ಆಳುವ ಸರ್ಕಾರ ಅಮಾನವೀಯಗೊಂಡಷ್ಟು ಮಾನವಂತರು ಬಡವರನ್ನು-ಮುಸ್ಲಿಮರನ್ನು ಆಪ್ತತೆಯಿಂದ ಅಪ್ಪಿಕೊಳ್ಳಬೇಕಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚಿಗೆ ಹರ್ಯಾಣದಲ್ಲಿ ಮಾತನಾಡುವಾಗ, ‘ವಕ್ಫ್ ಕಾನೂನು ಪರಿಣಾಮಕಾರಿಯಾಗಿ ಮತ್ತು ಪ್ರಾಮಾಣಿಕವಾಗಿ ಜಾರಿಯಲ್ಲಿದ್ದಿದ್ದರೆ, ಮುಸ್ಲಿಂ ಯುವಕರು ಸೈಕಲ್ ಪಂಕ್ಚರ್ ಹಾಕುವ ಕೆಲಸ ಮಾಡುತ್ತಿರಲಿಲ್ಲ’ ಎಂದರು.
ಮೋದಿಯವರು ಇದನ್ನು, ಮುಸ್ಲಿಮರಲ್ಲಿಯೇ ಆರ್ಥಿಕವಾಗಿ ಹಿಂದುಳಿದ ಬಡವರ ಕುರಿತು ಕಾಳಜಿಯಿಂದ ಹೇಳಿರಬಹುದು. ವಕ್ಫ್ ಭೂಮಿಯನ್ನು ಸಮುದಾಯದ ಉನ್ನತಿಗೆ ಸರಿಯಾಗಿ ಬಳಸಿಕೊಂಡಿದ್ದರೆ ಆರ್ಥಿಕ ಅವಕಾಶಗಳು ಸುಧಾರಿಸುತ್ತಿದ್ದವು ಎಂಬ ಆಶಯ ಅದರ ಹಿಂದಿರಬಹುದು. ಅದು ಅವರ ಪ್ರಾಮಾಣಿಕ ಅನಿಸಿಕೆಯೇ ಆಗಿರಬಹುದು.
ಆದರೆ, ಕಳೆದ ಹನ್ನೊಂದು ವರ್ಷಗಳಿಂದ ಪ್ರಧಾನಿಯಾಗಿರುವ ಮೋದಿಯವರೇ, ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ. 80 ರಷ್ಟು ಬಡವರಿದ್ದಾರೆ, ಸರ್ಕಾರದ ವತಿಯಿಂದ ಅವರಿಗೆ ಉಚಿತವಾಗಿ ಅಕ್ಕಿ ಕೊಡಲಾಗುತ್ತಿದೆ ಎಂದು ಹೇಳಿದ್ದಾರೆ. ಆ ಬಡವರಲ್ಲಿ ಪಂಕ್ಚರ್ ಹಾಕುವ ಹಿಂದೂಗಳೂ ಇದ್ದಾರೆ, ಮುಸ್ಲಿಮರೂ ಇದ್ದಾರೆ.
ಮೋದಿಯವರು ಹೇಳುವ ಪ್ರಕಾರ, ವಕ್ಫ್ ಕಮಿಟಿ ಬಡ ಮುಸ್ಲಿಮರಿಗೆ ಮಾಡಿದ್ದು ದ್ರೋಹ, ವಂಚನೆಯಾದರೆ; ಕಳೆದ ಹನ್ನೊಂದು ವರ್ಷಗಳಲ್ಲಿ ಬಡವರನ್ನು ಬಡತನದಿಂದ ಬಿಡುಗಡೆಗೊಳಿಸದೇ ಇರುವುದು ಕೂಡ, ಬಡವರಿಗೆ ಬಗೆದ ದ್ರೋಹ, ವಂಚನೆಯಲ್ಲವೇ? ಇದು ಮೋದಿಯವರ ಆಡಳಿತ ವೈಫಲ್ಯವನ್ನು ಎತ್ತಿ ತೋರಿಸುವುದಿಲ್ಲವೇ?
