ಬೀದರ್‌ | ಸಂವಿಧಾನವೇ ಭಾರತ ದೇಶದ ಧರ್ಮಗ್ರಂಥ : ನಿಜಗುಣಾನಂದ ಸ್ವಾಮೀಜಿ

Date:

Advertisements

‘ಭಾರತ ದೇಶದ ಧರ್ಮಗ್ರಂಥ ಸನಾತನ ಪರಂಪರೆಯ ಧರ್ಮಗ್ರಂಥ ಆಗಬಾರದು. ಬೇರೆ ಯಾವುದೇ ಧರ್ಮಗ್ರಂಥಗಳು ಆಗಬಾರದು. ಡಾ.ಬಿ.ಆರ್.ಅಂಬೇಡ್ಕರ್‌ ಅವರು ಬರೆದಿರುವ ಸಂವಿಧಾನವೇ ಭಾರತ ದೇಶದ ಧರ್ಮಗ್ರಂಥವಾಗಬೇಕುʼ ಎಂದು ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಹೇಳಿದರು.

ಬೀದರ್ ನಗರದ ಡಾ.ಅಂಬೇಡ್ಕರ್ ವೃತ್ತದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರ ಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134ನೇ ಜಯಂತ್ಯುತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ʼಡಾ.ಬಿ.ಆರ್.ಅಂಬೇಡ್ಕರ್‌ ಎಂದರೆ ಕೇವಲ ದಲಿತರಿಗೆ ಸೀಮಿತವಲ್ಲ.‌ ಯಾರದೇ ಮನೆಯಲ್ಲಿ ಕಳ್ಳತನ, ದರೋಡೆ ಆಗಿದ್ದರೂ ಸಹ ಅದಕ್ಕೆ ನ್ಯಾಯ ದೊರಕಿಸಿಕೊಡಲು ಬಾಬಾ ಸಾಹೇಬರು ಬರೆದಿಟ್ಟಿದ್ದಾರೆ. ಸಂವಿಧಾನದ ವ್ಯವಸ್ಥೆ ಒಳಗಡೆ ಮೇಲ್ವರ್ಗದವರ ಮನಸ್ಸು ಕಾನೂನಾತ್ಮಕವಾಗಿ, ಆ ಕಾನೂನು ಸಂವಿಧಾನಕ್ಕೆ ಹೆದರಿ ನಮ್ಮವರು ಎನ್ನುತಾರೆಯೇ ಹೊರತು ಹೃದಯದಿಂದ ದಲಿತ ವರ್ಗದವರನ್ನು ನಮ್ಮವರೆಂದು ಹೇಳುವ ಕಾಲ ಇನ್ನೂ ಬಂದಿಲ್ಲ. ಕಾನೂನು ಭಯ, ಅಧಿಕಾರ ತಪ್ಪಿ ಹೋಗಬಹುದು ಎಂಬ ಭಾವನೆಯಿಂದ ನಮ್ಮವರು ಹೇಳುವುದು ಬೇರೆʼ ಎಂದರು.

Advertisements

ʼದೇಶದಲ್ಲಿ ಎಲ್ಲರೂ ಬದುಕಿದ್ದು ಅಂಬೇಡ್ಕರ್‌ ಅವರ ಸಂವಿಧಾನದಿಂದ ಮಾತ್ರ ಎಂಬ ವಿಚಾರವನ್ನೇ ಮರೆತಿದ್ದೇವೆ. ಸಂವಿಧಾನ ನಮ್ಮೆಲ್ಲರ ರಕ್ಷಾ ಕವಚವಾಗಿರುವ ಗ್ರಂಥವಾಗಿದೆ. ರಾಜ್ಯ ಸರ್ಕಾರ ವಿಶ್ವಗುರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದಂತೆ ಡಾ.ಬಿ.ಆರ್.ಅಂಬೇಡ್ಕರ್‌ ಜಯಂತಿಯನ್ನು ʼಸಂವಿಧಾನ ಉತ್ಸವʼ ಆಗಿ ಆಚರಿಸಲು ಘೋಷಿಸಿ ವಿಶೇಷ ಅನುದಾನ ಮೀಸಲಿಡಬೇಕುʼ ಎಂದು ಆಗ್ರಹಿಸಿದರು.

