ಸುಪ್ರೀಂ ಕೋರ್ಟ್‌ನ ಮುಂದಿನ ಸಿಜೆಐ ಬಿ ಆರ್ ಗವಾಯಿಯವರ ವಿಶೇಷತೆಗಳೇನು?

Date:

Advertisements

ಸುಪ್ರೀಂ ಕೋರ್ಟ್‌ನ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ(ಸಿಜೆಐ) ಭೂಷಣ್ ರಾಮಕೃಷ್ಣ ಗವಾಯಿಯವರ ಹೆಸರನ್ನು ಹಾಲಿ ಸಿಜೆಐ ಸಂಜೀವ್ ಖನ್ನಾ ಅವರು ಕೇಂದ್ರ ಸರ್ಕಾರಕ್ಕೆ ಬುಧವಾರ ಶಿಫಾರಸು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಭೂಷಣ್ ರಾಮಕೃಷ್ಣ ಗವಾಯಿಯವರು ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಮೇ 14ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಪ್ರಸ್ತುತ ಸಿಜೆಐ ಖನ್ನಾ ಅವರ ನಿವೃತ್ತಿಯ ನಂತರ ಭಾರತದ 52ನೇ ಮುಖ್ಯ ನ್ಯಾಯಮೂರ್ತಿಯಾಗಲಿರುವ ಗವಾಯಿಯವರು ಎರಡನೇ ದಲಿತ ಮುಖ್ಯ ನ್ಯಾಯಮೂರ್ತಿಯಾಗಲಿದ್ದಾರೆ. 2019ರ ಮೇ 24ರಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದ ಇವರಿಗೆ ಸಿಜೆಐ ಆಗಿ ಆರು ತಿಂಗಳಿಗೂ ಹೆಚ್ಚಿನ ಅವಧಿ ಸಿಗಲಿದ್ದು, ಈ ವರ್ಷದ ನವೆಂಬರ್‌ 23ರಂದು ನಿವೃತ್ತರಾಗಲಿದ್ದಾರೆ.

ನ್ಯಾಯಮೂರ್ತಿ ಖನ್ನಾ ಅವರು ಮೇ 13ರಂದು ನಿವೃತ್ತರಾಗಲಿದ್ದಾರೆ. ವಿಶೇಷವೆಂದರೆ, ನ್ಯಾಯಮೂರ್ತಿ ಬಿ ಆರ್ ಗವಾಯಿಯವರೂ ಕೂಡ ಈ ವರ್ಷ ನಿವೃತ್ತರಾಗಲಿದ್ದಾರೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸು 65 ವರ್ಷಗಳು. ಹಾಗಾಗಿ ಗವಾಯಿಯವರು ನವೆಂಬರ್ 23ರವರೆಗೆ ಅಧಿಕಾರದಲ್ಲಿ ಇರಲಿದ್ದಾರೆ.

Advertisements

ನ್ಯಾಯಮೂರ್ತಿ ಬಿ ಆರ್ ಗವಾಯಿ ಯಾರು?

ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರು 1960ರ ನವೆಂಬರ್ 24ರಂದು ಅಮರಾವತಿಯ ದಲಿತ ಕುಟುಂಬದಲ್ಲಿ ಜನಿಸಿದರು. ನ್ಯಾಯಮೂರ್ತಿ ಕೆ ಜಿ ಬಾಲಕೃಷ್ಣನ್ ಅವರು 2007ರಲ್ಲಿ ನೇಮಕಗೊಂಡ ನಂತರ ನ್ಯಾಯಮೂರ್ತಿ ಗವಾಯಿ ಈ ಹುದ್ದೆಯನ್ನು ಅಲಂಕರಿಸಿದ ಎರಡನೇ ದಲಿತ ಮುಖ್ಯ ನ್ಯಾಯಮೂರ್ತಿಗಳಾಗಿದ್ದಾರೆ.

