- ‘ನಿಖರ ತನಿಖೆ, ದಕ್ಷತೆಗೆ ಹೆಸರಾದ ಕರ್ನಾಟಕ ಪೊಲೀಸರನ್ನೇ ಕಳ್ಳರಿಗೆ ಹೋಲಿಕೆ’
- ಕಲುಷಿತ ನೀರು ಸೇವಿಸಿ ರಾಜ್ಯದಲ್ಲಿ ಇನ್ನೆಷ್ಟು ಸಾವು-ನೋವುಗಳಾಗಬೇಕು?
ಬಿಜೆಪಿ ಹಗರಣಗಳ ತನಿಖೆಯನ್ನು ಸಿಬಿಐ, ಸಿಸಿಬಿಗೆ ವಹಿಸುವುದು ಕಳ್ಳನ ಕೈಗೆ ಕೀಲಿ ಕೊಟ್ಟಂತೆ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ಸಚಿವರ ಹೇಳಿಕೆಗೆ ಸಿಎಂ ಸಹಮತವಿದೆಯೇ ಎಂದು ಪ್ರಶ್ನಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, “ನಿಖರ ತನಿಖೆ, ದಕ್ಷತೆಗೆ ಹೆಸರಾಗಿರುವ ಕರ್ನಾಟಕ ಪೊಲೀಸರನ್ನೇ ಕಳ್ಳರಿಗೆ ಹೋಲಿಕೆ ಮಾಡುವ ಉದ್ಧಟತನವನ್ನು ಟ್ರೋಲ್ ಮಿನಿಸ್ಟರ್ ಪ್ರಿಯಾಂಕ್ ಖರ್ಗೆ ತೋರಿದ್ದಾರೆ. ಇದು ರಾಜ್ಯಕ್ಕೇ ಅವರು ಎಸಗಿರುವ ಅವಮಾನ” ಎಂದು ಕಿಡಿಕಾರಿದೆ.
“ರಾಜ್ಯ ಸರ್ಕಾರದ ಪರಿಮಿತಿಯಲ್ಲೇ ಇರುವ ಸಿಐಡಿ, ಸಿಸಿಬಿಗಳನ್ನು ಕಳ್ಳರಿಗೆ ಹೋಲಿಸುವ ಪ್ರಿಯಾಂಕ್ ಖರ್ಗೆ, ಟಾರ್ಗೆಟ್ ಮಾಡುತ್ತಿರುವುದು ನಮ್ಮ ಪೊಲೀಸರನ್ನೋ? ಅಥವಾ ಎಟಿಎಂ ಸರ್ಕಾರವನ್ನೋ? ಇವರ ಮಾತಿಗೆ ಸಿದ್ದರಾಮಯ್ಯ ಅವರ ಸಹಮತವಿದೆಯೇ” ಎಂದು ಪ್ರಶ್ನಿಸಿದೆ.

ಪ್ರಿಯಾಂಕ್ ಖರ್ಗೆ ಹೇಳಿದ್ದೇನು?
ಬುಧವಾರ ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಚಿವ ಪ್ರಿಯಾಂಕ್ ಖರ್ಗೆ ಅವರು, “ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿರುವ ಹಗರಣಗಳನ್ನು ಸಿಬಿಐ ಅಥವಾ ಸಿಸಿಬಿ ತನಿಖೆಗೆ ವಹಿಸುವುದು, ಕಳ್ಳನ ಕೈಗೆ ಕೀಲಿ ಕೊಟ್ಟಂತೆ” ಎಂದು ಹೇಳಿದ್ದರು.
“ಹಿಂದಿನ ಸರ್ಕಾರದಲ್ಲಿ ಪಿಎಸ್ಐ ನೇಮಕಾತಿ ಹಗರಣ, ಬಿಟ್ ಕಾಯಿನ್ ಹಗರಣ, ಗಂಗಾ ಕಲ್ಯಾಣ ಯೋಜನೆಯಲ್ಲಿ ಹಗರಣ ಹೀಗೆ ವೈವಿಧ್ಯಮಯ ಹಗರಣಗಳು ನಡೆದಿವೆ. ಈ ಎಲ್ಲ ಹಗರಣಗಳನ್ನು ಒಂದೇ ರೀತಿಯ ಸಮಿತಿಗೆ ವಹಿಸುವುದು ಸರಿಯಾಗುವುದಿಲ್ಲ. ಕೆಲವು ಹಗರಣಗಳ ತನಿಖೆಗೆ ಎಸ್‌ಐಟಿ, ಸ್ಪೆಷಲ್ ಟಾಸ್ಕ್ ಫೋರ್ಸ್, ಎಸಿಎಸ್ ಮಟ್ಟದ ಅಧಿಕಾರಿಗಳ ಸಮಿತಿ ಹೀಗೆ ಬೇರೆ ಬೇರೆ ಹಗರಣಗಳಿಗೆ ಬೇರೆ ಬೇರೆ ತನಿಖಾ ತಂಡ ರಚನೆ ಮಾಡಲಾಗುವುದು. ಈ ಬಗ್ಗೆ ಮುಖ್ಯಮಂತ್ರಿ ತೀರ್ಮಾನಿಸಲಿದ್ದಾರೆ” ಎಂದಿದ್ದರು.