ʼಈ ಜಗತ್ತಿನಲ್ಲಿ ಅಸ್ಪೃಶ್ಯತೆ ಇನ್ನೂ ತಾಂಡವಾಡುತ್ತಿದೆ. ಹಳ್ಳಿಗಳಲ್ಲಿ ಮಾನಸಿಕ ಅಸ್ಪೃಶ್ಯತೆ ಜೀವಂತವಾಗಿದೆ. ಸಂವಿಧಾನ, ಪೊಲೀಸ್‌ ಕಾನೂನು ಇರಬಹುದು, ಆದರೆ ಜನರ ಮನಸ್ಸಿನ ಭಾವನೆಗಳನ್ನು ತಿದ್ದುವ ಕಾರ್ಮಿಕ ಮುಖಂಡರು ಮುಂದೆ ಬರಬೇಕಿದೆ. ಇಲ್ಲದಿದ್ದರೆ ದೇಶ ಅರಾಜಕತೆಗೆ ಹೋಗುತ್ತದೆ. ಬಹುತ್ವ, ಬಹು ಸಂಸ್ಕೃತಿಯ ಭಾರತದಲ್ಲಿ ಏಕಮೇವ, ಒಂದು ವಿಚಾರಧಾರೆಯಲ್ಲಿ ಕಟ್ಟಲು ಸಾಧ್ಯವಿಲ್ಲ. ಒಂದು ವೇಳೆ ಕಟ್ಟಲು ಹೊರಟಿದ್ದರೆ ಅದು ಕೇವಲ ಹುಸಿ ಬಾಂಬ್ ಅಷ್ಟೇ. ಬಹುತ್ವ ಸಾರಿದ ಈ ನೆಲದಲ್ಲಿ ಒಂದು ಶಾಸ್ತ್ರ, ಧರ್ಮ, ಮಂತ್ರದಿಂದ ಕಟ್ಟುವುದು ಅಸಾಧ್ಯ. ಕೇವಲ ಬಹುತ್ವದ ಸರ್ವ ಧರ್ಮ ಜನಾಂಗದ ಶಾಂತಿಯ ತೋಟವಾಗಿ ಬೆಳೆಸುವ ಕಾರ್ಯವಾದರೆ ಮಾತ್ರ ದೇಶ ಉಳಿಯುತ್ತದೆʼ ಎಂದರು.

ʼಜಗತ್ತಿನಲ್ಲಿ ಬುದ್ಧನ ತನು, ಬಸವಣ್ಣನವರ ಪ್ರಾಣ, ಅಂಬೇಡ್ಕರ್‌ ಅವರ ಆತ್ಮದ ಸ್ವತಂತ್ರ ತಲೆಗಳಾಗಬೇಕಾಗಿದೆ. ಇಂದ್ರಬಲ, ಚಂದ್ರಬಲ, ತಾರಾಬಲ, ಗುರುಬಲದ ಅಗತ್ಯವಿಲ್ಲ. ಅಂಬೇಡ್ಕರ್‌ ಅವರ ಸಂವಿಧಾನದ ಆತ್ಮಬಲದಿಂದ ಬದುಕಲು ಪ್ರಯತ್ನಿಸಿ. ಮೂಢನಂಬಿಕೆ, ಅಂಧಶ್ರದ್ಧೆ, ಅಜ್ಞಾನ ತೊರೆದು ಶ್ರಮಪಟ್ಟು ದುಡಿದು ಸ್ವಾವಲಂಬಿಗಳಾಗಬೇಕುʼ ಎಂದು ಸಲಹೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ʼದೇಶದಲ್ಲಿ ಅಂಧಕಾರ, ಅಸಮಾನತೆ, ಮೌಢ್ಯ, ಬಡತನ ತಾಂಡವಾಡುತ್ತಿತ್ತು. ಅಂದಿನ ದುರಿತ ಕಾಲದಲ್ಲಿ ಜನಿಸಿದ ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ಅನೇಕ ನೋವು, ಅನುಮಾನಗಳ ಮಧ್ಯೆ ಕಠಿಣ ಪರಿಶ್ರಮದಿಂದ ದೇಶಕ್ಕೆ ಸರ್ವಶ್ರೇಷ್ಠ ಸಂವಿಧಾನವನ್ನು ನೀಡಿದ್ದಾರೆʼ ಎಂದು ಹೇಳಿದರು.

