ಸಂವಿಧಾನ ವಿರೋಧಿಗಳನ್ನು ಹೊಡೆದೋಡಿಸುವ ನಿಟ್ಟಿನಲ್ಲಿ ದಾವಣಗೆರೆಯಲ್ಲಿ ಬೃಹತ್ ಸಮಾವೇಶ
ಇದೇ ತಿಂಗಳ 26ರ ಶನಿವಾರದಂದು ದಾವಣಗೆರೆಯ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಸಂವಿಧಾನ ಸಂರಕ್ಷಕರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ದಸಂಸ ಹಿರಿಯ ಮುಖಂಡ ಎನ್ ವೆಂಕಟೇಶ್ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಮಟ್ಟದ ಸಂವಿಧಾನ ಸಂರಕ್ಷಕರ ಸಮಾವೇಶದಲ್ಲಿ ರಾಜ್ಯದ ಮೂಲೆ ಮೂಲೆಗಳಿಂದಲೂ ಸಂವಿಧಾನ ಸಂರಕ್ಷಕ ಪಡೆಗಳು ಭಾಗವಹಿಸುತ್ತಿದ್ದು, ಎದ್ದೇಳು ಕರ್ನಾಟಕ, ಎದ್ದೇಳು ಇಂಡಿಯಾ ಸೇರಿದಂತೆ ವಿವಿಧ ಜನಪರ ಸಂಘಟನೆಗಳ ಮುಖಂಡರು ಸಮಾವೇಶದ ನೇತೃತ್ವವಹಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ಸಂಘ ಪರಿವಾರದ ಅಜೆಂಡಾವನ್ನು ಪುನರ್ ಪ್ರತಿಷ್ಠಾಪನೆ ಮಾಡಲು ಮುಂದಾಗಿದೆ. ಮನುಧರ್ಮ ಶಾಸ್ತ್ರ, ಅಸಮಾನತೆ, ಜಾತಿ ವ್ಯವಸ್ಥೆ ಸೇರಿದಂತೆ ಮುಂತಾದ ದಮನಕಾರಿ ನೀತಿಗಳನ್ನು ಅನುಸರಿಸಿಕೊಂಡು ಬರುತ್ತಿದೆ. ಆದ್ದರಿಂದ, ಸಂವಿಧಾನಕ್ಕೆ ಅಪಾಯ ಬಂದೊದಗುವ ಮುನ್ನವೇ ನಾವೆಲ್ಲರೂ ಜಾಗೃತರಾಗಬೇಕಿದೆ ಎಂದು ಹುರಿದುಂಬಿಸಿದರು.
ಕೇರಳ ಮತ್ತು ಇತರೆ ರಾಜ್ಯಗಳಲ್ಲಿ ಸಾಕಷ್ಟು ಎಡಪಂಥೀಯ ಸಂಘಟನೆಗಳು ನಡೆಸಿದಂತೆ ರಾಜಕೀಯ ಚಳುವಳಿಗಳು ಬಿಜೆಪಿಯನ್ನು ಸೋಲಿಸುವಲ್ಲಿ ಯಶಸ್ವಿಯಾಗಿವೆ. ಜಾತಿ ಗಣತಿ ನಡೆದರೆ ಶೇಕಡವಾರು ಮಿತಿ ಹೆಚ್ಚಿಸುವ ಭರವಸೆ ನೀಡಿದ್ದಾರೆ. ಉದ್ದೇಶಪೂರ್ವಕವಾಗಿ ಸಂವಿಧಾನದ ಮೇಲೆ ದಾಳಿ ನಡೆಸುತ್ತಿರುವವರಿಗೆ ಈ ಸಮಾವೇಶ ತಕ್ಕ ಉತ್ತರ ನೀಡಲಿದೆ ಎಂದರು.
ರಾಜ್ಯದ ಎಲ್ಲಾ ಜಿಲ್ಲೆ, ತಾಲೂಕು, ಗ್ರಾಮಗಳಲ್ಲಿ ಬೈಕ್ ರ್ಯಾಲಿಯ ಮೂಲಕ ಸಂವಿಧಾನ ಸಂರಕ್ಷಕರು ಒಗ್ಗೂಡುತ್ತಿದ್ದಾರೆ. ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸುವ ನಿಟ್ಟಿನಲ್ಲಿ ಸಮಾವೇಶ ಸಜ್ಜಾಗುತ್ತಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಮನವಿ ಮಾಡಿದರು.
