ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಹುತೇಕ ಖಾಸಗಿ ಶಾಲೆಗಳು ಈ ವರ್ಷದ ಬೋಧನಾ ಶುಲ್ಕವನ್ನು ಗಮನಾರ್ಹವಾಗಿ ಹೆಚ್ಚಿಸಿರುವುದು ಪೋಷಕರನ್ನು ಆತಂಕಕ್ಕೆ ದೂಡಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ಬೇಸತ್ತಿರುವ ಜನ ಸಾಮಾನ್ಯರನ್ನು ಖಾಸಗಿ ಶಾಲೆಗಳ ಹೊಸ ಹೇರಿಕೆ ಮತ್ತಷ್ಟು ಹೈರಾಣಾಗಿಸುತ್ತಿದೆ.
ದೆಹಲಿಯ ಬಿಜೆಪಿ ಸರ್ಕಾರ ಅತಿಯಾದ ಬೋಧನಾ ಶುಲ್ಕ ನಿಷೇಧಿಸುವ ಕುರಿತು ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸುವುದಾಗಿ ಹೇಳಿಕೊಂಡಿದೆ. ಇದರ ಹೊರತಾಗಿಯೂ, ಅನೇಕ ಸಂಸ್ಥೆಗಳು ಶುಲ್ಕ ಹೆಚ್ಚಳವನ್ನು ಮುಂದುವರಿಸಿವೆ. ಸುಮಾರು ₹1 ಲಕ್ಷದಿಂದ ₹5 ಲಕ್ಷದವರೆಗೆ ಶುಲ್ಕ ಕೇಳುತ್ತಿವೆ ಎಂದು ಪೋಷಕರು ಆರೋಪಿಸುತ್ತಿದ್ದಾರೆ. ಈ ಕ್ರಮ ಪೋಷಕರಲ್ಲಿ ಶಿಕ್ಷಣದ ವಾಣಿಜ್ಯೀಕರಣದ ಬಗ್ಗೆ ಕಳವಳ ಹುಟ್ಟಿಸಿದೆ.
ದೆಹಲಿಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಶುಲ್ಕ ಹೆಚ್ಚಳ ಧೋರಣೆಯ ವಿರುದ್ಧ ಜನ ತಿರುಗಿಬಿದ್ದಿದ್ದಾರೆ. ಪ್ರತಿಷ್ಠಿತ ಶಾಲೆಗಳ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಖಾಸಗಿ ಸಂಸ್ಥೆಗಳ ಜತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ. ಈ ಪ್ರತಿಭಟನೆಗಳು ಸರ್ಕಾರದ ನಡೆಗಳ ಕುರಿತು ಪೋಷಕರ ಆತಂಕ ಮತ್ತು ನಿರಾಸೆಗಳನ್ನು ಪ್ರತಿಬಿಂಬಿಸುತ್ತವೆ ಎಂದು ಹಲವರು ವಿಶ್ಲೇಷಿಸುತ್ತಾರೆ.
ಕಳೆದ 2024ರಲ್ಲಿ ವಸಂತ್ ಕುಂಜ್‌ನಲ್ಲಿರುವ ದೆಹಲಿಯ ಪ್ರತಿಷ್ಠಿತ ಖಾಸಗಿ ಶಾಲೆ ಸೇರಿದಂತೆ ಕಲ್ಕಾ ಪಬ್ಲಿಕ್ ಸ್ಕೂಲ್, ಮ್ಯಾಕ್ಸ್‌ಫೋರ್ಟ್ ಶಾಲೆಗಳು ತನ್ನ ಶುಲ್ಕವನ್ನು ಶೇ.50%ಕ್ಕಿಂತ ಹೆಚ್ಚಿಸಿದಾಗ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಪೋಷಕ-ಶಿಕ್ಷಕರ ಸಂಘದ (ಪಿಟಿಎ) ಸದಸ್ಯರು ಸೇರಿದಂತೆ ಹೆಚ್ಚಿನ ಪೋಷಕರು ಸೇರಿ ಪ್ರತಿಭಟನೆ ನಡೆಸಿದ್ದರು. ಅದೇ ಸಂದರ್ಭ ಈ ವರ್ಷವೂ ಮರಳಿದೆ. ಕೂಡಲೇ ಶುಲ್ಕ ಹೆಚ್ಚಳದ ಬಗ್ಗೆ ಸರ್ಕಾರ ಮಧ್ಯ ಪ್ರವೇಶಿಸದಿದ್ದರೆ ಮತ್ತಷ್ಟು ಪ್ರತಿರೋಧಕ್ಕೆ ಗುರಿಯಾಗಲಿದೆ ಎನ್ನುತ್ತವೆ ವರದಿಗಳು.