WhatsApp Image 2025 04 15 at 8.37.32 PM
ಬೀದರ್‌ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ʼಪ್ರಜಾಪ್ರಭುತ್ವ ಎಲ್ಲರಿಗೂ ಸ್ವಾತಂತ್ರ್ಯ ಸಮಾನತೆ, ಸಹೋದರತೆ, ಸಹಬಾಳ್ವೆ ಹಕ್ಕು ನೀಡಿದೆ. ಇಲ್ಲಿ ಅಸಮಾನತೆಗೆ ಅವಕಾಶ ಇಲ್ಲ. ಆರ್ಥಿಕ ಸಫಲರಾದರೆ ಮಾತ್ರ ಬಲಾಢ್ಯ ರಾಷ್ಟ್ರವಾಗಲು ಸಾಧ್ಯ. ಎಲ್ಲರಿಗೂ ಶಿಕ್ಷಣ ದೊರೆತರೆ ಮಾತ್ರ ಜಾತಿವ್ಯವಸ್ಥೆ ಹೋಗುತ್ತದೆ. ದೇಶದಲ್ಲಿ ಜಾತಿ-ಧರ್ಮಗಳ ಮಧ್ಯೆ ಒಡೆದಾಳುವ ನೀತಿಯಿಂದ ಸಾಮಾಜಿಕ ನ್ಯಾಯಕ್ಕೆ ಪೆಟ್ಟು ಬೀಳುತ್ತಿದೆ. ಜಾತಿರಹಿತ ಸಮಾಜ ಕಟ್ಟುವ ಕನಸು ನಮ್ಮದಾಗಬೇಕು. ಕೋಮುವಾದಿ ಶಕ್ತಿಗಳಿಗೆ ಹಿಮ್ಮೆಟ್ಟಿಸಿ, ಸಂವಿಧಾನ ರಕ್ಷಣೆಗೆ ಮುಂದಾಗೋಣʼ ಎಂದು ಹೇಳಿದರು.

ಪೌರಾಡಳಿತ ಮತ್ತು ಹಜ್ ಸಚಿವರಾದ ರಹೀಂ ಖಾನ್ ಮಾತನಾಡಿ, ʼಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅವಕಾಶ ಸಿಗುವಂತಹ ಹಾಗೂ ಸಮಾಜದ ಎಲ್ಲ ವರ್ಗಗಳ ಏಳಿಗೆಗೆ ಸಾಧ್ಯವಾಗುವಂತಹ ಸಂವಿಧಾನವನ್ನು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಮಗೆ ನೀಡಿದ್ದಾರೆ. ಸಮಾಜದಲ್ಲಿ ಸಮಾನತೆ, ಸಹಬಾಳ್ವೆಯಿಂದ ಬದುಕಬೇಕು, ಐಕ್ಯತೆ ಬಹಳ ಮುಖ್ಯವಾಗಿದೆ. ಹೀಗಾಗಿ ನಾವೆಲ್ಲರೂ ಒಗ್ಗಟ್ಟಾಗಿ ಈ ದೇಶದ ಅಭಿವೃದ್ಧಿಗಾಗಿ ದುಡಿಯಬೇಕು. ಅಧಿಕಾರ ಇರುವವರೆಗೂ ಜನರ ಏಳಿಗಾಗಿ ಶ್ರಮಿಸುವೆʼ ಎಂದರು.

