ಆಂಧ್ರಪ್ರದೇಶ ರಾಜಕಾರಣದಲ್ಲಿ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುಗಿಂತ ಉಪಮುಖ್ಯಮಂತ್ರಿ, ನಟ ಪವನ್ ಕಲ್ಯಾಣ್ ಅವರೇ ಹೆಚ್ಚು ಸುದ್ದಿಯಲ್ಲಿದ್ದಾರೆ. ಸದ್ದು ಮಾಡುತ್ತಿದ್ದಾರೆ. ಪವನ್ ಕಲ್ಯಾಣ್ ಅವರ ಪಕ್ಷ ‘ಜನ ಸೇನಾ’ ಕೇಂದ್ರದಲ್ಲಿ ಎನ್‌ಡಿಎ ಜೊತೆ ಮೈತ್ರಿ ಮಾಡಿಕೊಂಡಿದ್ದು, ಆಂಧ್ರದಲ್ಲಿ ನಾಯ್ಡು ಅವರ ಮೈತ್ರಿ ಸರ್ಕಾರದ ಭಾಗವಾಗಿದೆ. ಸದಾ ಮೋದಿ ಭಜನೆ ಮಾಡಲು ಆರಂಭಿಸಿರುವ ಪವನ್ ಕಲ್ಯಾಣ್, ತಿರುಪತಿ ಲಡ್ಡು ವಿವಾದ ಮುನ್ನೆಲೆಗೆ ಬಂದಾಗ ತಿರುಮಲ ಬೆಟ್ಟದ ಪ್ರತಿಮೆಟ್ಟಿಲುಗಳಿಗೆ ನಾಮ ಬಳಿದು, ಪೂಜೆ ಸಲ್ಲಿಸಿದ್ದರು. ಕುಂಭಮೇಳದಲ್ಲಿ ಭಾಗಿಯಾಗಿ, ನೆಟ್ಟಿಗರ ಟ್ರೋಲ್‌ಗೂ ಗುರಿಯಾಗಿದ್ದರು. ಇದೀಗ, ತಮ್ಮ ಪುತ್ರ ಅಗ್ನಿ ಅವಘಡದಲ್ಲಿ ಗಾಯಗೊಂಡಿದ್ದು, ಆತನ ಚೇತರಿಕೆಗಾಗಿ ತಿರುಪತಿಯಲ್ಲಿ ತಮ್ಮ ಪತ್ನಿಯ ತಲೆ ಕೂದಲು ಮುಡಿ ಕೊಡಿಸಿದ್ದಾರೆ.
ರಾಜಕೀಯ ಪ್ರವೇಶಿಸಿದ ಬಳಿಕ, ಸಂಘಪರಿವಾರದ ಭಕ್ತನಂತೆ ವರ್ತಿಸುತ್ತಿರುವ ಪವನ್ ಕಲ್ಯಾಣ್ ಚಿತ್ರರಂಗದಿಂದ ಹೊರಗುಳಿದಂತೆ ಕಾಣಿಸುತ್ತಿದ್ದಾರೆ. ಆದರೂ, ಅವರ ಎರಡು ಸಿನಿಮಾಗಳಿಗೆ ಸಹಿ ಮಾಡಿದ್ದು, ಚಿತ್ರೀಕರಣವನ್ನು ಪೂರ್ಣಗೊಳಿಸಿಲ್ಲ. ಹೀಗಾಗಿ, ನಿರ್ದೇಶಕರು, ನಿರ್ಮಾಪಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಪವನ್ ಕಲ್ಯಾಣ್ ನಿರ್ಲಕ್ಷ್ಯದ ಕಾರಣಕ್ಕಾಗಿ ಅವರ ಸಿನಿಮಾವೊಂದು ತೆಲುಗು ಚಿತ್ರರಂಗದಲ್ಲಿ ಕುಖ್ಯಾತಿಗೆ ಗುರಿಯಾಗಿದೆ. ಆ ಸಿನಿಮಾ ‘ಹರಿಹರ ವೀರ ಮಲ್ಲು’.
ಪವನ್ ಕಲ್ಯಾಣ್ ಅವರು ‘ಹರಿಹರ ವೀರ ಮಲ್ಲು’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾ ಚಿತ್ರೀಕರಣ ಆರಂಭವಾಗಿ ಬರೋಬ್ಬರಿ 5 ವರ್ಷಗಳಾಗಿವೆ. ಆದರೂ, ಚಿತ್ರೀಕರಣ ಸಂಪೂರ್ಣವಾಗಿ ಪೂರ್ಣಗೊಂಡಿಲ್ಲ. ಪವನ್ ಕಲ್ಯಾಣ್ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗದೇ ಇರುವ ಕಾರಣ, ಸಿನಿಮಾ ಇನ್ನೂ ನಿರ್ಮಾಣ ಹಂತದಲ್ಲಿಯೇ ಇದೆ. ಈ ವಿಳಂಬದ ಕಾರಣದಿಂದಲೇ ಸಿನಿಮಾ ಕುಖ್ಯಾತಿ ಪಡೆದುಕೊಂಡಿದೆ.
