಆರೋಪಿಸಿದರು.
ಲೋಕಸಭೆಯಲ್ಲಿ ತಮ್ಮ ಪಕ್ಷ (ಬಿಜೆಪಿ) ಒಬ್ಬರೇ ಒಬ್ಬ ಮುಸ್ಲಿಂ ಸಂಸದನನ್ನೂ ಹೊಂದಿಲ್ಲದಿದ್ದರೂ, ಕಾಂಗ್ರೆಸ್‌ಅನ್ನು ಮೋದಿ ಜರಿದರು. “ಕಾಂಗ್ರೆಸ್ ನಿಜವಾದ ‘ಅನುಕಂಪ’ ಇದ್ದರೆ, ಅದು ಮುಸ್ಲಿಮರನ್ನು ಅಧ್ಯಕ್ಷರನ್ನಾಗಿ ಏಕೆ ನೇಮಿಸಲಿಲ್ಲ ಅಥವಾ ಮುಸ್ಲಿಮರಿಗೆ 50% ಟಿಕೆಟ್‌ಗಳನ್ನು ಕೊಟ್ಟು ಅವರು ಸಂಸತ್ತಿಗೆ ಬರಲು ಯಾಕೆ ಅವಕಾಶ ನೀಡುತ್ತಿಲ್ಲ” ಎಂದು ವಾಗ್ದಾಳಿ ನಡೆಸಿದರು.
ಸಂಸತ್‌ನ ಉಭಯ ಸದನಗಳಲ್ಲಿ ‘ವಕ್ಫ್ ತಿದ್ದುಪಡಿ ಮಸೂದೆ’ಯ ಅಂಗೀಕಾರದ ಪ್ರಹಸನವನ್ನು ‘ಜಲಪಾತದ ಕ್ಷಣ’ (ವಾಟರ್‌ಶೆಡ್ ಮೂವ್‌ಮೆಂಟ್) ಎಂದು ಮೋದಿ ಕರೆದಿದ್ದಾರೆ. ಆದಾಗ್ಯೂ, ಅವರು ಮಸೂದೆ ಅಂಗೀಕಾರದ ವೇಳೆ ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಗೈರಾಗಿದ್ದರು ಎಂಬುದು ಗಮನಾರ್ಹ.
ತಮ್ಮ ಭಾಷಣದಲ್ಲಿ, ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಪಶ್ಚಿಮ ಬಂಗಾಳದಲ್ಲಿ ನಡೆದ ಪ್ರತಿಭಟನೆ ಮತ್ತು ಗಲಾಟೆಯನ್ನು ಉಲ್ಲೇಖಿಸಿದ ಮೋದಿ, ಇದು ಕಾಂಗ್ರೆಸ್‌ನ ಮತ ಧ್ರುವೀಕರಣದ ಭಾಗವೆಂದು ಆರೋಪಿಸಿದರು. ಮುಸ್ಲಿಮರನ್ನು ‘ಪಂಕ್ಚರ್ ವಾಲಾ’ಗಳು ಎಂದು ಪುನರುಚ್ಚರಿಸಿದರು.
ಮೋದಿ ಅವರ ಈ ‘ಪಂಕ್ಚರ್ ವಾಲಾ’ ಎಂಬ ನಿಂದನೆಯು 2002ಕ್ಕೂ ಹಿಂದಿನದು. 2002ರ ಸೆಪ್ಟೆಂಬರ್‌ನಲ್ಲಿ ಗುಜರಾತ್ ಗಲಭೆಯ ನಂತರ ಅವರು ಈ ಪದವನ್ನು ಬಳಸಿದ್ದರು. “ಗುಜರಾತ್‌ನಲ್ಲಿ ಜನಸಂಖ್ಯೆ ಹೆಚ್ಚುತ್ತಿದೆ, ಹಣ ಬಡವರಿಗೆ ತಲುಪುತ್ತಿಲ್ಲ? ಇದಕ್ಕೆ ಕಾರಣವೇನು? ಇದಕ್ಕೆ ಕಾರಣ ಅವರು (ಮುಸ್ಲಿಮರು) ದಾರಿಯಲ್ಲಿ ನಿಂತು ಸೈಕಲ್ ಪಂಕ್ಚರ್ ಹಾಕುವವರು” ಎಂದಿದ್ದರು.