ಬೀದರ ದಕ್ಷಿಣದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಅವರು ಮಾತನಾಡಿ, ʼಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಎಲ್ಲ ಸಮುದಾಯದ ಏಳಿಗೆ ಮತ್ತು ದೇಶದ ಅಭಿವೃದ್ಧಿಗೆ ಪೂರಕವಾಗುವ ಸಂವಿಧಾನವನ್ನು ನಮಗೆ ನೀಡಿದ್ದಾರೆ, ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ನಾವೆಲ್ಲರೂ ಸಾಗಬೇಕುʼ ಎಂದು ತಿಳಿಸಿದರು.

ಸಚಿವ ಈಶ್ವರ ಖಂಡ್ರೆ-ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಅವರ ಮಾತಿನ ಜಟಾಪಟಿ :

ಇದೇ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆ ಅವರ ನಡುವೆ ಮಾತಿನ ಜಟಾಪಟಿಗೆ ಸಾಕ್ಷಿಯಾಯಿತು.

ಸಚಿವ ಈಶ್ವರ ಖಂಡ್ರೆ ಅವರು ಉದ್ಘಾಟನೆ ನೆರೆವೇರಿಸಿ ಮಾತನಾಡಿ, ʼಡಾ.ಅಂಬೇಡ್ಕರ್‌ ಅವರು ದೇಶಕ್ಕೆ ನೀಡಿದ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಮಹತ್ವ ತಿಳಿಸಿದರು. ಬಳಿಕ ಗ್ಯಾರಂಟಿ ಯೋಜನೆಗಳ ಮೂಲಕ ದುರ್ಬಲ ವರ್ಗದವರನ್ನು ಮೇಲೆತ್ತುವ ಕೆಲಸ ಸರ್ಕಾರ ಮಾಡುತ್ತಿದೆ. ನೀವು ಕೂಡ ಕಳೆದ ಲೋಕಸಭಾ ಚುನಾವಣೆಯಲ್ಲಿ ಸಂಸದ ಸಾಗರ್‌ ಖಂಡ್ರೆ ಅವರನ್ನು ಗೆಲ್ಲಿಸಿ ಬಲ ತುಂಬಿದ್ದೀರಿ. ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆʼ ಎಂದು ಹೇಳಿ ಮಾತು ಮುಗಿಸಿದರು.

ಬಳಿಕ ಶಾಸಕ ಡಾ.ಶೈಲೇಂದ್ರ ಕೆ.ಬೆಲ್ದಾಳೆ ಅವರು ಮಾತನಾಡಿ, ಉಸ್ತುವಾರಿ ಸಚಿವರು ಚುನಾವಣಾ ಭಾಷಣ ಮಾಡಿದ್ದಾರೆ. ಯಾರೂ ಅನ್ಯಥಾ ಭಾವಿಸಬಾರದು. ಇನ್ನೂ ಚುನಾವಣೆಗೆ ಮೂರು ವರ್ಷಗಳಿವೆ. ಬೀದರ್ ಜಿಲ್ಲೆಗೆ ನಾಳೆ ಸಿಎಂ ಬರಲಿದ್ದಾರೆ ಅವರ ಎದುರು ಈ ವಿಷಯ ಹೇಳಬಹುದಿತ್ತು. ಇಂದು ಬಹಳ ಮಹತ್ವದ ದಿನ. ಬಾಬಾ ಸಾಹೇಬರ ಐದು ಪಂಚಕ್ಷೇತ್ರಗಳಿವೆ. ಅವುಗಳನ್ನು ಪ್ರಧಾನಿ ನರೇಂದ್ರ ಮೋದಿ ಅಭಿವೃದ್ಧಿಪಡಿಸಿದ್ದಾರೆ‌ʼ ಎಂದು ಹೇಳಿದರು

