ಸಿದ್ದರಾಮಯ್ಯನವರೇ ನೀವು ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತು ಬಡವರ, ದಲಿತರ, ರೈತರ ಕಣ್ಣೀರು ಒರೆಸಿದ್ದೀರಾ? ಅಭಿವೃದ್ಧಿ ಕೆಲಸ ಮಾಡಿದ್ದೀರಾ? ಮುಂದಿನ ದಿನಗಳಲ್ಲಿ ಜನರು ನಿಮ್ಮನ್ನು ಯಾಕೆ ನೆನಪಿಸಿಕೊಳ್ಳಬೇಕು” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರಶ್ನಿಸಿದರು.
ಬಾಗಲಕೋಟೆಯಲ್ಲಿ ನಡೆದ ಜನಾಕ್ರೋಶ ಯಾತ್ರೆಯ ಸಂದರ್ಭದಲ್ಲಿ ಸರಕಾರದ ವಿರುದ್ಧ ಬಾರುಕೋಲು ಪ್ರದರ್ಶಿಸಿ ಮಾತನಾಡಿ ಅವರು, ಸಿದ್ದರಾಮಯ್ಯನವರೇ, ನೀವು ಮುಖ್ಯಮಂತ್ರಿಗಳಾದ ಬಳಿಕ ರೈತರ ಆತ್ಮಹತ್ಯೆ ಹೆಚ್ಚಾಗಿದೆ. ಹಿಂದೂ ಹೆಣ್ಮಕ್ಕಳ ಮೇಲೆ ಅಪಮಾನ, ಲವ್ ಜಿಹಾದ್ ಹೆಚ್ಚಾಗಿದೆ. ಗೋಹತ್ಯೆಗಳು ಜಾಸ್ತಿ ಆಗಿದೆ” ಎಂದು ಆರೋಪಿಸಿದರು.
“ಹಿಂದೆ ಯಡಿಯೂರಪ್ಪನವರ ಬಿಜೆಪಿ ಸರಕಾರ ಇದ್ದಾಗ ರೈತರು ತಮ್ಮ ಹೊಲಕ್ಕೆ ಟ್ರಾನ್ಸ್‍ಫಾರ್ಮರ್ ಹಾಕಿಸಲು 25 ಸಾವಿರ ಕಟ್ಟಿದ್ದರೆ ಸಾಕಾಗಿತ್ತು. ಆದರೆ, ರೈತಪರ ಮೊಸಳೆ ಕಣ್ಣೀರು ಹಾಕುವ ಸಿದ್ದರಾಮಯ್ಯನವರ ಸರಕಾರದಲ್ಲಿ ಎರಡೂವರೆಯಿಂದ 3 ಲಕ್ಷ ರೂ. ಕಟ್ಟಬೇಕಿದೆ. ಹಿಂದೆ 5 ವರ್ಷ ನೀವು ಸಿಎಂ ಆಗಿದ್ದಾಗ ಏನು ಸಾಧನೆ ಮಾಡಿದ್ದೀರಿ ಸಿದ್ದರಾಮಯ್ಯನವರೇ ಎಂದು ಕೇಳಿದರು. ಹಿಂದಿನ ಬಾರಿ ವೀರಶೈವ ಧರ್ಮ ಎಂದು ರಾಜ್ಯದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡಿದ್ದೀರಲ್ಲವೇ” ಎಂದು ಆಕ್ಷೇಪಿಸಿದರು.
“ಮುಸಲ್ಮಾನರಿಗೆ ಸರಕಾರಿ ಕಾಮಗಾರಿಯಲ್ಲಿ ಶೇ.4ರಷ್ಟು ಮೀಸಲಾತಿ ಕೊಡುತ್ತಿದ್ದೀರಿ. ಯಾರಪ್ಪನ ದುಡ್ಡು ಸ್ವಾಮಿ? ಮುಸಲ್ಮಾನರ ಹೆಣ್ಮಕ್ಕಳಿಗೆ ಮದುವೆಗೆ 50 ಸಾವಿರ ಕೊಡುತ್ತಾರಂತೆ. ಹಿಂದೂಗಳಲ್ಲಿ ಬಡವರಿಲ್ಲವೇ? ಮುಸಲ್ಮಾನ ಯುವಜನರು ವಿದೇಶಕ್ಕೆ ಉನ್ನತ ಶಿಕ್ಷಣ ಪಡೆಯಲು ಹೋಗುವುದಾದರೆ 30 ಲಕ್ಷ ನೀಡುವುದಾಗಿ ಹೇಳಿದ್ದೀರಿ. ಹಿಂದೂಗಳಲ್ಲಿ ಬಡವರಿಲ್ಲವೇ ಹಾಗಿದ್ದರೆ ಎಂದು ಪ್ರಶ್ನಿಸಿದರು. ಹಿಂದೂಗಳಿಗೆ ಯಾತಕ್ಕೋಸ್ಕರ ಅಪಮಾನ ಮಾಡುತ್ತಿದ್ದೀರಿ” ಎಂದು ಕೇಳಿದರು.
ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ ಶೆಟ್ಟರ್, ಮಾಜಿ ಉಪಮುಖ್ಯಮಂತ್ರಿ ಮತ್ತು ಸಂಸದ ಗೋವಿಂದ ಕಾರಜೋಳ, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದ ಪಿ.ಸಿ. ಗದ್ದೀಗೌಡರ್, ಮಾಜಿ ಸಚಿವ ಬಿ. ಶ್ರೀರಾಮುಲು, ರಾಜ್ಯಸಭಾ ಸದಸ್ಯ ನಾರಾಯಣಸಾ ಕೆ. ಭಾಂಡಗೆ, ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್, ವಿಧಾನಪರಿಷತ್ ಸದಸ್ಯ ಹನುಮಂತ ನಿರಾಣಿ ಸೇರಿದಂತೆ ಇತರರು ಇದ್ದರು.