ಕರ್ನಾಟಕದಲ್ಲಿ ರಾಜ್ಯ ಶಿಕ್ಷಣ ನೀತಿ ಆಯೋಗವು 1ನೇ ತರಗತಿಗೆ ದಾಖಲಾತಿಯ ವಯಸ್ಸನ್ನು ಸಡಿಲಗೊಳಿಸಿರುವುದು ಸರಿಯಲ್ಲ. ಹಲವು ನ್ಯಾಯಾಲಯಗಳ ತೀರ್ಪನ್ನು ಉಲ್ಲಂಘಿಸಿರುವುದು ಮಕ್ಕಳ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಎಸ್‌ಡಿಎಂಸಿ ಸಮನ್ವಯ ಕೇಂದ್ರ ವೇದಿಕೆಯ ರಾಜ್ಯ ಸಂಚಾಲಕ ಮೊಯ್ದಿನ್ ಕುಟ್ಟಿ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, “ರಾಜ್ಯ ಸರ್ಕಾರ ಸಂವಿಧಾನ ಬದ್ದ ಕಾಯ್ದೆಯ ಉಲ್ಲಂಘನೆ ಮಾಡಿರುವುದಕ್ಕೆ ಪೋಷಕರ ಮನವಿಯನ್ನು ಉಲ್ಲೇಖಿಸಿದೆ. ಇದು ಮಕ್ಕಳ ಹಕ್ಕುಗಳ ಬಗ್ಗೆ ಈ ನೀತಿ ನಿರೂಪಕರಲ್ಲಿ ಯಾವುದೇ ರೀತಿಯ ಸ್ಪಷ್ಟ ನಿಲುವು ಇಲ್ಲ ಎನ್ನುವುದನ್ನು ತೋರಿಸುತ್ತದೆ. ಕೇಂದ್ರ ಮತ್ತು ವಿವಿಧ ರಾಜ್ಯ ಸರ್ಕಾರಗಳು 1ನೇ ತರಗತಿಯ ದಾಖಲಾತಿಗೆ 6 ವರ್ಷಗಳ ಕನಿಷ್ಠ ವಯೋಮಿತಿ ನಿಗದಿಪಡಿಸಿರುವುದು, ಮಗುವಿನ ಒತ್ತಡರಹಿತ ಕಲಿಕೆಗೆ ಪೂರಕವಾಗಿದೆ. ಇದೆಲ್ಲವನ್ನು ಒಪ್ಪಿಕೊಳ್ಳುವ ಶಿಕ್ಷಣ ನೀತಿ ನಿರೂಪಕರು ಅದೇ ವಿಷಯಗಳನ್ನು ಉಲ್ಲಂಘಿಸಿರುತ್ತಾರೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮಂಗಳೂರು | ಏ.19ರಂದು ಮಹಾನಟಿ-2 ಆಡಿಷನ್
“ವರ್ಷಂಪ್ರತಿ ಸರ್ಕಾರ ಮತ್ತು ಶಿಕ್ಷಣ ಇಲಾಖೆಯು ಪೋಷಕರ ಮನವಿಯ ನೆಪ ಹೇಳಿಕೊಂಡು ದಾಖಲಾತಿ ವಯಸ್ಸಿನಲ್ಲಿ ಬದಲಾವಣೆ ಮಾಡುತ್ತಾ ಬರುತ್ತಿರುವುದು ಸಂವಿಧಾನದ ಅನುಚ್ಛೇದ 21(ಎ), ಶಿಕ್ಷಣ ಹಕ್ಕು ಕಾಯ್ದೆ-2009, ಕಡ್ಡಾಯ ಶಿಕ್ಷಣ ನಿಯಮಗಳು-2012 ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ-2020ರ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಆದರಿಂದ ಶಿಕ್ಷಣ ನೀತಿ ನಿರೂಪಣೆಯಂತಹ ಉನ್ನತ ಸ್ಥಾನದಲ್ಲಿದ್ದು ಮಕ್ಕಳ ಮಾನಸಿಕ ಬೆಳವಣಿಗೆಯ ಬಗ್ಗೆ ಚಿಂತಿಸದೆ ಮಕ್ಕಳ ಪೋಷಕರಿಗಾಗಿ ನಿಯಮ ಕಾಯ್ದೆಗಳನ್ನು ಬೇಕಾಬಿಟ್ಟಿ ಬದಲಾಯಿಸುತ್ತಾ ಇರುವುದನ್ನು ಕರ್ನಾಟಕ ರಾಜ್ಯ ಎಸ್‌ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ ವಿರೋಧಿಸುತ್ತದೆ. ಶಿಕ್ಷಣ ಯಾವಾಗಲೂ ಮಕ್ಕಳ ಕೇಂದ್ರೀಕೃತ ಆಗಿರಬೇಕೇ ವಿನಃ ಪೋಷಕರ ಬೇಡಿಕೆಗಾಗಿ ಬದಲಾಯಿಸುವಂತಿರವಾರದು” ಎಂದಿದ್ದಾರೆ.