ಈಗ ಮತ್ತೆ ಬಳಸಿದ್ದಾರೆ. “ವಕ್ಫ್ ಹೆಸರಿನಲ್ಲಿ, ದೇಶದಲ್ಲಿ ಲಕ್ಷಾಂತರ ಹೆಕ್ಟೇರ್ ಭೂಮಿ ಇದೆ. ಈ ಭೂಮಿಯನ್ನು ಬಳಸಿಕೊಂಡು ಮಹಿಳೆಯರು ಮತ್ತು ಮಕ್ಕಳನ್ನು ಉನ್ನತೀಕರಿಸಬೇಕಾಗಿತ್ತು. ಇದನ್ನು ಪ್ರಾಮಾಣಿಕವಾಗಿ ಬಳಸಿದ್ದರೆ, ಮುಸ್ಲಿಂ ಯುವಕರು ಸೈಕಲ್ ಟೈರ್‌ಗಳಿಗೆ ಪಂಕ್ಚರ್ ಹಾಕುವ ಕೆಲಸ ಮಾಡಿಕೊಂಡು ತಮ್ಮ ಜೀವನ ನಡೆಸಬೇಕಿರಲಿಲ್ಲ” ಎಂದರು.
ಇತ್ತೀಚಿನ ವರ್ಷಗಳಲ್ಲಿ ಹಿಂದುತ್ವವಾದಿ, ಕೋಮುವಾದಿ ಬಲಪಂಥೀಯ ಗುಂಪುಗಳು ಮುಸ್ಲಿಮರನ್ನು ನಿಂದಿಸಲು ‘ಪಂಕ್ಚರ್ ವಾಲಾ’ ಎಂಬ ಪದವನ್ನು ಪದೇ-ಪದೇ ಬಳಸುತ್ತಿವೆ.
2019ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ದ ಹೋರಾಟ ನಡೆಸುತ್ತಿದ್ದವರನ್ನು ‘ಪಂಕ್ಚರ್ ವಾಲಾ’ಗಳು ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿದ್ದರು. “ಸಿಎಎ/ಎನ್‌ಆರ್‌ಸಿಯನ್ನು ವಿರೋಧಿಸುವವರು ಅಶಿಕ್ಷಿತರು, ಅನಕ್ಷರಸ್ಥರು ಹಾಗೂ ಪಂಕ್ಚರ್ ವಾಲಾಗಳು” ಎಂದು ಸೂರ್ಯ ಹೇಳಿದ್ದರು.
2024ರ ಅಕ್ಟೋಬರ್‌ನಲ್ಲಿ, ಆಗ ಉಪಮುಖ್ಯಮಂತ್ರಿಯಾಗಿದ್ದ ಈಗಿನ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, “ಕಾಂಗ್ರೆಸ್ ಕಾರಣದಿಂದಾಗಿ ದೇಶದ ಮುಸ್ಲಿಮರು ‘ಪಂಕ್ಚರ್ ವಾಲಾ’ಗಳಾಗಿದ್ದಾರೆ” ಎಂದಿದ್ದರು.
“ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷವು ಮುಸ್ಲಿಮರ ಬಗ್ಗೆ ನಿಜವಾಗಿಯೂ ಕಾಳಜಿ ಹೊಂದಿದ್ದರೆ, ಇಷ್ಟು ವರ್ಷಗಳ ಕಾಲ ಅಧಿಕಾರ ನಡೆಸಿರುವ ಅವರ ಕಾಲಾವಧಿಯಲ್ಲಿ ಕನಿಷ್ಠ 1% ಮುಸ್ಲಿಮರ ಸ್ಥಿತಿ-ಗತಿಯಾದರೂ ಸುಧಾರಿಸುತ್ತಿತ್ತು. ಆದರೆ, ಮುಸ್ಲಿಮರು ಪಂಕ್ಚರ್ ವಾಲಾಗಳಾಗಿದ್ದಾರೆ, ಅವರು ಕೈಗಾರಿಕೋದ್ಯಮಿಗಳಾಗಿಲ್ಲ. ಅವರು ಸ್ಕ್ರೂ ಡ್ರೈವರ್‌ಗಳೊಂದಿಗೆ ಸುತ್ತಾಡುತ್ತಿದ್ದಾರೆ” ಎಂದು ಫಡ್ನವೀಸ್ ಹೇಳಿದ್ದರು.
ಈ ವರದಿ ಓದಿದ್ದೀರಾ?: ವಕ್ಫ್ ತಿದ್ದುಪಡಿ ಕಾಯ್ದೆ | ಮೂಗಿಗೆ ತುಪ್ಪ ಹಚ್ಚಲು ಮನೆ ಬಾಗಿಲಿಗೆ ಬರುತ್ತಿದೆ ಬಿಜೆಪಿ!