ಇದನ್ನು ಓದಿದ್ದೀರಾ?: ಉರ್ದು ನಮ್ಮ ಸಂಸ್ಕೃತಿಯ ಭಾಗ; ಅನ್ಯಭಾಷೆಯಲ್ಲ- ಸುಪ್ರೀಮ್ ತೀರ್ಪು ಚೇತೋಹಾರಿ
ಹಾಗೆಯೇ, ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ದೊಡ್ಡ ಗಂಟಲಿನಲ್ಲಿ ಹೇಳುವ ಪ್ರಧಾನಿ ಮೋದಿಯವರು ಮುಸ್ಲಿಮರನ್ನು ಈ ದೇಶದ ಪ್ರಜೆಗಳೆಂದು ಭಾವಿಸಿಲ್ಲ. ಅನ್ಯರು, ಉಗ್ರರು, ಭಯೋತ್ಪಾದಕರು, ಪಾಕಿಸ್ತಾನಿಯರು, ಜಿಹಾದಿಗಳು, ಗೋ ಹತ್ಯೆ ಮಾಡುವವರು, ನುಸುಳುಕೋರರು, ಅತಿ ಹೆಚ್ಚು ಮಕ್ಕಳನ್ನು ಹೊಂದಿದವರು, ಪಂಕ್ಚರ್ ಹಾಕುವವರು ಎಂದು ಕಳೆದ 25 ವರ್ಷಗಳಿಂದ ತೀರಾ ತುಚ್ಛವಾಗಿ ಹೀಗಳೆಯುತ್ತಲೇ ಬಂದಿದ್ದಾರೆ. ಅವರ ಭಾಷೆ, ಬದುಕನ್ನು ಬೀದಿಗೆಳೆದು ಅವಮಾನಿಸುತ್ತಲೇ ಸಾಗಿದ್ದಾರೆ.
ಅಷ್ಟೇ ಅಲ್ಲ, ದೇಶದ ಪ್ರಜೆಗಳಾದ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ವಿರುದ್ಧ ಬಹುಸಂಖ್ಯಾತರನ್ನು ಎತ್ತಿಕಟ್ಟಿದ್ದಾರೆ, ದ್ವೇಷ ಬಿತ್ತಿದ್ದಾರೆ, ಹಿಂದು-ಮುಸ್ಲಿಮರ ನಡುವೆ ಬಿರುಕುಂಟು ಮಾಡಿದ್ದಾರೆ. ದೇಶವನ್ನಾಳುವ ಪ್ರಧಾನಿಯೇ ಹೀಗೆ ಬಡ ಮುಸ್ಲಿಮರ ವಿರುದ್ಧ ಸಮರ ಸಾರಿದರೆ; ಧರ್ಮದ ಅಮಲೇರಿಸಿಕೊಂಡವರು, ವಿವೇಚನೆ ಕಳೆದುಕೊಂಡವರು ಮುಸ್ಲಿಮರನ್ನು ಬದುಕಲು ಬಿಡುತ್ತಾರೆಯೇ?
ಅದರ ಫಲವಾಗಿ ಗುಜರಾತಿನ ಗೋಧ್ರಾದಿಂದ ಹಿಡಿದು ಪಶ್ಚಿಮ ಬಂಗಾಳದ ಮುರ್ಶಿದಾಬಾದ್‌ವರೆಗೆ, ನೂರಾರು ಕೋಮುಗಲಭೆಗಳಾಗಿವೆ. ಸಾವಿರಾರು ಅಮಾಯಕರು ಬಲಿಯಾಗಿ ನೆತ್ತರ ಹೊಳೆ ಹರಿದಿದೆ. ಬದುಕಿಗೆ ಆಧಾರವಾದ ವ್ಯಾಪಾರ-ವಹಿವಾಟು ಕಳೆದುಕೊಂಡು ಕೋಟ್ಯಂತರ ರೂ.ಗಳ ನಷ್ಟಕ್ಕೀಡಾಗಿದ್ದಾರೆ. ಮನೆ-ಮಠ ಕಳೆದುಕೊಂಡು ಅನಾಥರಾಗಿದ್ದಾರೆ.
ಇಷ್ಟೆಲ್ಲ ಕಿರುಕುಳ ಕೊಟ್ಟು, ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಮಾಡಿದ ಮೇಲೆ, ಈಗ ಬಡ ಮುಸ್ಲಿಮರ ಬಗ್ಗೆ ಕಾಳಜಿಯಿಂದ ಮಾತನಾಡಿದರೆ- ಅದನ್ನು ಭೂತದ ಬಾಯಲ್ಲಿ… ಎಂದು ಅರ್ಥೈಸಬೇಕಾಗುತ್ತದಲ್ಲವೇ?
