ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಇಲಾಖೆ , ಕಾಲೇಜುಗಳ ಕಾರ್ಮಿಕರ ಸಂಘದಿಂದ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ, ಕಾಲೇಜು ಅಭಿವೃದ್ಧಿ ಸಮಿತಿಯ ಮೂಲಕ ನೇಮಿಸಿಕೊಂಡಿರುವ ಕಾರ್ಮಿಕರಿಗೆ ಕನಿಷ್ಠ ವೇತನ ಸೇರಿದಂತೆ, ಇನ್ನಿತರ ಸೌಲಭ್ಯ ನೀಡಿ, ನಿಯಮಾನುಸಾರ ಕೆಲಸ ಒದಗಿಸುವಂತೆ ಒತ್ತಾಯಿಸಿ ಎಐಯುಟಿಯುಸಿ ಸಂಘಟನೆ ನೇತೃತ್ವದಲ್ಲಿ ಮೈಸೂರಿನ ಪ್ರಾದೇಶಿಕ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರ ಕಚೇರಿ ಮುಂಬಾಗ ಪ್ರತಿಭಟನೆ ನಡೆಸಿದರು.
ಸರ್ಕಾರವು ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಹೊರಗುತ್ತಿಗೆ ಮೂಲಕ ನೇಮಕ ಮಾಡಿಕೊಳ್ಳಲು ‘ ಜೆಮಿನಿ ಸೆಕ್ಯೂರಿಟಿ ಸರ್ವಿಸಸ್ ‘ ಎಂಬ ಗುತ್ತಿಗೆದಾರರಿಗೆ ಗುತ್ತಿಗೆ ನೀಡಿರುತ್ತದೆ. ಈ ಕುರಿತು ಗುತ್ತಿಗೆದಾರರು ರಾಜ್ಯದ ಎಲ್ಲಾ ಪ್ರಾಂಶುಪಾಲರುಗಳಿಗೆ ಇ-ಮೇಲ್ ಮೂಲಕ ಕಾಲೇಜಿಗೆ ಮಂಜೂರಾಗಿರುವ ಹುದ್ದೆಗಳ ಸಂಖ್ಯೆಗಳ ವಿವರದೊಂದಿಗೆ ಪತ್ರವನ್ನು ಕಳುಹಿಸಿ, ಕಾಲೇಜುಗಳಲ್ಲಿ ಈಗಾಗಲೇ ಕೆಲಸ ಮಾಡುತ್ತಿರುವ ಎಸ್ ಎಸ್ ಎಲ್ ಸಿ ಪಾಸ್ ಆಗಿರುವ ಸಿಡಿಸಿ ಕಾರ್ಮಿಕರ ಪಟ್ಟಿಯನ್ನು ನೀಡುವಂತೆ ಕೇಳಿರುತ್ತಾರೆ.
ಪ್ರಾಂಶುಪಾಲರುಗಳು ಆಯುಕ್ತರ ಕಚೇರಿಯಿಂದ ಸೂಕ್ತ ನಿರ್ದೇಶನವನ್ನು ಪಡೆಯದೆ, ಗುತ್ತಿಗೆದಾರನ ಇಚ್ಛಾನುಸಾರ ನೇಮಕ ಮಾಡಲು ಅನುಮತಿ ನೀಡಿರುತ್ತಾರೆ. ಇದರ ಲಾಭ ಪಡೆದು ಗುತ್ತಿಗೆದಾರರು ಎಸ್ ಎಸ್ ಎಲ್ ಸಿ ಪಾಸ್ ಆದ ಕಾರ್ಮಿಕರಿಗೆ ಲಭ್ಯವಿಲ್ಲದ ಕಾಲೇಜುಗಳಿಗೆ ಹೊರಗಿನ ವ್ಯಕ್ತಿಗಳನ್ನು ನೇಮಕ ಮಾಡಿಕೊಳ್ಳುತ್ತಿರುವುದು ತಿಳಿದು ಬಂದಿದೆ. ಕೆಲವು ಸಿಡಿಸಿ ಕಾರ್ಮಿಕರು ಗುತ್ತಿಗೆದಾರರ ಮೇಲ್ವಿಚಾರಕರೊಂದಿಗೆ ಸೇರಿಕೊಂಡು ಕಾರ್ಮಿಕರಿಂದ ಹಣ ವಸೂಲಿ ಮಾಡಿ ನೇಮಕಾತಿ ಪತ್ರಗಳನ್ನು
ನೀಡಿರುವುದು ತಿಳಿದು ಬಂದಿರುತ್ತದೆ. ಇದರಿಂದ ಕಳೆದ ಹತ್ತು ಹದಿನೈದು ವರ್ಷಗಳಿಂದ ಕನಿಷ್ಠ ವೇತನವು ಇಲ್ಲದೆ ಇಲಾಖೆಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ಕಾರ್ಮಿಕರಿಗೆ ಅನ್ಯಾಯ ಮಾಡಿದಂತಾಗುತ್ತದೆ.
ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ಅನ್ವಯ ಡಿ ಗ್ರೂಪ್ ಹುದ್ದೆಗಳಿಗೆ ಹೊರಗುತ್ತಿಗೆ ಮೂಲಕ ನೇಮಕ ಮಾಡಿಕೊಳ್ಳುವ ಸಂದರ್ಭದಲ್ಲಿ ಹಾಲಿ ಇರುವ ಕಾರ್ಮಿಕರನ್ನೇ ಕೆಲಸಕ್ಕೆ ನೇಮಕ ಮಾಡಿಕೊಳ್ಳಲು ಅವಕಾಶವಿರುತ್ತದೆ. ಇಂತಹ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಪಾಸ್ ಆಗಿರಬೇಕು ಎಂಬ ನಿಯಮವು ಅನ್ವಯವಾಗುವುದಿಲ್ಲ. ಈ ಕುರಿತು ಈಗಾಗಲೇ ಸಂಘದ ವತಿಯಿಂದ ಗೌರವಾನ್ವಿತ ಲೋಕಾಯುಕ್ತರಿಗೆ ಮತ್ತು ಆಯುಕ್ತರುಗಳಿಗೆ ಪತ್ರವನ್ನು ಸಹ ಬರೆಯಲಾಗಿದೆ. ಆದರೂ, ಗುತ್ತಿಗೆದಾರರು ತಮ್ಮ ಇಚ್ಛೆ ಅನುಸಾರ ನೇಮಕ ಮಾಡಿಕೊಂಡು ಕೆಲಸಕ್ಕೆ ಕಳುಹಿಸುತ್ತಿರುವುದು ಗಮನಕ್ಕೆ ಬಂದಿರುತ್ತದೆ.

ಇದರಿಂದ, ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಸಿಡಿಸಿ ಕಾರ್ಮಿಕರಿಗೆ ಮುಕ್ತಿ ದೊರೆಯುವುದಿಲ್ಲ. ಬದಲಿಗೆ ಸರ್ಕಾರವು ಸಿಡಿಸಿ ಕಾರ್ಮಿಕರಿಗೂ ಮತ್ತು ಹೊರಗುತ್ತಿಗೆ ಕಾರ್ಮಿಕರಿಗೂ ವೇತನ ನೀಡುವುದು ಅನಿವಾರ್ಯವಾಗುತ್ತದೆ. ವಿದ್ಯಾರ್ಥಿಗಳಿಂದ ಕಾಲೇಜು ಅಭಿವೃದ್ಧಿಗಾಗಿ ಸಂಗ್ರಹಿಸುವ ಹಣದ ದುರುಪಯೋಗವೂ ಸಹ ತಡೆಗಟ್ಟಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಕೂಡಲೇ, ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಪಾಲಿಸಿ, ಕಳೆದ ಹತ್ತು ಹದಿನೈದು ವರ್ಷಗಳಿಂದಲೂ ಸಿಡಿಸಿ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ಕಾರ್ಮಿಕರನ್ನು ನೇಮಿಸಿಕೊಳ್ಳಲು ಗುತ್ತಿಗೆದಾರನಿಗೆ ನಿರ್ದೇಶನ ನೀಡಬೇಕು ಮತ್ತು ಎಸ್ ಎಸ್ ಎಲ್ ಸಿ ಕಡ್ಡಾಯಗೊಳಿಸಬಾರದು.
