ಹೈದರಾಬಾದ್ ವಿವಿ ಸಮೀಪದ ಕಂಚ ಗಚ್ಚಿಬೌಲಿಯಲ್ಲಿಯ 100 ಎಕರೆ ಪ್ರದೇಶದಲ್ಲಿ ಅರಣ್ಯ ನಾಶದಿಂದ ಬಾಧಿತ ವನ್ಯಜೀವಿಗಳ ರಕ್ಷಣೆಗಾಗಿ ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಬುಧವಾರ ತೆಲಂಗಾಣದ ವನ್ಯಜೀವಿ ಮುಖ್ಯಸ್ಥರಿಗೆ ಆದೇಶಿಸಿದೆ.
ಮುಂದಿನ ವಿಚಾರಣಾ ದಿನಾಂಕವಾದ ಮೇ 15ರವರೆಗೆ ಒಂದೇ ಒಂದು ಮರವನ್ನು ಕಡಿಯುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ತಾಕೀತು ಮಾಡಿದೆ. ವಿಚಾರಣೆಯ ಸಂದರ್ಭದಲ್ಲಿ, ಮರಗಳನ್ನು ಕಡಿಯಲು ತೆಲಂಗಾಣ ಸರಕಾರದ ‘ಆತುರ’ವನ್ನು ಪ್ರಶ್ನಿಸಿದ ಕೋರ್ಟ್, ಪ್ರಾಣಿಗಳು ಆಶ್ರಯಕ್ಕಾಗಿ ಓಡುತ್ತಿರುವುದನ್ನು ತೋರಿಸಿರುವ ವಿಡಿಯೋಗಳ ಕುರಿತು ಎಚ್ಚರಿಕೆಯ ಗಂಟೆಯನ್ನು ಮೊಳಗಿಸಿತು. ಪರಿಸರಕ್ಕೆ ಮಾಡಲಾಗಿರುವ ಹಾನಿಯ ಬಗ್ಗೆಯೂ ಅದು ಕಳವಳವನ್ನು ವ್ಯಕ್ತಪಡಿಸಿತು.
ಈ ಸುದ್ದಿ ಓದಿದ್ದೀರಾ? IPL 2025: ಬ್ಯಾಟರ್‌ಗಳು ಅಳತೆ ಮೀರಿದ ಬ್ಯಾಟ್ ಬಳಸುತ್ತಿದ್ದಾರೆಯೇ? ಅಂಪೈರ್‌ಗಳು ಪರಿಶೀಲಿಸುವುದೇಕೆ?
“ಮುಂಬೈನ ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನದಂತೆ ನಗರದಲ್ಲಿ ಹಸಿರು ಶ್ವಾಸಕೋಶಗಳು ಇರಲಿ. ಪರಿಸರ ಮತ್ತು ಪರಿಸರ ವಿಜ್ಞಾನದ ರಕ್ಷಣೆಗಾಗಿ ನಾವು ಎಲ್ಲವನ್ನೂ ಮಾಡುತ್ತೇವೆ. ಕಾಡು ಪ್ರಾಣಿಗಳನ್ನು ಹೇಗೆ ರಕ್ಷಿಸಬೇಕು ಎಂಬುದನ್ನು ರಾಜ್ಯವು ತಕ್ಷಣವೇ ಗಮನವಹಿಸಬೇಕು. ರಾಜ್ಯ ವನ್ಯಜೀವಿ ಮುಖ್ಯಸ್ಥರು ಇದನ್ನು ಮೇಲ್ವಿಚಾರಣೆಗೊಳಿಸಬೇಕು. 100 ಎಕರೆ ಪ್ರದೇಶದಲ್ಲಿ ಅರಣ್ಯನಾಶದಿಂದ ಪ್ರಭಾವಿತವಾಗಿರುವ ವನ್ಯಜೀವಿಗಳನ್ನು ರಕ್ಷಿಸಲು ಅಗತ್ಯವಿರುವ ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾವು ತೆಲಂಗಾಣ ರಾಜ್ಯದ ವನ್ಯಜೀವಿ ಮುಖ್ಯಸ್ಥರಿಗೆ ನಿರ್ದೇಶಿಸುತ್ತೇವೆ” ಎಂದು ನ್ಯಾಯಪೀಠ ಹೇಳಿದೆ.
ಪ್ರಕರಣವು ಕಂಚ ಗಚ್ಚಿಬೌಲಿಯಲ್ಲಿನ 400 ಎಕರೆ ಭೂಮಿಗೆ ಸಂಬಂಧಿಸಿದೆ. ತೆಲಂಗಾಣ ಸರಕಾರವು ಐಟಿ ಮೂಲಸೌಕರ್ಯ ಅಭಿವೃದ್ಧಿಗಾಗಿ ಈ ಭೂಮಿಯನ್ನು ಹರಾಜು ಮಾಡಲು ಉದ್ದೇಶಿಸಿದೆ. ಈ ಕ್ರಮವು ವಿದ್ಯಾರ್ಥಿಗಳು ಮತ್ತು ಪರಿಸರವಾದಿಗಳಿಂದ ತೀವ್ರ ಪ್ರತಿಭಟನೆಗೆ ಕಾರಣವಾಗಿದೆ.