ಮೋದಿಯವರ ಮೂಲ ಆರ್‌ಎಸ್ಎಸ್. ಅದೇ ಆರ್‌ಎಸ್ಎಸ್‌ನ ಗೋಡ್ಸೆ, ಮುಸ್ಲಿಮರ ಬಗ್ಗೆ ಮೃದು ಧೋರಣೆ ತಳೆದಿದ್ದಾರೆಂಬ ಕಾರಣಕ್ಕೆ ಮಹಾತ್ಮಾ ಗಾಂಧಿಯವರನ್ನು ಹತ್ಯೆ ಮಾಡಿದ. ಅಂದಿನಿಂದ ಅವರ ಕರುಳಿನಲ್ಲಿರುವ ಮುಸ್ಲಿಂ ದ್ವೇಷ ಇಂದಿಗೂ ಜೀವಂತವಿದೆ. ಭಾರತದ ವಿಭಜನೆಯಂತಹ ಹೃದಯ ವಿದ್ರಾವಕ ಘಟನೆಯೂ ಅವರನ್ನು ಮನುಷ್ಯರನ್ನಾಗಿ ಮಾಡದಾಗಿದೆ. ಅದು, 2002ರಲ್ಲಿ ಮೋದಿ ಮತ್ತು ಅಮಿತ್ ಶಾಗಳ ನೇತೃತ್ವದ ಗೋಧ್ರಾ ಹತ್ಯಾಕಾಂಡದಲ್ಲೂ ಮುಂದುವರೆದಿದೆ. ಭಾರತದ ಅಸಹಿಷ್ಣುತೆ ಕುರಿತು ಇಡೀ ಪ್ರಪಂಚವೇ ಮಾತನಾಡಿದೆ.
ಆದರೆ, ಮೋಶಾಗಳು ಆ ಹತ್ಯಾಕಾಂಡವನ್ನೂ ದಕ್ಕಿಸಿಕೊಂಡರು. ಅದನ್ನೇ ರಾಷ್ಟ್ರರಾಜಕಾರಣಕ್ಕೆ ಮೆಟ್ಟಿಲನ್ನಾಗಿಸಿಕೊಂಡರು.
ಮೋದಿಯವರು ತೇಲಿ(ಗಾಣಿಗ) ಸಮುದಾಯಕ್ಕೆ ಸೇರಿದವರು, ಕೆಳಜಾತಿಯವರು. ಅವರೇ ಹೇಳಿಕೊಂಡಂತೆ, ಬಾಲಕನಾಗಿದ್ದಾಗ ಚಾಯ್ ಮಾರಿ ಬದುಕಿದವರು. ಬಡವರ ಕಷ್ಟ ಗೊತ್ತಿರುವವರು. ಆದರೆ, ಪ್ರಧಾನಿಯಾಗುತ್ತಿದ್ದಂತೆ, ಬಡವರನ್ನೇ ಹಂಗಿಸುತ್ತಿದ್ದಾರೆ. ಅವಮಾನಿಸುತ್ತಿದ್ದಾರೆ.
ಇದನ್ನು ಓದಿದ್ದೀರಾ?: ಬೆಂಗಳೂರು ನಗರವೋ-ನರಕವೋ, ಕೇಳುವವರಾರು?
ಈ ಸಂದರ್ಭದಲ್ಲಿ ದೇವರಾಜ ಅರಸು ನೆನಪಾಗುತ್ತಿದ್ದಾರೆ. 1978ರಲ್ಲಿ ವಿಧಾನಸಭೆಗೆ ಆಯ್ಕೆಯಾದ ತರುಣ ಶಾಸಕರನ್ನು ಕುರಿತು ಅರಸು, ‘ನೀವೀಗ ನಿಮ್ಮ ಪಕ್ಷದ ಶಾಸಕರಲ್ಲ, ಕ್ಷೇತ್ರದ ಎಲ್ಲ ಜನರ ಪ್ರತಿನಿಧಿ. ನಿಮಗೆ ವಿರೋಧಿಗಳಿಲ್ಲ. ನೀವು ರಾಜಕಾರಣದಲ್ಲಿ ಬಹುಕಾಲ ಉಳಿಯಬೇಕಾದರೆ ಕ್ಷಮಾಗುಣ ಮುಖ್ಯ, ರೂಢಿಸಿಕೊಳ್ಳಿ. ಇದು ನಮ್ಮ ವ್ಯಕ್ತಿತ್ವಕ್ಕೆ ಶೋಭೆ ತರುತ್ತದೆ’ ಎಂದರು.
