ಡಾ. ಬಿ ಆರ್ ಅಂಬೇಡ್ಕರ್ ಅವರ ಜನ್ಮದಿನವನ್ನು ಕೇವಲ ಆಚರಣೆಗಳಿಗೆ ಮಾತ್ರ ಸೀಮಿತಗೊಳಿಸಬಾರದು. ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬರೂ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡರೆ ದೇಶಕ್ಕೆ ಒಳಿತು ಎಂದು ಸಂಸ್ಕೃತಿ ಚಿಂತಕ ಹಾಗೂ ವಿಶ್ರಾಂತ ಮುಖ್ಯ ಅಭಿಯಂತರರಾದ ಶಂಕರ ದೇವನೂರು ಅಭಿಪ್ರಾಯಪಟ್ಟರು.
ಮೈಸೂರು ವಿಶ್ವವಿದ್ಯಾನಿಲಯದ ಯುವರಾಜ ಕಾಲೇಜಿನಲ್ಲಿ ಬುಧವಾರ ಸಂಜೆ ಹಮ್ಮಿಕೊಂಡಿದ್ದ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ 134ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ಅಂಬೇಡ್ಕರ್ ಅವರು ಯಾವುದೇ ಒಂದು ಜಾತಿಗಾಗಿ ಹೋರಾಟ ಮಾಡಿದವರಲ್ಲ. ಈ ದೇಶದ ಶೋಷಿತ ಸಮುದಾಯಕ್ಕೆ ಕೊಟ್ಟಂತಹ ಕೊಡುಗೆ ಅಪಾರ. ಅಲ್ಲದೆ ಈ ದೇಶದ ಮಹಿಳೆಯರು, ದಲಿತರು, ಕಾರ್ಮಿಕರು, ಹಿಂದುಳಿದ ವರ್ಗಗಳ ಏಳಿಗೆಗಾಗಿ ಬದುಕಿರುವವರೆಗೂ ಶ್ರಮಿಸಿದರು. ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯವನ್ನು ಸಂವಿಧಾನ ಸಂವಿಧಾನದ ಮೂಲಕ ಕಲ್ಪಿಸಿದ್ದು, ಎಲ್ಲರಲ್ಲೂ ಭ್ರಾತೃತ್ವ ಭಾವನೆಗಳು ಮೂಡಿ ಪ್ರೀತಿಯಿಂದ ಬದುಕುವಂತಹ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ” ಎಂದು ಹೇಳಿದರು.

“ಮಹಿಳೆಯರ ಹಕ್ಕು ಮತ್ತು ರಕ್ಷಣೆಗಾಗಿ ರಚಿಸಿದ್ದ ಹಿಂದೂ ಕೋಡ್ ಬಿಲ್ ಅನ್ನು ಪಾರ್ಲಿಮೆಂಟ್‌ನಲ್ಲಿ ಮಂಡಿಸಿದರು. ಆದರೆ ಆ ಮಸೂದೆಯನ್ನು ಜಾರಿಗೊಳಿಸಲು ಒಪ್ಪಿಗೆ ಸಿಗಲಿಲ್ಲವೆಂಬ ಕಾರಣಕ್ಕೆ ತನ್ನ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬಂದ ಏಕೈಕ ಧೀಮಂತ ನಾಯಕ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮಾತ್ರ” ಎಂದು ಶ್ಲಾಘಿಸಿದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಡಾ. ಬಿ ಆರ್ ಅಂಬೇಡ್ಕರ್ ಜೋಡಿ ರಸ್ತೆ ನಾಮಫಲಕ ಅನಾವರಣ
ಆಡಳಿತಾಧಿಕಾರಿ ಕೆ ಅಜಯ್ ಕುಮಾರ್ ಅವರು ವಿದ್ಯಾರ್ಥಿಗಳಿಗೆ ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು.
ಕಾಲೇಜಿನ ಪ್ರಾಂಶುಪಾಲರು ಎಸ್ ಮಹದೇವಮೂರ್ತಿ ಅಧ್ಯಕ್ಷತೆಯ ಭಾಷಣವನ್ನು ನುಡಿದರು.
ಕಾರ್ಯಕ್ರಮದಲ್ಲಿ ಪ್ರೊ. ಕೃಷ್ಣಮೂರ್ತಿ, ಪ್ರೊ. ಸಿ ನಾಗೇಶ್ ಬಾಬು, ಬಿ ಎಂ ವೆಂಕಟೇಶ್, ಡಾ. ಎಂ ಕೆ ಗಿರೀಶ್ ಚಂದ್ರ, ಡಾ. ರವಿಚಂದ್ರನ್ ಸೇರಿದಂತೆ ಇತರರು ಇದ್ದರು.