ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಕಾರ್ಯನಿರ್ವಹಿಸುತ್ತಿರುವ ಪತ್ರಿಕಾಭವನದಲ್ಲಿ ಅಳವಡಿಸಲಾಗಿದ್ದ ಸಂಘದ ನಾಮಫಲಕವನ್ನು ಪತ್ರಿಕಾಭವನ ಟ್ರಸ್ಟ್‌ನವರು ತೆರವು ಮಾಡಿದ ಘಟನೆ ನಡೆದಿದ್ದು, ಇದರ ವಿರುದ್ಧ ಪತ್ರಕರ್ತರ ಸಂಘ ಆಕ್ರೋಶ ವ್ಯಕ್ತಪಡಿಸಿ ಅನುದಾನ ನೀಡುವುದನ್ನು ತಡೆಯುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಸಂಘದ ಕಚೇರಿಯ ಕೀಲಿಕೈಯನ್ನು ಪತ್ರಿಕಾಭವನದ ಟ್ರಸ್ಟಿ ಅಕ್ರಮವಾಗಿ ತೆಗೆದುಕೊಂಡು ಹೋಗಿದ್ದಾರೆ. ಕಚೇರಿಯನ್ನು ತೆರವು ಮಾಡುವಂತೆ ಈ ಹಿಂದೆ ಸಂಘಕ್ಕೆ ನೋಟಿಸ್ ನೀಡಿದ್ದರು. ಇದರ ವಿರುದ್ದ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಸೇರಿ ಪತ್ರಿಕಾಭವನದಲ್ಲಿ ನೂತನ ನಾಮಪಲಕವನ್ನು ಅಳವಡಿಸಿ ಬಳಿಕ ಮಡಿಕೇರಿ ನಗರ ಠಾಣೆಗೆ ದೂರು ನೀಡಿದ್ದರು. ಬಳಿಕ ಮಂಗಳವಾರ ಸಂಜೆ ಪತ್ರಿಕಾಭವನಕ್ಕೆ ಬೀಗ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.
ಬುಧವಾರ ಬೆಳಿಗ್ಗೆ ಸಂಘ ಹಾಗೂ ಟ್ರಸ್ಟ್‌ನವರನ್ನು ಪೊಲೀಸ್ ಠಾಣೆಗೆ ಕರೆದು ಡಿವೈಎಸ್‌ಪಿ ಸೂರಜ್ ನೇತೃತ್ವದಲ್ಲಿ ವಿಚಾರಣೆ ನಡೆಸಲಾಯಿತು. ಅಕ್ರಮವಾಗಿ ನಾಮಫಲಕ ತೆರವು ಹಾಗೂ ಕಚೇರಿ ಕೀಲಿಕೈ ನೀಡದೆ ಸತಾಯಿಸಿದ್ದಕ್ಕೆ ಆಕ್ಷೇಪ ವ್ಯಕ್ತವಾಗಿದ್ದು, ಕೂಡಲೇ ಯಥಾಸ್ಥಿತಿಯಂತೆ ಕಚೇರಿಯನ್ನು ತೆರೆದು ಸಂಘದ ಕಾರ್ಯಕ್ರಮಕ್ಕೆ ಅನುವು ಮಾಡಿಕೊಡುವಂತೆ ಸೂಚನೆ ನೀಡಲಾಗಿದೆ. ಅದರಂತೆ ಇಂದು ಸಂಘದ ಕಚೇರಿಯ ಕೀಲಿ ಕೈ ನೀಡಿದ್ದಾರೆ. ಇನ್ನುಮುಂದೆ ಕೀಲಿಕೈ ಸಂಘದ ಸುಪರ್ದಿಯಲ್ಲಿರುತ್ತದೆ.
ಪತ್ರಿಕಾಭವನ ಟ್ರಸ್ಟ್‌ನವರ ಈ ವರ್ತನೆಯನ್ನು ಖಂಡಿಸಿ ಇಂದು ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ದೂರು ನೀಡಲಾಗಿದೆ. ಕಟ್ಟಡದಲ್ಲಿ ಯಾವುದೇ ಕಾರಣಕ್ಕೂ ಮೇಲಂತಸ್ತು ಕಟ್ಟಲು ಅವಕಾಶ ನೀಡಬಾರದು. ಜತೆಗೆ ಸರ್ಕಾರ ಸಂಘದ ಕಟ್ಟಡಕ್ಕೆ ನೀಡಿರುವ ₹12.50 ಲಕ್ಷ ಅನುದಾನವನ್ನು ನೀಡಬಾರದೆಂದು ದೂರು ನೀಡಲಾಗಿದೆ. ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ತನ್ನ ಮುಂದಿನ ಹೋರಾಟವನ್ನು ಆರಂಭಿಸಿದೆ.
ಈ ಸುದ್ದಿ ಓದಿದ್ದೀರಾ? ‘ಅರಿವೇ ಅಂಬೇಡ್ಕರ’ ವಿಶೇಷ ಸಂಚಿಕೆ ಬಿಡುಗಡೆ
ಈ ಸಂದರ್ಭ ಸಂಘದ ಅಧ್ಯಕ್ಷ ಬಿ ಆರ್ ಸವಿತಾರೈ, ಪ್ರಧಾನ ಕಾರ್ಯದರ್ಶಿ ಬಾಚರಣಿಯಂಡ ಅನುಕಾರ್ಯಪ್ಪ, ರಾಜ್ಯ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ರಾಜ್ಯ ಸಮಿತಿ ನಿರ್ದೇಶಕ ಮಂಜುನಾಥ್, ರಾಷ್ಟ್ರೀಯ ಸಮಿತಿ ಸದಸ್ಯ ಸುನಿಲ್ ಪೊನ್ನಟ್ಟಿ, ಜಿಲ್ಲಾ ಸಂಘದ ಉಪಾಧ್ಯಕ್ಷರು, ಪದಾಧಿಕಾರಿಗಳು, ನಿರ್ದೇಶಕರು, ತಾಲೂಕು ಸಂಘಗಳ ಅಧ್ಯಕ್ಷರು, ಸಂಘದ ಸದಸ್ಯರು ಇದ್ದರು.