ಸಮೀಪದಲ್ಲೇ ಇರುವ ಕ್ರಷರ್‌ನಿಂದ ಜಲ್ಲಿ ಮತ್ತು ಜಲ್ಲಿ ಪುಡಿ ತುಂಬಿಕೊಂಡು ಸಂಚರಿಸುವ ಲಾರಿಗಳಿಂದಾಗಿ ಸುತ್ತಮುತ್ತ ರೈತರಿಗೆ ಸಮಸ್ಯೆಯಾಗುತ್ತಿದೆ. ಲಾರಿಗಳಿಂದ ಏಳುವ ಧೂಳು ರೇಷ್ಮೆ ಹುಳು ತಿನ್ನುವ ಹಿಪ್ಪು ನೇರಳೆ ಸೊಪ್ಪಿನ ಮೇಲೆ ತುಂಬಿಕೊಳ್ಳುತ್ತಿದೆ. ಅದನ್ನು ತಿಂದು ರೇಷ್ಮೆ ಹುಳುಗಳು ಸಾಯುತ್ತಿವೆ. ರೈತರು ನಷ್ಟ ಅನುಭವಿಸುವಂತಾಗಿದೆ ಎಂದು ರೈತರು ಆರೋಪಿಸಿದ್ದಾರೆ. ರೇಷ್ಮೆ ಹುಳುಗಳನ್ನು ರಸ್ತೆಗೆ ಸುರಿದು ಪ್ರತಿಭಟನೆ ನಡೆಸಿದ್ದಾರೆ.
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ದಾಳಿಂಬ ಗ್ರಾಮದ ರೈತರು ರಸ್ತೆಗೆ ರೇಷ್ಮೆ ಹುಳು ಮತ್ತು ಹಿಪ್ಪು ನೇರಳೆ ಸೊಪ್ಪು ಸುರಿದು ಪ್ರತಿಭಟನೆ ನಡೆಸಿದ್ದಾರೆ. ತಮ್ಮೂರಿನ ಮಾರ್ಗದಲ್ಲಿ ಟಿಪ್ಪರ್ ಲಾರಿ ಸಂಚಾರವನ್ನು ನಿರ್ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಗ್ರಾಮದ ಪಕ್ಕದ ಗ್ರಾಮಗಳಾದ ಸಾತನೂರು, ನರೀಪುರ ನಡುವೆ ಕ್ರಷರ್‌ಗಳಿದ್ದು, ಅಲ್ಲಿಂದ ಜಲ್ಲಿ ಮತ್ತು ಜಲ್ಲಿ ಪುಡಿಯನ್ನು ತುಂಬಿಕೊಂಡು ಟಿಪ್ಪರ್ ಲಾರಿಗಳು ತಮ್ಮೂರಿನ ರಸ್ತೆಯಲ್ಲಿ ಹಾದುಹೋಗುತ್ತವೆ. ಇದರಿಂದಾಗಿ ರಸ್ತೆಯ ಇಕ್ಕೆಲಗಳಲ್ಲಿರುವ ಜಮೀನುಗಳಿಗೆ ಧೂಳು ಆವರಿಸುತ್ತಿದೆ. ಜಮೀನಿನಲ್ಲಿ ಹಿಪ್ಪು ನೇರಳೆ ಸೊಪ್ಪು ಬೆಳೆಯಲಾಗಿದ್ದು, ಧೂಳು ತುಂಬಿದ ಸೊಪ್ಪು ತಿಂದು ರೇಷ್ಮೆ ಹುಳುಗಳು ಸಾಯುತ್ತಿವೆ ಎಂದು ಆರೋಪಿಸಿದ್ದಾರೆ.
“ರಸ್ತೆಯಲ್ಲಿ ಧೂಳು ಬಾರದಂತೆ ರಸ್ತೆಗೆ ನೀರು ಸಿಂಪಡಿಸಿ ಮತ್ತು ಕಡಿಮೆ ಪ್ರಮಾಣದ ಜಲ್ಲಿ ತುಂಬಿಕೊಂಡು ಹೋಗುವಂತೆ ಹಲವು ಬಾರಿ ಮನವಿ ಮಾಡಿದ್ದೇವೆ. ಆದರೂ, ಕ್ರಷರ್ ಮಾಲೀಕರು ಮತ್ತು ಲಾರಿ ಚಾಲಕರು ನಮ್ಮ ಮಾತಿಗೆ ಕಿವಿಗೊಡುತ್ತಿಲ್ಲ. ಹೀಗಾಗಿ, ತಮ್ಮೂರಿನ ರಸ್ತೆಯಲ್ಲಿ ಟಿಪ್ಪರ್ ಲಾರಿಗಳ ಸಂಚಾರವನ್ನೇ ನಿರ್ಬಂಧಿಸಬೇಕು” ಎಂದು ಒತ್ತಾಯಿಸಿದ್ದಾರೆ.