ಯಾವುದಾದರೂ ಕಾಲೇಜುಗಳಿಗೆ ಹೆಚ್ಚುವರಿ ಯಾಗಿ ಹುದ್ದೆಗಳು ಸೃಷ್ಟಿಯಾಗಿದ್ದರೆ ಬೇರೆ ಹತ್ತಿರದ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸಿರುವ ಸಿಡಿಸಿ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲು ಗುತ್ತಿಗೆದಾರರಿಗೆ ನಿರ್ದೇಶನ ನೀಡಬೇಕು. ಒಂದು ವೇಳೆ ಸಹಜ ನ್ಯಾಯವನ್ನು ಪಾಲಿಸದೆ ಗುತ್ತಿಗೆದಾರನ ಇಚ್ಛಾನುಸಾರ ನೇಮಕ ಮಾಡಿಕೊಳ್ಳಲು ಅವಕಾಶ ನೀಡಿದರೆ. ಅನಿವಾರ್ಯವಾಗಿ ಪ್ರಾಂಶುಪಾಲರ ಮತ್ತು ಗುತ್ತಿಗೆದಾರರ ವಿರುದ್ಧ ಪ್ರಕರಣವನ್ನು ದಾಖಲಿಸಲಾಗುವುದು. ಹಾಗಾಗಿ, ತಾವು ತಕ್ಷಣವೇ ಎಲ್ಲಾ ಪ್ರಾಂಶುಪಾಲರಿಗೆ ಈ ಕೆಳಗಿನ ಸಂಘದ ನ್ಯಾಯಯುತ ಬೇಡಿಕೆಗಳನ್ನು ಜಾರಿ ಮಾಡಲು ನಿರ್ದೇಶನ ನೀಡಬೇಕು.
ಬೇಡಿಕೆಗಳು:
- ಎಸ್ ಎಸ್ ಎಲ್ ಸಿ ಕಡ್ಡಾಯಗೊಳಿಸದೆ ಸಿಡಿಸಿ ಕಾರ್ಮಿಕರಾಗಿ ಸೇವೆ ಸಲ್ಲಿಸಿರುವ ಹಿರಿಯ ಕಾರ್ಮಿಕರಿಗೆ ಅವಕಾಶ ಕಲ್ಪಿಸಬೇಕು.
- ಗುತ್ತಿಗೆದಾರರು ಕಾಲೇಜುಗಳಲ್ಲಿ ಕೆಲಸ ಮಾಡದೇ ಇರುವ ವ್ಯಕ್ತಿಗಳಿಗೆ ನೇಮಕಾತಿ ಪತ್ರಗಳನ್ನು ನೀಡಿ ಕಾಲೇಜಿಗೆ ವರದಿ ಮಾಡಿಕೊಳ್ಳಲು ಕಳುಹಿಸಿದ್ದರೆ, ಅಂತಹ ವ್ಯಕ್ತಿಗಳನ್ನು ನೇಮಕ ಮಾಡಿಕೊಳ್ಳದೆ ತಿರಸ್ಕರಿಸಬೇಕು.
- ಯಾವುದಾದರೂ ಕಾಲೇಜು ಅಥವಾ ಇಲಾಖೆಯ ಕಚೇರಿಯಲ್ಲಿ ಮಂಜೂರಾದ ಹುದ್ದೆಗಳು ಖಾಲಿ ಉಳಿದಿದ್ದರೆ ಅಂತಹ ಸ್ಥಳಗಳಿಗೆ ಹತ್ತಿರದ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಸಿಡಿಸಿ ಕಾರ್ಮಿಕರನ್ನೇ ನೇಮಿಸಿಕೊಳ್ಳಬೇಕು.
ಈ ಸುದ್ದಿ ಓದಿದ್ದೀರಾ? ಮೈಸೂರು | ‘ ಅರಿವೇ ಅಂಬೇಡ್ಕರ್ ‘ ಸಂಚಿಕೆ ಬಿಡುಗಡೆ; ಓದಿನಲ್ಲಿ ಜೀವವಿದೆ, ಜೀವನವಿದೆ : ಲೇಖಕ ನಾ. ದಿವಾಕರ್
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಇಲಾಖೆ , ಕಾಲೇಜುಗಳ ಕಾರ್ಮಿಕರ ಸಂಘ (ರಿ) ಎಐಯುಟಿಯುಸಿ ಸಂಯೋಜಿತ ರಾಜ್ಯಾಧ್ಯಕ್ಷ ಚಂದ್ರಶೇಖರ್ ಮೇಟಿ, ಸಂಧ್ಯಾ ಪಿ.ಎಸ್, ಇಂದಿರಾ ಸೇರಿದಂತೆ ಪಿರಿಯಾಪಟ್ಟಣ, ಹುಣಸೂರು ,ಕೆ ಆರ್ ನಗರ , ಎಚ್ ಡಿ ಕೋಟೆ ತಾಲೂಕುಗಳ ಕಾರ್ಮಿಕರು ಇದ್ದರು.