ಇದೇ ಖಾಸಗಿ ಶಾಲೆಗಳು ಕೆಲವು ಸಂದರ್ಭಗಳಲ್ಲಿ, ಹೆಚ್ಚಿದ ಶುಲ್ಕವನ್ನು ಪಾವತಿಸಲು ನಿರಾಕರಿಸಿದ ವಿದ್ಯಾರ್ಥಿಗಳ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಂಡಿವೆ. ದೆಹಲಿಯ ಖಾಸಗಿ ಶಾಲೆಯೊಂದು 113 ವಿದ್ಯಾರ್ಥಿಗಳಿಗೆ ಕಾನೂನು ನೋಟಿಸ್‌ಗಳನ್ನು ಜಾರಿ ಮಾಡಿದೆ. ಇತರ 87 ವಿದ್ಯಾರ್ಥಿಗಳ ವರ್ಗಾವಣೆ ಪ್ರಮಾಣಪತ್ರಗಳನ್ನು ತಡೆಹಿಡಿದಿರುವ ಉದಾಹರಣೆಯೂ ಇದೆ. ಇದು ಪೋಷಕರಲ್ಲಿ ಆತಂಕ ಹೆಚ್ಚಳಕ್ಕೆ ಮತ್ತೊಂದು ಕಾರಣವಾಗಿದೆ. ಇದು ಕೇವಲ ದೆಹಲಿ ರಾಜ್ಯದ ಕತೆಯಷ್ಟೇ ಅಲ್ಲ. ಯಾವುದೇ ರಾಜ್ಯದಲ್ಲಾಗಲೀ ಖಾಸಗಿ ಸಂಸ್ಥೆಗಳ ಪಾರುಪತ್ಯ ಮಧ್ಯಮ ವರ್ಗದವರ ಜೀವನ ಹಳ್ಳ ಹಿಡಿಯುವಂತೆ ಮಾಡಿಬಿಡುತ್ತವೆ ಎನ್ನುವುದು ಗಂಭೀರ ವಾಸ್ತವ.
ಹೆಚ್ಚುತ್ತಿರುವ ಕಾರ್ಯಾಚರಣೆಯ ವೆಚ್ಚಗಳನ್ನು ಕಾರಣೀಕರಿಸಿ ಖಾಸಗಿ ಶಾಲೆಗಳು ಈ ಶುಲ್ಕ ಹೆಚ್ಚಳವನ್ನು ಸಮರ್ಥಿಸಿಕೊಂಡಿವೆ. ಶುಲ್ಕ ಹೊಂದಾಣಿಕೆಗಳಿಲ್ಲದೆ, ಗುಣಮಟ್ಟದ ಶಿಕ್ಷಣವನ್ನು ನಿರ್ವಹಿಸಲು ಮತ್ತು ಹಣಕಾಸಿನ ಬಾಧ್ಯತೆಗಳನ್ನು ಪೂರೈಸಲು ಸಾಧ್ಯವಾಗುವುದಿಲ್ಲ ಎನ್ನುವುದು ಖಾಸಗಿ ಶಿಕ್ಷಣ ಸಂಸ್ಥೆಗಳ ಸಮರ್ಥನೆ. ಆದಾಗ್ಯೂ, ದೆಹಲಿ ಹೈಕೋರ್ಟ್ ಹಲವಾರು ಸಂದರ್ಭಗಳಲ್ಲಿ ಮಧ್ಯಪ್ರವೇಶಿಸಿ ಅನಧಿಕೃತ ಶುಲ್ಕ ಹೆಚ್ಚಳವನ್ನು ತಡೆಯಲು ಆದೇಶ ನೀಡಿದೆ. ಈ ಆದೇಶಗಳ ಹೊರತಾಗಿಯೂ, ಕೆಲವು ಶಾಲೆಗಳು ಶುಲ್ಕ ಹೆಚ್ಚಳ ಜಾರಿಗೊಳಿಸುವುದನ್ನು ಮುಂದುವರೆಸಿವೆ. ನ್ಯಾಯಾಲಯದ ಆದೇಶಗಳು ಖಾಸಗಿ ಭೂಮಿಯಲ್ಲಿರುವ ಸಂಸ್ಥೆಗಳಿಗೆ ಅಲ್ಲ, ಸರ್ಕಾರಿ ಭೂಮಿಯಲ್ಲಿ ನಿರ್ಮಿಸಲಾದ ಸಂಸ್ಥೆಗಳಿಗೆ ಮಾತ್ರ ಅನ್ವಯಿಸುತ್ತವೆ ಎಂದು ಹೇಳಿಕೊಂಡಿವೆ ಎಂದು ಮತ್ತೂ ಸಮರ್ಥನೆ ಮುಂದುವರೆಸಿವೆ.
ದೆಹಲಿ ಕಾಂಗ್ರೆಸ್ ಮುಖ್ಯಸ್ಥ ದೇವೇಂದರ್ ಯಾದವ್, “ಶಿಕ್ಷಣದಲ್ಲಿ ಹೆಚ್ಚುತ್ತಿರುವ ವೆಚ್ಚಗಳಿಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಖಾಸಗೀಕರಣ ಪ್ರಯತ್ನಗಳೇ ಕಾರಣ. ಇದರಿಂದಾಗಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಖಾಸಗಿ ಶಿಕ್ಷಣ ಎನ್ನುವುದು ದೂರದ ಮಾತಾಗಿದೆ. ಈ ಸವಾಲುಗಳನ್ನು ಎದುರಿಸಲು ಶಿಕ್ಷಣ ಪರ ಕೆಲಸ ಮಾಡುವ ಸಮರ್ಥ ಸರ್ಕಾರದ ಅಗತ್ಯವಿದ್ದು, ಅದಕ್ಕಾಗಿ ಕಾಂಗ್ರೆಸ್ ಅಥವಾ ಇಂಡಿಯಾ ಮೈತ್ರಿಕೂಟಕ್ಕೆ ಬೆಂಬಲದ ಅಗತ್ಯವಿದೆ” ಎಂದಿದದ್ದಾರೆ.
ಇದಕ್ಕೆ ವ್ಯತಿರಿಕ್ತವಾಗಿ ಬಿಜೆಪಿ ಅಧ್ಯಕ್ಷ ಆದೇಶ್ ಗುಪ್ತಾ ಪ್ರತಿಕ್ರಿಯಿಸಿದ್ದಾರೆ. ಶುಲ್ಕ ಹೆಚ್ಚಳ ವಿರೋಧಿಸಿ ಪೋಷಕರು ಆಯೋಜಿಸಿದ ಪ್ರತಿಭಟನೆಗಳಲ್ಲಿ ಭಾಗವಹಿಸಿ, ಶುಲ್ಕ ಹೆಚ್ಚಳದಿಂದಾಗಿ ಕುಟುಂಬಗಳ ಮೇಲೆ ಬೀಳುವ ಆರ್ಥಿಕ ಹೊರೆಯ ಬಗ್ಗೆ ಪಕ್ಷವೂ ಕಳವಳವನ್ನು ಎತ್ತಿ ತೋರಿಸಿದ್ದಾರೆ. ಈ ಹೆಚ್ಚಳಗಳನ್ನು ನಿಯಂತ್ರಿಸಲು ಮತ್ತು ಪೋಷಕರನ್ನು ಶೋಷಣೆಯಿಂದ ರಕ್ಷಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ಬಿಜೆಪಿ ದೆಹಲಿ ಸರ್ಕಾರವನ್ನು ಅವರು ಒತ್ತಾಯಿಸಿದ್ದಾರೆ.
ದೆಹಲಿಯಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಆಮ್ ಆದ್ಮಿ ಪಕ್ಷ (ಎಎಪಿ) ತನ್ನ ಅಧಿಕಾರಾವಧಿಯಲ್ಲಿ ಶುಲ್ಕ ಏರಿಕೆಯನ್ನು ತಡೆಯಲು ಅಸಮರ್ಥವಾಗಿತ್ತು ಎನ್ನುವ ಟೀಕೆಗಳು ಕೇಳಿಬಂದಿದ್ದವು. ಎಎಪಿ ಅಧಿಕಾರದಿಂದ ಹೊರನಡೆದ ನಂತರ, ಖಾಸಗಿ ಶಾಲೆಗಳು ಮೇಲ್ವಿಚಾರಣೆಯಿಲ್ಲದೆ ಶುಲ್ಕವನ್ನು ಹೆಚ್ಚಿಸುತ್ತಿವೆ. ಪ್ರಸ್ತುತ ಬಿಜೆಪಿ ನೇತೃತ್ವದ ಸರ್ಕಾರ ಪರಿಣಾಮಕಾರಿಯಾಗಿ ಮಧ್ಯಪ್ರವೇಶಿಸಲು ವಿಫಲವಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಆರೋಪಿಸಿದ್ದಾರೆ. ಪೋಷಕರನ್ನು ಆರ್ಥಿಕವಾಗಿ ಶೋಷಿಸಲು ಬಿಜೆಪಿ ಶಾಲಾ ಆಡಳಿತ ಮಂಡಳಿಯೊಂದಿಗೆ ಶಾಮೀಲಾಗಿದೆ ಎಂದು ಆರೋಪಿಸಿರುವ ಸಿಸೋಡಿಯಾ, ಈ ವಿಷಯದ ಬಗ್ಗೆ ಕೇಂದ್ರ ತನಿಖಾ ದಳ (ಸಿಬಿಐ) ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ಜನಪರ ಆಡಳಿತ ನೀಡುವ ಪ್ರಮಾಣ ಮಾಡಿ ಅಧಿಕಾರಕ್ಕೆ ಬಂದವರು ಕೆಳ ಮಧ್ಯಮ, ಮಧ್ಯಮ ವರ್ಗದವರ ಜೀವ ಹಿಂಡುತ್ತಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ. ಬಹುತೇಕ ಅನುದಾನರಹಿತ ಶಾಲೆಗಳು ಪ್ರವೇಶ ಶುಲ್ಕವನ್ನು ಶೇ. 15ರಿಂದ 20ರಷ್ಟು ಹೆಚ್ಚಿಸಿವೆ ಎನ್ನುವ ಮಾಹಿತಿ ಇದೆ. ಬೆಲೆ ಏರಿಕೆ ಭೂತ ಹೆಗಲೇರಿದರೆ, ಈ ಖಾಸಗಿ ಶಾಲೆಗಳ ಡೊನೇಷನ್ ಭೂತ ಪೋಷಕರ ತಲೆ ಏರಿ ಕೂತಂತಾಗಿದೆ.