ತಮ್ಮದೇ ಪಕ್ಷದಲ್ಲಿ ಮುಸ್ಲಿಂ ಸಂಸದರು ಇಲ್ಲದಿದ್ದರೂ ಮೋದಿ ಅವರು ಕಾಂಗ್ರೆಸ್‌ನಲ್ಲಿನ ಮುಸ್ಲಿಂ ಪ್ರಾತಿನಿಧ್ಯವನ್ನು ಪ್ರಶ್ನಿಸಿದರು. “ಕಾಂಗ್ರೆಸ್ ಮುಸ್ಲಿಮರ ಬಗ್ಗೆ ‘ಸಹಾನುಭೂತಿ’ ಹೊಂದಿದ್ದರೆ, ಪಕ್ಷವು ಮುಸ್ಲಿಮರಿಗೆ 50% ಟಿಕೆಟ್‌ಗಳನ್ನು ನೀಡಬೇಕು. ತನ್ನ ಪಕ್ಷದ ಅಧ್ಯಕ್ಷರನ್ನು ಮುಸ್ಲಿಮರನ್ನಾಗಿ ಮಾಡಬೇಕು” ಎಂದು ಮೋದಿ ಹೇಳಿದರು. ಮೋದಿ ಅವರ ಸ್ವಂತ ಪಕ್ಷ ಬಿಜೆಪಿಯು ಲೋಕಸಭೆಯಲ್ಲಿ ಒಬ್ಬ ಮುಸ್ಲಿಂ ಸಂಸದನನ್ನೂ ಹೊಂದಿಲ್ಲ. ರಾಜ್ಯಸಭೆಯಲ್ಲಿ ಬಿಜೆಪಿ ಸರ್ಕಾರದಿಂದ ನಾಮನಿರ್ದೇಶಿತಗೊಂಡ ಒಬ್ಬನೇ ಒಬ್ಬ ಸದಸ್ಯರಿಲ್ಲ ಎಂಬುದನ್ನು ಮೋದಿ ಮಾತನಾಡಲಿಲ್ಲ.
ಹೊಸ ವಕ್ಫ್ ಕಾಯ್ದೆಯು ಮುಸ್ಲಿಮರ ಅಭಿವೃದ್ಧಿಗೆ ಹೆಚ್ಚು ಕೊಡುಗೆ ಕೊಡುತ್ತದೆ. ವಕ್ಫ್ ಬೋರ್ಡ್‌ನಲ್ಲಿ ಮಹಿಳೆಯರಿಗೆ ಮೊದಲ ಬಾರಿಗೆ ಅವಕಾಶ ನೀಡಿದ್ದೇವೆ. ಮುಸ್ಲಿಂ ಮಹಿಳೆಯರ ಪಾಲ್ಗೊಳ್ಳುವಿಕೆ ಮತ್ತು ಸಬಲೀಕರಣಕ್ಕೆ ಒತ್ತುಕೊಟ್ಟಿದ್ದೇವೆ ಎಂದು ಹೇಳಿಕೊಳ್ಳುತ್ತಲೇ ಕಾಯ್ದೆಯನ್ನು ಮೋದಿ-ಬಿಜೆಪಿ ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದರೆ, ಅದು ಮುಸ್ಲಿಮರ ಹಕ್ಕು, ಅವರಿಗೆ ಸಿಗುವ ನೆರವುಗಳನ್ನೂ ಕಸಿದುಕೊಳ್ಳುತ್ತದೆ ಎಂಬುದು ವಾಸ್ತವ.
ವಕ್ಫ್ ಕಾಯ್ದೆಯು ವಕ್ಫ್ ಮಂಡಳಿಯ ಅಧಿಕಾರವನ್ನು ಮೊಟಕುಗೊಳಿಸಲಿದೆ. ವಕ್ಫ್ ಆಸ್ತಿಯ ಮೇಲೆ ಕೇಂದ್ರ ಸರ್ಕಾರ ಹೆಚ್ಚು ಅಧಿಕಾರ ಸ್ಥಾಪಿಸಲಿದೆ. ಮಾತ್ರವಲ್ಲದೆ, ವಕ್ಫ್ ಬೋರ್ಡ್‌ಗೆ ಸಾರ್ವಜನಿಕರ ಆಸ್ತಿ ದಾನ ಮಾಡುವುದಕ್ಕೂ ಅಡ್ಡಿಯುಂಟು ಮಾಡಲಿದೆ. ಕಾಯ್ದೆಯು ಒಂದು ಸಮುದಾಯದ ಧಾರ್ಮಿಕ ಆಸ್ತಿಯನ್ನು ಸರ್ಕಾರ ಕಿತ್ತುಕೊಳ್ಳಲು ಅವಕಾಶ ಮಾಡಿಕೊಡುತ್ತದೆ ಎಂಬುದು ಸ್ಪಷ್ಟವಾಗಿದೆ.