ಶೈಲೇಂದ್ರ ಬೆಲ್ದಾಳೆ ಅವರು ಭಾಷಣ ಮುಗಿಸಿ ತಮ್ಮ ಆಸನದ ಮೇಲೆ ಹೋಗಿ ಕುಳಿತರು. ಅವರ ಪಕ್ಕದಲ್ಲೇ ಕುಳಿತಿದ್ದ ಸಚಿವ ಖಂಡ್ರೆ ಅವರು ಪುನಃ ಎದ್ದು ಹೋಗಿ ಮಾತನಾಡಿ, ʼಶಾಸಕ ಶೈಲೇಂದ್ರ ಕೆ. ಬೆಲ್ದಾಳೆ ಅವರು, ನಾನು ರಾಜಕೀಯ ಭಾಷಣ ಮಾಡಿದ್ದೇನೆ ಎಂದು ಹೇಳಿದ್ದಾರೆ. ಇದು ಒಂದು ಪವಿತ್ರ ಕಾರ್ಯಕ್ರಮ. ಈ ಕಾರ್ಯಕ್ರಮದಲ್ಲಿ ನಾನು ಯಾರ ಹೆಸರು ತೆಗೆದುಕೊಂಡಿಲ್ಲ. ಸತ್ಯ ಇರುವುದನ್ನು ಹೇಳಿದ್ದೇನೆ. ಸತ್ಯ ಹೇಳಿದರೆ ಯಾಕೆ ಹೆಗಲು ಮುಟ್ಟಿಕೊಂಡು ನೋಡಿಕೊಳ್ಳುತ್ತೀರಿ. ನಿಮಗೆ ಏನಾದರೂ ಹೇಳಿದ್ದೇನಾ? ನಾನು ಇನ್ನೂ ಕೆಲವು ವಿಚಾರಗಳನ್ನು ಹೇಳಿದರೆ ನೀವು ವೇದಿಕೆಯಿಂದ ನಿರ್ಗಮಿಸಬೇಕಾಗುತ್ತದೆ. ಯಾವುದೇ ವಿವಾದದ ಹೇಳಿಕೆ ಕೊಡುತ್ತಿಲ್ಲ’ ಎಂದು ಸಮರ್ಥಿಸಿಕೊಂಡರು.

‘ಈ ಜಿಲ್ಲೆಯ ಉಸ್ತುವಾರಿ ಸಚಿವನಾಗಿ ನಮ್ಮ ಸರ್ಕಾರ ಏನು ಮಾಡಿದೆ, ನಾವೇನೂ ಕಾರ್ಯಕ್ರಮ ಕೊಡುತ್ತಿದ್ದೇವೆ ಎನ್ನುವುದರ ಬಗ್ಗೆ ಹೇಳಿದ್ದೇನೆ. ಕೊಟ್ಟ ಭರವಸೆ ಈಡೇರಿಸಿದ್ದೇವೆ ಎಂದಿದ್ದೇನೆ. ಅದು ಹೇಳುವುದು ನನ್ನ ಕರ್ತವ್ಯ ಹಾಗೂ ಧರ್ಮ ಇದೆ. ಅದನ್ನು ಹೇಳಿದ್ದೇನೆ. ಇನ್ನೂ ನೀವು ಹೊಸದಾಗಿ ಶಾಸಕರಾಗಿದ್ದೀರಿ. ಯಾವ ವೇದಿಕೆ ಮೇಲೆ ಏನು ಹೇಳಬೇಕು, ಮಾತನಾಡಬೇಕು ಎಂಬುದನ್ನು ಅರ್ಥ ಮಾಡಿಕೊಂಡು ಮಾತನಾಡಬೇಕು ಎಂದು ಸಲಹೆ ನೀಡಲು ಬಯಸುತ್ತೇನೆ. ಇದನ್ನು ಮತ್ತಷ್ಟು ಬೆಳೆಸಲು ಹೋಗುವುದಿಲ್ಲ’ ಎಂದು ತಿರುಗೇಟು ನೀಡಿದರು. ಈ ಘಟನೆ ನಡೆದ ಕೆಲ ನಿಮಿಷಗಳ ನಂತರ ಶಾಸಕ ಬೆಲ್ದಾಳೆ ಅವರು ವೇದಿಕೆಯಿಂದ ನಿರ್ಗಮಿಸಿದರು. ಬಳಿಕ ಕಾರ್ಯಕ್ರಮ ಮುಂದುವರೆಯಿತು.