ಇದನ್ನೂ ಓದಿ: ಶಿರಾ | ಒಬ್ಬಳೇ ವಿದ್ಯಾರ್ಥಿನಿಯಿಂದ ಉಸಿರಾಡುತ್ತಿದೆ ಮದ್ದೇವಳ್ಳಿ ಸರ್ಕಾರಿ ಶಾಲೆ
ವಾರ್ಷಿಕ ಶಾಲಾ ನಿರ್ವಹಣೆ, ಶಿಕ್ಷಕರು-ಸಿಬ್ಬಂದಿ ವೇತನ, ಚಾಲಕರ ವೇತನ ಹೆಚ್ಚಳ ಕಾರಣಗಳಿಂದ ಶುಲ್ಕ ಹೆಚ್ಚಳ ಅನಿವಾರ್ಯವಾಗಿದೆ ಎನ್ನುತ್ತಾರೆ ವಿವಿಧ ಖಾಸಗಿ ಶಾಲಾ ಸಂಘಟನೆಗಳ ಪ್ರತಿನಿಧಿಗಳು. ಮತ್ತೊಂದೆಡೆ ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಅಣಬೆ ರೀತಿ ಖಾಸಗಿ ಶಾಲೆಗಳ ಸಂಖ್ಯೆ ಹೆಚ್ಚುತ್ತಿದೆ. ಖಾಸಗಿ ಶಾಲೆಗಳ ನೀತಿ ಬಗೆಗೆ ವಿರೋಧ ವ್ಯಕ್ತಪಡಿಸುವ ಮೊದಲು, ಇದಕ್ಕೆ ಸರ್ಕಾರ ಮನಸೋ ಇಚ್ಛೆ ಅನುಮತಿ ನೀಡುತ್ತಿದೆ ಎನ್ನುವುದನ್ನು ಗಮನಿಸಬೇಕು. “ಇದರಿಂದ ಮಕ್ಕಳು ಹಂಚಿಹೋಗುತ್ತಿದ್ದು, ದಾಖಲಾತಿ ಪ್ರಮಾಣ ಕಡಿಮೆಯಾಗುತ್ತಿದೆ. ಇದರಿಂದ ಶಾಲೆಗಳಿಗೆ ಪ್ರತಿ ಮಗುವಿನ ತಲಾವಾರು ವೆಚ್ಚ ಹೆಚ್ಚಾಗುತ್ತಿದೆ. ಇದರಿಂದ ಶುಲ್ಕ ಹೆಚ್ಚಳ ಮಾಡದೆ ಬೇರೆ ದಾರಿ ಇಲ್ಲ” ಎನ್ನುವುದು ಅನೇಕ ಶಾಲಾ ಆಡಳಿತ ಮಂಡಳಿಗಳ ಸಮರ್ಥನೆ.
ಖಾಸಗಿ ಶಿಕ್ಷಣ ಸಂಸ್ಥೆಗಳು ಮಿತಿಮೀರಿ ಶುಲ್ಕ ವಿಧಿಸಕೂಡದು ಎನ್ನುವ ನಿಯಮಗಳು 1973ರಿಂದಲೂ ಇವೆ. ಇತ್ತೀಚೆಗೆ ಸರ್ಕಾರ ಹಾಗೂ ನ್ಯಾಯಾಲಯಗಳ ಆದೇಶಗಳನ್ನೂ ತಳ್ಳಿಹಾಕಿ ಶಾಲೆಗಳು ದೇಣಿಗೆ, ಡೊನೇಷನ್ ಹೆಸರಿನಲ್ಲಿ ಹಣ ಪೀಕುವ ಪದ್ಧತಿಗಳನ್ನು ಮುಂದುವರೆಸಿವೆ. ಆದರೆ, ಶುಲ್ಕವನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ ಅಥವಾ ಹಣ ಎಲ್ಲಿಗೆ ಹೋಗುತ್ತದೆ ಎಂಬುದರ ಕುರಿತು ಪೋಷಕರಿಗೆ ಮಾಹಿತಿ ಮಾತ್ರ ಇರುವುದಿಲ್ಲ.
ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ʼಸಬ್ಕಾ ಸಾಥ್, ಸಬ್ಕಾ ವಿಕಾಸ್ʼ ಎನ್ನುತ್ತದೆ. ಶಿಕ್ಷಣ ಕ್ಷೇತ್ರದಲ್ಲಿನ ರಾಷ್ಟ್ರೀಯ ಮಾನದಂಡಗಳ ಬಗ್ಗೆ ಬಿಜೆಪಿ ಮಾತನಾಡುತ್ತದೆ. ಆದಾಗ್ಯೂ, ಸ್ಥಳೀಯ ಆಡಳಿತ ಮತ್ತು ಜಾರಿಯ ವಿಷಯಕ್ಕೆ ಬಂದಾಗ, ವಿಶೇಷವಾಗಿ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಅಥವಾ ಆಡಳಿತಾತ್ಮಕ ಪ್ರಭಾವ ಹೊಂದಿರುವ ಭಾಗಗಳಲ್ಲೇ ಬಿಜೆಪಿ ಹೆಚ್ಚು ಟೀಕೆಗೆ ಗುರಿಯಾಗುತ್ತದೆ ಎನ್ನುವುದು ಗಮನಾರ್ಹ.