ಅವರ ಕಾನೂನು ವೃತ್ತಿಜೀವನದ ಒಂದು ನೋಟ

ಗವಾಯಿಯವರು 1985ರ ಮಾರ್ಚ್ 16ರಂದು ವಕೀಲಿ ವೃತ್ತಿಗೆ ಸೇರಿದರು. ಮಾಜಿ ಅಡ್ವೊಕೇಟ್ ಜನರಲ್ ಮತ್ತು ಹೈಕೋರ್ಟ್ ನ್ಯಾಯಾಧೀಶ ದಿವಂಗತ ರಾಜಾ ಎಸ್ ಭೋಂಸ್ಲೆ ಅವರೊಂದಿಗೆ 1987ರವರೆಗೆ ಕೆಲಸ ಮಾಡಿದರು. 1987ರಿಂದ 1990ರವರೆಗೆ ಬಾಂಬೆ ಹೈಕೋರ್ಟ್‌ನಲ್ಲಿ ಸ್ವತಂತ್ರವಾಗಿ ಅಭ್ಯಾಸ ಮಾಡಿದರು. 1990ರ ನಂತರ, ಮುಖ್ಯವಾಗಿ ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠದ ಎದುರು ಸಾಂವಿಧಾನಿಕ ಕಾನೂನು ಮತ್ತು ಆಡಳಿತಾತ್ಮಕ ಕಾನೂನಿನಲ್ಲಿ ಅಭ್ಯಾಸ ಮಾಡಿದರು.

ಬಿ ಆರ್ ಗವಾಯಿಯವರು ನಾಗ್ಪುರ ಮುನ್ಸಿಪಲ್ ಕಾರ್ಪೊರೇಷನ್, ಅಮರಾವತಿ ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಅಮರಾವತಿ ವಿಶ್ವವಿದ್ಯಾಲಯದ ಸ್ಥಾಯಿ ಸಲಹೆಗಾರರಾಗಿದ್ದರು.

ಸಿಕಾಮ್(SICOM), ಡಿಸಿವಿಎಲ್(DCVL) ಮತ್ತು ವಿದರ್ಭ ಪ್ರದೇಶದ ವಿವಿಧ ಮುನ್ಸಿಪಲ್ ಕೌನ್ಸಿಲ್‌ಗಳಂತಹ ವಿವಿಧ ಸ್ವಾಯತ್ತ ಸಂಸ್ಥೆಗಳು ಮತ್ತು ನಿಗಮಗಳಿಗೆ ಗವಾಯಿ ನಿಯಮಿತವಾಗಿ ಹಾಜರಾಗಿದ್ದರು. 1992ರ ಆಗಸ್ಟ್‌ನಿಂದ ಜುಲೈ 1993ರವರೆಗೆ ಬಾಂಬೆ ಹೈಕೋರ್ಟ್ ನಾಗ್ಪುರ ಪೀಠದಲ್ಲಿ ಸಹಾಯಕ ಸರ್ಕಾರಿ ವಕೀಲರು ಮತ್ತು ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಕಗೊಂಡರು. 2003ರಲ್ಲಿ ಅವರನ್ನು ಬಾಂಬೆ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರನ್ನಾಗಿ ನೇಮಿಸಲಾಯಿತು. 2005ರ ನವೆಂಬರ್ 12ರಂದು ಬಾಂಬೆ ಹೈಕೋರ್ಟ್‌ನ ಖಾಯಂ ನ್ಯಾಯಾಧೀಶರಾದರು.

ನ್ಯಾಯಮೂರ್ತಿ ಗವಾಯಿ ಅವರು ಮುಂಬೈ ಹೈಕೋರ್ಟ್‌ನ ಪ್ರಧಾನ ಸ್ಥಾನದಲ್ಲಿ ಹಾಗೂ ನಾಗ್ಪುರ, ಔರಂಗಾಬಾದ್ ಮತ್ತು ಪಣಜಿಯ ಪೀಠಗಳಲ್ಲಿಯೂ ಸೇವೆ ಸಲ್ಲಿಸಿದ್ದರು. ಬಳಿಕ ಅವರನ್ನು 2019ರ ಮೇ 24ರಂದು ಸುಪ್ರೀಂ ಕೋರ್ಟ್‌ಗೆ ಬಡ್ತಿ ನೀಡಲಾಯಿತು.

ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಪ್ರಮುಖ ತೀರ್ಪುಗಳು

ನ್ಯಾಯಮೂರ್ತಿ ಬಿ ಆರ್ ಗವಾಯಿಯವರು ತಮ್ಮ ಅಧಿಕಾರಾವಧಿಯಲ್ಲಿ ಹಲವಾರು ಹೆಗ್ಗುರುತು ತೀರ್ಪುಗಳಿಗೆ ಕೊಡುಗೆ ನೀಡಿದ್ದಾರೆ.

ಅಪನಗದೀಕರಣ(ನೋಟು ರದ್ದತಿ) ಪ್ರಕರಣ (2023): ಕೇಂದ್ರ ಸರ್ಕಾರದ 2016ರ ಅಪನಗದೀಕರಣ ನಿರ್ಧಾರದ ಕಾನೂನುಬದ್ಧತೆಯನ್ನು ಎತ್ತಿಹಿಡಿದ ಬಹುಮತದ ತೀರ್ಪನ್ನು ನ್ಯಾಯಮೂರ್ತಿ ಗವಾಯಿ ಒಪ್ಪಿಕೊಂಡರು. ಅದನ್ನು ಸಾಂವಿಧಾನಿಕ ಮಿತಿಯೊಳಗೆ ಜಾರಿಗೆ ತರಲಾಗಿದೆ ಎಂದು ದೃಢಪಡಿಸಿದರು.

ಆರ್ಟಿಕಲ್ 370 ತೀರ್ಪು: ಐದು ನ್ಯಾಯಾಧೀಶರ ಸಂವಿಧಾನ ಪೀಠದ ಸದಸ್ಯರಾಗಿ, ಬಿ ಆರ್ ಗವಾಯಿಯವರು 370ನೇ ವಿಧಿಯನ್ನು ರದ್ದುಪಡಿಸುವುದನ್ನು ದೃಢೀಕರಿಸಿದ ಐತಿಹಾಸಿಕ ತೀರ್ಪಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಆ ಮೂಲಕ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಂಡರು. ಜತೆಗೆ ಪ್ರದೇಶದ ಮರುಸಂಘಟನೆಗೆ ಅನುಕೂಲ ಮಾಡಿಕೊಟ್ಟರು.

ಒಳಮೀಸಲಾತಿ ತೀರ್ಪು : ಮೀಸಲಾತಿಗಾಗಿ ಪರಿಶಿಷ್ಟ ಜಾತಿಗಳ ಒಳವರ್ಗೀಕರಣದ ಸಾಂವಿಧಾನಿಕ ಅಧಿಕಾರವು ರಾಜ್ಯ ಸರ್ಕಾರಗಳಿಗೆ ಇದೆ ಎಂದು ಬಹುಮತದ ಆಧಾರದಲ್ಲಿ ತೀರ್ಪು ನೀಡಿದ ಏಳು ನ್ಯಾಯಮೂರ್ತಿಗಳ ಪೀಠದಲ್ಲಿ ಗವಾಯಿಯವರೂ ಒಬ್ಬರಾಗಿದ್ದರು.

ಆಸ್ತಿ ತೆರವಿಗೆ ನೋಟಿಸ್‌ ಪ್ರಕ್ರಿಯೆ : ಗವಾಯಿ ನೇತೃತ್ವದ ನ್ಯಾಯಪೀಠವು ಇಡೀ ದೇಶಕ್ಕೆ ಅನ್ವಯವಾಗುವ ಮಾರ್ಗಸೂಚಿಯೊಂದನ್ನು ಹೊರಡಿಸಿ ಕಾರಣ ಕೇಳಿ ನೋಟಿಸ್‌ ಕೊಡದೆ ಯಾವ ಆಸ್ತಿಯನ್ನೂ ಧ್ವಂಸಗೊಳಿಸುವಂತಿಲ್ಲವೆಂದು ಹೇಳಿತು. ಸಂಬಂಧಪಟ್ಟ ವ್ಯಕ್ತಿಗೆ ನೋಟಿಸ್‌ಗೆ ಪ್ರತಿಕ್ರಿಯೆ ನೀಡಲು 15 ದಿನ ಕಾಲಾವಕಾಶ ಕೊಡಬೇಕು ಎಂದು ಹೇಳಿತ್ತು.