ದಸಂಸ ಜಿಲ್ಲಾ ಸಂಚಾಲಕ ಸಿ.ಜಿ.ಗಂಗಪ್ಪ ಮಾತನಾಡಿ, ಅಂಬೇಡ್ಕರ್ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ರಾಜಕೀಯ ಪಕ್ಷಗಳು ಕೇವಲ ಅಧಿಕಾರ ರಾಜಕಾರಣ ಮಾಡಿಕೊಂಡು ಬರುತ್ತಿವೆ. ಜನಪರವಾಗಿ ಕೆಲಸ ಮಾಡುತ್ತಿಲ್ಲ. ಬಿಜೆಪಿಯ ಕೋಮುವಾದವನ್ನು ಕಾಂಗ್ರೆಸ್ ಮುಂದುವರಿಸಿಕೊಂಡು ಬರುತ್ತಿದೆ. ಇದನ್ನ ನಾವು ತೀವ್ರವಾಗಿ ವಿರೋಧಿಸಿಕೊಂಡು ಬರುತ್ತಿದ್ದೇವೆ. ಈ ನಿಟ್ಟಿನಲ್ಲಿ ಇದೀಗ ಸಂವಿಧಾನ ಸಂರಕ್ಷಕರ ಸಮಾವೇಶಕ್ಕೆ ಸಕಲ ಸಿದ್ಧತೆಗಳು ನಡೆದಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ಜನ ಸೇರುತ್ತಿದ್ದಾರೆ. ಒಟ್ಟಾರೆಯಾಗಿ ಕೋಮುವಾದವನ್ನು ತೊಳಗಿಸುವುದೇ ನಮ್ಮ ಮುಖ್ಯ ಉದ್ದೇಶ. ಜತೆಗೆ ಈಗಿನ ಸರಕಾರಕ್ಕೂ ಸಹ ಕಣ್ತೆರೆಸುವ ಕೆಲಸ ಮಾಡಬೇಕಿದೆ. ಇದಕ್ಕಾಗಿ ಸಮಾವೇಶದಲ್ಲಿ ನಾಡಿನ ಹೆಸರಾಂತ ಚಿಂತಕರು ಭಾಗವಹಿಸುತ್ತಿದ್ದು, ಈ ಸಮಾವೇಶ ಇಡೀ ದೇಶಕ್ಕೆ ದಿಕ್ಕಾಗಬೇಕು. ಆ ನಿಟ್ಟಿನಲ್ಲಿ ನಾವೆಲ್ಲರೂ ಸಂರಕ್ಷಕರೆಲ್ಲರೂ ಒಗ್ಗೂಡೋಣ ಎಂದು ಕರೆ ನೀಡಿದರು.
ದಸಂಸ ಜಿಲ್ಲಾ ಸಂಚಾಲಕ ಸುಧಾ ವೆಂಕಟೇಶ್ ಮಾತನಾಡಿ, ದೇಶಕ್ಕೆ ಸಂವಿಧಾನ ಬಂದು ಹಲವು ದಶಕಗಳೇ ಕಳೆದಿವೆ. ಹೀಗಿರುವಾಗ ಸಂವಿಧಾನಕ್ಕೆ ಧಕ್ಕೆ ತರುವ ಹುನ್ನಾರ ನಡೆಯುತ್ತಿದೆ. ಹಾಗಾಗಿ ನಾವೆಲ್ಲರೂ ಸಂವಿಧಾನವನ್ನು ರಕ್ಷಣೆ ಮಾಡುವ ಕೆಲಸ ಮಾಡಬೇಕಿದೆ. ಅಂಬೇಡ್ಕರ್ ಅವರ ಆಶಯವನ್ನು ಈಡೇರಿಸುವ ನಿಟ್ಟಿನಲ್ಲಿ ನಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಸಮಾವೇಶದ ಯಶಸ್ಸಿಗೆ ಕಾರಣರಾಗೋಣ ಎಂದು ಹೇಳಿದರು.
