ಜಿಲ್ಲಾ ಸಂವಿಧಾನ ಸಂರಕ್ಷಕರ ಪಡೆ ವತಿಯಿಂದ ದಾವಣಗೆರೆ ಮತ್ತು ಧಾರವಾಡ ನಗರದಲ್ಲಿ ಸಂವಿಧಾನ ಸಂರಕ್ಷಕರ ಬೃಹತ್ ಸಮಾವೇಶದ ಅರ್ಥಾತ್ ಭೀಮೋತ್ಸವ ಕಾರ್ಯಕ್ರಮದ ಪೂರ್ವಸಿದ್ದತಾ ಸಭೆಯು ಏ.15ರಂದು ಸಾಯಂಕಾಲ ರಾ.ಹ.ದೇಶಪಾಂಡೆ ಸಭಾಭವನದಲ್ಲಿ ನಡೆಯಿತು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಕರಪತ್ರ ಮತ್ತು ಈದಿನ.ಕಾಂ ಹೊರತಂದಿರುವ ‘ಅರಿವೇ ಅಂಬೇಡ್ಕರ’ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ್ ಹಲಗತ್ತಿ ಮಾತನಾಡಿ, ಇತ್ತೀಚೆಗೆ ಯುವಕರು ದಾರಿ ತಪ್ಪುತ್ತಿದ್ದು, ಸರಿಯಾದ ಹಾದಿ ತೋರುವವರಿಲ್ಲದೆ ಇತ್ತ ಜೈಭೀಮ್ ಹೇಳಿ ಅತ್ತ ಜೈಶ್ರೀರಾಮ್ ಹೇಳುವ ಯುವಕರ ಸಂಖ್ಯೆ ಹೆಚ್ಚಾಗಿದೆ. ಇದನ್ನು ಬಿಡಿಸಿ ತಳ ಸಮುದಾಯಗಳು ಮತ್ತು ಅಲ್ಪಸಂಖ್ಯಾತರು ಎಲ್ಲರೂ ಒಂದಾಗಿ ಹೆಜ್ಜೆ ಹಾಕಬೇಕು. ಜೈಭೀಮ್ ಎಂಬುದೊಂದೇ ಅವರು ಸರಿದಾರಿಗೆ ಬರಲು ಸೂಕ್ತ ಹಾದಿ. ಇನ್ನು ಆಡಳಿತ ಪಕ್ಷವು ತಪ್ಪು ಮಾಡಿದಾಗ ತಿದ್ದಿ ಬುದ್ಧಿ ಹೇಳುವ ಕೆಲಸವನ್ನು ಪ್ರಜ್ಞಾವಂತರು ಮಾಡಬೇಕಿದೆ ಎಂದರು.
ಸಭೆಯಲ್ಲಿ ಎದ್ದೇಳು ಕರ್ನಾಟಕ ಸಂಘಟನೆಯ ನೂರ್‌ಶ್ರೀಧರ್ ಪ್ರಾಸ್ತಾವಿಕವಾಗಿ ಮಾತನಾಡಿ, ದೇಶದೆಲ್ಲೆಡೆ ಇಂದು ನಾನಾ ರೂಪದ ಚಳುವಳಿಗಳು ಹುಟ್ಟಿಕೊಂಡಿವೆ. ಸಮಾಜದಲ್ಲಿ ಸಾಮರಸ್ಯವನ್ನು ಜೀವಂತವಾಗಿರಿಸಲು ನಾವೆಲ್ಲ ಮುಂದಾಗಬೇಕಿದೆ. ದೇಶದಲ್ಲಿ ಕಾರ್ಪೊರೇಟ್ ಅಜೆಂಡಾ ಮುನ್ನುಗ್ಗುತ್ತಿದೆ. ಹೀಗಾಗಿ ನಾವು ಜಾಗೃತರಾಗಬೇಕು. ಒಡೆದ ಮನಸ್ಸುಗಳ ಕಟ್ಟಲು ಎಲ್ಲ ಜಾತಿ ಸಮುದಾಯ ಒಳಗೊಂಡು ದೊಡ್ಡ ಶಕ್ತಿಯಾಗಿ ಹೊರಹೊಮ್ಮಬೇಕು. ಸಮಾಜದಲ್ಲಿ ವಿಷವನ್ನು ಬಿತ್ತಿದ್ದಾರೆ. ನಾವು ಸೌಹಾರ್ದತೆಯ ಬಿತ್ತುತ್ತ ಸಾಗೋಣ ಎಂದರು.
ಸಭೆಯಲ್ಲಿ ಡಾ. ಇಸಾಬೆಲಾ ಝೆವಿಯರ್ ಮಾತನಾಡಿ, ಏ. 26ರಂದು ದಾವಣಗೆರೆಯಲ್ಲಿ ನಡೆಯುವ ಸಂವಿಧಾನ ಸಂರಕ್ಷಕರ ಬೃಹತ್ ಸಮಾವೇಶದ ಕುರಿತು ವಿವರಿಸಿದರು. ವಕೀಲ ಮುಸ್ತಾಕಅಹಮ್ಮದ್ ಹಾವೇರಿಪೇಠ ಮಾತನಾಡಿ, ನಾವೆಲ್ಲ ತಳಮಟ್ಟದಿಂದ ಸಂಘಟನಾತ್ಮಕವಾಗಿ ಸಾಗಿದರೆ ಮಾತ್ರ ಉಳಿಯುತ್ತೇವೆ. ಅದನ್ನು ಬಿಟ್ಟು ಭಿನ್ನಾಭಿಪ್ರಾಯದಿಂದ ಕೂಡ್ರುವುದು ಸರಿ ಹೊಂದುವುದಿಲ್ಲ ಎಂದರು. ಉತ್ತರ ಕರ್ನಾಟಕ ಹೋರಾಟ ಸಮಿತಿಯ ಹೋರಾಟಗಾರ ಲಕ್ಷ್ಮಣ ಬಕ್ಕಾಯಿ ಮತ್ತು ಜಾಗತಿಕ ಲಿಂಗಾಯತ ಮಹಾಸಭಾದ ಸಿ ಜಿ ಪಾಟೀಲ ವೇದಿಕೆ ಮೇಲಿದ್ದರು.
ಧಾರವಾಡದಲ್ಲಿ ಏ.20ಕ್ಕೆ ನಡೆಯಬೇಕಿದ್ದ ಭೀಮೋತ್ಸವ ಕಾರ್ಯಕ್ರಮವನ್ನು ಮುಂಬರುವ ಏ.27ಕ್ಕೆ ಮುಂದೂಡಲಾಗಿದೆ. ಮತ್ತು ದಾವಣಗೆರೆ ಸಮಾವೇಶದ ಕುರಿತು ವಿವಿಧ ಸಮುದಾಯದ ಮುಖಂಡರು, ಸಂಘಟಕರು ಚರ್ಚಿಸಿದರು.
ಸಭೆಯಲ್ಲಿ ಅತಿಕ್ ಅಹೆಮ್ಮದ್, ಮಾರ್ತಾಂಡಪ್ಪ ಕತ್ತಿ, ಮಹಮ್ಮದ್‌ಅಲಿ ಗುಡೂಭಾಯಿ, ನಾಗರಾಜ ಅಂಬಣ್ಣವರ, ಎಮ್ ಕೆ ನದಾಫ್, ಇಕ್ಬಾಲ್ಅಹ್ಮದ್ ಎಲ್ಲ ಸಮುದಾಯದ ಮುಖಂಡರು ಇದ್ದರು.