ಪಂಕ್ಚರ್ ತಿದ್ದುವ ಕೆಲಸ ಎಲ್ಲಾ ವರ್ಗದವರು ಮಾಡುತ್ತಿದ್ದಾರೆ ಬರೀ ಮುಸ್ಲಿಮರ ತಲೆಗೇ ಕಟ್ಟಬೇಡಿ. ವಕ್ಫ್ ಆಸ್ತಿಯನ್ನು ಭೂಮಿಯನ್ನು ಬಡವರು, ನಿರ್ಗತಿಕ ಮಹಿಳೆಯರು, ಹಾಗೂ ಮಕ್ಕಳ ಪ್ರಯೋಜನಕ್ಕೆ ಬಳಸಬಹುದಿತ್ತು ಎಂದಿರಿ ಇರಲೀ, ಹಿಂದೂಗಳ ಬಗ್ಗೆ ಬೊಬ್ಬೆ ಹಾಕುವ ತಾವು ಮೊದಲಿಗೆ ಮಠಗಳು ಮತ್ತು ದೇವಸ್ಥಾನಗಳ ಭೂಮಿಯನ್ನು, ಆಸ್ತಿಯನ್ನು ಬಡ ಹಿಂದುಗಳಿಗೆ, ಹಿಂದೂ ನಿರ್ಗತಿಕ ಮಹಿಳೆಯರಿಗೆ, ದಲಿತ ಹಿಂದೂಗಳಿಗೆ, ಅಲೆಮಾರಿ ಬುಡಕಟ್ಟು ಜನರಿಗೆ ಹಂಚಿ ತಮ್ಮ ಹಿಂದೂ ಪ್ರೇಮ ಸಾಬೀತು ಪಡಿಸಿ ಮೋದಿಜಿ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಇದರ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿಯವರು ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿದ್ದು, ಕರ್ನಾಟಕದಲ್ಲಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡಿದ್ದು ಸಂವಿಧಾನ ವಿರೋಧಿ ಎಂದಿರಿ, ಈ ದೇಶದ ಮುಂದುವರಿದ ಜಾತಿಯವರು, ಬಲಾಢ್ಯರು, ಆಸ್ತಿವಂತರು, ದೇಶದ ಎಲ್ಲಾ ಪ್ರಮುಖ ಉನ್ನತ ಹುದ್ದೆಗಳನ್ನು ಅಲಂಕರಿಸಿರುವ ಜನಸಂಖ್ಯೆಯಲ್ಲಿ ಕೇವಲ ಮೂರು ಶೇಕಡಾ ಇರುವ ಬ್ರಾಹ್ಮಣರಿಗೆ ಹತ್ತು ಶೇಕಡಾ ಮೀಸಲಾತಿ ಕಲ್ಪಿಸಿದಿರಲ್ಲಾ ಇದು ಸಂವಿಧಾನ ವಿರೋಧಿ ಆಗಿಲ್ವಾ. ಅದರಲ್ಲೂ ಬಾಬಾಸಾಹೇಬ್ ಅಂಬೇಡ್ಕರ್ ಅವರು ಮೀಸಲಾತಿ ಕಲ್ಪಿಸಿದ್ದು ಅಸ್ಪೃಶ್ಯತೆಯ ಕಾರಣಕ್ಕೆ ಮತ್ತು ಶೋಷಿತ ದಲಿತರಿಗೆ ಅಲ್ವಾ ಪ್ರಧಾನಿಯವರೇ ಎಂದು ಪ್ರಶ್ನಿಸಿದ್ದಾರೆ.
ನಮ್ಮ ಪವಿತ್ರ ಹಬ್ಬವಾದ ಅಂಬೇಡ್ಕರ್ ಜಯಂತಿಯಂದು ಸಾರ್ವಜನಿಕರನ್ನು ದಯವಿಟ್ಟು ದಿಕ್ಕು ತಪ್ಪಿಸುವ ಕೆಲಸವನ್ನು ಪ್ರಪಂಚದ ಅತೀ ದೊಡ್ಡ ಪ್ರಜಾಪ್ರಭುತ್ವದ ಪ್ರಧಾನಿಯಾಗಿ ದಯವಿಟ್ಟು ಮಾಡುವುದು ತಮ್ಮ ಘನತೆಗೆ ತಕ್ಕುದಲ್ಲಾ ಎಂದು ಹೇಳಿದ್ದಾರೆ.