ಅಸೆಡಾ ಸಂಘಟನೆಯ ಸೌಭಾಗ್ಯ ಮಾತನಾಡಿ, ಸಂವಿಧಾದ ಆಶಯಗಳ ಉಳಿವಿಗಾಗಿ ಪ್ರತಿ ಬೀದಿಗೂ ಸಂವಿಧಾನದ ಆಶಯಗಳನ್ನು ತಲುಪಿಸಿ ಸಂವಿಧಾನ ರಕ್ಷಣೆ ಮಾಡಬೇಕು. ಇದಕ್ಕಾಗಿ ನಮ್ಮ ಪಡೆಗಳನ್ನು ಸಜ್ಜುಗೊಳಿಸಬೇಕು. ಜಾತ್ಯತೀತ, ಪಕ್ಷಾತೀತ ಸಮಾವೇಶ ನಡೆಯುತ್ತಿದೆ. ಪ್ರತಿ ಗ್ರಾಮದಲ್ಲೂ ಸಂವಿಧಾನ ರಕ್ಷಣೆ ಪಡೆ ಕಟ್ಟುವ ನಿಟ್ಟಿನಲ್ಲಿ ನಾವೆಲ್ಲರೂ ಕೈಜೋಡಿಸುತ್ತೇವೆ ಎಂದು ಭರವಸೆ ನೀಡಿದರು.
ದಸಂಸ ಸಾಂಸ್ಕೃತಿಕ ಸಂಚಾಲಕ ಬಿ.ವಿ ಆನಂದ್ ಮಾತನಾಡಿ, ಆಳುವ ಸರಕಾರಗಳನ್ನು ನಿಯಂತ್ರಿಸುವ ಶಕ್ತಿಯನ್ನು ಜನಸಾಮಾನ್ಯರು ಪಡೆದುಕೊಂಡಾಗ ಮಾತ್ರ ಸರಕಾರಗಳು ಬುದ್ಧಿ ಕಲಿಯುತ್ತವೆ. ಬಡವರ, ಮಹಿಳೆಯರ ಪರ ಇದೆ ಎಂದು ಹೇಳುವ ಬಿಜೆಪಿ ಸರಕಾರ ಅತ್ಯಾಚಾರ, ಕೊಲೆಗಳನ್ನು ಕಣ್ಮುಚ್ಚಿಕೊಂಡು ನೋಡುತ್ತಿದೆ. ಹಾಗಾಗಿ ನಮ್ಮ ದೇಶದ ಸಂಸ್ಕೃತಿ, ಪ್ರಜಾಪ್ರಭುತ್ವ, ಸಂವಿಧಾನ ಉಳಿವಿಗಾಗಿ ನಾವು ಹೋರಾಡುವ ಅವಶ್ಯಕತೆ ನಿರ್ಮಾಣವಾಗಿದೆ. ದೇಶ ಸಾಲಕ್ಕೆ ಸಿಲುಕಿದೆ. ಇದರಿಂದ ಬಡವರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಬಡವರು ಬಡವರಾಗಿಯೇ, ಶ್ರೀಮಂತರು ಶ್ರೀಮಂತರಾಗಿ ಉಳಿಯುತ್ತಿದ್ದಾರೆ. ಸಮಾನತೆ ಇಲ್ಲವಾಗಿದೆ. ಸಮಾನತೆ ಬೇಕಾದಲ್ಲಿ ಸಂವಿಧಾನದ ಉಳಿವು ಆಗಬೇಕಿದೆ. ಹಾಗಾಗಿ ಸಮಾವೇಶವನ್ನು ಸಂಘಟಿಸುವ ನಿಟ್ಟಿನಲ್ಲಿ ನಾವೆಲ್ಲರೂ ಒಂದಾಗೋಣ ಎಂದರು.
ಇದನ್ನೂ ಓದಿ : ಜಾತಿ ಗಣತಿ ವರದಿ ಜಾರಿ ವಿಪಕ್ಷದವರಿಗೆ ನುಂಗಲಾರದ ತುತ್ತಾಗಿದೆ: ಗೃಹ ಸಚಿವ ಪರಮೇಶ್ವರ್
ಸುದ್ದಿಗೋಷ್ಠಿಯಲ್ಲಿ ದಂಸಸ ಮುಖಂಡರಾದ ಗುಡಿಬಂಡೆ ಜೀವಿಕ ನಾರಾಯಣಸ್ವಾಮಿ, ಎದ್ದೇಳು ಕರ್ನಾಟಕದ ಸಮೀರ್ ಹಾಜರಿದ್ದರು.