ಇನ್ನೆಷ್ಟು ಸಾವು-ನೋವುಗಳಾಗಬೇಕು?
ರಾಜ್ಯದಲ್ಲಿ ಮುಂಗಾರು ಮಳೆ ವಿಳಂಬವಾಗಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ. ಈ ವೇಳೆ ಕಲುಷಿತ ನೀರು ಸೇವನೆಯಿಂದ ಮೇ 26ರಿಂದ ಜೂ. 27ರ ವರೆಗೆ ರಾಜ್ಯದಲ್ಲಿ ನಡೆದ ಪ್ರಕರಣಗಳ ಬಗ್ಗೆ ಅಂಕಿಅಂಶಗಳೊಂದಿಗೆ ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ವಿರುದ್ಧ ಕಿಡಿಕಾರಿದೆ.
“ರಾಜ್ಯದ ಬೇಜವಾಬ್ದಾರಿ ರಕ್ತದಾಹಿ ಎಟಿಎಂ ಸರ್ಕಾರದ ಆಡಳಿತದಲ್ಲಿ, ಜನತೆಗೆ ಕಲುಷಿತ ಕುಡಿಯುವ ನೀರಿನ ದೌರ್ಭಾಗ್ಯದಿಂದಾಗಿ ಸಾವನ್ನು ಎದುರು ನೋಡುವಂತಾಗಿದೆ” ಎಂದು ಬಿಜೆಪಿ ಆರೋಪಿಸಿದೆ.
“ಮೇ 26ರಂದು ರಾಯಚೂರಿನ ದೇವದುರ್ಗದಲ್ಲಿ 50 ಕ್ಕೂ ಹೆಚ್ಚು ಜನ ಅಸ್ವಸ್ಥ, 5 ವರ್ಷದ ಬಾಲಕ ಮೃತ. ಮೇ 28ರಂದು 30 ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು. ಜೂನ್ 8ರಂದು ಕೊಪ್ಪಳದ ಕುಷ್ಟಗಿಯಲ್ಲಿ 10 ವರ್ಷದ ಬಾಲಕಿ ಸಾವು. ಜೂನ್ 8ರಂದು ಬೆಂಗಳೂರಿನ ಇಲೆಕ್ಟ್ರಾನಿಕ್ಸ್ ಸಿಟಿಯಲ್ಲಿ 118 ಜನ ಅಸ್ವಸ್ಥ. ಜೂನ್ 19ರಂದು ಕಲಬುರ್ಗಿಯ ಸೇಡಂನಲ್ಲಿ 50ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥ. ಜೂನ್ 20ರಂದು ಬೀದರ್‌ನ ಔರಾದ್‌ನಲ್ಲಿ 20ಕ್ಕೂ ಹೆಚ್ಚು ಜನ ಅಸ್ವಸ್ಥ. ಜೂನ್ 27ರಂದು ಯಾದಗಿರಿಯ ಗುರುಮಠಕಲ್‌ನಲ್ಲಿ 54ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ” ಎಂದು ಬಿಜೆಪಿ ಪಟ್ಟಿ ಮಾಡಿದೆ.
“ಅಕ್ಕಿ ಬಿಡಿ, ಕುಡಿಯುವ ನೀರು ಕೊಡುವ ಯೋಗ್ಯತೆಯನ್ನೂ ಸರ್ಕಾರ ಉಳಿಸಿಕೊಂಡಿಲ್ಲ. ದಪ್ಪ ಚರ್ಮದ ಸರ್ಕಾರ ಎಚ್ಚೆತ್ತುಕೊಳ್ಳಲು, ಇನ್ನೆಷ್ಟು ಸಾವು-ನೋವುಗಳಾಗಬೇಕು” ಎಂದು ಕುಟುಕಿದೆ.