ಬಕ್ರೀದ್ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಸಿಎಂ
ವಿವಿಧ ಧರ್ಮ, ಜಾತಿಗೆ ಸೇರಿದ್ದರೂ ನಾವೆಲ್ಲ ಮನುಷ್ಯರು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಕ್ರೀದ್ ಪ್ರಯುಕ್ತ ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡರು.
ಈ ವೇಳೆ ಮಾತನಾಡಿದ ಅವರು, “ನಾನಾ ಧರ್ಮ, ಜಾತಿಗೆ ಸೇರಿದ್ದರೂ ನಾವೆಲ್ಲರೂ ಮನುಷ್ಯರು. ಎಲ್ಲರೂ ಪರಸ್ಪರ ಪ್ರೀತಿ, ವಿಶ್ವಾಸದಿಂದ ಬದುಕಬೇಕು” ಎಂದು ಸಲಹೆ ನೀಡಿದರು.
“ನಮ್ಮ ನಮ್ಮಲ್ಲೇ ದ್ವೇಷ ಹುಟ್ಟುಹಾಕುವ ಅನೇಕ ಶಕ್ತಿಗಳಿವೆ. ಆ ಶಕ್ತಿಗಳು ಉದ್ದೇಶಪೂರ್ವಕವಾಗಿಯೇ ಇದನ್ನು ಮಾಡುತ್ತವೆ. ಅದಕ್ಕೆ ನಾವು ಸೊಪ್ಪು ಹಾಕುವುದಾಗಲಿ, ಮಹತ್ವ ನೀಡುವುದಾಗಲಿ ಮಾಡಬಾರದು. ಮನುಷ್ಯರು ಪ್ರೀತಿ, ವಿಶ್ವಾಸದಿಂದ, ಮನುಷ್ಯರಂತೆ ಬದುಕುವ ವಾತಾವರಣ ನಿರ್ಮಾಣ ಮಾಡಬೇಕಿದೆ. ರಾಜ್ಯದ ಅಭಿವೃದ್ಧಿಯ ಜೊತೆಗೆ ಜನತೆಯೂ ಅಭಿವೃದ್ಧಿ ಯಾಗಬೇಕು. ದೇವರು ಎಲ್ಲರಿಗೂ ಸದ್ಭುದ್ದಿ ನೀಡಿ ಮನುಷ್ಯರಾಗಿ ಬಾಳುವ ಗುಣವನ್ನು ನೀಡಲಿ” ಎಂದು ಹಾರೈಸಿದರು.
“ರಾಜ್ಯದ ಮುಸಲ್ಮಾನ ಬಾಂಧವರಿಗೆ ಬಕ್ರೀದ್ ಹಬ್ಬದ ಶುಭಾಶಯ. ಬಕ್ರೀದ್ ಹಬ್ಬ ತ್ಯಾಗದ ಸಂಕೇತ. ಮನುಕುಲಕ್ಕೆ ಒಳ್ಳೆಯದಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದ್ದೇನೆ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಸತಿ ಸಚಿವ ಜಮೀರ್ ಅಹಮದ್ ಖಾನ್ ಸೇರಿ ಸಮುದಾಯದ ಮುಖಂಡರು, ಹಿರಿಯರು ಉಪಸ್ಥಿತರಿದ್ದರು.
ಬಕ್ರೀದ್ ಹಿನ್ನೆಲೆಯಲ್ಲಿ ಮುಸ್ಲಿಂ ಬಾಂಧವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿ ಶುಭ ಹಾರೈಸಿದ್ದಾರೆ. “ತ್ಯಾಗ – ಬಲಿದಾನದ ಸಂಕೇತವಾಗಿ ಆಚರಿಸಲ್ಪಡುವ ಪವಿತ್ರ ಬಕ್ರೀದ್ ಹಬ್ಬವು ನಾಡಿನಲ್ಲಿ ಸ್ನೇಹ, ಸೌಹಾರ್ದತೆಯು ಶಾಶ್ವತವಾಗಿ ನೆಲೆಸಲು ಪ್ರೇರಣೆಯಾಗಲಿ ಎಂದು ಹಾರೈಸುತ್ತೇನೆ. ಮುಸ್ಲಿಂ ಬಾಂಧವರಿಗೆ ಬಕ್ರೀದ್ ಹಬ್ಬದ ಶುಭಹಾರೈಕೆಗಳು” ಎಂದಿದ್ದಾರೆ.