ಸಾಮಾನ್ಯವಾಗಿ ಯಾವುದೇ ಸಿನಿಮಾ ಘೋಷಣೆಯಾಗಿ, ಸೆಟ್ಟೇರಿದರೆ ಆ ಸಿನಿಮಾದ ಚಿತ್ರೀಕರಣ ಮತ್ತು ಸಂಕಲನ ಗರಿಷ್ಠ 3 ವರ್ಷಗಳಲ್ಲಿ ಪೂರ್ಣಗೊಳ್ಳುತ್ತದೆ. ಆದರೆ, ‘ಹರಿಹರ ವೀರ ಮಲ್ಲು’ ಮಾತ್ರ 5 ವರ್ಷಗಳಾದರೂ ಇನ್ನೂ ಚಿತ್ರೀಕರಣವೇ ಮುಗಿದಿಲ್ಲ. ತೆಲುಗು ಚಿತ್ರರಂಗದಲ್ಲಿ ಈವರೆಗೆ ಯಾವ ಸಿನಿಮಾ ಕೂಡ 3 ವರ್ಷಗಳ ಅವಧಿಯನ್ನು ಮೀರಿ, ನಿರ್ಮಾಣ ಆಗಿರಲಿಲ್ಲ. ಆದರೆ, ‘ಹರಿಹರ ವೀರ ಮಲ್ಲು’ ಆ ಅವಧಿಯನ್ನು ಮುರಿದಿದೆ. ದೀರ್ಘ ಸಮಯದವರೆಗೆ ಬಾಕಿ ಉಳಿದ ತೆಲುಗಿನ ಏಕೈಕ ಸಿನಿಮಾ ಎಂಬ ಕುಖ್ಯಾತಿಗೆ ಗುರಿಯಾಗಿದೆ.
ಅಂದಹಾಗೆ, ‘ಹರಿಹರ ವೀರ ಮಲ್ಲು’ ಸಿನಿಮಾ ಚಿತ್ರೀಕರಣ ಆರಂಭವಾದ ಬಳಿಕ ಹಲವು ಭಾರಿ ಚಿತ್ರ ಬಿಡುಗಡೆಯ ದಿನಾಂಕವನ್ನು ಘೋಷಿಸಲಾಗಿದೆ. ಮತ್ತೆ-ಮತ್ತೆ ಮುಂದೂಡಲಾಗಿದೆ. ಈಗಲೂ, ಮೇ 9ರಂದು ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿ ಮಾಡಲಾಗಿತ್ತು. ಆದರೆ, ಪವನ್ ಕಲ್ಯಾಣ್ ಚಿತ್ರೀಕರಣವನ್ನು ಮುಗಿಸದ ಕಾರಣ, ಮತ್ತೆ ಮುಂದೂಡಲಾಗಿದೆ.
ಚಿತ್ರತಂಡವು ಚಿತ್ರೀಕರಣ ಮುಗಿಸಬೇಕು. ಬಳಿಕ, ಪೋಸ್ಟ್-ಪ್ರೊಡಕ್ಷನ್ ಕೆಲಸಗಳನ್ನು ನಡೆಸಬೇಕು. ಪ್ರಚಾರ ಮಾಡಬೇಕು. ಹೀಗಾಗಿ, ಸಿನಿಮಾದ ಬಿಡುಗಡೆಯನ್ನು ಮುಂದೂಡಲಾಗಿದೆ.
ಪವನ್ ಕಲ್ಯಾಣ್ ಅವರು ‘ಹರಿಹರ ವೀರ ಮಲ್ಲು’ ಸಿನಿಮಾ ಚಿತ್ರೀಕರಣವನ್ನು ವಿಳಂಬ ಮಾಡಿರುವುದು ಮಾತ್ರವಲ್ಲದೆ, ಮತ್ತೊಂದು ಸಿನಿಮಾಗೆ ಸಹಿ ಹಾಕಿದ್ದು, ಈವರೆಗೂ ಚಿತ್ರೀಕರಣದಲ್ಲಿ ಭಾಗಿಯೇ ಆಗಿಲ್ಲ. ತೆಲುಗು ನಿರ್ದೇಶಕ ಹರೀಶ್ ಶಂಕರ್ ನಿರ್ದೇಶನದ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾದಲ್ಲಿ ಪವನ್ ಕಲ್ಯಾಣ್ ಅವರದ್ದು ಮುಖ್ಯಭೂಮಿಕೆ ಪಾತ್ರ. ಸಿನಿಮಾದ ಚಿತ್ರೀಕರಣ ಸೆಟ್ಟೇರಿ, ಹಲವಾರು ದೃಶ್ಯಗಳ ಚಿತ್ರೀಕರಣ ನಡೆದಿದೆ. ಆದರೆ, ಚಿತ್ರತಂಡಕ್ಕೆ ಪವನ್ ಕಲ್ಯಾಣ್ ಲಭ್ಯವಾಗುತ್ತಿಲ್ಲ. ಹೀಗಾಗಿ, ಆ ಸಿನಿಮಾದ ಚಿತ್ರೀಕರಣ ಕೂಡ ಹಲವು ದಿನಗಳಿಂದ ನಿಂತಲ್ಲೇ ನಿಂತಿದೆ.