ಕಾಯ್ದೆಯಲ್ಲಿ ವಕ್ಫ್ ಆಸ್ತಿಗಳ ಸರ್ವೆ ನಡೆಸುವ ಅಧಿಕಾರವನ್ನು ರಾಜ್ಯ ಸರ್ಕಾರ ನೇಮಿಸಲು ಸರ್ವೆ ಆಯುಕ್ತರಿಂದ ಕಸಿದುಕೊಂಡು ಜಿಲ್ಲಾಧಿಕಾರಿಗೆ ನೀಡಲಾಗಿದೆ. ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರವೇ ನೇರವಾಗಿ ವಕ್ಫ್ ಆಸ್ತಿ ಸರ್ವೆಯಲ್ಲಿ ಹಸ್ತಕ್ಷೇಪ ಮಾಡಲು ದಾರಿ ಮಾಡಿಕೊಂಡಿದೆ.
ವಕ್ಫ್ ಬೋರ್ಡ್‌ಗೆ ಯಾವುದೇ ವ್ಯಕ್ತಿ (ಮುಸ್ಲಿಮೇತರರೂ ಕೂಡ) ತಮ್ಮ ಆಸ್ತಿಯನ್ನು ಸೆಕ್ಷನ್ 104ರ ಅಡಿಯಲ್ಲಿ ವಕ್ಫ್‌ಗೆ ದಾನವಾಗಿ ನೀಡಬಹುದಿತ್ತು. ಆದರೆ, ಈಗ ಆ ಸೆಕ್ಷನ್ 104ನ್ನೂ ತೆಗೆದು ಹಾಕಲಾಗಿದ್ದು, ಇಸ್ಲಾಂ ಧರ್ಮವನ್ನು ಕನಿಷ್ಠ 5 ವರ್ಷ ಪಾಲಿಸಿದವರು ಮಾತ್ರವೇ ತಮ್ಮ ಆಸ್ತಿಯನ್ನು ವಕ್ಫ್‌ಗೆ ನೀಡಲು ಸಾಧ್ಯವೆಂದು ಕಡಿವಾಣ ಹಾಕಿದೆ.
ಈ ವರದಿ ಓದಿದ್ದೀರಾ?: ವಕ್ಫ್ ತಿದ್ದುಪಡಿ ಮಸೂದೆ 2025 | ಬೇರೆ ಧಾರ್ಮಿಕ ಸಂಸ್ಥೆಗಳು ಸ್ವಚ್ಛವಾಗಿವೆಯೇ?
ವಕ್ಫ್ ಮಂಡಳಿಯಲ್ಲಿ ಮುಸ್ಲಿಮರಿಗಿಂತ ಮುಸ್ಲಿಮೇತರರ ಸಂಖ್ಯೆ ಹೆಚ್ಚಿರಬೇಕೆಂದು ಸೂಚಿಸಲಾಗಿದ್ದು, ಮುಸ್ಲಿಂ ಧಾರ್ಮಿಕ ಮಂಡಳಿಯಲ್ಲಿ ಮುಸ್ಲಿಮರ ಅಭಿಪ್ರಾಯ/ನಿರ್ಧಾರಗಳಿಗೆ ಮನ್ನಣೆ ದೊರೆಯದಂತೆ ಮಾಡಲಾಗಿದೆ. ಆ ಮೂಲಕ ವಕ್ಫ್ ಬೋರ್ಡ್ ಮತ್ತು ನಿರ್ವಹಣೆಯ ಮೇಲೆ ಪರೋಕ್ಷವಾಗಿ ಸರ್ಕಾರ ನಿಯಂತ್ರಣ ಸಾಧಿಸಲಿದೆ. ಲೆಕ್ಕ ಪರಿಶೋಧನೆಯ ಅಧಿಕಾರವನ್ನೂ ವಕ್ಫ್ ಮಂಡಳಿಯಿಂದ ಕೇಂದ್ರ ಸರ್ಕಾರ ಕಸಿದುಕೊಂಡಿದ್ದು, ಕೇಂದ್ರ ಸರ್ಕಾರವು ತನ್ನಿಚ್ಛೆಯಂತೆ ವಕ್ಫ್ ಆಸ್ತಿಯ ಲೆಕ್ಕಪರಿಶೋಧನೆ ಮಾಡುವಂತೆ ತಿದ್ದುಪಡಿ ಮಾಡಿಕೊಂಡಿದೆ.