ಕಾರ್ಯಕ್ರಮಕ್ಕೂ ಮುನ್ನ‌ ಗಾಯಕರಿಂದ ಭೀಮ್‌ ಕ್ರಾಂತಿ ಗೀತೆಗಳು ಮೊಳಗಿದವು, ಕಾರ್ಯಕ್ರಮದಲ್ಲಿ ಸಂವಿಧಾನದ ಪೀಠಿಕೆ ಓದಲಾಯಿತು. ಡಾ.ಅಂಬೇಡ್ಕರ್‌ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ನಡೆಯಿತು.

ಈ ಸುದ್ದಿ ಓದಿದ್ದೀರಾ? ಅರ್ಧಶತಮಾನದ ಅಂಬೇಡ್ಕರ್ ಭೂಮಿಕೆ ಮತ್ತು ಬದಲಾದ ಭಾರತ (ಭಾಗ-2)

ಸಮಾರಂಭದಲ್ಲಿ ಆಣದೂರ ವೈಶಾಲಿ ನಗರ ಬುದ್ಧ ವಿಹಾರ ಭಂತೆ ಜ್ಞಾನಸಾಗರ, ನಗರ ಸಭೆ ಅಧ್ಯಕ್ಷ ಮಹಮ್ಮದ್ ಗೌಸ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ, , ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಸಿಂಧು ಹೆಚ್.ಎಸ್, ಶಾಹೀನ್‌ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಅಬ್ದುಲ್‌ ಖದೀರ್‌ ಸೇರಿದಂತೆ ಮುಖಂಡರು, ಗಣ್ಯರು ಭಾಗವಹಿಸಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

ಕಲಬುರಗಿ | ಯುವಕರು ಮಾರಕಾಸ್ತ್ರ ಹಿಡಿದ ವಿಡಿಯೊ ವೈರಲ್: ನಾಲ್ವರು ಯುವಕರ ವಿರುದ್ಧ ಎಫ್‌ಐಆರ್

ಕಲಬುರಗಿಯ ದೇವಿ ನಗರದಲ್ಲಿ ನಾಲ್ವರು ಯುವಕರು ಕೈಯಲ್ಲಿ ಮಾರಕಾಸ್ತ್ರಗಳು ಹಿಡಿದು ವಿಡಿಯೋ...

ಅಲೆಮಾರಿ ಸಮುದಾಯಗಳಿಗೆ ಸಾಂವಿಧಾನಿಕ ನ್ಯಾಯ ಸಿಗಲಿ: ಚಲನಚಿತ್ರ ನಿರ್ದೇಶಕಿ ಸುಮನ್ ಕಿತ್ತೂರು

ಪರಿಶಿಷ್ಟ ಜಾತಿ ಒಳಮೀಸಲಾತಿ ವಿಚಾರದಲ್ಲಿ ಅಲೆಮಾರಿ ಸಮುದಾಯಗಳಿಗೆ ಸಾಂವಿಧಾನಿಕ ನ್ಯಾಯ ಸಿಗಲಿ...

Download Eedina App Android / iOS

X