ಒಂದುವೇಳೆ ಬಿಜೆಪಿಯು ಶಿಕ್ಷಣದಂತಹ ಮಧ್ಯಮ ವರ್ಗದ ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ವಿಫಲವಾದರೆ, ಅದು ನಗರ ಪ್ರದೇಶದ ಮಧ್ಯಮವರ್ಗದ ಮತದಾರರ ವಿರೋಧ ಕಟ್ಟಿಕೊಳ್ಳುವ ಸಂಭವವಿದೆ. ಇದರಿಂದ ಬಿಜೆಪಿ ಸಾಮಾನ್ಯ ಜನರ ಪರವಾಗಿರುವುದಕ್ಕಿಂತ ಕಾರ್ಪೊರೇಟ್ ಪರವಾಗಿದೆ ಎಂಬ ವಿರೋಧ ಪಕ್ಷದ ಆರೋಪಗಳನ್ನು ಬಿಜೆಪಿ ಸ್ವತಃ ತಾನೇ ಎತ್ತಿ ತೋರಿಸಿದಂತಾಗುತ್ತದೆ.
ಇದನ್ನೂ ಓದಿ: ಮತ್ತೆ ಮುನ್ನೆಲೆಗೆ ಪರ್ಸೆಂಟೇಜ್ ಪೀಕಲಾಟ | ಕಮಿಷನ್‌ಗೆ ‘ಕೈ’ ಚಾಚಿತೇ ಸರ್ಕಾರ?
ದೆಹಲಿಯ ಖಾಸಗಿ ಶಾಲೆಗಳಲ್ಲಿ ಶುಲ್ಕ ಹೆಚ್ಚಳದ ಕುರಿತು ನಡೆಯುತ್ತಿರುವ ವಿವಾದಗಳು ಶಿಕ್ಷಣ ಸಂಸ್ಥೆಗಳ ಆರ್ಥಿಕ ಅಗತ್ಯತೆಗಳು ಮತ್ತು ಪೋಷಕರ ಸಾಮರ್ಥ್ಯದ ನಡುವಿನ ಉದ್ವಿಗ್ನತೆ ಎಷ್ಟಿದೆ ಎಂಬುದನ್ನು ಹೇಳುತ್ತಿವೆ. ಕಾನೂನು ಹೋರಾಟಗಳು ಮತ್ತು ಪ್ರತಿಭಟನೆಗಳು ಮುಂದುವರಿದಂತೆ, ಆರ್ಥಿಕ ಹೊರೆಯಾಗದಂತೆ ಕುಟುಂಬಗಳಿಗೆ ಗುಣಮಟ್ಟದ ಶಿಕ್ಷಣ ತಲುಪಿಸುವ ನಿಟ್ಟಿನಲ್ಲಿ ಸರ್ಕಾರವು ಈ ಸವಾಲುಗಳನ್ನು ಹೇಗೆ ಎದುರಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಪ್ರಭಾವೀ ಆಡಳಿತ, ಪಾರದರ್ಶಕ ಶಿಕ್ಷಣ ನೀತಿ ಮತ್ತು ಸಮಾನ ಅವಕಾಶಗಳನ್ನು ಒದಗಿಸುವುದು ಯಾವುದೇ ಸರ್ಕಾರದ ಬಹುಮುಖ್ಯ ಪಾತ್ರ. ಈ ನಿಟ್ಟಿನಲ್ಲಿ ಆಯಾ ಪಕ್ಷಗಳ ಪ್ರಗತಿ ಹೇಗಿದೆ ಎಂದು ಜನತೆಯೇ ತೀರ್ಮಾನ ಮಾಡಬೇಕಿದೆ.