ಚುನಾವಣಾ ಬಾಂಡ್‌ : ಚುನಾವಣಾ ಬಾಂಡ್‌ ಯೋಜನೆಯನ್ನು ರದ್ದುಪಡಿಸಿದ ಸಂವಿಧಾನ ಪೀಠದಲ್ಲಿ ನ್ಯಾಯಮೂರ್ತಿ ಗವಾಯಿಯವರು ಇದ್ದರು.

“ದಲಿತ ಸಮುದಾಯದ ನ್ಯಾಯಾಧೀಶರು ಸುಪ್ರೀಂ ಕೋರ್ಟ್‌ನಲ್ಲಿ ಇರಬೇಕೆಂದು ಕೊಲಿಜಿಯಂ ಬಯಸಿದ್ದರಿಂದ ಎರಡು ವರ್ಷ ಮೊದಲೇ ತಾನು ಸುಪ್ರೀಂ ಕೋರ್ಟ್‌ಗೆ ಪದೋನ್ನತಿ ಪಡೆದೆ” ಎಂದು ನ್ಯಾ. ಗವಾಯಿಯವರು ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಮೇ 5ರ ಮುಂದಿನ ವಿಚಾರಣೆವರೆಗೆ ವಕ್ಫ್ ಕಾಯ್ದೆಗೆ ಯಾವುದೇ ತಿದ್ದುಪಡಿ ಮಾಡುವಂತಿಲ್ಲ: ಸುಪ್ರೀಂ ಕೋರ್ಟ್

ಅಮೆರಿಕದ ನ್ಯೂಯಾರ್ಕ್ ಸಿಟಿ ವಕೀಲರ ಸಂಘ(ಎನ್‌ವೈಸಿಬಿ) ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, “ಪರಿಶಿಷ್ಟ ಜಾತಿಗಳಿಗೆ ಪ್ರಾತಿನಿಧ್ಯ ಇರದೇ ಇದ್ದಿದ್ದರೆ, ಬಹುಶಃ ಎರಡು ವರ್ಷಗಳ ನಂತರ ನನಗೆ ಪದೋನ್ನತಿ ದೊರೆಯುತ್ತಿತ್ತು. ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆಯಲು ಕೂಡ ಈ ಅಂಶವೇ ಕಾರಣ. ಆಗ ಹೈಕೋರ್ಟ್‌ನಲ್ಲಿ ದಲಿತ ಸಮುದಾಯವನ್ನು ಪ್ರತಿನಿಧಿಸುವ ನ್ಯಾಯಮೂರ್ತಿಗಳು ಇರಲಿಲ್ಲ” ಎಂದು ತಿಳಿಸಿದರು.

“ಭಾರತೀಯ ಸಂವಿಧಾನ ಹಾಗೂ ಸಮಾಜದಂಚಿನಲ್ಲಿರುವವರಿಗೆ ಸೌಲಭ್ಯ ಒದಗಿಸಬೇಕು ಹಾಗೂ ಎಲ್ಲರನ್ನೂ ಒಳಗೊಳ್ಳಬೇಕೆಂಬ ಅದರ ನಿಲುವಿನಿಂದಾಗಿ ತಾನು ಸುಪ್ರೀಂ ಕೋರ್ಟ್‌ನಲ್ಲಿ ಸೇವೆ ಸಲ್ಲಿಸಲು ಸಾಧ್ಯವಾಗಿದೆ” ಎಂದು ತಿಳಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗದಗ | ಮುಶಿಗೇರಿ ವಸತಿ ನಿಲಯಕ್ಕೆ ಮೂಲ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಗೋಳು ಕೇಳೋರ್ಯಾರು?

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ವಸತಿ...

Download Eedina App Android / iOS

X