ಟೇಬಲ್ ಮೇಲೆ ನೀರಿನ ಲೋಟವಿತ್ತು. ಅದನ್ನು ಎತ್ತಿ ಹಿಡಿದ ಅರಸು, ‘ಇದು ಸರಕಾರದ ಕಾರ್ಯಕ್ರಮ. ದಾಹವಿರುವವನಿಗೆ ಕೊಟ್ಟು ಬಾ ಎಂದರೆ, ನೀವು ನಮ್ಮ ಪಕ್ಷದವರಿಗೆ, ನಮ್ಮ ಜಾತಿಯವರಿಗೆ ಎಂದು ಹುಡುಕಿ ಕೊಡಬಾರದು. ಅದು ರಾಜಧರ್ಮಕ್ಕೆ ವಿರೋಧ. ಜನತಂತ್ರಕ್ಕೆ ಅಪಚಾರ. ಕುಡಿಯುವ ನೀರಿಗೆ, ಉರಿಯುವ ದೀಪಕ್ಕೆ, ತಿರುಗುವ ರಸ್ತೆಗೆ, ಓದುವ ಶಾಲೆಗೆ, ರೋಗಿಯ ಚಿಕಿತ್ಸೆಗೆ, ಜಾತಿ, ಧರ್ಮ, ಜನಾಂಗ, ಭಾಷೆಗಳ ವಿಚಾರದಲ್ಲಿ ರಾಜಕಾರಣ ಬೆರೆಸುವುದು ಜನದ್ರೋಹ. ಎಲ್ಲ ವಿಷಯಗಳಲ್ಲೂ ರಾಜಕಾರಣ ಮಾಡುವುದು ಅಪಾಯಕಾರಿ’ ಎಂದರು.
ದೇವರಾಜ ಅರಸರಿಗಿದ್ದ ದೂರದೃಷ್ಟಿ, ಮಾನವೀಯತೆ ಮತ್ತು ಮುತ್ಸದ್ದಿತನವನ್ನು ಮೋದಿಯವರಲ್ಲಿ ಹುಡುಕುವುದು ಮೂರ್ಖತನ, ಇರಲಿ. ಆಳುವ ಸರ್ಕಾರ ಅಮಾನವೀಯಗೊಂಡಷ್ಟು ಮಾನವಂತರು ಬಡವರನ್ನು-ಮುಸ್ಲಿಮರನ್ನು ಆಪ್ತತೆಯಿಂದ ಅಪ್ಪಿಕೊಳ್ಳಬೇಕಾಗಿದೆ. ಏಕೆಂದರೆ, ಬಹುಸಂಖ್ಯಾತ ಕೋಮುವಾದ ದೇಶದ ಆಡಳಿತದಲ್ಲಿ, ಕಾರ್ಯಾಂಗದಲ್ಲಿ, ನ್ಯಾಯಾಂಗದಲ್ಲಿ, ಶಿಕ್ಷಣದಲ್ಲಿ, ಮಾಧ್ಯಮ ಕ್ಷೇತ್ರದಲ್ಲಿ ಭದ್ರವಾಗಿ ಬೇರೂರಿದೆ. ಯಾವುದೇ ಅಧಿಕಾರ ಬಲವೂ ಇಲ್ಲದ, ಮಾಧ್ಯಮಗಳ ಬೆಂಬಲವೂ ಇಲ್ಲದ ಬಡವರ-ಮುಸ್ಲಿಮರ ಪರ ಮಾನವಂತರು ನಿಲ್ಲಬೇಕಾಗಿದೆ.

ಈ ದಿನ ಮಾಧ್ಯಮ ಬಡವರ ಪರವಾಗಿ ದ್ವನಿ ಯತ್ತಿದಕ್ಕಾಗಿ ಧನ್ಯವಾದಗಳು