ಬೀದರ್‌ನ ಕರ್ತವ್ಯ ನಿರತ ಪತ್ರಕರ್ತ ರವಿ ಭೂಸುಂಡೆ ಎಂಬುವರ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ನಡೆಸಿದ ಹಲ್ಲೆಯನ್ನು ಔರಾದ್ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ತೀವ್ರವಾಗಿ ಖಂಡಿಸಿದ್ದಾರೆ.
ಈ ಸಂಬಂಧ ಔರಾದ್ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ಮೊಕ್ತೆದಾರ್ ನೇತೃತ್ವದಲ್ಲಿ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ತಹಸೀಲ್ದಾರ್ ಮಹೇಶ್ ಪಾಟೀಲ್ ಅವರಿಗೆ ಸಲ್ಲಿಸಿದರು.
‘ಬೀದರ ನಗರದ ಚಿದ್ರಿ ರಸ್ತೆಯಲ್ಲಿ ಏ.15 ರಂದು ರಾತ್ರಿ ರವಿ ಭೂಸುಂಡೆ ಅವರು ವರದಿಗಾಗಿ ಪೋಟೋ ತೆಗೆಯಲು ಹೋದ ವೇಳೆ ಪ್ರಾದೇಶಿಕ ಅರಣ್ಯ ಇಲಾಖೆ ಅಧಿಕಾರಿ ದಸ್ತಗಿರ, ಉಪವಲಯ ಅರಣ್ಯಾಧಿಕಾರಿ ಶಾಂತಕುಮಾರ, ವಲಯ ಅರಣ್ಯಾಧಿಕಾರಿ ಗಜಾನಂದ, ಬೀಟ್ ವನಪಾಲಕ ಸಂಗಮೇಶ ಸೇರಿದಂತೆ ಇನ್ನೂ ಮೂರಾಲ್ಕು ಜನರು ಹಲ್ಲೆ ನಡೆಸಿದ್ದಾರೆ’ ಎಂದು ಆರೋಪಿಸಿದರು.
‘ನಾನು ಪತ್ರಕರ್ತ ಎಂದು ರವಿ ಭೂಸಂಡೆ ಅವರು ಹೇಳಿದರೂ ಮತ್ತಷ್ಟು ಅತಿರೇಕಕ್ಕೇರಿದ ಅಧಿಕಾರಿಗಳು ರವಿ ಅವರನ್ನು ಕಪಾಳಮೋಕ್ಷ ಮಾಡಿ ದರ್ಪ ಮೆರೆದಿದ್ದು ಅಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಬಳಿಕ ಪತ್ರಕರ್ತ ರವಿ ಅವರನ್ನು ಅಧಿಕಾರಿಗಳು ತಮ್ಮ ಖಾಸಗಿ ವಾಹನದಲ್ಲಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ’ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮಗಳಿಗೆ ತನ್ನದೇ ಆದ ಸ್ವಾತಂತ್ರ್ಯವಿದೆ. ಅರಣ್ಯ ಅಧಿಕಾರಿಗಳು ಕರ್ತವ್ಯನಿರತ ಪತ್ರಕರ್ತರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ ಮಾಧ್ಯಮ ಸ್ವತಂತ್ರ ಹತ್ತಿಕ್ಕಲು ಹೊರಟಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಕೊಡಲಿ ಪೆಟ್ಟಾಗಿದೆ. ಕೂಡಲೇ ತಪ್ಪಿತಸ್ಥ ಅರಣ್ಯಾಧಿಕಾರಿಗಳಿಗೆ ಬಂಧಿಸಿ, ಅವರನ್ನು ಸೇವೆಯಿಂದ ವಜಾಗೊಳಿಸಬೇಕು’ ಎಂದು ಒತ್ತಾಯಿಸಿದರು.
ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ಪ್ರಧಾನ ಕಾರ್ಯದರ್ಶಿ ಸುನೀಲ್ ಜಿರೋಬೆ, ಖಜಾಂಚಿ ಸುಧೀರ್ ಕುಮಾರ್ ಪಾಂಡ್ರೆ, ಕಾರ್ಯದರ್ಶಿ ಅಹ್ಮದ್ ಸೇರಿದಂತೆ ಪ್ರಮುಖರಾದ ಶರಣಪ್ಪ ಚಿಟ್ಮೆ, ಮಲ್ಲಪ್ಪಗೌಡ, ಶಿವಕುಮಾರ್ ಸಾಧುರೆ, ಅಮರ ಸ್ವಾಮಿ, ರಾಚಯ್ಯ ಸ್ವಾಮಿ, ರವಿ ಮಠಪತಿ, ಅಂಬರೇಶ್ ಚಿದ್ರೆ, ರವಿ ಸಿಂಧೆ, ಪ್ರಭುಲಿಂಗ ಸ್ವಾಮಿ ಹಾಗೂ ಮತ್ತಿತರರಿದ್ದರು.